ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Kambala | ಉಪ್ಪಿನಂಗಡಿ: ಕೋಣಗಳಿಗೆ ಬೀಳ್ಕೊಡುಗೆ

ಬೆಂಗಳೂರಿನಲ್ಲಿ ನಡೆಯುವ ಕಂಬಳ
Published 23 ನವೆಂಬರ್ 2023, 23:50 IST
Last Updated 23 ನವೆಂಬರ್ 2023, 23:50 IST
ಅಕ್ಷರ ಗಾತ್ರ

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಬೆಂಗಳೂರು ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯುವ ಕಂಬಳದಲ್ಲಿ ಭಾಗವಹಿಸಲು ಕರಾವಳಿಯ ವಿವಿಧೆಡೆಯಿಂದ ಬಂದ ಕೋಣಗಳನ್ನು ಉಪ್ಪಿನಂಗಡಿಯಲ್ಲಿ ಗುರುವಾರ ಸ್ವಾಗತಿಸಿ, ಬೀಳ್ಕೊಡಲಾಯಿತು.

ಕೋಣಗಳ ಯಜಮಾನರನ್ನು ಕಂಬಳ ಸಮಿತಿಯಿಂದ ಸ್ವಾಗತಿಸಲಾಯಿತು. ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಧಿಕಾರಿ ಕೋಣಗಳ ಸಾಗಾಟಕ್ಕೆ ಅನುಮತಿ ಪತ್ರ ನೀಡಿದರು. ಕಂಬಳ ಸಮಿತಿಯಿಂದ ಕೋಣಗಳ ನೋಂದಣಿ ನಡೆಯಿತು. ಕಾಲೇಜು ಮೈದಾನದಿಂದ ರಾಷ್ಟ್ರೀಯ ಹೆದ್ದಾರಿ ವರೆಗೆ ಕೊಂಬು-ಕಹಳೆ, ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು.

ಬೆಂಗಳೂರು ಕಂಬಳ ಸಮಿತಿ ಕಾರ್ಯಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಸಂಚಾಲಕರಾದ ನಿರಂಜನ್ ರೈ ಮಠಂತಬೆಟ್ಟು, ಎಂ.ರಾಜೀವ ಶೆಟ್ಟಿ ಎಡ್ತೂರು, ರಾಜೇಶ್ ಶೆಟ್ಟಿ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ ಎನ್.ಉಮೇಶ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ ಇದ್ದರು.

170 ಜೋಡಿ ಕೋಣಗಳ ನೋಂದಣಿ: ಉಪ್ಪಿನಂಗಡಿಯಲ್ಲಿ ಗುರುವಾರ ಬೆಳಿಗ್ಗೆ 100 ಜೋಡಿ ಕೋಣಗಳ ನೋಂದಣಿ ಮಾಡಲಾಯಿತು. ಕೆಲ ಕೋಣಗಳು ಗುಂಡ್ಯ ಮತ್ತು ಸಕಲೇಶಪುರಲ್ಲಿ ಜೊತೆಯಾದವು.

ಕೆಲ ಕೋಣಗಳು ಬುಧವಾರವೇ ಬೆಂಗಳೂರು ತಲುಪಿದ್ದು, ಅಲ್ಲಿನ ಕಂಬಳ ಕರೆಯಲ್ಲಿ ಕೋಣಗಳ ಕುದಿ ಓಟ (ಪ್ರಾಯೋಗಿಕ ಓಟ) ನಡೆದಿದೆ. ಇನ್ನು ಕೆಲವು ಕೋಣಗಳ ಯಜಮಾನರು ಶುಕ್ರವಾರ ಬೆಳಿಗ್ಗೆ ಹೊರಡಲಿದ್ದಾರೆ. ಈ ಎಲ್ಲ ಕೋಣಗಳು ಸೇರಿ 170 ಜೋಡಿ ಕೋಣಗಳ ನೋಂದಣಿ ಕಾರ್ಯ ನಡೆದಿದೆ. ಈ ಎಲ್ಲ ಕೋಣಗಳೂ ಕರೆಯಲ್ಲಿ ಓಡದಿದ್ದರೂ ಸುಮಾರು 150 ಜತೆ ಕೋಣಗಳು ಭಾಗವಹಿಸುವುದು ನಿಶ್ಚಿತ ಎಂದು ಕಂಬಳ ಸಮಿತಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುರುಳಿ, ಬೈಹುಲ್ಲು, ನೀರಿನ ವ್ಯವಸ್ಥೆ: ಉಪ್ಪಿನಂಗಡಿಯಿಂದ ಹೊರಟ ಕಂಬಳ ಕೋಣಗಳಿಗೆ ಹಾಸನದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಕೋಣಗಳಿಗೆ ಬೈಹುಲ್ಲು, ನೀರು, ಹುರುಳಿ ದಾಸ್ತಾನು ಮಾಡಲಾಗಿತ್ತು. ಅಲ್ಲದೆ, ಪ್ರಯಾಣದ ಉದ್ದಕ್ಕೂ ನೀರು ತುಂಬಿದ ಟ್ಯಾಂಕರ್‌ಗಳು ಕೋಣಗಳೊಂದಿಗೆ ಸಂಚರಿಸಿದವು.

‘ಹಾಸನದಲ್ಲಿ ಕೋಣಗಳಿಗೆ ಬೇಕಾದ ವ್ಯವಸ್ಥೆಯ ಉಸ್ತುವಾರಿಯನ್ನು ಕಂಬಳ ಸಮಿತಿ, ತುಳು ಕೂಟ, ಕನ್ನಡಪರ ಸಂಘಟನೆಗಳ ಸಹಕಾರದಲ್ಲಿ ಶಾಸಕ ಎಚ್.ಡಿ.ರೇವಣ್ಣ ವಹಿಸಿಕೊಂಡಿದ್ದರು’ ಎಂದು ಬೆಂಗಳೂರು ಕಂಬಳ ಸಮಿತಿ ಕಾರ್ಯಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT