ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಹೂವಿನ ಬೆಲೆ ಕುಸಿತ: ಬೆಳೆಗಾರ ಕಂಗಾಲು

Published 2 ಡಿಸೆಂಬರ್ 2023, 15:50 IST
Last Updated 2 ಡಿಸೆಂಬರ್ 2023, 15:50 IST
ಅಕ್ಷರ ಗಾತ್ರ

ಧಾರವಾಡ: ಹೂವಿನ ಬೆಲೆ ತೀವ್ರ ಕುಸಿದಿದ್ದು, ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಕೈಗೆ ಬಂದ ಬೆಳೆ ಹೊಲದಲ್ಲೇ ಕಮರುತ್ತಿದೆ.

ಕೆ.ಜಿಗೆ ಸೇವಂತಿ ₹15ರಿಂದ 20, ಚೆಂಡು ಹೂವು ₹10ಕ್ಕೆ ಇಳಿದಿದೆ. ಗುಲಾಬಿ ಕಟ್ಟಿಗೆ ₹60ಕ್ಕೆ ಕುಸಿದಿದೆ.

ಮಾರುಕಟ್ಟೆಗೆ ಹೂವಿನ ಆವಕ ಹೆಚ್ಚಾಗಿದೆ. ಬೆಳೆಗಾರರು 25 ಕೆ.ಜಿ ಚೀಲಕ್ಕೆ ಸೇವಂತಿ ₹200, ಚೆಂಡು ಹೂವು ₹100ಕ್ಕೆ ಹರಾಜು ಕೂಗಿದರೂ ಖರೀದಿಗೆ ವರ್ತಕರು ಮುಂದೆ ಬರುತ್ತಿಲ್ಲ.

ದೀಪಾವಳಿ ಹೊತ್ತಿನಲ್ಲಿ ಕೆ.ಜಿ.ಗೆ ಸೇವಂತಿ ₹60ರಿಂದ ₹80, ಚೆಂಡು ಹೂವು ₹50 ರಿಂದ ₹60 ಇತ್ತು. ಗುಲಾಬಿ ಕಟ್ಟಿಗೆ ₹100 ಇತ್ತು.

ತಾಲ್ಲುಕಿನ ಕುರುಬಗಟ್ಟಿ, ಗೋವನಕೊಪ್ಪ, ಚಂದನಮಟ್ಟಿ, ಜಿರಿಗವಾಡ, ಹಳ್ಳಿಗೇರಿ ಭಾಗದಲ್ಲಿ ಹೂವು ಬೆಳೆದಿದ್ದಾರೆ. ಈ ಬಾರಿ ಮಳೆ ಕೈಕೊಟ್ಟಿದೆ. ನೀರಾವರಿ ಪ್ರದೇಶಗಳ ಹಲವು ರೈತರು ಹೂವು ಬೆಳೆದಿದ್ದಾರೆ. ಫಸಲು ಚೆನ್ನಾಗಿದೆ. ಆದರೆ, ಬೆಲೆ ಕುಸಿದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

ಹಬ್ಬ, ಪೂಜೆ, ಗೃಹಪ್ರವೇಶ, ಮದುವೆ, ಸಭೆ-ಸಮಾರಂಭಗಳಿಗೆ ಜನರು ಹೂವು ಖರೀದಿಸುತ್ತಾರೆ. ಈ ಭಾಗದ ರೈತರು ಹುಬ್ಬಳ್ಳಿ, ಧಾರವಾಡ ಮಾರುಕಟ್ಟೆಗೆ ಒಯ್ಯುತ್ತಾರೆ.

‘ನಾಲ್ಕು ಎಕರೆಯಲ್ಲಿ ಹೂವು ಬೆಳೆದಿದ್ದೇನೆ. ಈವರೆಗೆ ₹2 ಲಕ್ಷ ಖರ್ಚಾಗಿದೆ. ಬೆಳೆ ಚೆನ್ನಾಗಿದೆ. ಕಟಾವು ಮಾಡಲು ತಲಾ ₹ 300 ಕೂಲಿ ಇದೆ. ಒಮ್ಮೆ ಕಟಾವು ಮಾಡಿದರೆ 7 ರಿಂದ 8 ಕ್ವಿಂಟಲ್ ಹೂವು ಸಿಗುತ್ತದೆ. ಈಗಿನ ಬೆಲೆಗೆ ಮಾರಾಟ ಮಾಡಿದರೆ ಸಾಗಣೆ, ಕಾರ್ಮಿಕರಿಗೆ ನೀಡಿದ ಕೂಲಿ ವೆಚ್ಚವೂ ಗಿಟ್ಟಲ್ಲ. ಹೂವು ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಗೋವನಕೊಪ್ಪ ಗ್ರಾಮದ ರೈತ ದುಳಪ್ಪ ಡೊಳ್ಳಿನ ಮನವಿ ಮಾಡಿದರು.

‘ದೀಪಾವಳಿ ಹಬ್ಬದಲ್ಲಿ ಎರಡು ದಿನ ಹೂವಿಗೆ ಬೆಲೆ ಚೆನ್ನಾಗಿತ್ತು. ನಂತರ ಕುಸಿದಿದೆ. ಹೊರ ರಾಜ್ಯಗಳಿಗೆ ಕೊಂಡೊಯ್ದು ಮಾರಾಟ ಮಾಡುವುದು ಕಷ್ಟ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಹೂವಿನ ಬೆಳೆಗಾರರ ಸ್ಥಿತಿ’ ಎಂದು ಜಿರಿಗವಾಡದ ರೈತ ಸಂಜಯ ನೆಲಗುಂದ್ರ ಅಲವತ್ತುಕೊಂಡರು.

ಹೂವು ಖರೀದಿ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಬೇಕು. ಇಲ್ಲಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಸಾಗಿಸುವ ವ್ಯವಸ್ಥೆ ಮಾಡಬೇಕು ಎಂದು ವರ್ತಕ ಸಾದಿಕ್‌ ಒತ್ತಾಯಿಸುತ್ತಾರೆ.

ಹೂವಿನ ಬೆಲೆ ಏರುಪೇರು ಇರುತ್ತದೆ. ಡಿಸೆಂಬರ್‌ ಜನವರಿಯಲ್ಲಿ ಬೆಲೆ ಕಡಿಮೆಯಾಗುವುದು ಸಾಮಾನ್ಯ. ಮದುವೆ ಸೀಸನ್‌ ಆರಂಭವಾದರೆ ದರ ಹೆಚ್ಚಳವಾಗುತ್ತದೆ. ಬೆಲೆ ಕುಸಿದಿರುವುದಕ್ಕೆ ಪರಿಹಾರ ನೀಡಲಾಗದು.
ಕಾಶಿನಾಥ್‌ ಭದ್ರಣ್ಣವರ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT