ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬನೆಗೆ ಕೋಳಿ, ಪಶುಪಾಲನೆ: ಅರಕೆರೆ ಗ್ರಾಮದ ರೈತ ಧನಂಜಯ ಯಶಸ್ಸು

ಆರ್ಥಿಕ ಸ್ಥಿತಿ ವೃದ್ಧಿ
Published 14 ಏಪ್ರಿಲ್ 2024, 7:20 IST
Last Updated 14 ಏಪ್ರಿಲ್ 2024, 7:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಹಲವು ದಶಕಗಳಿಂದ ಭತ್ತ ಮತ್ತು ರಾಗಿ ಬೆಳೆಯನ್ನೇ ಅವಲಂಬಿಸಿದ್ದ ತಾಲ್ಲೂಕಿನ ಅರಕೆರೆ ಗ್ರಾಮದ ರೈತ ಧನಂಜಯ ಎರಡು ವರ್ಷಗಳಿಂದ ನಾಟಿ ಕೋಳಿ ಮತ್ತು ಪಶುಪಾಲನೆ ಮಾಡುತ್ತಿದ್ದು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ತಮ್ಮದೇ ಜಮೀನಿನಲ್ಲಿ ಶೆಡ್‌ ನಿರ್ಮಿಸಿ ನಾಟಿ ಕೋಳಿ ಸಾಕಣೆ ಮಾಡುತ್ತಿದ್ದು, ಈಗಾಗಲೇ ಎರಡು ಬಾರಿ ಕೋಳಿಗಳನ್ನು ಮಾರಾಟ ಮಾಡಿದ್ದಾರೆ. ಸದ್ಯ ಎರಡು ತಿಂಗಳು ಪ್ರಾಯದ ಒಂದೂವರೆ ಸಾವಿರದಷ್ಟು ಕೋಳಿ ಮರಿಗಳು ಇವರ ಶೆಡ್‌ನಲ್ಲಿವೆ. ಕೋಳಿಗಳಿಗೆ ರಾಗಿ, ಜೋಳದ ನುಚ್ಚು, ಅಜೋಲಾ ಮತ್ತು ಬಗೆ ಬಗೆಯ ಸೊಪ್ಪುಗಳನ್ನು ಆಹಾರ ರೂಪದಲ್ಲಿ ಕೊಡುತ್ತಿದ್ದಾರೆ.

ಇವರ ಕೊಟ್ಟಿಗೆಯಲ್ಲಿ ಐದು ಮಿಶ್ರ ತಳಿ (ಸೀಮೆ)ಯ ಹಸುಗಳಿವೆ. ಮೂರು ವರ್ಷಗಳ ಹಿಂದೆ ಇದ್ದ ಒಂದು ಹಸುವಿನಿಂದ ಐದು ಹಸುಗಳಾಗಿವೆ. ಈ ಪೈಕಿ ಮೂರು ಹಸುಗಳು ಹಾಲು ಕೊಡುತ್ತಿವೆ. ದಿನಕ್ಕೆ 20 ಲೀಟರ್‌ವರೆಗೂ ಹಾಲು ಸಿಗುತ್ತಿದ್ದು, ತಮ್ಮದೇ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಕುತ್ತಿದ್ದಾರೆ. ಧನಂಜಯ ಅವರ ಬಳಿ ಬೀಟಲ್‌ ತಳಿಯ ಎರಡು ಮೇಕೆ ಮತ್ತು ಸ್ಥಳೀಯ ಜಾತಿಯ ಐದು ಕುರಿಗಳೂ ಇವೆ.ಕೋಳಿ ಮತ್ತು ಪಶುಪಾಲನೆ ಜತೆಗೆ ಧನಂಜಯ ಭತ್ತ, ಬಾಳೆ, ಪಪ್ಪಾಯಿ ಅಡಿಕೆಯನ್ನೂ ಬೆಳೆಯುತ್ತಿದ್ದಾರೆ. ನೀರಿನ ಅಭಾವದ ನಡುವೆಯೂ ನಾಲ್ಕು ಎಕರೆ ಜಮೀನಿನಲ್ಲಿ ಕೊಳವೆ ಬಾವಿಯ ನೀರಿನಿಂದ ಭತ್ತ ಯಶಸ್ವಿಯಾಗಿ ಬೆಳೆದಿದ್ದಾರೆ.

‘ಆಳು ಕಾಳುಗಳನ್ನು ಅವಲಂಬಿಸದೆ ತಮ್ಮ ಮಗ ಮತ್ತು ಪತ್ನಿಯ ಜತೆಗೂಡಿ ಧನಂಜಯ ಕೋಳಿ ಸಾಕಣೆ, ಪಶುಪಾಲನೆ ಮತ್ತು ಕೃಷಿಯಿಂದ ಆದಾಯ ಪಡೆದು ಸ್ವಾವಲಂಬನೆಯ ಜೀವನ ನಡೆಸುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ಆತ್ಮ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರಶ್ಮಿ ಹೇಳುತ್ತಾರೆ.

‘ನನಗೆ ಒಟ್ಟು 10 ಎಕರೆ ಜಮೀನು ಇದೆ. ಐದು ವರ್ಷಗಳ ಹಿಂದೆ ಭತ್ತ, ರಾಗಿ ಮಾತ್ರ ಬೆಳೆಯುತ್ತಿದ್ದೆ. ಈಚಿನ ವರ್ಷಗಳಲ್ಲಿ ನಾಟಿ ಕೋಳಿ, ಸೀಮೆ ಹಸು ಸಾಕಣೆ ಮಾಡಲು ಆರಂಭಿಸಿದ್ದೇನೆ. ನಾಟಿ ಕೋಳಿಗೆ ಬೇಡಿಕೆ ಮತ್ತು ಬೆಲೆ ಎರಡೂ ಇದ್ದು, ವರ್ಷಕ್ಕೆ ಎರಡು ಲಕ್ಷದವರೆಗೂ ಲಾಭ ಸಿಗುತ್ತಿದೆ. ಹಸುವಿನ ಸಗಣಿ ಮತ್ತು ಕೋಳಿ ಗೊಬ್ಬರವನ್ನು ಕೃಷಿಗೆ ಬಳಸುತ್ತಿದ್ದು, ರಸಗೊಬ್ಬರನ್ನು ಸೀಮಿತ ಪ್ರಮಾಣದಲ್ಲಿ ಕೊಡಲಾಗುತ್ತಿದೆ. ಹಾಗಾಗಿ ಖರ್ಚೂ ಕಡಿಮೆ’ ಎಂಬುದು ರೈತ ಧನಂಜಯ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT