ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮವ್ಯಾಧಿಗೆ ಸಿದ್ಧೌಷಧ ಸಾಸಲು ಕ್ಷೇತ್ರ

ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆ ಮಂಡಮ್ಮನ ಜೋಡಿ ಬ್ರಹ್ಮರಥೋತ್ಸವ ಇಂದು
Last Updated 25 ಏಪ್ರಿಲ್ 2016, 9:43 IST
ಅಕ್ಷರ ಗಾತ್ರ

ಕಿಕ್ಕೇರಿ: ‘ಬಯಲುಸೀಮೆಯ ಕುಕ್ಕೆ’ ಎಂದೇ ಕರೆಯುವ ಹೋಬಳಿಯ ಸಾಸಲು ಕ್ಷೇತ್ರ ಶಕ್ತಿ, ಭಕ್ತಿ ಹಾಗೂ ಮಹಿಮೆಯ ಆಗರವಾಗಿದೆ. ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಂಬುಗೆಯ ದೇವರ ಕ್ಷೇತ್ರ ಇದು. ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ಕ್ಷೇತ್ರದ ಮಹಿಮೆಗೆ ಸಾಕ್ಷಿ.

ಕ್ಷೇತ್ರದಲ್ಲಿ ದುರ್ಮುಖಿನಾಮನಾಮ ಸಂವತ್ಸರ, ವಸಂತ ಋತುವಿನ ಚೈತ್ರಮಾಸದ ತದಿಗೆಯ ಏ. 25ರಂದು ಸಂಜೆ 4ಕ್ಕೆ ಸೋಮೇಶ್ವರ, ಶಂಭುಲಿಂಗೇಶ್ವರ, ಸೋಹೋದರಿ ಕುದುರೆ ಮಂಡಮ್ಮನವರ ಜೋಡಿ ಬ್ರಹ್ಮರಥೋತ್ಸವ ನಡೆಯಲಿದೆ. ರಥದ ಹಿಂದೆ ಸಾಗುವ ಕುರಿಗಳ ಮಂದೆಯ ಸಾಲು, ಹರಕೆ ಹೊತ್ತ ಬಾಯಿಬೀಗ ಭಕ್ತರ ಸಂಗಮ  ಜಾತ್ರೆಗೆ ಮತ್ತಷ್ಟು ಮೆರಗು ನೀಡುತ್ತದೆ.

ಕ್ಷೇತ್ರದ ಮಹಿಮೆ: ಸೌರಾಷ್ಟ್ರದಿಂದ ಬಂದು ನೆಲೆಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ ದೇವರು ಲಿಂಗರೂಪಿಯಾಗಿದ್ದು, ದೇವಾಲಯವು ಕ್ರಿ.ಶ. 1043ರಲ್ಲಿ ಹೊಯ್ಸಳ ದೊರೆ ತ್ರಿಭುವನ ಮಲ್ಲನ ಕಾಲದಲ್ಲಿ ನಿರ್ಮಾನವಾಗಿದೆ.

ವರ್ತಕರಾದ ಆದಿಶೆಟ್ಟಿ ಹಾಗೂ ಕೋರಿಶೆಟ್ಟಿ ಮುತ್ತಿನ ವ್ಯಾಪಾರ ಮಾಡುತ್ತಾ ಇಲ್ಲಿಗೆ ಆಗಮಿಸಿದ್ದರು. ಸೌದೆ ಕಡಿಯುವಾಗ ಉದ್ಭವಲಿಂಗಕ್ಕೆ ಪೆಟ್ಟು ಬಿದ್ದು ವರ್ತಕರ ಪರಿವಾರದವರು ಮರಣ ಹೊಂದಿದರು. ನಂತರ ವರ್ತಕರ ಕನಸಿನಲ್ಲಿ ಕಾಣಿಸಿಕೊಂಡ ಶಿವನ ನುಡಿಯಂತೆ ಗುಡಿಯನ್ನುನಿರ್ಮಿಸಿ ಪೂಜಿಸಲು ಮುಂದಾದರು. 
 
ಪವಾಡ ಸದೃಶ:
ದೇಗುಲದ ಬಳಿಯೇ ನಿರ್ಮಿತವಾಗಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡುವ ಜತೆಗೆ ದೇವಾಲಯದಲ್ಲಿ ನೀಡುವ ಪವಿತ್ರ ವಿಭೂತಿ ಪ್ರಸಾದ ಸ್ವೀಕರಿಸಿದರೆ ಕಜ್ಜಿ, ತುರಿಯಂತಹ ಹಲವು ಚರ್ಮವ್ಯಾಧಿಗಳು ನಿವಾರಣೆಯಾಗಲಿವೆ. ಭೈರವರಾಜ ಜಂಗಮರು ಕೈಲಾಸಕ್ಕೆ ಹೋಗುವಾಗ ಸೋಮೇಶ್ವರ ದೇವಾಲಯದಲ್ಲಿ ಬಿಟ್ಟು ಹೋಗಿರುವ ವಿಭೂತಿ ಘಟ್ಟಿಯನ್ನು ಹಾವು ಕಚ್ಚಿದ ಸ್ಥಳಕ್ಕೆ ಇಟ್ಟಲ್ಲಿ ವಿಷ ನಿವಾರಣೆಯಾಗಲಿದೆ ಎಂಬುದು ನಂಬಿಕೆ.

ದೇಗುಲದ ಲಿಂಗದ ಮುಂದೆ ಜೋಡಿ ಬಸವಣ್ಣ ಮೂರ್ತಿ ಇರುವುದು ದೇಗುಲದ ವಿಶೇಷತೆಗಳಲ್ಲಿ ಒಂದು. ಮೇಲುಗಡೆ ದೇವಾಲಯ ಎನ್ನುವ ಶಂಭುಲಿಂಗೇಶ್ವರ ದೇಗುಲದ ಬಳಿ ಇರುವ ನಾಗಬನ, ನಾಗರಕಲ್ಲುಗಳಿವೆ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಕಾರ್ತೀಕ ಮಾಸದ ಜಾತ್ರೆ, ಮಹಾಶಿವರಾತ್ರಿ ಪೂಜೆ, ಜೋಡಿ ರಥೋತ್ಸವ, ದೀಪಾವಳಿ ಹಬ್ಬದಲ್ಲಿ ಜರಗುವ ಸಗಣಿ ಹಬ್ಬ, ಕೈಲಾಸ ಬಸವೇಶ್ವರ, ನಿರ್ಮಾಣದ ಹಂತದಲ್ಲಿರುವ ಭೈರವರಾಜರ ಗುಡಿ ಕ್ಷೇತ್ರದ ಪ್ರಮುಖ ಆಕರ್ಷಣೆಗಳಾಗಿವೆ.

ಎಲ್ಲ ಧರ್ಮದವರು ದೇಗುಲಕ್ಕೆ ಆಗಮಿಸುವುದು ಇಲ್ಲಿನ ವಿಶೇಷ. ರಾಜಗೋಪುರ, ಸ್ನಾನಘಟ್ಟ, ಯಾತ್ರಿ ನಿವಾಸ, ಉದ್ಯಾನವನ, ನಿತ್ಯ ಅನ್ನದಾಸೋಹ ಕಾರ್ಯಕ್ಕೆ ದಾನಿಗಳ ಹಾಗೂ ಗ್ರಾಮಸ್ಥರ ಸಹಕಾರ ಬೇಕು ಎನ್ನುತ್ತಾರೆ ಪಾಂಡವಪುರ ಉಪವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜು. ಶನಿವಾರ, ಸೋಮವಾರ ಅನ್ನ ದಾಸೋಹ ನಡೆಸುತ್ತಿದ್ದು, ನಿತ್ಯ ಅನ್ನ ದಾಸೋಹಕ್ಕೆ ಮುಜರಾಯಿ ಇಲಾಖೆ, ದಾನಿಗಳ ಸಹಕಾರ ಸಿಗಬೇಕಿದೆ.

ಮಾರ್ಗಸೂಚಿ: ಹಾಸನ ಹಾಗೂ ಮಂಡ್ಯ ಜಿಲ್ಲೆಯ ಗಡಿಯಲ್ಲಿರುವ ಸಾಸಲು ಕ್ಷೇತ್ರವು ಶ್ರವಣಬೆಳಗೂಳದಿಂದ 9 ಕಿ.ಮೀ. ಹಾಗೂ ಕಿಕ್ಕೇರಿ ಗ್ರಾಮದಿಂದ 6 ಕಿ.ಮೀ ಅಂತರದಲ್ಲಿದೆ. ರೈಲಿನಲ್ಲಿ ಬಂದರೆ ಮಂದಗೆರೆ ರೈಲ್ವೆ ನಿಲ್ದಾಣದಲ್ಲಿ ಇಳಿದು ಕಿಕ್ಕೇರಿ ಮಾರ್ಗವಾಗಿ ಬರಲು ವಾಹನ ಸೌಲಭ್ಯ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT