ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಖರ್ಚಿನಲ್ಲಿ ಕೆರೆಗೆ ನೀರು ತಂದ ರೈತರು

Last Updated 7 ಅಕ್ಟೋಬರ್ 2017, 8:30 IST
ಅಕ್ಷರ ಗಾತ್ರ

ಮಾಯಕೊಂಡ: ಹೋಬಳಿಯ ಹಿಂಡಸಕಟ್ಟೆ, ನಲಕುಂದ ಮತ್ತು ಕ್ಯಾತನಹಳ್ಳಿ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲೇ ಕೆರೆ ತುಂಬಿಸುವ ಮಾದರಿ ಕಾಮಗಾರಿ ಕೈಗೊಂಡಿದ್ದಾರೆ. ಕೆರೆಯನ್ನು ಯಾವುದಾದರೂ ಯೋಜನೆಯ ವ್ಯಾಪ್ತಿಗೆ ಸೇರಿಸಿ, ನೀರು ತುಂಬಿಸಲು ಜನಪ್ರತಿಧಿಗಳ ಬಳಿ ಅಲೆಯುವ ಬದಲು ಅಗತ್ಯ ಕೆಲಸವನ್ನು ಮಾಡುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ.

ಈ ಭಾಗದ ರೈತರು ಅಡಿಕೆ ತೋಟ ಮಾಡಿಕೊಂಡು ಉತ್ತಮ ಆದಾಯ ಗಳಿಸುತ್ತಿದ್ದರು. ಈ ವರ್ಷ ಮಳೆಯ ಅಭಾವದಿಂದ ಕೊಳವೆಬಾವಿ ವಿಫಲವಾಗಿವೆ. ಟ್ಯಾಂಕರ್ ಮೂಲಕವೂ ನೀರು ಪೂರೈಸಿ ಸೋತಿದ್ದರು.

ಕೆಲವರು ಭದ್ರಾ ನಾಲೆಗೆ ಮೋಟಾರ್ ಅಳವಡಿಸಿ ಅಲ್ಲಿಂದ ನೀರನ್ನು ತೋಟಕ್ಕೆ ಹಾಯಿಸುತ್ತಿದ್ದರು. ಫಸಲು ಸಿಗದಿದ್ದರೂ ಹೇಗೋ ತೋಟ ಉಳಿಸಿಕೊಂಡಿದ್ದರು. ಮಳೆಗಾಲ ಮುಗಿಯುತ್ತಾ ಬಂದರೂ ಕೆರೆಗಳಿಗೆ ನೀರು ತುಂಬದಿರುವುದು ರೈತರ ಆತಂಕ ಹೆಚ್ಚಿಸಿತ್ತು.

ಹಿಂಡಸಕಟ್ಟೆ, ನಲಕುಂದ ಕೆರೆ ಸುಮಾರು 101 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆ ತುಂಬಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂಬುದು ಗ್ರಾಮಸ್ಥರ ವಿಶ್ವಾಸ. ಕೆರೆಗೆ ನೀರು ತುಂಬುವ ಯಾವ ಯೋಜನೆಯಲ್ಲೂ ನಲಕುಂದ – ಹಿಂಡಸಕಟ್ಟೆ ಕೆರೆ ಸೇರಿರಲಿಲ್ಲ. ಯೋಜನೆಯಲ್ಲಿ ಕೆರೆ ಸೇರಿಸಲು ಸರ್ಕಾರವನ್ನು ಬೇಡುವ ಬದಲು ಸ್ವಂತ ಖರ್ಚಿನಲ್ಲಿ ಕೆರೆಗೆ ನೀರನ್ನೇ ಹರಿಸಲು ಚಿಂತನೆ ನಡೆಸಿದರು.

ನೀರು ತಂದ ರೀತಿ: ಭದ್ರಾ ನೀರನ್ನು ತೋಟಕ್ಕೆ ತರಲು ಜಾಗ ಖರೀದಿ, ಮೋಟಾರ್ ಅಳವಡಿಕೆ, ಪೈಪ್‌ಲೈನ್ ಮಾಡುವುದು ಸೇರಿ ವಿವಿಧ ಕೆಲಸಗಳಿಗೆ ₹ 7–8 ಲಕ್ಷ ಖರ್ಚು ಮಾಡಿದರು. ಈಚೆಗೆ ಸುರಿದ ಮಳೆಯಿಂದ ತೋಟ ಸಾಕಷ್ಟು ಹಸಿಯಿದ್ದು, ಭದ್ರಾ ನಾಲೆಯಿಂದ ತಂದ ನೀರಿನ ಬಳಕೆ ಅವಶ್ಯಕತೆಯಿರಲಿಲ್ಲ.

ಕೆರೆ ತುಂಬಿಸಲು ಮುಂದಾದ ರೈತರು ಭದ್ರಾ ನಾಲೆಯಿಂದ ತೋಟಗಳಿಗೆ ಮಾಡಲಾದ ಪೈಪ್‌ಲೈನ್ ಅನ್ನು ಕೆರೆಯ ಕಡೆಗೆ ತಂದರು. ಕೆರೆಯ ಒಂದು ಕಡೆಗೆ ಹಿಂಡಸಕಟ್ಟೆ ಗ್ರಾಮದ ಸುಮಾರು ಏಳೆಂಟು ರೈತರು ಸ್ವಂತ ಖರ್ಚಿನಲ್ಲಿ ಪೈಪ್‌ಲೈನ್ ಮಾಡಿಸಿದರು. ಕ್ಯಾತನಹಳ್ಳಿ ಮತ್ತು ನಲಕುಂದ ರೈತರೂ ತಮ್ಮ ತೋಟಗಳಿಂದ ನೀರನ್ನು ಪೈಪ್‌ಲೈನ್ ಮೂಲಕ ಕೆರೆ ಕಡೆಗೆ ತಂದರು. ಊರಿಗೆ ಹತ್ತಿರವಾಗುವ ಕೆರೆಯ ಭಾಗಗಳಿಗೆ ಪೈಪ್‌ಲೈನ್ ಮಾಡಿ ಕಾಲುವೆ ತೆಗೆದು ನೀರು ಹರಿಸಲಾರಂಭಿಸಿದ್ದಾರೆ.

ಮೂರು ಇಂಚು ವ್ಯಾಸದ 15 ಪೈಪ್‌ಗಳಲ್ಲಿ ನೀರು ಕೆರೆಗೆ ಹರಿಯಲಾರಂಭಿಸಿದೆ. ಒಂದೆರಡು ದಿನ ಕೆರೆಯ ತಳಭಾಗದಲ್ಲಿ ಸಂಗ್ರಹಗೊಂಡ ನೀರು ರೈತರಲ್ಲಿ ಸಾರ್ಥಕತೆಯ ಭಾವ ಮೂಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT