ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರಕ್ಕಾಗಿ ಹಕ್ಕಿಗಳ ರೋದನ

ವಿಶ್ವ ಪ್ರಸಿದ್ಧ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದಲ್ಲಿ ಸಾಲು ಸಾಲು ಸಮಸ್ಯೆಗಳು
Last Updated 13 ಮೇ 2015, 9:31 IST
ಅಕ್ಷರ ಗಾತ್ರ

ಮದ್ದೂರು: ಕ್ಷೀಣಿಸಿದ ವರುಣನ ಕರುಣೆ, ಏರುತ್ತಿರುವ ಬಿರು ಬಿಸಿಲು, ಕ್ಷೀಣಿಸಿದ ಶಿಂಷಾನದಿಯ ಒರತೆ. ಅಂತರ್ಜಲ ಕುಸಿತದಿಂದಾಗಿ ಬರಿದಾದ ಕೆರೆ ಕಟ್ಟೆಗಳು. ನೀರು ಆಹಾರಕ್ಕಾಗಿ ಪರಿತಪಿಸುತ್ತಿರುವ ವಲಸೆ ಬಂದ ಹಕ್ಕಿಗಳ ಮೂಕರೋದನ.  ಮೂಲಸೌಲಭ್ಯದಿಂದ ಕಳೆಗುಂದಿದ ವಿಶ್ವ ಪ್ರಸಿದ್ಧ ಪಕ್ಷಿಧಾಮ.

ಇದು ತಾಲೂಕಿನ ವಿಶ್ವಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಕಂಡು ಬಂದ ದಯನೀಯ ನೋಟ. ಐದುನೂರು ವರ್ಷಗಳ ಇತಿಹಾಸ ಇರುವ ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ  ಪ್ರತಿ ವರ್ಷ ಸಾವಿರಾರು ಮೈಲುಗಳಿಂದ ಸಂತಾನೋತ್ಪತ್ತಿಗಾಗಿ ಪೆಲಿಕಾನ್‌ ಹಾಗೂ ಪೇಂಟೆಡ್‌ ಸ್ಟಾರ್ಕ್‌  ಸೇರಿದಂತೆ ಹಲವಾರು ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ಬರುವುದು ವಾಡಿಕೆ.

ಪ್ರತಿವರ್ಷ ಸಾವಿರಾರು ಪಕ್ಷಿಗಳೂ  ಇಲ್ಲಿಗೆ ಆಗಮಿಸುತ್ತವೆ. ಇವುಗಳಿಗೆ ಇಲ್ಲಿ  ಗೂಡು ಕಟ್ಟಲು ಮರಗಳ ಸಂಖ್ಯೆ ಕ್ಷೀಣಿಸಿದೆ.  ಕುಡಿಯುವ ನೀರಿಗೆ ಬವಣೆ ಪಡುವಂತಾಗಿದೆ. ಕೆರೆ ಕಟ್ಟೆಗಳು ಒಣಗಿದ ಕಾರಣ ಮೀನುಗಳ ಸಂಖ್ಯೆ ಕಡಿಮೆಯಾಗಿದ್ದು, ಆಹಾರಕ್ಕೂ ಕೊರತೆ ಉಬ್ಧವಿಸಿ, ಹಕ್ಕಿಗಳ ಮೂಕ ವೇದನೆ ಮುಗಿಲು ಮುಟ್ಟಿದೆ.

ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ.  ಹೀಗಾಗಿ ಹಕ್ಕಿಗಳಿಗೆ ವಿವಿಧ ಕಾಯಿಲೆಗಳು ಬಾಧಿಸುವ ಆತಂಕ ಕಾಡಿದೆ. ಗ್ರಾಮದಲ್ಲಿ ಹೈಟೆನ್‌ಷನ್  ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಆಗಾಗ ಪುಟ್ಟ ಮರಿ ಹಕ್ಕಿಗಳು ಈ ತಂತಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ಇಲ್ಲಿ ಸಾಮಾನ್ಯವಾಗಿದೆ. 

ಗ್ರಾಮದಲ್ಲಿ ಇದೀಗ ವಿವಿಧ ಕಂಪೆನಿಗಳ ಮೊಬೈಲ್‌ ಗೋಪುರಗಳು ತಲೆ ಎತ್ತಿವೆ. ಈ ಗೋಪುರಗಳ ಬದಿಯಲ್ಲಿದ್ದ ಮರಗಳಲ್ಲಿ ಹಕ್ಕಿಗಳು ವಾಸವಾಗಲು ಮೊಬೈಲ್‌ ತರಂಗಗಳು ಅಡಚಣೆಯಾಗಿವೆ ಎನ್ನುತ್ತಾರೆ ಗ್ರಾಮದ ಮುಖಂಡ ಮಹದೇವಸ್ವಾಮಿ.

ಈ ಹಿಂದಿನ ಕೆಲವು ವರ್ಷಗಳಲ್ಲಿ ಇಲ್ಲಿಗೆ ಆಗಮಿಸುವ  ಕೊಕ್ಕರೆಗಳಿಗೆ  ಸಮೃದ್ಧಿಯಾದ ನೀರು, ಆಹಾರ ಲಭ್ಯವಿತ್ತು.  ಮರಗಳು ಯಥೇಚ್ಛವಾಗಿ ಇದ್ದುದರಿಂದ ಕೊಕ್ಕರೆಗಳ ಗೂಡು ಕಟ್ಟುವ ಕೆಲಸ, ಸಂತಾನೋತ್ಪತ್ತಿ ಪ್ರಕ್ರಿಯೆ ಸುಗಮವಾಗಿತ್ತು.  ಇದೀಗ ಗ್ರಾಮದಲ್ಲಿ ಮರಗಳನ್ನು ಕಡಿಯುವ ಪ್ರಕ್ರಿಯೆ ಹೆಚ್ಚಿದೆ. ಅರಣ್ಯ ಇಲಾಖೆಯಿಂದ ಹೊಸದಾಗಿ ಗಿಡಗಳನ್ನು ನೆಡುವ ಹಾಗೂ ಅದನ್ನು ಸಂರಕ್ಷಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದಾಗಿ ಕೊಕ್ಕರೆಗಳಿಗೆ ವಾಸಸ್ಥಾನಕ್ಕೆ ಯೋಗ್ಯವಾದ ಮರಗಳ ಕೊರತೆ ಕಾಡಿದೆ.

ಇರುವ ಸಣ್ಣಪುಟ್ಟ ಮರಗಳಲ್ಲೇ, ಕಷ್ಟಪಟ್ಟು  ಗೂಡು ಕಟ್ಟಿ,  ಮೊಟ್ಟೆ ಇಟ್ಟು ಮರಿ ಮಾಡಿದರೆ,  ಬೀಸುವ ಬೀರುಗಾಳಿಗೆ ಜೋತಾಡುವ ಕೊಂಬೆಗಳಿಂದ ಗೂಡು ಕೆಳಗೆ ಬಿದ್ದು ಕೆಲವೊಂದು  ಸಮಯದಲ್ಲಿ ಮೊಟ್ಟೆಗಳು, ಮರಿಗಳು ನಾಯಿ ಇತರೆ ಪ್ರಾಣಿಗಳ ಪಾಲಾಗಿವೆ.

ಈ ಮಧ್ಯೆ ಗೂಡಿನಿಂದ ಹೊರಬಿದ್ದ ಕೊಕ್ಕರೆ ಮರಿಗಳನ್ನು ಗ್ರಾಮದಲ್ಲಿರುವ ಹೆಜ್ಜಾರ್ಲೆ ಬಳಗ ಹಿಂದಿನಿಂದಲೂ ಅವುಗಳನ್ನು ಪಂಜರದಲ್ಲಿಟ್ಟು  ಮೀನಿನ ಮರಿಗಳನ್ನು ಹಾಗೂ ನೀರನ್ನು ನೀಡುವುದರ ಮೂಲಕ ಅವುಗಳ ರಕ್ಷಣೆ ಮಾಡಿಕೊಂಡು ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಈ ಕೆಲಸವೂ ಸರಿಯಾಗಿ ನಡೆಯುತ್ತಿಲ್ಲ ಎಂಬುದು ಪಕ್ಷಿಪ್ರೇಮಿಗಳ ದೂರು.  ಕನಿಷ್ಠ ಇಲ್ಲಿ ಗೂಡಿನಿಂದ ಗಾಯಗೊಂಡ ಪಕ್ಷಿಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಅಗತ್ಯವಾದ ಚಿಕಿತ್ಸಾ ಕೇಂದ್ರದ ಕೊರತೆಯೂ ಕಾಡಿದೆ.

ಗ್ರಾಮದಲ್ಲಿ ಈಚೆಗೆ ಹಕ್ಕಿಗಳ ನೀರಿಗಾಗಿ ನಿರ್ಮಿಸಲಾದ ಕೊಳ  ಬೇಸಿಗೆ ಹಿನ್ನೆಲೆಯಲ್ಲಿ ಬರಿದಾಗಿದೆ. ಶಿಂಷಾನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ದಂಧೆಯಿಂದಾಗಿ ನದಿಯ ಅಂತರ್ಜಲ ಕುಸಿದು ನೀರಿನ ಒರತೆ ಕ್ಷೀಣಿಸಿದೆ.

ಮರಳು ಗಣಿಗಾರಿಕೆಯಿಂದಾಗಿ ನದಿಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನಿಂತಿರುವ  ನೀರು ಕಲಷಿತಗೊಂಡು ಪಕ್ಷಿಗಳಿಗೆ ಕುಡಿಯಲು ಯೋಗ್ಯವಾಗಿಲ್ಲ. ಈ ಹಿಂದೆ ಯಥೇಚ್ಛವಾಗಿ ಸಿಗುತ್ತಿದ್ದ ಮೀನುಗಳು ಸಿಗದೆ ಆಹಾರಕ್ಕೂ ತಾತ್ವರ ಉದ್ಭವಿಸಿದೆ. ಈ ನಡುವೆಯೂ ಕೊಕ್ಕರೆಗಳು ಇರುವ ಸಮಸ್ಯೆಗಳ ನಡುವೆ ’ಉಳಿವಿಗಾಗಿ ಹೋರಾಟ’ ನಡೆಸಿವೆ.

ವಿಶ್ವ ಪ್ರಸಿದ್ಧ ಪಕ್ಷಿಧಾಮ ಎನಿಸಿರುವ ಕೊಕ್ಕರೆ ಬೆಳ್ಳೂರು ಧಾಮದ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಹಕ್ಕಿಗಳಿಗೆ ಸಮರ್ಪಕ ಕುಡಿಯುವ ನೀರು, ಆಹಾರ, ವಾಸ ಸ್ಥಾನಕ್ಕೆ ಅಗತ್ಯವಾದ ಮರಗಿಡಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಹೆಚ್ಚು ಒತ್ತು ನೀಡಬೇಕೆಂಬುದು ಗ್ರಾಮಸ್ಥರ ಹಾಗೂ ಪಕ್ಷಿ ಪ್ರಿಯರ ಆಗ್ರಹವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT