ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಹಬ್ಬ ನವರಾತ್ರಿ ವೈಭವ, ಶರಣೆಂಬೆ ವಾಣಿ ಪೊರೆಯೇ ಕಲ್ಯಾಣಿ

Last Updated 9 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

‘ಸ್ತ್ರೀಯರು ಗೌರವಿಸುವ ಸ್ಥಳದಲ್ಲಿ ದೇವತೆಗಳು ಸಂತಸದಿಂದ ನಲಿಯುತ್ತಾರೆ’ ಎಂಬ ಮಾತಿದೆ. ಮಾನವ ದೇಹವನ್ನು ಪ್ರಕೃತಿಗೂ, ಆತ್ಮವನ್ನು ಪುರುಷನಿಗೂ ಹೋಲಿಸಲಾಗಿದೆ. ಸ್ತ್ರೀಯನ್ನು ನಾವು ತಾಯಿ ಎಂದು ಸಂಬೋಧಿಸುತ್ತೇವೆ.

ನವರಾತ್ರಿಯ ಒಂಭತ್ತು ದಿನವೂ ಕೂಡ ಶಕ್ತಿಸ್ವರೂಪಿಣಿಯಾದ ತಾಯಿಯನ್ನು ಆರಾಧಿಸುತ್ತೇವೆ. ದುರ್ಗಾ, ಕಾತ್ಯಾಯಿನಿ, ಗೌರಿ, ಅಂಬಿಕಾ, ಪಾರ್ವತಿ, ಶರ್ವಾಣಿ, ಶಿವೆ, ಪರಮೇಶ್ವರಿ ಎಂದು ಆಕೆಯನ್ನು ಸ್ತುತಿಸುತ್ತೇವೆ. ನವರಾತ್ರಿಯ ಆರು ದಿನಗಳಲ್ಲಿ ಸಪ್ತಶತಿ ಪಾರಾಯಣ, ಕನ್ನಿಕಾ ಆರಾಧನೆ, ಪೂಜೆಗಳು ನಡೆಯುತ್ತವೆ. 7ನೇ ದಿನ ಹೆಚ್ಚುವರಿಯಾಗಿ ವಿದ್ಯಾಮಾತೆಯಾದ ವಾಗ್ದೇವಿ ಶಾರದಾ ದೇವಿಯ ಪೂಜೆಯನ್ನು ನಡೆಸಲಾಗುತ್ತದೆ. 8ನೇ ದಿನ ದುರ್ಗಾಷ್ಟಮಿ ಆಚರಣೆಯಲ್ಲಿ ನಮ್ಮ ಜೀವನ, ಧನಧಾನ್ಯ ಸಿರಿ ಸಂಪದಗಳು ವೃದ್ಧಿಯಾಗುವಂತೆ ಪ್ರಾರ್ಥಿಸಿ, ಪೂಜಿಸಲಾಗುತ್ತದೆ. 9ನೇ ದಿನ ಮಹಾಕಾಳಿಯ ರೂಪದಲ್ಲಿ ಆರಾಧನೆ ನಡೆಯುತ್ತದೆ. 10ನೇ ದಿನ ವಿಜಯ ದಶಮಿಯಂದು ಶಿಷ್ಟ ರಕ್ಷಣೆ, ದುಷ್ಟ ಶಿಕ್ಷಣೆಯ ವಿಜಯೋತ್ಸವ ನಡೆಯುತ್ತದೆ. ಹೀಗೆ ನವರಾತ್ರಿಯ ಎಲ್ಲಾ ದಿನಗಳಲ್ಲೂ ಕೂಡ ಭಕ್ತಗಣ ತಾಯಿಯ ಆರಾಧನೆಯಿಂದ ಕೃತಾರ್ಥವಾಗುತ್ತದೆ.

ನವರಾತ್ರಿ ಎಂಬ ಶಬ್ದಕ್ಕೆ ಹೊಸ ವ್ಯಾಖ್ಯಾನವಿದೆ. ಈ ಸಂಕಲ್ಪದಲ್ಲಿ ಮೂರು ಶಕ್ತಿಗಳನ್ನು ಗುರುತಿಸಲಾಗಿದೆ. ಅವುಗಳನ್ನು ಭೌತಿಕ ಶಕ್ತಿ, ಜ್ಞಾನಶಕ್ತಿ ಹಾಗೂ ಉತ್ಪಾದನಾ ಶಕ್ತಿ ಎಂದು ವಿಭಾಗಿಸಲಾಗಿದೆ. ಮಾನವರಲ್ಲಿ ಈ ಮೂರು ಶಕ್ತಿಗಳೂ ಒಳಗೊಂಡಿವೆ. ಮಾನವ ಬದುಕು ನಿರ್ಮಾಣವಾಗುವುದೇ ಈ ಶಕ್ತಿಗಳ ಸಂಗಮದಿಂದ ಎನ್ನುವುದು ನಿರ್ವಿವಾದ.

ನವರಾತ್ರಿಯಲ್ಲಿ ಪ್ರಕೃತಿಗೆ ಪ್ರಧಾನ ಸ್ಥಾನ. ಮಳೆಗಾಲವೆಂದರೆ ಪ್ರಕೃತಿಯ ಸ್ನಾನದ ಶುಭ ಕಾಲ. ಅಲ್ಲಿ ಪ್ರಕೃತಿಯ ಬಾಹ್ಯದ ಜತೆಗೆ ಆಂತರಿಕ ಶುದ್ಧೀಕರಣವೂ ನಡೆಯುತ್ತದೆ. ಇದರಿಂದ ಪ್ರಕೃತಿ ಆಹ್ಲಾದದಿಂದ ಹೊಸತನವನ್ನು ಗಳಿಸಿಕೊಳ್ಳುತ್ತದೆ. ನವರಾತ್ರಿ ಆಚರಣೆಯು ಪ್ರಕೃತಿ ಪೂಜೆಯಾಗಿದ್ದು, ಮಳೆಗಾಲದ ಕೊನೆಯ ಹಂತದಲ್ಲಿ ಬರುತ್ತದೆ. ಮಳೆ ಬಂದಾಗ ಭೂಮಿಯಲ್ಲಿ ಚಿಗುರು ಚಿಮ್ಮುತ್ತದೆ. ನವಚೈತನ್ಯ ಹೊಮ್ಮುತ್ತದೆ. ಪ್ರಕೃತಿಯ ಭೌತಿಕ, ಅರಿವು ಹಾಗೂ ಉತ್ಪಾದನಾ ಶಕ್ತಿ ವೃದ್ಧಿಯಾಗುತ್ತದೆ. ನವರಾತ್ರಿಯ ಆರಾಧನೆಯಲ್ಲಿ ಈ ಶಕ್ತಿಗಳ ಆವಾಹನೆ ಪ್ರಮುಖವಾಗುತ್ತದೆ.

ರಾತ್ರಿಯೆಂದರೆ ಬರಿಯ ಕತ್ತಲೆಯಲ್ಲ. ರಾತ್ರಿ ಕೂಡ ಚೈತನ್ಯವಾಗಿಯೇ ಕಾಣುತ್ತದೆ. ನವಶಕ್ತಿಯ ಚೈತನ್ಯವು ಇರುಳು ಕಳೆದ ಬೆಳಕಿನಲ್ಲಿ ಸಮ್ಮಿಲಿತವಾಗಿ ಬಿಡುಗಡೆಯಾಗುತ್ತದೆ. ರಾತ್ರಿ ಕಂಡ ಮೊಗ್ಗು ಬೆಳಗಾದಾಗ ಅರಳಬೇಕಾದರೆ ಪ್ರಕೃತಿಯಲ್ಲಿನ ಅವ್ಯಕ್ತ ಶಕ್ತಿಯೊಂದು ಕೆಲಸ ಮಾಡಿರುತ್ತದೆ. ಅದು ದೈವಶಕ್ತಿ ಎಂಬ ನಂಬಿಕೆ ಇದೆ. ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಶಕ್ತಿಗಳು ಪ್ರಕೃತಿಯಲ್ಲಿ ಸೃಷ್ಟಿಯಾಗುತ್ತವೆ.

ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿಯ ಆರಾಧನೆ ನಡೆಯುತ್ತದೆ. ನಡುವಿನ ಮೂರು ದಿನ ಮಹಾಲಕ್ಷ್ಮಿಯ ಆರಾಧನೆ ಹಾಗೂ ಕೊನೆಯ ಮೂರು ದಿನ ಸರಸ್ವತಿಯ ಆರಾಧನೆ ನಡೆಯುತ್ತದೆ. ಮಹಾಕಾಳಿ ಭೌತಿಕ ಶಕ್ತಿಯ ಕೇಂದ್ರ. ಇಲ್ಲಿ ಶರೀರ ಬಲಕ್ಕೆ ಪ್ರಾಧಾನ್ಯತೆ ಹೆಚ್ಚು. ಈ ಬಲದಿಂದಲೇ ತಾಯಿ ದುಷ್ಟಶಕ್ತಿಗಳನ್ನು ನಿಗ್ರಹಿಸುತ್ತಾಳೆ. ಮಾನವನಾದವನು ಜೀವನಕ್ಕಾಗಿ ಶರೀರವನ್ನು ದಂಡಿಸಬೇಕು. ದುಡಿಮೆಯಿಂದ ಆರೋಗ್ಯ ಹಾಗೂ ಸಂಪತ್ತಿನ ಬಲವರ್ಧನೆ ನಡೆಯುತ್ತದೆ. ಈ ಶಕ್ತಿಯ ಸಂಚಯನಕ್ಕೆ ಮಹಾಕಾಳಿಯ ಅನುಗ್ರಹ ಬೇಕು. ಮಹಾಲಕ್ಷ್ಮಿಯ ಆರಾಧನೆಯಿಂದ ಭಕ್ತರ ಮನೆಯ ಸಂಪತ್ತು, ದವಸಧಾನ್ಯಗಳು ವೃದ್ಧಿಯಾಗುತ್ತದೆ. ಖರ್ಚು ವೆಚ್ಚಗಳು, ಅನಾರೋಗ್ಯಗಳು ಕಡಿಮೆಯಾಗುತ್ತವೆ.

ಅಖಂಡ ಜ್ಞಾನ ಸಂಪಾದನೆಗೆ ಸರಸ್ವತಿಯ ಅನುಗ್ರಹ ಬೇಕು. ಜ್ಞಾನವು ಬದುಕನ್ನು ಬೆಳಗಿಸುವ ದೊಡ್ಡ ಶಕ್ತಿ. ಸರಸ್ವತಿಯ ದಯೆಯಿಂದ ವ್ಯಕ್ತಿಯಲ್ಲಿ ವಿದ್ಯೆ ಹಾಗೂ ವಿನಯ ಸೃಷ್ಟಿಯಾಗುತ್ತದೆ. ನವರಾತ್ರಿಯಲ್ಲಿ ತಾಯಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ, ದೇವಮೂರ್ತಿ ಎಂದು 9 ರೂಪಗಳಲ್ಲಿ ಆರಾಧಿಸುತ್ತಾರೆ. ವಿಜಯದಶಮಿಯಂದು ದೇವತಾ ಸಮೂಹಕ್ಕೆ ದುಷ್ಟ ಮರ್ಧನದ ಮೂಲಕ ಜಯಪ್ರಾಪ್ತಿಯಾದ ದಿನ. ರಾಮಾಯಣದಲ್ಲಿ ರಾವಣ ಸಂಹಾರವೂ ಕೂಡಾ ಇದೇ ದಿನ ಆಗಿದೆ ಎಂಬ ಮಾತೂ ಇದೆ. ದೇವರ ಪ್ರಜ್ಞೆ ಇಲ್ಲದಾಗ ಮನಸ್ಸಿನಲ್ಲಿ ದಾನವತ್ವ ಚಿಗುರುತ್ತದೆ. ಆಗ ಅಹಂಕಾರವೆಂಬ ಕಾಣದ ಕೋಡುಗಳೂ ಸೃಷ್ಟಿಯಾಗುತ್ತವೆ. ಆಗ ಮನಸ್ಸು ಚಂಚಲವಾಗಿ ಅಜ್ಞಾನ ತಾಂಡವವಾಡುತ್ತದೆ. ಆಗ ತಾಯಿ ಶಕ್ತಿಸ್ವರೂಪಿಣಿಯಾಗಿ ಆಗಮಿಸಿ ಈ ವಿಕಾರಗಳನ್ನು ನಾಶ ಮಾಡಿ, ವಿಜಯೋತ್ಸವ ಮೆರೆಯುತ್ತಾಳೆ.

ವರ್ಷ ಋತುವಿನ ಅಂತ್ಯದಲ್ಲಿ ಪಿತೃಪಕ್ಷವಾದರೆ, ಶರದೃತುವಿನ ಆರಂಭದ 15 ದಿನಗಳು ಮಾತೃಪಕ್ಷ ಎಂದು ಪ್ರತೀತಿ. ಇದು ಶರನ್ನವರಾತ್ರಿಯ ಪರ್ವಕಾಲ. ಧ್ಯಾನದ ಬದುಕಿನಿಂದ ಧಾನ್ಯದ ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ನಿತ್ಯ ನಿರಂತರವಾಗಿರುವ ಪ್ರಕೃತಿಯೆಂಬ ಸತ್ಯವನ್ನು ತಾಯಿ ಎಂಬ ಪರಮ ಸತ್ಯ ನಿಯಂತ್ರಿಸುತ್ತದೆ. ಜೀವಸೃಷ್ಟಿಯ ಅದ್ಭುತ ಶಕ್ತಿಯಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುತ್ತದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಮಾತೆಯು 9 ರೂಪದಲ್ಲಿ ಕಂಡುಬರುತ್ತಾಳೆ. ದುರ್ಗಾದೇವಿಯ ಈ ಅವತಾರಗಳ ಬಗ್ಗೆ ಕೆಳಗೆ ಉಲ್ಲೇಖವಿದೆ.

ಶೈಲಪುತ್ರಿ: ಪರ್ವತರಾಜ ಹಿಮವಂತನ ಮಗಳಾದ ಈಕೆ ಬಲಗೈಯಲ್ಲಿ ತ್ರಿಶೂಲ ಹಾಗೂ ಪದ್ಮವನ್ನು ಹಿಡಿದಿರುತ್ತಾಳೆ. ವೃಷಭವಾಹನ ಮಂಡಿತೆಯಾಗಿ ನವರಾತ್ರಿಯ ಮೊದಲ ದಿನದ ಪೂಜೆಯನ್ನು ಸ್ವೀಕರಿಸುತ್ತಾಳೆ. ದಕ್ಷ ಪ್ರಜಾಪತಿಯ ಮಗಳಾಗಿ ಜನಿಸಿ ದಾಕ್ಷಾಯಿಣಿ ನಾಮಾಂಕಿತಳಾಗಿ, ಪತಿ ಪರಮೇಶ್ವರನಿಗೆ ತಂದೆಯಿಂದ ಅಪಮಾನವಾದಾಗ, ಯೋಗಾಗ್ನಿಯಲ್ಲಿ ಭಸ್ಮವಾದಳು. ಇದೇ ದಾಕ್ಷಾಯಿಣಿ ಮತ್ತೆ ಶೈಲಪುತ್ರಿಯಾಗಿ ಜನಿಸಿದಳು. ಅವಳು ಶಿವನನ್ನು ವರಿಸಿದಳು. ಯೋಗಿಗಳು ತಮ್ಮ ಮನಸ್ಸನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸಿ, ಆರಾಧಿಸುತ್ತಾರೆ.

ಬ್ರಹ್ಮಚಾರಿಣಿ: ಇದು ದುರ್ಗೆಯ ದ್ವಿತೀಯ ಸ್ವರೂಪ. ಬ್ರಹ್ಮ ಎಂದರೆ ತಪಸ್ಸು ಎಂಬ ಅರ್ಥವಿದೆ. ತಪವನ್ನು ಆಚರಿಸುವಳು ಬ್ರಹ್ಮಚಾರಿಣಿ ಎಂಬ ಅಭಿದಾನದಿಂದ ಭಕ್ತ ಜನರನ್ನು ಪೊರೆಯುತ್ತಾಳೆ. ಈಕೆಯ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲ ಇದೆ. ಹಿಮವಂತನ ಮಗಳಾಗಿ ಜನಿಸಿದ ಬ್ರಹ್ಮಚಾರಿಣಿ ನಾರದನ ಆದೇಶದಂತೆ ತಪಸ್ಸನ್ನು ಆಚರಿಸಿದಳು. ಈಕೆಗೆ ಅಪರ್ಣಾ ಎಂಬ ಹೆಸರೂ ಇದೆ. ಬ್ರಹ್ಮಚಾರಿಣಿಯಿಂದ ಭಕ್ತರಲ್ಲಿ ಉಪಾಸನೆ, ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರಗಳನ್ನು ಪ್ರೇರೇಪಿಸುತ್ತದೆ. ಈಕೆಯ ಆರಾಧನೆಯಿಂದ ಮನಸ್ಸು ದೃಢವಾಗುತ್ತದೆ. ಚಿತ್ತಚಾಂಚಲ್ಯ ದೂರವಾಗುತ್ತದೆ. ಸ್ವಾದಿಷ್ಟಾನ ಚಕ್ರದಲ್ಲಿ ಈಕೆಯ ಆರಾಧನೆ ನವರಾತ್ರಿಯ 2ನೇ ದಿನ ನಡೆಯುತ್ತದೆ.

ಚಂದ್ರಘಂಟಾ‌: ದುರ್ಗೆಯ ಮೂರನೇ ಹೆಸರು ಚಂದ್ರಘಂಟಾ. ಈ ಸ್ವರೂಪವು ಶಾಂತಿ ಹಾಗೂ ಶ್ರೇಯಸ್ಕರ ಎಂದು ತಿಳಿಯಲಾಗಿದೆ. ಚಂದ್ರಾಕೃತಿಯ ಆಕಾರ ಆಕೆಯ ಶಿರದಲ್ಲಿ ಇರುವುದರಿಂದ ಆಕೆಗೆ ಈ ಹೆಸರು ಬಂತು. ಈಕೆಯ ಶರೀರವು ಚಿನ್ನದಂತೆ ಹೊಳೆಯುತ್ತದೆ. ಹತ್ತು ಕೈಗಳಲ್ಲಿ ವಿವಿಧ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾಳೆ. ಸಿಂಹವಾಹಿನಿಯಾಗಿರುವ ಈಕೆಗೆ ದುರ್ಜನರು ಹೆದರುತ್ತಾರೆ. ಚಂದ್ರಘಂಟೆಯ ಅನುಗ್ರಹದಿಂದ ಪಾಪನಾಶ, ನಿರ್ಭಯತ್ವ, ಯಶಸ್ಸು, ಪರಾಕ್ರಮ, ಕಷ್ಟಗಳ ಪರಿಹಾರ, ಪ್ರೇತ ಬಾಧೆ ನಿವಾರಣೆಯಾಗುತ್ತದೆ. ಮಣಿಪೂರ ಚಕ್ರದಲ್ಲಿ ಈಕೆಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುವುದು.

ಕೂಷ್ಮಾಂಡಾ: ಜಗನ್ಮಾತೆಯ 4ನೇ ಅವತಾರವೇ ಕೂಷ್ಮಾಂಡಾ. ಹಸನ್ಮುಖಿಯಾಗಿರುವ ಈ ಅವತಾರವು ಅಂಧಕಾರಯುತವಾಗಿದ್ದ ಜಗತ್ತನ್ನು ತನ್ನ ಮಧುರವಾದ ಹಾಸ್ಯದಿಂದ ಬೆಳಗುವಂತೆ ಮಾಡಿ ಬ್ರಹ್ಮಾಂಡವನ್ನು ಸೃಷ್ಟಿಸಿದಳು. ಈಕೆ ಅಷ್ಟಭುಜದೇವಿ. ಕಮಂಡಲ, ಧನುಸ್ಸು, ಬಾಣ, ಚಕ್ರ, ಅಮೃತದ ಕಲಶ, ಗದೆ, ಪದ್ಮ, ಹಾರಗಳನ್ನು ಧರಿಸಿ, ಸಿಂಹವಾಹಿನಿಯಾಗಿದ್ದಾಳೆ. ಈಕೆಗೆ ಕುಂಬಳ ಕಾಯಿ(ಕೂಷ್ಮಾಂಡ) ನೈವೇದ್ಯ ಅತ್ಯಂತ ಪ್ರಿಯ. ಈಕೆಯ ಆರಾಧನೆಯಿಂದ ಆಯುಷ್ಯ, ಯಶಸ್ಸು, ಬಲವೃದ್ಧಿ ಸಹಿತ ಆರೋಗ್ಯ ಸಿದ್ಧಿಯಾಗುತ್ತದೆ. ಈಕೆ ಸೃಷ್ಟಿಯ ಆದಿಸ್ವರೂಪಿಯಾಗಿದ್ದು, ಸೂರ್ಯಮಂಡಲದೊಳಗೆ ವಾಸಿಸುತ್ತಾಳೆ. ಈಕೆಯ ಶರೀರದ ಕಾಂತಿಯು ಸೂರ್ಯನ ಪ್ರಭೆಗೆ ಸರಿಸಾಟಿಯಾಗಿದೆ. ಎಲ್ಲಾ ವಸ್ತುಗಳ ಹಾಗೂ ಪ್ರಾಣಿಗಳ ತೇಜಸ್ಸು ಈಕೆಯ ನೆರಳು ಆಗಿದೆ. ಈಕೆಯನ್ನು ಅನಾಹತ ಚಕ್ರದಲ್ಲಿ ಪ್ರತಿಷ್ಠಾಪಿಸಿ, ನವರಾತ್ರಿಯ 4ನೇ ದಿನ ಪೂಜಿಸಲಾಗುತ್ತದೆ.

ಸ್ಕಂದಮಾತಾ: ಇದು ದುರ್ಗೆಯ 5ನೇ ರೂಪ. ದೇವತೆಗಳ ಸೇನಾನಿಯಾದ ಸ್ಕಂದ (ಕುಮಾರ ಸುಬ್ರಹ್ಮಣ್ಯ)ನ ತಾಯಿ. ಸ್ಕಂದನು ಈಕೆಯ ತೊಡೆಯ ಮೇಲೆ ಕುಳಿತಿದ್ದಾನೆ. ಸಿಂಹವಾಹಿನಿಯಾದ ಈಕೆಯನ್ನು ಕಮಲಾಸನಾ ದೇವಿ ಎಂದೂ ಕರೆಯುತ್ತಾರೆ. ನವರಾತ್ರಿಯ 5ನೇ ದಿನವನ್ನು ಲಲಿತಪಂಚಮಿ ಎಂದು ಕರೆಯುತ್ತಾರೆ. ಆರಾಧಕರು ತಮ್ಮ ಮನಸ್ಸನ್ನು ವಿಶುದ್ಧ ಚಕ್ರದಲ್ಲಿ ನಿಲ್ಲಿಸಿ ಆರಾಧಿಸುತ್ತಾರೆ. ಸ್ಕಂದಮಾತೆಯನ್ನು ಪೂಜಿಸುವಾಗ ಸ್ಕಂದನನ್ನು ಸ್ತುತಿಸಿದಂತೆ ಆಗುತ್ತದೆ.

ಕಾತ್ಯಾಯಿನಿ: ದುರ್ಗಾದೇವಿಯ ಆರನೇ ಅವತಾರವಿದು. ಈಕೆ ಮಹರ್ಷಿ ಕಾತ್ಯಾಯನರಲ್ಲಿ ಪುತ್ರಿಯ ರೂಪದಿಂದ ಅವತರಿಸಿದ್ದಳು. ಬಂಗಾರದ ಬಣ್ಣದಿಂದ ಕೂಡಿದ್ದು, ಬಲಕೈಯಲ್ಲಿ ಖಡ್ಗವೂ, ಎಡ ಕೈಯಲ್ಲಿ ಕಮಲವೂ ಇದೆ. ಮಹಿಷಾಸುರನ ಸಂಹಾರಕ್ಕಾಗಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ಹಾಗೂ ಇತರ ದೇವತೆಗಳು ತಮ್ಮ ತೇಜಸ್ಸಿನ ಶಕ್ತಿಯನ್ನು ನೀಡಿ ಪೂಜೆ ಮಾಡಿದ ಕಾರಣದಿಂದ ಈಕೆ ಕಾತ್ಯಾಯಿನಿ ಎಂಬ ಹೆಸರಿನಿಂದ ಪೂಜಿತಗೊಂಡಳು. ಭಾದ್ರಪದ ಕೃಷ್ಣ ಚತುರ್ದಶಿಯಂದು ಈಕೆ ಅವತರಿಸಿ, ಅಶ್ವಿಜ ಶುಕ್ಲ, ಷಷ್ಠಿ, ಸಪ್ತಮಿ, ಅಷ್ಟಮಿ ನವಮಿ ದಿನಗಳಂದು ಪೂಜೆ ಸ್ವೀಕರಿಸಿ ದಶಮಿಯಂದು ಮಹಿಷಾಸುರನನ್ನು ವಧಿಸಿದಳು. ಕೃಷ್ಣನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಕಾತ್ಯಾಯಿನಿಯನ್ನು ಕಾಳಿಂದಿ ನದಿ ತೀರದಲ್ಲಿ ಪೂಜಿಸಿದರು. ಈಕೆಯನ್ನು ಆರಾಧಿಸುವುದರಿಂದ ಭಕ್ತರು ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷವನ್ನು ಪಡೆಯುತ್ತಾರೆ. ಭಕ್ತರು ಈಕೆಯ ಆರಾಧನೆಯನ್ನು ಮನಸ್ಸನ್ನು ಆಜ್ಞಾಚಕ್ರದಲ್ಲಿ ಕೇಂದ್ರೀಕರಿಸಿ ಪೂಜಿಸುತ್ತಾರೆ.

ಕಾಲರಾತ್ರಿ: ಇದು ದುರ್ಗೆಯ ಏಳನೇ ಶಕ್ತಿ. ಈಕೆಯ ಶರೀರ ಸಂಪೂರ್ಣ ಕಪ್ಪು. ಕೂದಲು ಹರಡಿಕೊಂಡಿದೆ. ಕತ್ತಿನಲ್ಲಿ ಹೊಳೆಯುವ ಮಾಲೆ, ಬೃಹತ್ತಾದ ಗೋಳಾಕಾರದ ಮೂರು ಕಣ್ಣುಗಳನ್ನು ಹೊಂದಿದ್ದಾಳೆ. ಈಕೆಯ ಕಿರಣಗಳು ವಿದ್ಯುತ್ತಿನಂತೆ ತೀಕ್ಷ್ಣ. ಶ್ವಾಸೋಚ್ಛಾಸದಲ್ಲಿ ಅಗ್ನಿಜ್ವಾಲೆಗಳು ಹೊರಡುತ್ತವೆ. ಕತ್ತೆಯೇ ಈಕೆಯ ವಾಹನ. ಚತುರ್ಭುಜೆಯಾದ ಈಕೆಯು ಅಭಯಹಸ್ತ, ವರಮುದ್ರೆ, ಕಬ್ಬಿಣದ ಮುಳ್ಳು ಹಾಗೂ ಖಡ್ಗವನ್ನು ಧರಿಸಿದ್ದಾಳೆ. ನೋಡುವುದಕ್ಕೆ ಈಕೆಯ ರೂಪವು ಭೀತರಾಗುವಂತೆ ಇದ್ದರೂ ಈಕೆ ಶುಭಫಲವನ್ನೇ ನೀಡುವುದರಿಂದ ಭಕ್ತರು ಈಕೆಯನ್ನು ಶುಭಕರಿ ಎಂದು ಕರೆಯುತ್ತಾರೆ. ಗ್ರಹಬಾಧೆ, ಅಗ್ನಿಭಯ, ಜಲಭಯ, ಜಂತುಭಯ, ಶತ್ರುಭಯ, ರಾತ್ರಿಭಯಗಳಿಂದ ಮುಕ್ತರಾಗಲು ಈಕೆಯನ್ನು ಆರಾಧಿಸಲಾಗುವುದು. ಆರಾಧಕರು ಈಕೆಯನ್ನು ಸಹಸ್ರಾರ ಚಕ್ರದಲ್ಲಿ ಕೇಂದ್ರೀಕರಿಸಿ ಪೂಜಿಸುತ್ತಾರೆ.

ಮಹಾಗೌರಿ: ಇದು ದೇವಿಯ ಎಂಟನೇ ಅವತಾರ. ಶ್ವೇತವರ್ಣದ ಮೈಕಾಂತಿಯಿಂದ ಈಕೆ ಕಂಗೊಳಿಸುತ್ತಾಳೆ. ಮಹಾಗೌರಿ ಎಂಟು ವರ್ಷದವಳೆಂದು ತಿಳಿಯಲಾಗಿದೆ. ಋಷಭವಾಹಿನಿಯಾದ ಈಕೆ ಶುಭ್ರ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದಾಳೆ. ಅಭಯ ಮುದ್ರೆ, ವರಮುದ್ರೆ, ತ್ರಿಶೂಲ ಹಾಗೂ ಡಮರುಗಳನ್ನು ಕೈಯಲ್ಲಿ ಧರಿಸಿದ್ದಾಳೆ. ಈಕೆ ಶಿವನ ಹೊರತಾಗಿ ಯಾರನ್ನೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿ, ತಪಸ್ಸನ್ನು ಆಚರಿಸುತ್ತಾಳೆ. ತಪಸ್ಸಿನಿಂದಾಗಿ ಈಕೆಯ ಶರೀರ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಯಿತು. ಈಕೆಯ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ, ಗಂಗಾಜಲವನ್ನು ಪ್ರೋಕ್ಷಿಸಿದಾಗ ಕಪ್ಪು ದೇಹ ಮತ್ತೆ ಬಿಳಿಯಾಯಿತು. ಅಂದಿನಿಂದ ಈಕೆ ಗೌರಿಯಾದಳು. ಇವಳ ಆರಾಧನೆಯಿಂದ ಮನಸ್ಸಿನ ಕಲ್ಮಶಗಳು, ಪಾಪಗಳು ನಾಶವಾಗುತ್ತವೆ. ವ್ಯಕ್ತಿಯ ಪುಣ್ಯವು ಅಕ್ಷಯವಾಗುತ್ತದೆ.

ಸಿದ್ಧಿದಾತ್ರಿ: ಇದು ದುರ್ಗಾಮಾತೆಯ 9ನೇ ಅವತಾರ. ಭಕ್ತರಿಗೆ ಎಲ್ಲಾ ವಿಧದ ಸಿದ್ಧಿಗಳನ್ನೂ ನೀಡುವ ಸಿದ್ಧಿದಾತ್ರಿ ಇವಳು. ಈಕೆಯಲ್ಲಿ ಅಷ್ಟಸಿದ್ಧಿಗಳಾದ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಮತ್ತು ವಶಿತ್ವಗಳಿವೆ ಎಂಬ ಉಲ್ಲೇಖವಿದೆ. ಸಿಂಹವಾಹಿನಿಯಾದ ಈಕೆ ಶಿವನ ಅರ್ಧಶರೀರವನ್ನು ಪಡೆದ ಕಾರಣ ಮಹೇಶ್ವರ ಅರ್ಧನಾರೀಶ್ವರನಾದ. ಈಕೆಯು ಚಕ್ರ, ಗಧೆ, ಶಂಖ ಹಾಗೂ ಪದ್ಮಗಳನ್ನು ಕೈಗಳಲ್ಲಿ ಹಿಡಿದಿದ್ದಾಳೆ. ಈಕೆಗೆ ಆದಿಪರಾಶಕ್ತಿ ಎಂಬ ಹೆಸರೂ ಇದೆ.

ನವರಾತ್ರಿಯ ಹತ್ತನೇ ದಿನವೇ ದಶಮಿ. ಈ ದಿನ ವಿದ್ಯಾಧಿದೇವತೆ ಸರಸ್ವತಿಯನ್ನು ಆರಾಧಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ಮಂದಿರ, ಮಠ ಹಾಗೂ ಮನೆಯಲ್ಲೂ ಕೂಡಾ ಶಾರದಾ ಪೂಜೆಯನ್ನು ಮಾಡಲಾಗುತ್ತದೆ. ವಿದ್ಯಾಧಿದೇವತೆಗೆ ಸಿಹಿ ಅವಲಕ್ಕಿ ಅತ್ಯಂತ ಪ್ರಿಯ. ಮಕ್ಕಳಿಗೆ ಅಕ್ಷರಾಭ್ಯಾಸವನ್ನೂ ಮಾಡಿಸಲಾಗುತ್ತದೆ. ಕೆಲವು ಮನೆತನಗಳಲ್ಲಿ 9 ದಿನಗಳೂ ಕೂಡ ನವರಾತ್ರಿ ಪೂಜೆಯನ್ನು ಮಾಡುತ್ತಾರೆ. ನವಮಿಯಂದು ಮುತ್ತೈದೆಯರಿಗೆ ಅರಷಿಣ ಕುಂಕುಮ ಹಾಗೂ ಬಾಗಿನ ನೀಡಿ ಆಶೀರ್ವಾದ ಪಡೆಯಲಾಗುತ್ತದೆ. ಈ ಸಂದರ್ಭದಲ್ಲಿ ಹೊಸಅಕ್ಕಿ ಊಟವನ್ನೂ ಮಾಡುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಬಂಧುಗಳು, ಗೆಳೆಯರು, ಹಿತೈಷಿಗಳು, ನೆರೆಕರೆಯವರು ನವರಾತ್ರಿ ಪೂಜೆಯಲ್ಲಿ ಆಮಂತ್ರಣವಿಲ್ಲದಿದ್ದರೂ ಪಾಲ್ಗೊಳ್ಳಬಹುದೆಂಬ ಶಿಷ್ಟಾಚಾರ ಇದೆ. ನವರಾತ್ರಿಯ ಕಾಲದಲ್ಲಿ ದೇವಿ ಸಂಬಂಧಿತ ಗ್ರಂಥಗಳ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದರಿಂದ ಅತ್ಯುತ್ತಮ ಫಲ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT