ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳನ್ನೇ ಮಾರುಕಟ್ಟೆ ಮಾಡಿದ ಬಿಜೆಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 5 ಮೇ 2024, 7:14 IST
Last Updated 5 ಮೇ 2024, 7:14 IST
ಅಕ್ಷರ ಗಾತ್ರ

ದಾವಣಗೆರೆ: ‘ಹಲವು ಭರವಸೆ ಈಡೇರಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಮಾಡಿದ್ದು ಏನು? ಕೇವಲ ಸುಳ್ಳನ್ನೇ ಹೇಳಿ ಅದನ್ನೇ ಮಾರುಕಟ್ಟೆ ಮಾಡಿ, ಜನರನ್ನು ದಾರಿ ತಪ್ಪಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಶನಿವಾರ ನಡೆದ ಕುರುಬ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಭಾವನಾತ್ಮಕ ವಿಚಾರ ಪ್ರಸ್ತಾಪ ಮಾಡುತ್ತಾ, ಜಾತಿ, ಧರ್ಮ, ಹಿಂದುತ್ವದ ಹೆಸರಿನಲ್ಲಿ ದ್ವೇಷದ ರಾಜಕಾರಣ ಮಾಡಿ, ಜನರ ಮನಸ್ಸನ್ನು ಕೆಡಿಸಿದೆ’ ಎಂದು ವಾಗ್ದಾಳಿ ನಡೆಸಿದರು.

‘ಪ್ರಧಾನಿ ಮೋದಿ, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಬೇಕಾ? ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಬೇಕಾ ಎಂಬ ವಿಷಯ ಚರ್ಚೆಯಾಗಬೇಕು’ ಎಂದು ಹೇಳಿದರು.

‘ಧರ್ಮ, ಜಾತಿ ಹೆಸರಿನಲ್ಲಿ ಬಿಜೆಪಿ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪಾದಯಾತ್ರೆ ಮೂಲಕ ಜನರ ಮನಸ್ಸನ್ನು ಒಂದು ಮಾಡಲು ಪ್ರಯತ್ನಿಸಿದರು. ಸ್ವಾತಂತ್ರ್ಯಾನಂತರ ಬೇರೊಬ್ಬ ನಾಯಕ ಪಾದಯಾತ್ರೆ ಮಾಡಿದ ಉದಾಹರಣೆ ಇದೆಯಾ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ನೆಹರೂ, ಇಂದಿರಾಗಾಂಧಿ ಕಾಲದಿಂದಲೂ ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಬೇಕು. ಬಿಜೆಪಿಗೆ ಏಕೆ ಮತ ನೀಡಬೇಕು? ಸುಳ್ಳು ಹೇಳಿದ್ದಕ್ಕಾ? ಬೆಲೆ ಏರಿಕೆ ಮಾಡಿದ್ದಕ್ಕಾ’ ಎಂದು ಪ್ರಶ್ನಿಸಿದರು.

‘ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಇನ್ನೂ ಹಲವು ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತೇವೆ’ ಇದು ಪಕ್ಷೇತರ ಅಭ್ಯರ್ಥಿ ವಿನಯ್‌ಕುಮಾರ್‌ ಅವರಿಂದ ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣ ನೀಡಿಲ್ಲ. ಅದಕ್ಕೂ ಹೋರಾಟ ಮಾಡಬೇಕಾಯಿತು. ಈಗಿರುವ ರಾಜ್ಯದ ಬಿಜೆಪಿ ಸಂಸದರು ಈ ಬಗ್ಗೆ ಪ್ರಧಾನಿ ಮೋದಿ ಅವರನ್ನು ಒಮ್ಮೆಯಾದರೂ ಪ್ರಶ್ನಿಸಿದ್ದಾರಾ? ಮೋದಿ, ಅಮಿತಾ ಶಾ ಮುಂದೆ ಅವರು ತಲೆ ಅಲ್ಲಾಡಿಸುತ್ತಾರೆ ಅಷ್ಟೇ. ಇಷ್ಟು ವರ್ಷ ದಾವಣಗೆರೆ ಸಂಸದರಾಗಿದ್ದ ಜಿ.ಎಂ. ಸಿದ್ದೇಶ್ವರ ಅವರೂ ರಾಜ್ಯಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಕೇಳಲೇ ಇಲ್ಲ. ಇನ್ನು ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಈ ಬಗ್ಗೆ ಪ್ರಶ್ನಿಸುತ್ತಾರೆಯೇ’ ಎಂದು ಕೇಳಿದರು.

ರಾಜ್ಯದ ಪರ ಧ್ವನಿ ಎತ್ತಲು ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಸಮುದಾಯದವರಲ್ಲಿ ಅವರು ಮನವಿ ಮಾಡಿದರು.

‘ಕಾಂಗ್ರೆಸ್‌ ಎಂದರೆ ಸತ್ಯ, ಬಿಜೆಪಿ ಎಂದರೆ ಸುಳ್ಳು. ಇದು ಬದಲಾವಣೆಯ ಮಹತ್ವದ ಚುನಾವಣೆ. ರಾಜ್ಯದ ಕಾಂಗ್ರೆಸ್‌ ಸರ್ಕಾರದ ಜನಪರ ಕಾಳಜಿ ಕಾರ್ಯಕ್ರಮಗಳನ್ನು ಪರಿಗಣಿಸಿ ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಮತ ನೀಡಿ’ ಎಂದು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎಂ. ರೇವಣ್ಣ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಕಾಂಗ್ರೆಸ್‌ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌, ಮಾಜಿ ಶಾಸಕರಾದ ಎಸ್. ರಾಮಪ್ಪ, ಶಂಕರ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಕುರುಬ ಸಮುದಾಯದ ಮುಖಂಡರಾದ ಜೆ.ಸಿ ನಿಂಗಪ್ಪ, ಶಿವಕುಮಾರ್ ಒಡೆಯರ್, ಎಸ್. ವೆಂಕಟೇಶ್, ಎಸ್.ಎಸ್. ಗಿರೀಶ್, ಎಸ್.ಎಲ್. ಆನಂದಪ್ಪ, ಜೆ.ಎನ್‌.ಶ್ರೀನಿವಾಸ್‌, ಶ್ವೇತಾ ಶ್ರೀನಿವಾಸ್‌, ಗಿರೀಶ್ ಓಡೆಯರ್, ಕನ್ನಾವರ ರೇವಣಸಿದ್ದಪ್ಪ, ಪಿ, ಲಕ್ಕಪ್ಪ, ಎಚ್. ಬಿ. ಗೋಣಪ್ಪ, ಲೋಕಿಕೆರೆ ಸಿದ್ದಪ್ಪ, ಜಮ್ನಳ್ಳಿ ನಾಗರಾಜ ಇದ್ದರು.

‘ಮುಖಂಡರು ಕಾರ್ಯಕರ್ತರ ಇಚ್ಛೆಯಂತೆ ಪ್ರಭಾ ಅಭ್ಯರ್ಥಿ’
‘ಕಾಂಗ್ರೆಸ್‌ ಜಿಲ್ಲಾ ಘಟಕದ ಮುಖಂಡರು ಕಾರ್ಯಕರ್ತರ ಇಚ್ಚೆಯಂತೆ ಶಾಮನೂರು ಕುಟುಂಬದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಜಿ.ಬಿ. ವಿನಯ್‌ಕುಮಾರ್‌ ಪಕ್ಷಕ್ಕೆ ಬಂದು 6 ತಿಂಗಳಾಗಿದೆ. ಶಾಮನೂರು ಶಿವಶಂಕರಪ್ಪ ಕುಟುಂಬ 40 ವರ್ಷಗಳಿಂದ ಕಾಂಗ್ರೆಸ್‌ ಜತೆಗಿದೆ. ಅದಕ್ಕೆ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮತ ನೀಡಬೇಕು‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.  ‘ನಾನು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ‍ಪುರಿ ಸ್ವಾಮೀಜಿ ಎಚ್‌.ಎಂ.ರೇವಣ್ಣ ಕರೆದು ಮಾತನಾಡಿದರೂ ವಿನಯ್‌ಕುಮಾರ್‌ ಮಾತು ಕೇಳಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಅವರಿಗೆ ಏನು ಲಾಭವಿದೆ. ಅದು ಬಿಜೆಪಿಗೆ ಅಲ್ಲವೇ’ ಎಂದು ಪ್ರಶ್ನಿಸಿದರು. ‘ವಿನಯ್‌ಕುಮಾರ್‌ ಮನೆಗೆ ಮಾಜಿ ಸಚಿವ ಬೈರತಿ ಬಸವರಾಜ ರಾತ್ರೋರಾತ್ರಿ ಹೋಗಿದ್ದಾರೆ. ಏಕೆ ಹೋಗಿದ್ದಾರೆ? ವ್ಯವಹಾರ ಕುದುರಿಸಲಾ’ ಎಂದು ಆರೋಪಿಸಿದ ಸಿಎಂ ‘ಹಿಂದಿನ ಚುನಾವಣೆಯಲ್ಲಿ ಬೇರೆಯವರ ಟಿಕೆಟ್‌ ತಪ್ಪಿಸಿ ಬೈರತಿ ಬಸವರಾಜಗೆ ನೀಡಿದರೂ ಆತ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ. ಅಂತಹವರಿಗೆ ಬೆಂಬಲ ನೀಡುವಿರಾ’ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನೋಡಲು ಮುಗಿಬಿದ್ದ ಅಭಿಮಾನಿಗಳು 
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೋಡಲು ಅಪಾರ ಸಂಖ್ಯೆಯಲ್ಲಿ ಸಮುದಾಯದವರು ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳು ಅವರು ಬರುವ ಹಾದಿಯಲ್ಲೇ ಫೋಟೊ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಯುವತಿಯರು ಮಹಿಳೆಯರು ದೂರದಿಂದಲೇ ಸಿದ್ದರಾಮಯ್ಯ ಫೋಟೊ ಕ್ಲಿಕ್ಕಿಸಿಕೊಂಡರು. ಸಿದ್ದರಾಮಯ್ಯ ಬರುತ್ತಿದ್ದಂತೆ ಘೋಷಣೆ ಕೂಗಿದರು. ಕಾರ್ಯಕ್ರಮದ ಹೊರಗೆ ಸಿದ್ದರಾಮಯ್ಯ ಚಿತ್ರ ಮುದ್ರಿಸಿದ್ದ ಕಂಬಳಿ ಮಾರಾಟ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಸೇರಿದ್ದ ಜನರು ‘ಕುರುಬರೋ ನಾವು ಕುರುಬರೋ‘.. ‘ಟಗರು ಬಂತು ಟಗರು‘ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT