ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಸಾವಿರ ರೈತರಿಗೆ ಸಿಗದ ಇನ್‌ಪುಟ್‌ ಸಬ್ಸಿಡಿ

Last Updated 2 ಜುಲೈ 2017, 7:21 IST
ಅಕ್ಷರ ಗಾತ್ರ

ದಾವಣಗೆರೆ: ಈ ವರ್ಷ ಮುಂಗಾರು ಆರಂಭವಾದರೂ ಜಿಲ್ಲೆಯ 16,000 ರೈತರ ಖಾತೆಗಳಿಗೆ ಹಿಂದಿನ ವರ್ಷದ  ಇನ್‌ಪುಟ್‌ ಸಬ್ಸಿಡಿ ಇನ್ನೂ ಜಮಾ ಆಗಿಲ್ಲ. ಮೂರು ವರ್ಷಗಳಿಂದ ಎದು ರಾಗಿರುವ ಸತತ ಬರದಿಂದ ರೈತರು ನಲುಗಿಹೋಗಿದ್ದಾರೆ.

ಬೆಳೆ ನಾಶದಿಂದಾಗಿ ಅಪಾರ ನಷ್ಟ ಅನು ಭವಿಸಿದ್ದಾರೆ. ಈಗ ಬಂದಿರುವ ಅಲ್ಪ ಮಳೆಯನ್ನೇ ನಂಬಿಕೊಂಡ ರೈತರು ಜಮೀನು ಉಳುಮೆ, ಬೀಜ ಬಿತ್ತನೆ, ಮೇಲು ಗೊಬ್ಬರ ಹಾಕುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಹೆಚ್ಚಿನವರಿಗೆ ಇನ್‌ಪುಟ್‌ ಸಬ್ಸಿಡಿ ಸಿಕ್ಕಿಲ್ಲ. ಹೀಗಾಗಿ ಆ ರೈತರು ಆರ್ಥಿಕ ಮುಗ್ಗಟ್ಟು ಅನುಭವಿಸುವಂತಾಗಿದೆ.

ತಾಳೆಯಾಗದ ಮಾಹಿತಿ:
ಇನ್‌ಪುಟ್‌ ಸಬ್ಸಿಡಿಗಾಗಿ ರೈತರು ನೀಡಿರುವ ದಾಖಲೆಗಳು ಹೋಲಿಕೆಯಾಗುತ್ತಿಲ್ಲ. ಬೆಳೆ ವಿವರ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ ಮಾಹಿತಿಗಳು ತಾಳೆಯಾಗುತ್ತಿಲ್ಲ. ಹೀಗಾಗಿ ಹಣ ವರ್ಗಾವಣೆಗೆ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ಕಂದಾಯ ಇಲಾಖೆ ಪ್ರಕೃತಿ ವಿಕೋಪ ಶಾಖೆಯ ಸಿಬ್ಬಂದಿಯೊಬ್ಬರು.

ನಿಯಮಿತವಾಗಿ ಬಳಸದ ಕಾರಣ ಬಹಳಷ್ಟು ರೈತರ ಆಧಾರ್‌ ಸಂಖ್ಯೆಗಳು ನಿಷ್ಕ್ರಿಯಗೊಂಡಿವೆ. ಈ ರೈತರು ಸೇವಾ ಕೇಂದ್ರಗಳಲ್ಲಿ ಬೆರಳ ಮುದ್ರೆ ನೀಡಿ, ಮತ್ತೆ ಆಧಾರ್‌ ಸಂಖ್ಯೆಗಳನ್ನು ಚಾಲ್ತಿಗೆ ತರಬೇಕು. ಆದರೆ, ಈ ಪ್ರಕ್ರಿಯೆ ತೀರಾ ನಿಧಾನವಾಗುತ್ತಿದೆ.

ಅಲ್ಲದೇ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಿಸುವಾಗಲೂ ಹಲವು ತಪ್ಪುಗಳಾಗಿವೆ. ಯಾರದೋ ಖಾತೆಗೆ ಬೇರೆ ಯಾರದೋ ಆಧಾರ್‌ ಸಂಖ್ಯೆ ಜೋಡಣೆಯಾಗಿದೆ. ಹೀಗಾಗಿ, ರೈತರಿಗೆ ಇನ್‌ಪುಟ್‌ ಸಬ್ಸಿಡಿ ಜಮಾ ಆಗುವಲ್ಲಿ ಅಡಚಣೆಯಾಗುತ್ತಿದೆ ಎನ್ನುತ್ತಾರೆ ಅವರು.

ಕಳೆದ ತಿಂಗಳವರೆಗೆ ನಾಲ್ಕು ಕಂತುಗಳಲ್ಲಿ ಜಿಲ್ಲೆಯ ಒಟ್ಟು 89,000 ರೈತರ ಬ್ಯಾಂಕ್‌ ಖಾತೆಗಳಿಗೆ ₹ 63.37 ಕೋಟಿ ಇನ್‌ಪುಟ್‌ ಸಬ್ಸಿಡಿ ಜಮೆಯಾಗಿದೆ. ಇನ್ನೂ ಮೂರು ಕಂತುಗಳಲ್ಲಿ ಹಣ ವರ್ಗಾಯಿಸಬೇಕಿದ್ದು, ದಾಖಲೆಗಳು ಹೊಂದಾಣಿಕೆಯಾಗದ ಕಾರಣ ಉಳಿದ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡುವುದು ತಡವಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ ಅವರು.

ಚೆಕ್‌ ಮೂಲಕ ಸಬ್ಸಿಡಿ:
ಆಧಾರ್‌ ಸಂಖ್ಯೆ ತಪ್ಪಾಗಿ ಜೋಡಣೆಯಾಗಿರುವ ಹಲವು ಖಾತೆಗಳು ಪತ್ತೆಯಾಗಿವೆ. ಈ ದೋಷ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಮಸ್ಯೆ ಸರಿಪಡಿಸಲು ಸಾಧ್ಯವಾಗದಿದ್ದರೆ ಅಧಿಕಾರಿಗಳ ಜತೆ ಚರ್ಚಿಸಿ, ರೈತರಿಗೆ ಚೆಕ್‌ ಮೂಲಕ ಇನ್‌ಪುಟ್‌ ಸಬ್ಸಿಡಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡುತ್ತಾರೆ ಲೀಡ್‌ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಎನ್‌.ಟಿ.ಎರ್ರಿಸ್ವಾಮಿ.

‘ಇನ್‌ಪುಟ್‌ ಸಬ್ಸಿಡಿ ಸಿಗದ ಕಾರಣ ರೈತರು ಮುಂದಿನ ಬೆಳೆ ಹಾಕಲು ಕಷ್ಟಪಡುತ್ತಿದ್ದಾರೆ. ಸಕಾಲದಲ್ಲಿ ಪರಿಹಾರ ನೀಡಿದರೆ ಮಾತ್ರ ಅವರು ಬೆಳೆ ತೆಗೆಯಲು ಸಾಧ್ಯ. ಹೀಗಾಗಿ, ಕೂಡಲೇ ಇನ್‌ಪುಟ್‌ ಸಬ್ಸಿಡಿ ನೀಡಲು ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲು ಸಮಸ್ಯೆಯಿದ್ದರೆ ಚೆಕ್‌ ಮೂಲಕ ಎಲ್ಲ ರೈತರಿಗೆ ಹಣ ನೀಡಬೇಕು. ಇಲ್ಲದಿದ್ದರೆ ಹೋರಾಟ ಆರಂಭಿಸಲಾಗುವುದು’ ಎಂದು ಎಚ್ಚರಿಸುತ್ತಾರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT