ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥವಾದ ಏತ ನೀರಾವರಿ ಘಟಕಗಳು

ಜಮೀನಿಗೆ ಬಾರದ ನೀರು, ಕನಸಾಗಿಯೇ ಉಳಿದ ರೈತರ ಹಸಿರಿನ ಕನಸು
Last Updated 17 ಮೇ 2016, 10:05 IST
ಅಕ್ಷರ ಗಾತ್ರ

ಮದ್ದೂರು: ತಾಲ್ಲೂಕಿನ ಶಿಂಷಾ ಎಡದಂಡೆ ವ್ಯಾಪ್ತಿಯ ಏತ ನೀರಾವರಿ ಯೋಜನೆಯ 18 ಘಟಕಗಳು ಅನಾಥವಾಗಿದ್ದು, ರೈತರ ಹಸಿರಿನ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ತಾಲ್ಲೂಕಿನ ಶಿಂಷಾ ನದಿಯಿಂದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವ ಸಂಬಂಧ ಅಂಕನಾಥಪುರ, ಹೆಬ್ಬೆರಳು, ಮಾಚಹಳ್ಳಿ, ಹೆಮ್ಮನಹಳ್ಳಿ, ಕೆ. ಕೋಡಿಹಳ್ಳಿ, ಬೂದಗುಪ್ಪೆ, ಆಲೂರು, ಬಾಣಂಜಿಪಂತ್‌, ಕೂಳಗೆರೆ ಸೇರಿದಂತೆ ಒಟ್ಟು 18 ಏತ ನೀರಾವರಿ ಘಟಕಗಳನ್ನು ಸ್ಥಾಪಿಸಲಾಗಿತ್ತು.

ಒಂದೊಂದು ಘಟಕಕ್ಕೆ ₹ 60 ಲಕ್ಷಕ್ಕೂ ಹೆಚ್ಚು ಹಣ ವ್ಯಯ ಮಾಡಲಾಗಿತ್ತು. ಆದರೆ ದಿನಕಳೆದಂತೆ ಘಟಕ ನಿರ್ಮಾಣ ಕಾಮಗಾರಿ ಕಳಪೆಯಾಗಿ, ಘಟಕಗಳ ಪೈಪುಗಳು ಒಡೆದವು. ಪಂಪ್‌ ಮನೆಯಲ್ಲಿ ಮೋಟಾರ್‌ ಇನ್ನಿತರ ಉಪಕರಣಗಳು ಹಾಳಾಗಿ ಒಂದೊಂದು ಏತ ನೀರಾವರಿ ಘಟಕಗಳು ಕಣ್ಣು ಮುಚ್ಚಿದವು. 

ಬಳಿಕ ಏತನೀರಾವರಿ ಘಟಕಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಳು ಮನೆಗಳಾಗಿ ಪರಿಣಮಿಸಿದವು. ಕಾವಲುಗಾರರಿಲ್ಲದೇ ಈ ಏತ ನೀರಾವರಿ ಘಟಕಗಳಲ್ಲಿ ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿ ಅಳವಡಿಸಲಾಗಿದ್ದ ಪಂಪ್‌, ಮೋಟಾರ್‌, ವಾಲ್ವ್‌, ಪೈಪು ಇನ್ನಿತರ ವಸ್ತುಗಳು ದಿನಗಳದಂತೆ ಕಳ್ಳರ ಪಾಲಾದ ಪರಿಣಾಮವಾಗಿ ಈ  ಘಟಕಗಳು ಧೂಳು ಹಿಡಿಯುತ್ತ ಅಜ್ಞಾತವಾಗಿಯೇ ಉಳಿದವು.

ಈಚೆಗೆ ಕೆಲವು ವರ್ಷಗಳಲ್ಲಿ ಸ್ಥಳೀಯ ಶಾಸಕರ ಆಸಕ್ತಿಯ ಫಲವಾಗಿ ಬಾಣಂಜಿ ಪಂತ್‌ ಸೇರಿದಂತೆ ಮೂರು ನಾಲ್ಕು ಘಟಕಗಳನ್ನು ಪುನಶ್ಚೇತನ ಗೊಳಿಸಲಾಗಿದೆ. ಆದರೆ, ಈ ಘಟಕಗಳು ನಿಗದಿತ ಮಟ್ಟದಲ್ಲಿ ರೈತರ ಜಮೀನು ಗಳಿಗೆ ನೀರು ಹರಿಸುವಲ್ಲಿ ವಿಫಲವಾಗಿವೆ ಎಂಬುದು ರೈತರ ಸಾಮೂಹಿಕ ದೂರು.

ಇದೀಗ ತಾಲ್ಲೂಕಿನಲ್ಲಿ ತಿಪ್ಪೂರು ಸೇರಿದಂತೆ ಇನ್ನಿತರ ಕೆರೆಗಳಿಗೆ ತಾತ್ಕಾಲಿಕವಾಗಿ ನೀರು ತುಂಬಿಸುವ ಕಾರ್ಯಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ.  ಕೃಷ್ಣ ಅವರ ಅವಧಿಯಲ್ಲೇ ಜಾರಿಗೊಳಿಸಿದ್ದ ಏತ ನೀರಾವರಿ ಘಟಕಗಳ ಶಾಶ್ವತ ಪುನಶ್ಚೇತನಕ್ಕೆ ತಮ್ಮದೇ ಕಾಂಗ್ರೆಸ್‌ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಈ ಮೂಲಕ ರೈತರ ಹಸಿರಿನ ಕನಸನ್ನು ಸಾಕಾರಗೊಳಿಸಬೇಕೆಂಬುದು ಇಲ್ಲಿನ ಜನರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT