ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿವಯಸ್ಸಿನಲ್ಲೂ ಸ್ವಾವಲಂಬಿ ಬದುಕು...

Last Updated 18 ಮಾರ್ಚ್ 2015, 6:27 IST
ಅಕ್ಷರ ಗಾತ್ರ

ಮದ್ದೂರು: ‘ಯಾರಿಗ್ರಿರ್ರೀ... ಬೇಕು ಕಡ್ಡಿ ಪೊರಕೆ, ಕೇವಲ ಒಂದಕ್ಕೆ ಹತ್ತೇ ರೂಪಾಯಿ. ಸಸ್ತ ಮಾಲು. ತಕ್ಕೋಳ್ರಿ ನನ್ನವ್ವಾ.. ನನ್ನಪ್ಪಾ...’
ಇದು ಪಟ್ಟಣದ ಪೇಟೆ ಬೀದಿಯಲ್ಲಿ ಮಂಗಳವಾರ ಕೇಳಿ ಬಂದ ಕೀರಲು ಧ್ವನಿಯ ದೈನ್ಯತೆಯ ಕೂಗು. ಹಿಂದಿರುಗಿ ನೋಡಿದರೆ ಬೆನ್ನು ಬಾಗದ 86 ವಯಸ್ಸಿನ ಬಿಳಿ ವಸ್ತ್ರಧಾರಿ ಅಜ್ಜ ಕಣ್ಣಿಗೆ ಗೋಚರ. ಇಳಿ ವಯಸ್ಸಿನಲ್ಲೂ ಬತ್ತದ ಈ ಅಜ್ಜನ ಜೀವನೋತ್ಸಾಹ, ಸ್ವಾವಲಂಬಿತನ ಕಂಡು ಯಾರೇ ಆದರೂ ಮೂಕವಿಸ್ಮಿತರಾಗಬೇಕು.

ಇವರ ಹೆಸರು ದೇಸಯ್ಯ. ಹುಟ್ಟೂರು ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಮುನಿಯಮ್ಮನ ಪಾಳ್ಯ. ಪತ್ನಿ ತಿಮ್ಮಮ್ಮ. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಈ ಎಲ್ಲರಿಗೂ ವಿವಾಹವಾಗಿದೆ. ಆದರೆ, ಯಾರು ಇವರೊಡನೆ ಇಲ್ಲ.

ಪ್ರತಿನಿತ್ಯ ತನ್ನ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಡ್ಡಿ ಪೊರಕೆ ಮಾರಾಟವನ್ನೇ ಕಾಯಕವಾಗಿಸಿಕೊಂಡ ಈ ಅಜ್ಜ. ಬೆಳಿಗ್ಗೆ 50 ಕಡ್ಡಿ ಪೊರಕೆಯನ್ನು ತಲಾ ₨ 8 ನಂತೆ ಖರೀದಿಸಿ ತಲೆ ಮೇಲೆ ಹೊತ್ತು ಬಸ್ಸನ್ನೇರಿದರೆ, ಒಂದು ದಿನ ಕುಣಿಗಲ್‌, ಚನ್ನಪಟ್ಟಣ. ಇನ್ನೊಂದು ದಿನ ಮದ್ದೂರು ಇವರ ವ್ಯಾಪಾರದ ಸ್ಥಳ.
ಕಡ್ಡಿಪೊರಕೆಯ ಕಟ್ಟನ್ನು ತಲೆಯ ಮೇಲೆ ಹೊತ್ತು ಇಡೀ ಪಟ್ಟಣವನ್ನು ಸುತ್ತು ಹಾಕುವ ಈ ಅಜ್ಜನಿಗೆ 50 ಪೊರಕೆ ಮಾರಿದರೆ ₨ 100 ದೊರಕುತ್ತದೆ.

ಇದರಲ್ಲಿ ಊಟ ತಿಂಡಿ, ಬಸ್‌ ವೆಚ್ಚ ಕಳೆದರೆ ಪ್ರತಿನಿತ್ಯ ₨ 40 ಸಂಪಾದನೆ. ಇಲ್ಲದಿದ್ದರೆ ಊಟಕ್ಕೂ ಖೋತ. ಹಸಿವಿನಲ್ಲೇ ನಿರಾಶರಾಗಿ ಮನೆಗೆ ತೆರಳಬೇಕಾದ ದುಸ್ಥಿತಿ. ವಯಸ್ಸು 86ದಾಟಿದರೂ ಇದುವರೆಗೂ ಈ ಅಜ್ಜ ಆಸ್ಪತ್ರೆ ಮೆಟ್ಟಿಲು ತುಳಿದಿಲ್ಲ. ಬೀಡಿ, ಕುಡಿತ ಯಾವುದೇ ಕೆಟ್ಟ ಹವ್ಯಾಸಗಳಿಲ್ಲ.

‘ನಮಗೆ ಅಂಗೈಯಗಲ ಜಮೀನಿಲ್ಲ. ಕೂಲಿ ಗೇದರೆ ಉಂಟು; ಇಲ್ಲದಿದ್ದರೆ ಇಲ್ಲ. ವಯಸ್ಸಿದ್ದಾಗ ಕೂಲಿ ಗೇದು ಮಕ್ಕಳನ್ನು ಸಾಕಿದೆ. ಈಗ ವಯಸ್ಸಾದ ಮೇಲೆ ಕೂಲಿ ಗೇಯಲು ಆಗುತ್ತಿಲ್ಲ. ಭಿಕ್ಷೆ ಮಾಡಿ ಬದುಕುವ ಜಾಯಮಾನ ನನ್ನದಲ್ಲ. ಅದಕ್ಕಾಗಿ ಕಡ್ಡಿ ಪೊರಕೆ ಯಾಪಾರ ಮಾಡ್ತ್ವಿನಿ. ಹೆಂಗೋ ಸಿವಾ.. ಹೊಟ್ಟೆಗೆ ಹಿಟ್ಟು ಹುಟ್ಟಿಸ್ತವನೆ ನನ್ನಪ್ಪಾ’ ಎನ್ನುವ ಅಜ್ಜ ದೇಸಯ್ಯಜ್ಜನ ಸ್ವಾವಲಂಬಿತನ ಕಾಡುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT