ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಾಯಪಟ್ಟಣ: ಹಲಸಿನ ಕ್ಲಸ್ಟರ್ ಯೋಜನೆ ನನೆಗುದಿಗೆ

Published 18 ಮೇ 2024, 8:34 IST
Last Updated 18 ಮೇ 2024, 8:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸರಾಯಪಟ್ಟಣದ ಹಲಸು ಎಂದರೆ ಸಿಹಿ ಮುದ್ದೆ ಎಂದೇ ಹೆಸರು. ಈ ಹಣ್ಣಿಗೆ ಬ್ರ್ಯಾಂಡ್ ರೂಪ ನೀಡಿ ವರ್ಷವಿಡೀ ಜನರಿಗೆ ಸಿಗುವಂತೆ ಮಾಡಲು ಸ್ಥಳೀಯರು ಸಜ್ಜಾಗಿದ್ದಾರೆ. ಹಲಸು ಕ್ಲಸ್ಟರ್ ನಿರ್ಮಾಣಕ್ಕೆ ಸರ್ಕಾರ ಎರಡು ಎಕರೆ ಜಾಗ ಕೂಡ ನೀಡಿದ್ದು, ಯೋಜನೆ ಮಾತ್ರ ನನೆಗುದಿಗೆ ಬಿದ್ದಿದೆ.

ಸಖರಾಯಪಟ್ಟಣದಲ್ಲಿ ಬೆಳೆಯುವ ಹಲಸಿನ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಷ್ಟು ಬೇಡಿಕೆ  ಬರಲು ಹಲವು ಕಾರಣಗಳಿವೆ. ಕರ್ನಾಟಕದಲ್ಲಿ 280 ಜಾತಿಯ ಹಲಸಿನ ತಳಿಗಳಿದ್ದರೆ, ಅದರಲ್ಲಿ 74ಕ್ಕೂ ಹೆಚ್ಚು ತಳಿಗಳು ಸಖರಾಯಪಟ್ಟಣದ ಸುತ್ತಮುತ್ತಲ ಹಳ್ಳಿಗಳಲ್ಲಿವೆ. ಮಲೆನಾಡಿನ ಸೆರಗಿನಲ್ಲಿರುವ ಬಯಲು ಸೀಮೆ ಆಗಿರುವುದರಿಂದ ಈ ಹವಾಮಾನ ಮತ್ತು ಮಣ್ಣಿನ ಗುಣಕ್ಕೆ ಹಲಸಿನ ಹಣ್ಣು ಹೆಚ್ಚು ರುಚಿಕರ.

ಎಲ್ಲಿಯೂ ಹಲಸಿನ ತೋಪುಗಳಿಲ್ಲ. ಆದರೆ, ‌ಪ್ರತಿ ರೈತರ ಜಮೀನಿನಲ್ಲಿ ಹಲಸಿನ ಮರಗಳಿವೆ. ಬುಡದಿಂದ ಆರಂಭವಾಗಿ ಮರದ ನೆತ್ತಿಯ ತನಕ ಹಣ್ಣುಗಳನ್ನು ಬಿಡುತ್ತವೆ. ಇಷ್ಟು ಸಮೃದ್ಧವಾಗಿರುವ ಹಲಸಿನ ಹಣ್ಣನ್ನು ಬೇಸಿಗೆಯಲ್ಲಿ ಮಾತ್ರವಲ್ಲದೇ ವರ್ಷವಿಡಿ ಜನರಿಗೆ ದೊರಕಿಸಲು ಸ್ಥಳೀಯ ಉದ್ಯಮಿಗಳು ಮುಂದಾಗಿದ್ದಾರೆ.

28 ಸ್ಥಳೀಯ ಉದ್ಯಮಿಗಳು ಸಣ್ಣದಾಗಿ ಕೈಗಾರಿಕೆಗಳನ್ನು ತೆರೆದು ಹಲಸಿನ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಉದ್ಯಮಿಗಳು ಒಂದಾಗಿ ಕಂಪನಿಯ ರೂಪವನ್ನೂ ನೀಡಿದ್ದಾರೆ. ಸಣ್ಣದಾಗಿ ಉದ್ಯಮ ನಡೆಸುತ್ತಿರುವ ಶಿವಣ್ಣ, ಸಚ್ಚಿದಾನಂದ, ಎಚ್.ಆರ್. ಚಂದ್ರೇಗೌಡ, ಎನ್.ಕುಮಾರ್ ಮತ್ತು ಸವಿತಾ ಸಖರಾಯಪಟ್ಟಣ ಜಾಕ್‌ಫ್ರೂಟ್ ಫೋರಂ ಹುಟ್ಟು ಹಾಕಿದ್ದಾರೆ. ಕೈಗಾರಿಕಾ ಕಾಯ್ದೆಯ ಸೆಕ್ಷನ್–8ರ ಪ್ರಕಾರ ನೋಂದಣಿಯನ್ನೂ ಮಾಡಿಸಿದ್ದಾರೆ. 

ಸಣ್ಣದಾಗಿ ಶೀತಲಗೃಹ ಸಹಿತ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಹಲಸಿನ ಕ್ಲಸ್ಟರ್ ನಿರ್ಮಾಣವಾದರೆ ಬೇಸಿಗೆಯಲ್ಲಿ ಸಿಗುವ ಹಲಸನ್ನು ಸಂಗ್ರಹಿಸಿ ಸಂಸ್ಕರಿಸಬಹುದು. ಬೇರೆ ಹಣ್ಣು ಮತ್ತು ತರಕಾರಿಗಳನ್ನೂ ಸಂಸ್ಕೃರಿಸಲು ಅವಕಾಶ ಆಗಲಿದೆ ಎಂದು ಫೋರಂನ ಸಚ್ಚಿದಾನಂದ ತಿಳಿಸಿದರು.

‘ಜಿಲ್ಲಾಡಳಿತ ಎರಡು ಎಕರೆ ಜಾಗ ಮಂಜೂರು ಮಾಡಿಕೊಟ್ಟಿದೆ. ಮೂರು ವರ್ಷದೊಳಗೆ ಕ್ಲಸ್ಟರ್ ಆರಂಭಿಸಬೇಕು, ಇಲ್ಲದಿದ್ದರೆ ಜಾಗ ವಾಪಸ್ ಪಡೆದುಕೊಳ್ಳುವ ಷರತ್ತನ್ನು ಜಿಲ್ಲಾಧಿಕಾರಿ ವಿಧಿಸಿದ್ದಾರೆ. ಈಗಾಗಲೇ ಒಂದೂವರೆ ವರ್ಷವಾಗಿದ್ದು, ಬಾಕಿ ಇರುವ ಅವಧಿಯೊಳಗೆ ಕ್ಲಸ್ಟರ್ ಅಸ್ಥಿತ್ವಕ್ಕೆ ಬರಬೇಕಿದೆ’ ಎಂದರು.

‘ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಟೆಕ್ಸಾಕ್ ಮೂಲಕ ಸಮಗ್ರ ಯೋಜನಾ ವರದಿ ಸಿದ್ಧವಾಗುತ್ತಿದೆ. ಈ ಕೆಲಸ ಕೂಡಲೇ ಪೂರ್ಣಗೊಂಡರೆ ಫೋರಂ ಹೆಸರಿಗೆ ಭೂಮಿ ಹಸ್ತಾಂತರವಾಗಲಿದೆ. ಸರ್ಕಾರ ಈ ಪ್ರಸ್ತಾವನೆಯನ್ನೂ ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಕ್ಲಸ್ಟರ್ ನಿರ್ಮಾಣವಾದರೆ ಎಲ್ಲಾ ಉದ್ಯಮಿಗಳು ಒಂದೇ ಸ್ಥಳದಲ್ಲಿ ಕೈಗಾರಿಕೆ ತೆರೆಯುತ್ತಾರೆ. 200 ಟನ್ ಸಾಮರ್ಥ್ಯದ ದೊಡ್ಡ ದೊಡ್ಡ ಶೀತಲಗೃಹಗಳಲ್ಲಿ ಹಣ್ಣು ಮತ್ತು ಹಣ್ಣಿನ ಉತ್ಪನ್ನಗಳನ್ನು ಶೇಖರಿಸಿಡಲು ಸಾಧ್ಯವಾಗಲಿದೆ. ಮಲೆನಾಡಿನಲ್ಲಿ ಬಿದ್ದು ಕೊಳೆಯುವ ಹಲಸಿನ ಹಣ್ಣುಗಳಿಗೂ ಬೆಲೆ ಬೆಲಿದೆ. ಸಖರಾಯಪಟ್ಟಣದ ಹಲಸು ಬೆಳೆಗಾರರಿಗೆ ಲಾಭ ಬರಲಿದೆ. ಹಲಸಿನ ಸಿಪ್ಪೆಯಿಂದ ಪಶು ಆಹಾರ, ಬೀಜದಿಂದ ಕಾಫಿಪುಡಿಗೆ ಪರ್ಯಾಯವಾದ ಪುಡಿ ತಯಾರಿಸುವ ಉದ್ದೇಶವೂ ಇದೆ ಎಂದು ಅವರು ವಿವರಿಸಿದರು.

Quote - ಹಲಸಿನ ಕ್ಲಸ್ಟರ್ ಯೋಜನೆ ಸರ್ಕಾರದ ಮುಂದಿದೆ. ಸರ್ಕಾರ ಅನುಮೋದನೆ ನೀಡಿದರೆ ಉದ್ಯಮಿಗಳ ವೇದಿಕೆಗೆ ಜಾಗ ಹಸ್ತಾಂತರವಾಗಲಿದೆ. – ಸಿದ್ದರಾಜು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ

Cut-off box - ಸಖರಾಯಪಟ್ಟಣದ ಹಲಸಿಗೆ ಜಿಯೊ ಟ್ಯಾಗಿಂಗ್ ಸಖರಾಯಪಟ್ಟಣದ ಹಲಸಿಗೆ ಜಿಯೊ ಟ್ಯಾಗಿಂಗ್ ಮಾಡುವ ಕಾರ್ಯಕ್ಕೂ ತೋಟಗಾರಿಕೆ ಇಲಾಖೆ ಮುಂದಾಗಿದೆ. ‘ಈ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುತುವರ್ಜಿ ವಹಿಸಿದ್ದಾರೆ. ಜಿಯೊ ಟ್ಯಾಗಿಂಗ್ ಆದರೆ ಸಖರಾಯಪಟ್ಟಣದ ಹಲಸಿಗೆ ಬ್ರ್ಯಾಂಡ್ ರೂಪ ಬರಲಿದೆ. ರೈತರಿಗೆ ಇದರಿಂದ ಹೆಚ್ಚಿನ ಲಾಭ ಬರಲಿದೆ’ ಎಂದು ಸಚ್ಚಿದಾನಂದ ಅವರು ‘‍ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT