ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡರಿಗೆ ಪ್ರತ್ಯುತ್ತರ ನೀಡಲು ಬಾಲೆಯರು ಸಜ್ಜು

Last Updated 12 ಜನವರಿ 2015, 7:10 IST
ಅಕ್ಷರ ಗಾತ್ರ

ದಾವಣಗೆರೆ: ಲೈಂಗಿಕ ದೌರ್ಜನ್ಯ, ಕಿಡಿಗೇಡಿಗಳ ಕೀಟಲೆಯಿಂದ ಯುವತಿಯರಿಗೆ, ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರಿಗೆ ತೊಂದರೆ ಯಾಗುವ ಪ್ರಕರಣಗಳು ಒಂದಿಲ್ಲೊಂದು ಕಡೆ ವರದಿಯಾಗುತ್ತಿರುತ್ತವೆ. ಆಗ ಸಹಜವಾಗಿ ಕೇಳಿಬರುವ ಮಾತು ವಿದ್ಯಾರ್ಥಿನಿಯರಿಗೂ ಕರಾಟೆಯಂಥ ಸ್ವರಕ್ಷಣಾ ತಂತ್ರ ಕಲಿಸಬೇಕು ಎಂಬುದು. ಆದರೆ, ಇದು ಕಾರ್ಯಗತವಾಗುವುದು ಮಾತ್ರ ಕಡಿಮೆ.

ಆದರೆ, ಪುಂಡರ ಕಾಟ ಎದುರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಪಿಯು ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಶಿಬಿರ ಆಯೋಜಿಸಿ ಯಶಸ್ವಿಯಾದ ನಗರದ ಎವಿಕೆ ಕಾಲೇಜಿನ ‘ಕರಾಟೆ ಕಥನ’ ಇದು.


ಕಳೆದ ಡಿಸೆಂಬರ್ ತಿಂಗಳಿನಲ್ಲಿ ವಾರಕ್ಕೆ 3 ದಿನದಂತೆ ನಡೆದ ಕರಾಟೆ ತರಬೇತಿ ಶಿಬಿರವು ಆರಂಭದಿಂದಲೇ ಗಣನೀಯ ಸಂಖ್ಯೆಯ ವಿದ್ಯಾರ್ಥಿನಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಕನಿಷ್ಠ ಶುಲ್ಕ ನಿಗದಿಪಡಿಸಬೇಕು ಎಂಬ ಕಾಲೇಜು ಆಡಳಿತ ಮಂಡಳಿಯ ನಿರ್ಧಾರದಿಂದ ತರಬೇತಿಗೆ ನಿಗದಿಯಾದ ಶುಲ್ಕ  ₨ 50 ಮಾತ್ರ.

ಎವಿಕೆ ಪಿಯು ಕಾಲೇಜಿನ ಸುಮಾರು 150 ವಿದ್ಯಾರ್ಥಿನಿಯರು ಒಂದು ತಿಂಗಳ ಕರಾಟೆ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ತರಬೇತಿ ಪಡೆದು ದೈಹಿಕ ಹಾಗೂ ಮಾನಸಿಕವಾಗಿ ಸದೃಢ ರಾಗಿದ್ದಾರೆ. ಹೊರ ಪ್ರಪಂಚದಲ್ಲಿ ಓಡಾಡುವಾಗ ಯಾವಾಗ ಏನಾಗುವುದೋ ಎಂಬ ಭಯಭೀತ ವಾತಾವರಣದಲ್ಲಿಯೇ ನರಳುತ್ತಿದ್ದ ವಿದ್ಯಾರ್ಥಿನಿಯರು ಈಗ ದೈಹಿಕ ಹಲ್ಲೆ ಅಥವಾ ಲೈಂಗಿಕ ದೌರ್ಜನ್ಯ ನಡೆಸುವವರನ್ನು ಧೈರ್ಯದಿಂದ ಎದುರಿಸಲು ಸಜ್ಜಾಗಿ ನಿಂತಿದ್ದಾರೆ.

ಖತ್ತಾಸ್, ಕಾಲ್ಪನಿಕ ಚಲನವಲನ ಗಳು, ಪಂಚಸ್, ಬ್ಲಾಕ್ಸ್, ನಾನ್ ಚೆಕ್ ಎಂಬ ಅಸ್ತ್ರ ಪ್ರಯೋಗ ಮುಂತಾದ ಕರಾಟೆ ವಿದ್ಯೆಯ ಮೂಲತಂತ್ರಗಳನ್ನು ಅಭ್ಯಸಿಸಿರುವ ವಿದ್ಯಾರ್ಥಿನಿಯರು, ಯಾವುದೇ ಸಂದರ್ಭದಲ್ಲಿ ತಮ್ಮ ಮೇಲೆ ದಾಳಿಯ ಪ್ರಯತ್ನ ನಡೆದರೂ ಅದನ್ನು ಎದುರಿಸಲು ಸಿದ್ಧರಾಗಿದ್ದಾರೆ.

ಇಂತಹ ವಿಭಿನ್ನ ಪ್ರಯತ್ನಕ್ಕೆ ಮೂಲ ಕಾರಣ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಮತ್ತು ಜಿಲ್ಲಾ ಘಟಕಗಳು. ಸೂಕ್ತವಾಗಿ ಸಹಕರಿಸಿ ಕೈಜೋಡಿಸಿದ್ದು ಎವಿಕೆ ಪಿಯು ಕಾಲೇಜು ಆಡಳಿತ ಮಂಡಳಿ. ಆಸಕ್ತಿ ವಹಿಸಿ ಕಲಿಸಿದ ಕರಾಟೆ ತರಬೇತುದಾರ ಕುಬೇರನಾಯ್ಕ್, ಮನಸ್ಸಿಟ್ಟು ಕಲಿತ ವಿದ್ಯಾರ್ಥಿನಿಯರು ಇಂತಹದೊಂದು ಪುಟ್ಟ ಪ್ರಯತ್ನದ ಮೂಲಕ ಬಹುದೊಡ್ಡ ಸಾಮಾಜಿಕ ಪಿಡುಗನ್ನು ಆತ್ಮವಿಶ್ವಾಸದಿಂದ ಎದುರಿಸಲು ಮುನ್ನುಡಿ ಬರೆದಿದ್ದಾರೆ.

ಒಂದು ಸಣ್ಣ ಪ್ರಯತ್ನ...
‘ಲೈಂಗಿಕ ದೌರ್ಜನ್ಯ ತಡೆಗಟ್ಟಲು ಸ್ವಯಂರಕ್ಷಣಾ ತಂತ್ರಗಳು ಸಹಕಾರಿ. ರಾಜ್ಯ ಸರ್ಕಾರದ ವತಿಯಿಂದ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಕಡ್ಡಾಯವಾಗಿ ಸ್ವಯಂರಕ್ಷಣೆ ತರಬೇತಿ ನೀಡಬೇಕು ಎಂಬುದು ಸಂಘಟನೆಯ ಬಹು ವರ್ಷಗಳ ಒತ್ತಾಯವಾಗಿದೆ. ಎವಿಕೆ ಕಾಲೇಜಿನಲ್ಲಿ ಆಯೋಜಿಸಿರುವ ಕರಾಟೆ ತರಬೇತಿ ಶಿಬಿರ ಸರ್ಕಾರದ ಕಣ್ತೆರೆಸಲು ಒಂದು ಪುಟ್ಟ ಪ್ರಯತ್ನ ವಷ್ಟೇ’ ಎನ್ನುತ್ತಾರೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಶೋಭಾ.

ಕರಾಟೆ ತರಬೇತುದಾರ ಕುಬೇರನಾಯ್ಕ್ ‘ಪ್ರಜಾವಾಣಿ’ ಜತೆ ಮಾತನಾಡಿ, ‘ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿರುವುದು ಹೆಮ್ಮೆ ಎನಿಸಿದೆ. ಶಿಬಿರದಲ್ಲಿ ಕಲಿತ ತಂತ್ರಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಲು ಅವರಿಗೆ ಮಾನಸಿಕ ಸದೃಢತೆಯೂ ಅತ್ಯಗತ್ಯ ಎನ್ನುವುದನ್ನು ಮರೆಯುವಂತಿಲ್ಲ’ ಎನ್ನುತ್ತಾರೆ.

‘ಮೊದಲೆಲ್ಲಾ ಭಯ ಇಟ್ಟುಕೊಂಡೇ ಹೊರಗೆ ಓಡಾಡುತ್ತಿದ್ದೆವು. ತರಬೇತಿ ಪಡೆದ ನಂತರ, ಎಂತಹ ಪರಿಸ್ಥಿತಿ ಬಂದರೂ ಎದುರಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಸಾಕಷ್ಟು ವೃದ್ಧಿಸಿದೆ. ‘ನಾನ್‌ಚೆಕ್’ ಅಸ್ತ್ರ ಜೊತೆಗಿದ್ದರೆ ಹತ್ತು ಜನ ಜೊತೆಗಿದ್ದಂತೆ’ ಎಂಬುದು ತರಬೇತಿ ಪಡೆದ ವಿದ್ಯಾರ್ಥಿನಿಯರಾದ ಸ್ವಾತಿ ಮತ್ತು ಪ್ರಿಯಾ ಅವರ ಅಭಿಪ್ರಾಯ.

‘ಎಲ್ಲಾ ಶಾಲೆ ಕಾಲೇಜುಗಳಲ್ಲಿಯೂ ಸ್ವಯಂರಕ್ಷಣೆ ತರಬೇತಿ ನೀಡಬೇಕು. ಎಲ್ಲಾ ಸಂದರ್ಭಗಳಲ್ಲೂ ಹೆಣ್ಣುಮಕ್ಕಳ ಜೊತೆ ಪೋಷಕರು ಇರಲು ಆಗುವುದಿಲ್ಲ. ಇಂತಹ ತರಬೇತಿ ಶಿಬಿರಗಳಿಂದ ಅವರ ಆತ್ಮವಿಶ್ವಾಸ ಹೆಚ್ಚಿ ಧೈರ್ಯವಾಗಿ ಓಡಾಡುತ್ತಾರೆ’ ಎಂಬುದು ಪೋಷಕ ವೆಂಕಟೇಶ್ ಅವರ ವಿಶ್ವಾಸದ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT