ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಲೋಕದ ಅನಾವರಣ

ಶೈಕ್ಷಣಿಕ ಅಂಗಳ
Last Updated 25 ಅಕ್ಟೋಬರ್ 2014, 7:59 IST
ಅಕ್ಷರ ಗಾತ್ರ

ಮದ್ದೂರು: ಹೊತ್ತು ಮುಳುಗಿ ಸಂಜೆಯಾಗುತ್ತಿದ್ದಂತೆ ಈ ಶಾಲೆಯಲ್ಲಿ ತಮಟೆ, ನಗಾರಿಗಳ ಸದ್ದು ಕೇಳತೊಡಗುತ್ತದೆ. ಈ ಸದ್ದಿನ ಲಯಕ್ಕೆ, ಕಾಲಿಗೆ ಗೆಜ್ಜೆ ಕಟ್ಟಿದ ಶಾಲೆಯ ಮಕ್ಕಳು ಕುಣಿಯ ತೊಡಗುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ  ಉತ್ಸಾಹ ಹಾಗೂ ಸಂಭ್ರಮಕ್ಕಂತೂ ಸಾಟಿಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಜಾನಪದ ಲೋಕವೊಂದು ಅನಾವರಣಗೊಳ್ಳುತ್ತದೆ. ಸಂಭ್ರಮೋಲ್ಲಾಸ ಇಲ್ಲಿ ಪುಟಿದೇಳುತ್ತದೆ.

ಇದು ತಾಲ್ಲೂಕಿನ ಗಡಿಯಂಚಿನ ಕೊಪ್ಪ ಗ್ರಾಮದ ಸರ್ವೋದಯ ಪ್ರೌಢಶಾಲೆಯಲ್ಲಿ ಪ್ರತಿನಿತ್ಯ ಸಂಜೆ ಸಿಗುವ ನೋಟ. ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ಜಾನಪದ ಕುಣಿತಗಳ ತಾಲೀಮು ನಿರಂತರ ನಡೆದಿದೆ. ಶಾಲೆಯಲ್ಲಿ ಜಾನಪದ ನೃತ್ಯ ತರಬೇತಿಗಾಗಿಯೇ ವಿಭಾಗವೊಂದನ್ನು ತೆರೆಯಲಾಗಿದೆ. ರಾಮನಗರದ ಜಾನಪದ ಲೋಕದ ಕಲಾವಿದರು ಈ ತರಬೇತಿ ಶಾಲೆಯ ಮೂಲಕ ಇಲ್ಲಿನ ಮಕ್ಕಳಿಗೆ ಕಂಸಾಳೆ, ಕೋಲಾಟ, ಜಡೆ ಕೋಲಾಟ, ಸುಗ್ಗಿ ಕುಣಿತ, ಪೂಜಾ ಕುಣಿತ, ಪಟದ ಕುಣಿತ, ಮರಗಾಲು ಕುಣಿತ ಸೇರಿದಂತೆ ಹಲವು ಜನಪದ ನೃತ್ಯ ಪ್ರಕಾರಗಳನ್ನು ಕಲಿಸಿಕೊಟ್ಟಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳಿಗೂ ಅಪಾಯಕಾರಿ ಎನಿಸುವ ಬೀಸು ಕಂಸಾಳೆ ಕುಣಿತವನ್ನು ಕಲಿಸಿಕೊಡಲಾಗಿದ್ದು, ಮಕ್ಕಳು ಯಾವುದೇ ಭಯವಿಲ್ಲದೇ ಕಂಸಾಳೆ ಬೀಸುವ ಪರಿ ನಿಜಕ್ಕೂ ವರ್ಣನಾತೀತ.

ಈ ವರ್ಷ ಮಂಡ್ಯ ಬಯಲುಸೀಮೆಗೆ ಅಪರೂಪ ಎನಿಸುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಜನಾಂಗದ ‘ಡಮಾಮಿ ನೃತ್ಯ’ವನ್ನು ಈ ಮಕ್ಕಳು ಕಲಿತು ಪ್ರದರ್ಶಿಸಿದ್ದಾರೆ. ಈ ಕುಣಿತದ ತಾಲೀಮು ನೀಡಲು ದೂರದ ಯಲ್ಲಾಪುರದಿಂದ ಸಿದ್ದಿ ಜನಾಂಗದ ಜನಪದ ಕಲಾವಿದರಾದ ಮರಿಮಾ, ತೇರೆಜಾ, ಡಿಸೋಜಾ  ಇಲ್ಲಿಗೆ ಬಂದು ಒಂದು ತಿಂಗಳು ಇಲ್ಲಿಯೇ ವಾಸ್ತವ್ಯ ಹೂಡಿ ಈ ನೃತ್ಯವನ್ನು ಮಕ್ಕಳಿಗೆ ಕಲಿಸಿದ್ದಾರೆ.

ಇದೇ ವರ್ಷ ಉತ್ತರ ಕನ್ನಡ ಜಿಲ್ಲೆಯ ಜಾನಪದ ಆಕಾಡೆಮಿ ಸದಸ್ಯ ಶಿವಾನಂದ ಶಿವಪ್ಪಗೌಡ ನೇತೃತ್ವದಲ್ಲಿ ಗಣಪ್ಪಗೌಡರ ಕಲಾವಿದರ ತಂಡವೊಂದು ಕೊಪ್ಪದಲ್ಲಿ ಒಂದು ತಿಂಗಳ ಕಾಲ ಉಳಿದು ಇಲ್ಲಿನ ಶಾಲಾ ಮಕ್ಕಳಿಗೆ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತವನ್ನು ಕಲಿಸಿಕೊಟ್ಟು ತೆರಳಿದ್ದಾರೆ. ವಿಚಿತ್ರವೆನಿಸುವ ಹಾಲಕ್ಕಿ ಒಕ್ಕಲಿಗರ ವೇಷಭೂಷಣ ತೊಟ್ಟ ಬಯಲು ಸೀಮೆಯ ಈ ಮಕ್ಕಳು  ಈ ನೃತ್ಯವನ್ನು ದೂರದ ಧಾರವಾಡದ ಬಾಲವಿಕಾಸ ಆಕಾಡೆಮಿ ಈಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಜಾನಪದ ಸಂಭ್ರಮೋತ್ಸವದಲ್ಲಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.

ಇದಲ್ಲದೇ ಮೈಸೂರು, ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ತಮ್ಮ ಜಾನಪದ ಕಲಾ ಪ್ರದರ್ಶನವನ್ನು ತೆರೆದಿಟ್ಟಿದ್ದಾರೆ. ಶಾಲೆಯ ಪೂಜಾ-ಪಟ ಕುಣಿತ ತಂಡವು ಕಳೆದ ವರ್ಷ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ೆಯಲ್ಲಿ ಪಾಲ್ಗೊಂಡು ಹೆಗ್ಗಳಿಕೆ ಪಡೆದಿದೆ.

ದೀಪದಿಂದ ದೀಪ ಹಚ್ಚುವಂತೆ ಈ ಮಕ್ಕಳು ಕಲಿತ ನೃತ್ಯಗಳು ನಮ್ಮ ಮುಂದಿನ ಪರಂಪರೆಗೆ ಮುಂದುವರಿಯಲಿ, ಒಟ್ಟಾರೆ ಜನಪದ ಕಲಾ ಪ್ರದರ್ಶನಗಳು ಉಳಿಯಲಿ ಬೆಳೆಯಲಿ ಎಂಬುದೇ ಇದರ ಉದ್ದೇಶ' ಎನ್ನುತಾರೆ ಶಾಲಾ ಮುಖ್ಯಶಿಕ್ಷಕ ಹಾಗೂ ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ. ಸ್ವಾಮಿ.

‘ನಮ್ಮ ಹುಡುಗ್ರು ಅದು ಇದು ಅಂತ ಕಲಿತು ಹಾದಿಗೆಡೋ ಬದಲು ಪಟ, ಪೂಜಾ, ಕಂಸಾಳೆ ಕುಣಿತ ಕಲಿತರೆ ಒಳ್ಳೇದೇ ಅಲ್ವಾ. ನಮ್ಮೂರಿನ ಹಬ್ಬ ಜಾತ್ರೆಗೆ ದೂರದ ಊರುಗಳಿಂದ ಸಾವಿರಾರು ರೂಪಾಯಿ ಹಣ ತೆತ್ತು ಪೂಜೆ, ಪಟ, ಕಂಸಾಳೆಯವರನ್ನು ಕರೆಸಬೇಕಿತ್ತು. ಇದೀಗ ನಮ್ಮ ಹುಡುಗ್ರು-–ಹುಡುಗಿರೇ ಎಲ್ಲಾ ಕುಣಿತನೂ ಕಲಿತು ಕುಣಿತರೆ. ಇದು ನಮ್ಗೆ ನಿಜಕ್ಕೂ ಖುಷಿ ಹೆಮ್ಮೆ ತಂದಯ್ತೆ' ಎನ್ನುತ್ತಾರೆ ಗ್ರಾಮದ ಹಿರಿಯ ಯಜಮಾನ ಶ್ಯಾಮಣ್ಣ.

ಒಟ್ಟಾರೆ ಅಳಿದು ಹೋಗುತ್ತಿರುವ ಜನಪದ ಸಂಸ್ಕೃತಿಯ ಪುನರುತ್ಥಾನಕ್ಕೆ ಈ ಶಾಲೆ ಮುಂದಾಗಿದೆ. ಮಕ್ಕಳಲ್ಲಿ ಶೈಕ್ಷಣಿಕ ಕಲಿಕೆಯೊಂದಿಗೆ ಪರಂಪರಾನುಗತ ಜನಪದ ಕಲೆಯನ್ನು ಕಲಿಸುತ್ತಿರುವುದು ಈ ಶಾಲೆಯ ಹೆಗ್ಗಳಿಕೆಯೂ ಆಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT