ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಈಜಿನಲ್ಲಿ ‘ಶತಕ ಸಾಧನೆ’ಗೈದ 51 ವರ್ಷದ ಲೋಕೇಶ ಪೂಜಾರ

ಅಲ್ಪಾವಧಿಯಲ್ಲೇ 103 ಪದಕ ಗೆದ್ದ
Published 21 ನವೆಂಬರ್ 2023, 4:20 IST
Last Updated 21 ನವೆಂಬರ್ 2023, 4:20 IST
ಅಕ್ಷರ ಗಾತ್ರ

ಕಲಬುರಗಿ: ಅವರು ಪ್ರೈಮರಿ, ಹೈಸ್ಕೂಲ್‌, ಕಾಲೇಜು ಹೀಗೆ ವಿದ್ಯಾರ್ಥಿ ಜೀವನದ ಯಾವ ಹಂತದಲ್ಲೂ ಕ್ರೀಡೆಗಳತ್ತ ಚಿತ್ತ ಹರಿಸಿದವರಲ್ಲ. ಅವರೀಗ 51 ವರ್ಷದ ಹರೆಯ! 103 ಪದಕಗಳ ಸಾಧಕ! ಅವರೇ ‘ಈಜುಪಟು’ ಲೋಕೇಶ ಪೂಜಾರಿ.

ಲೋಕೇಶ ಮೊದಲ ಸಲ ಈಜಿನಲ್ಲಿ ಸ್ಪರ್ಧಿಸಲು ನೀರಿಗಿಳಿದಿದ್ದು 2016ರ ಜನವರಿಯಲ್ಲಿ. ಅವರಿಗೆ ಆಗ 44 ವರ್ಷ. ಶಿವಮೊಗ್ಗದಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯ ಬ್ರೆಸ್ಟ್‌ ಸ್ಟ್ರೋಕ್‌ ವಿಭಾಗದ 50 ಮೀಟರ್ಸ್‌, 100 ಮೀಟರ್ಸ್‌ ಹಾಗೂ 200 ಮೀಟರ್ಸ್‌ ಹೀಗೆ ಮೊದಲ ಸಲವೇ ಮೂರು ರಜತ ಪದಕ ಗೆದ್ದರು. ಅಲ್ಲಿಂದ ಶುರುವಾದ ಪದಕ ಬೇಟೆ, ಇದೀಗ 103 ಪದಕಗಳಿಗೆ ತಲುಪಿದೆ.

ಲೋಕೇಶ ಅವರು ಮಾಸ್ಟರ್ಸ್‌ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುತ್ತಾರೆ. ಈತನಕ ಒಟ್ಟು 45 ಚಿನ್ನದ ಪದಕ, 38 ಬೆಳ್ಳಿ ಹಾಗೂ 20 ಕಂಚಿನ ಪದಕಗಳು ಅವರ ಕೊರಳನ್ನು ಅಲಂಕರಿಸಿವೆ. ಅವರು ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ 26 ಪದಕ, ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ 62 ಪದಕ ಹಾಗೂ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 15 ಪದಕಗಳನ್ನು ಗೆದ್ದಿದ್ದಾರೆ. ನೀರಿಗಿಳಿದರೆ ಪದಕ ಗೆದ್ದೇ ಮೇಲೆರುವುದು ಅವರ ವಿಶೇಷ.

ಅಂದಹಾಗೆ ಲೋಕೇಶ ಪೂರ್ಣಾವಧಿ ಕ್ರೀಡಾಪಟುವಲ್ಲ; ಕಲಬುರಗಿಯಲ್ಲಿರುವ ವಿಭಾಗೀಯ ಆಹಾರ ಪ್ರಯೋಗಾಲಯದಲ್ಲಿ ಹಿರಿಯ ಆಹಾರ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈಜುಕೊಳ್ಳಕ್ಕೆ ಇಳಿದ ಕಥೆಯೇ ರೋಚಕ.

‘ನಾವು ವಿಜಯನಗರ ಜಿಲ್ಲೆಯ ಕೊಟ್ಟೂರು ಮೂಲದವರು. ನಮ್ಮದು ಕೃಷಿ ಕುಟುಂಬ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳಿಗೆ ಬೆನ್ನು ಮಾಡಿದ್ದ ನಾನು, ರಜೆಯಲ್ಲಿ ಕೃಷಿಯಲ್ಲಿ ತೊಡಗುತ್ತಿದ್ದೆ. ಊರಿನ ಕೆರೆಯಲ್ಲಿ ಬದುಕಿಗೆ ಅಗತ್ಯವಾದ ಕನಿಷ್ಠ ಈಜು ಕಲಿತಿದ್ದೆ. ಉದ್ಯೋಗಕ್ಕೆ ಸೇರಿದ ಮೇಲೆ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾದವು. ಆಸ್ಪತ್ರೆಗಳಿಗೆ ಅಲೆದು, ಮಾತ್ರೆ ನುಂಗಿದ್ದೆಲ್ಲ ಆಯಿತು. ಮಾತ್ರೆಗಳ ಸಾಮರ್ಥ್ಯ ತಗ್ಗಿದೊಡನೆಯೇ ಆರೋಗ್ಯ ಸಮಸ್ಯೆ ಮತ್ತೆ ತಲೆಎತ್ತುತ್ತಿತ್ತು’ ಎನ್ನುತ್ತಾರೆ ಲೋಕೇಶ.

‘ಮಗಳಿಗೆ ಈಜು ಕಲಿಸುವ ನೆಪದೊಂದಿಗೆ ಈಜುಕೊಳ್ಳಕ್ಕೆ ಇಳಿದೆ. ಕ್ರಮೇಣ ನನಗೂ ಈಜು ಆಪ್ತವೆನಿಸಿತು. ಮಗಳು ಬಿಟ್ಟರೂ ನಾನು ಈಜು ಬಿಡಲಿಲ್ಲ. ವರ್ಷಗಳಿಂದ ನನ್ನನ್ನು ತೀವ್ರವಾಗಿ ಕಾಡುತ್ತಿದ್ದ ಬೆನ್ನುನೋವಿನ ಸಮಸ್ಯೆ, ಅಜೀರ್ಣ ಸಮಸ್ಯೆ, ಪದೇ–ಪದೆ ಮರುಕಳಿಸುತ್ತಿದ್ದ ಕೆಮ್ಮು ಎಲ್ಲವೂ ಮಾಯವಾದಂತೆ ಬಿಟ್ಟುಹೋದವು. ಆರೋಗ್ಯವೂ ಸುಧಾರಿಸಿದೆ. ದಿನವಿಡೀ ದುಡಿದರೂ ಉತ್ಸಾಹ ಕುಂದಲ್ಲ, ಬೇಸರ ಆಗಲ್ಲ’ ಎಂಬುದು ಲೋಕೇಶ ಅನುಭವದ ಮಾತು.

‘ನಿತ್ಯವೂ ಒಂದು ಗಂಟೆ ಈಜು ಅಭ್ಯಾಸ ಮಾಡುತ್ತೇನೆ. ಇದರಿಂದ ಆರೋಗ್ಯ ಲಾಭದ ಜೊತೆಗೆ ಪದಕಗಳೂ ನನ್ನ ಕೊರಳು ಅಲಂಕರಿಸುತ್ತಿವೆ. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಓಪನ್‌ ನ್ಯಾಷನಲ್‌ ಮಾಸ್ಟರ್‌ ಗೇಮ್ಸ್‌ನಲ್ಲಿ ಬ್ರೇಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ 50 ಮೀಟರ್ಸ್‌ ಗುರಿಯನ್ನು ಬರೀ 44.55 ಸೆಕೆಂಡ್‌ಗಳಲ್ಲಿ ಮುಟ್ಟಿ ಬೆಳ್ಳಿ ಪದಕ ಗೆದ್ದೆ. 51ನೇ ವಯಸ್ಸಿನಲ್ಲೂ ಇಂಥ ಸಾಧನೆ ಸಾಧ್ಯವಾಗಿದ್ದು ಈಜಿನಿಂದ’ ಎನ್ನುತ್ತಾರೆ ಲೋಕೇಶ.

ಚಿಕ್ಕಂದಿನಲ್ಲಿ ಓದು ಬೆಳೆದ ಬಳಿಕ ಉದ್ಯೋಗ ಎಲ್ಲರ ಜೀವನದಲ್ಲೂ ಇದ್ದಿದ್ದೆ. ನಾವು ಆರೋಗ್ಯಪೂರ್ಣ ಸೃಜನಶೀಲರಾಗಿರಲು ಚಟುವಟಿಕೆ ಅಗತ್ಯ. ಅದಕ್ಕೆ ಈಜು ಅತ್ಯುತ್ತಮ ಆಯ್ಕೆ.
-ಲೋಕೇಶ ಪೂಜಾರ ಈಜುಪಟು ಹಿರಿಯ ಆಹಾರ ವಿಶ್ಲೇಷಕ ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT