ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಸಿ ಅಂಗಡಿಗಳಲ್ಲಿ ಮದ್ಯಮಾರಾಟ!

Last Updated 26 ಸೆಪ್ಟೆಂಬರ್ 2017, 9:33 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಹೆಸ್ಗಲ್‌ ಗ್ರಾಮ ಪಂಚಾಯಿತಿಯ ಬಿಳಗುಳ ಗ್ರಾಮದಲ್ಲಿ ಪ್ರತಿದಿನ ಸಂಜೆಯಾಗುತ್ತಿದ್ದಂತೆ ಗ್ರಾಮದ ವಾತಾವರಣವೇ ಬದಲಾಗ ತೊಡಗುತ್ತದೆ. ಮದ್ಯದ ಅಮಲಿನಲ್ಲಿ ರಸ್ತೆ ಬದಿ ಬಿದ್ದಿರುವ ಒಬ್ಬ ವ್ಯಕ್ತಿಯಾದರೂ ಕಾಣಸಿಗುತ್ತಾರೆ.

ಗ್ರಾಮದಲ್ಲಿ ನಿತ್ಯ ಕನಿಷ್ಠ ನಾಲ್ಕು ಮನೆಗಳಲ್ಲಾದರೂ ಕುಡಿದು ಬಂದ ಪತಿಯಿಂದಾಗಿ ಕಲಹವಾಗುವ ಶಬ್ದ ನೆರೆಹೊರೆಯವರಿಗೆ ಕೇಳತೊಡಗುತ್ತದೆ. ಇದೆಲ್ಲದಕ್ಕೂ ಕಾರಣವಾಗಿರುವುದು ಗ್ರಾಮದಲ್ಲಿ ತಲೆ ಎತ್ತಿರುವ 10ಕ್ಕೂ ಅಧಿಕ ಮದ್ಯ ಅಕ್ರಮ ಮಾರಾಟ ಕೇಂದ್ರಗಳು.

ಇಲ್ಲಿ ಕೆಲವರು ತಮ್ಮ ಮನೆಗೆ ಹೊಂದಿಕೊಂಡಂತೆ ಇರುವ ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ, ಮತ್ತೆ ಕೆಲವರು ತಮ್ಮ ವಾಸದ ಮನೆಗಳಲ್ಲಿಯೇ ನಿರಾತಂಕವಾಗಿ ಮದ್ಯ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಬಹುತೇಕ ಕೂಲಿಕಾರ್ಮಿಕರನ್ನೇ ಹೊಂದಿರುವ ಗ್ರಾಮವು ರಾತ್ರಿ ಯಾಗುತ್ತಿದ್ದಂತೆ ಮದ್ಯದ ನಶೆಯಲ್ಲಿ ಕುಟುಂಬದ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ.

ಕೂಗಳತೆ ದೂರದಲ್ಲಿರುವ ಪಟ್ಟಣದಿಂದ ಮದ್ಯವನ್ನು ಅಕ್ರಮ ವಾಗಿ ತಂದಿಟ್ಟುಕೊಳ್ಳುವ ಈ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದನ್ನು ದಂಧೆಯಾಗಿಸಿಕೊಂಡಿದ್ದಾರೆ. ಕೈಯಲ್ಲಿ ಕಾಸಿಲ್ಲದ ಕೂಲಿ ಕಾರ್ಮಿಕರು ಪ್ರತಿನಿತ್ಯ ಸಾಲದ ಮೂಲಕ ಮದ್ಯ ಖರೀದಿಸಿ, ಸಂತೆಯ ದಿನದಂದು ದುಡಿದ ಹಣವನ್ನೆಲ್ಲಾ ದಂಧೆಕೋರರ ಕೈಗಿಡುವ ಪರಿಸ್ಥಿತಿ ಬಂದೊದಗಿದೆ.

ಈಗಾಗಲೇ ಇಂತಹ ಪರಿಸ್ಥಿತಿಯಿಂದ ಬೇಸತ್ತ ಗೃಹಿಣಿಯರು ಬೀದಿಗಳಿದು ಪ್ರತಿಭಟನೆ ನಡೆಸಿದ್ದು, ಗ್ರಾಮದಲ್ಲಿ ಸುಮಾರು 10 ಮಂದಿ ಇಂತಹ ದುಷ್ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಗ್ರಾಮ ಪಂಚಾಯಿತಿಗೆ ಲಿಖಿತ ದೂರು ನೀಡಿದ್ದಾರೆ. ಪಟ್ಟಿಯಲ್ಲಿರುವ ಕೆಲವು ವ್ಯಕ್ತಿಗಳು ಅಕ್ರಮವಾಗಿ ಬಡ್ಡಿ ದಂಧೆಯಲ್ಲೂ ತೊಡಗಿರುವ ಆರೋಪವಿದ್ದು, ಮದ್ಯ ಖರೀದಿಸುವ ಸಾಲದ ಮೊತ್ತಕ್ಕೆ ವಾರದ ಬಡ್ಡಿಯನ್ನು ವಿಧಿಸಿ ವಸೂಲು ಮಾಡುತ್ತಾರೆ ಎಂಬ ಆರೋಪ ಗ್ರಾಮದ ಮಹಿಳೆಯರದ್ದಾಗಿದೆ.

‘ಪಟ್ಟಣದಿಂದ ಕೂಗಳತೆ ದೂರದಲ್ಲಿದ್ದರೂ, ಕಾಸಿಲ್ಲದಿದ್ದರೆ ಪಟ್ಟಣದ ಬಾರ್‌ಗಳಲ್ಲಿ ಮದ್ಯ ಸೇವನೆ ಸಾಧ್ಯವಾಗುವುದಿಲ್ಲ. ಆದರೆ ಗ್ರಾಮದಲ್ಲಿ ಮದ್ಯ ಮಾರುವುದರಿಂದ ಕಾಸಿಲ್ಲದಿದ್ದರೂ ಸಾಲಕೊಡುವುದರಿಂದ ಎಗ್ಗಿಲ್ಲದೇ ಮದ್ಯ ಸೇವಿಸಿ, ದುಡಿದ ಹಣವನ್ನೆಲ್ಲಾ ಮದ್ಯದಂಗಡಿಗೆ ಸುರಿಯುತ್ತಾರೆ. ಈಗಾಗಲೇ ಮಕ್ಕಳ ಓದು, ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಸಾಲದ ಸುಳಿಯಲ್ಲಿ ಬದುಕುತ್ತಿದ್ದೇವೆ. ಸಾಲಗಾರರು ಮನೆ ಬಾಗಿಲಿಗೆ ಬರುವಾಗ... ನಮ್ಮ ಪರಿಸ್ಥಿತಿ ಯಾರಿಗೂ ಬರಬಾರದು’ ಎಂದು ಕಣ್ಣೀರಿಡುವ ಮಹಿಳೆಯರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

‘ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೆ, ದಾಳಿ ನಡೆಸಿ ಯಾವುದೇ ಮದ್ಯವಿಲ್ಲ ಎಂಬ ಸಬೂಬು ಹೇಳಿ ತೆರಳುತ್ತಾರೆ. ಒಂದು ವಾರದ ಹಿಂದೆ ದಿನಸಿ ಅಂಗಡಿಯೊಂದಕ್ಕೆ ಅಕ್ರಮವಾಗಿ ಮದ್ಯ ಸಾಗಿಸಿದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಮಾಹಿತಿ ನೀಡಿದರೂ, ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಮದ್ಯವಿಲ್ಲವೆಂದು ಹಿಂತಿರುಗಿದ ಘಟನೆ ನಡೆದಿದ್ದು, ಈ ಘಟನೆಯ ನಂತರ ಅಬಕಾರಿ ಇಲಾಖೆಯನ್ನೇ ನಂಬದ ಸ್ಥಿತಿ ಬಂದಿದೆ’ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಒಂದೂವರೆ ವರ್ಷಗಳ ಹಿಂದೆ ಇದೇ ಗ್ರಾಮ ಪಂಚಾಯಿತಿಯ ಶಕ್ತಿನಗರ ದಲ್ಲೂ ಇಂತಹ ಘಟನೆ ನಡೆದಿದ್ದ ವೇಳೆ, ಅಂದಿನ ಪೊಲೀಸ್‌ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್‌, ಠಾಣಾಧಿಕಾರಿ ಗವಿರಾಜ್‌ ನೇತೃತ್ವದಲ್ಲಿ ದಾಳಿ ನಡೆಸಿ ಸಂಪೂರ್ಣ ಅಕ್ರಮ ಮದ್ಯ ನಿಯಂತ್ರಿಸಿದ್ದ ಘಟನೆ ಯನ್ನು ಜನರು ಇಂದಿಗೂ ಸ್ಮರಿಸುತ್ತಿದ್ದು, ಬಿಳಗುಳದಲ್ಲೂ ಜನರ ನೆಮ್ಮದಿಗೆ ಭಂಗವಾಗಿರುವ ಅಕ್ರಮ ಮದ್ಯಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT