ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಕುಗ್ರಾಮ ಕೊತ್ತನಹಳ್ಳಿ

Last Updated 28 ಜನವರಿ 2015, 10:31 IST
ಅಕ್ಷರ ಗಾತ್ರ

ಮದ್ದೂರು: ರಸ್ತೆಯ ಬದಿಯಲ್ಲೇ ತಿಪ್ಪೆಗಳ ದರ್ಶನ. ಕೊರಕಲು ಬಿದ್ದ ರಸ್ತೆಗಳು, ಶುದ್ಧ ಕುಡಿಯುವ ನೀರಿಗೆ ಪರದಾಟ, ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲಿಯೇ ಹರಿಯುವ ಚರಂಡಿ ನೀರು. ಗ್ರಾಮದಲ್ಲಿ ತಾಂಡವಾಡುತ್ತಿರುವ ಅನೈರ್ಮಲ್ಯ.

ಇದು ಸಮೀಪದ ಕೊತ್ತನಹಳ್ಳಿ ಗ್ರಾಮದ ಅವ್ಯವಸ್ಥೆಯ ನೋಟ. ಪಟ್ಟಣದಿಂದ ಕೇವಲ 6ಕಿ.ಮೀ ದೂರದಲ್ಲಿರುವ ಹೊಸಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕೊತ್ತನಹಳ್ಳಿ ಗ್ರಾಮವು 1200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. 800ಕ್ಕೂ ಹೆಚ್ಚು ಮತದಾರರಿರುವ ಈ ಗ್ರಾಮದಲ್ಲಿ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಇಷ್ಟಾದರೂ ಈ ಗ್ರಾಮ ಇಂದಿಗೂ ಮೂಲ ಸೌಕರ್ಯಗಳಿಂದ ದೂರವಾಗಿ ಉಳಿದಿದೆ.

ಗ್ರಾಮದ ಪರಿಶಿಷ್ಟರ ಕಾಲೊನಿಗೆ ವಿಶೇಷ ಆರ್ಥಿಕ ಯೋಜನೆಯಡಿಯಲ್ಲಿ ಚರಂಡಿ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ರೂ. 21ಲಕ್ಷ  ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ಆದರೆ ಗ್ರಾಮದ ಇನ್ನುಳಿದ ರಸ್ತೆಗಳು ಇಂದಿಗೂ ಕೊರಕಲು ಬಿದ್ದಿವೆ. ಈ ರಸ್ತೆಗಳಿಗೆ ಡಾಂಬರು ಭಾಗ್ಯ ದೊರಕುವುದು ಎಂತು? ಎಂಬುದು ಇಂದಿಗೂ ಗ್ರಾಮಸ್ಥರನ್ನು ಕಾಡಿರುವ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಗ್ರಾಮದಲ್ಲಿ ಇಂದಿಗೂ ಬಹುತೇಕ ರಸ್ತೆಗಳಿಗೆ ಚರಂಡಿ ನಿರ್ಮಿಸಿಲ್ಲ. ಹೀಗಾಗಿ ರಸ್ತೆಯಲ್ಲಿಯೇ ನೀರು ಹರಿದು ಅಸಹ್ಯದ ವಾತಾವರಣ ಸೃಷ್ಟಿಯಾಗಿದೆ. ಇನ್ನುಳಿದಂತೆ ಇರುವ ಚರಂಡಿಗಳ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿ ನಿರ್ಲಕ್ಷಿಸಿದೆ. ಹೀಗಾಗಿ, ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನೀರು ನಿಂತು ಸೊಳ್ಳೆಮರಿ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಗ್ರಾಮದ ರಸ್ತೆಗಳ ಬದಿಯಲ್ಲಿ ತಿಪ್ಪೆಗುಂಡಿಗಳು ಸಾಲು ಸಾಲು ಇವೆ. ಗ್ರಾಮದ ಬಹುತೇಕ ಸರ್ಕಾರಿ ಜಾಗದಲ್ಲಿ ಪಾರ್ಥೇನಿಯಂ ಕಳೆ ತುಂಬಿದ್ದು, ಇಡೀ ಗ್ರಾಮದಲ್ಲಿ ಸ್ವಚ್ಛತೆ ಕಾಣ ಸಿಗುವುದಿಲ್ಲ. 

ಗ್ರಾಮದಲ್ಲಿ ಈ ಕೆಲ ವರ್ಷಗಳ ಹಿಂದೆ 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಿರು ನೀರು ಸರಬರಾಜು ಘಟಕ ನಿರ್ವಹಣೆ ಕೊರತೆಯಿಂದಾಗಿ ಕೆಟ್ಟು ನಿಂತಿದೆ. ಜಾನುವಾರುಗಳಿಗೆ ನಿರ್ಮಿಸಲಾದ ಕುಡಿಯುವ ನೀರಿನ ತೊಟ್ಟಿ ನೀರಿಲ್ಲದೇ ಭಣಗುಡುತ್ತಿದೆ.
‘ಗ್ರಾಮದಲ್ಲಿ ಮೇಜರ್ ವಾಟರ್ ಟ್ಯಾಂಕ್ ನಿರ್ಮಿಸಲಾಗಿದೆ. ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಆದರೆ, ಈ ನೀರು ಅತಿಯಾದ ಫ್ಲೋರೈಡ್‌ನಿಂದ ಕೂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಈ ದಿಸೆಯಲ್ಲಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಕಟ್ಟಡ ನಿರ್ಮಾಣಗೊಂಡಿದೆ. ಶುದ್ಧೀಕರಣ ಘಟಕದ ಯಂತ್ರೋಪಕರಣಗಳು ಬಂದಿವೆ. ಆದರೆ ಇದುವರೆಗೆ ಅದನ್ನು ಜೋಡಿಸುವ ಕಾರ್ಯ ಕಳೆದ ಒಂದೂವರೆ ವರ್ಷದಿಂದ ನೆನಗುದಿಗೆ ಬಿದ್ದಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ಮಲ್ಲರಾಜು.

ಶಂಕರಪುರ ಗೇಟ್‌ನಿಂದ ಗ್ರಾಮಕ್ಕೆ ಈಚೆಗೆ ಡಾಂಬರು ರಸ್ತೆ ನಿರ್ಮಾಣಗೊಂಡಿದೆ. ಇಷ್ಟಾದರೂ ಈ ಗ್ರಾಮಕ್ಕೆ ಇದುವರೆಗೆ ಬಸ್ ಸೌಕರ್ಯ ಸಿಕ್ಕಿಲ್ಲ. ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಶಂಕರಪುರ ಗೇಟ್‌ಗೆ ಪ್ರತಿನಿತ್ಯ ನಡೆದು ಬಸ್ ಹತ್ತಬೇಕಾದ ದುಸ್ಥಿತಿ ಒದಗಿದೆ.

‘ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಖಾಸಗಿ ಶಾಲೆಗಳ ಭರಾಟೆಯಿಂದಾಗಿ 1ರಿಂದ 4ನೇ ತರಗತಿಯ ದಾಖಲಾತಿ 10 ಮಕ್ಕಳ ಸಂಖ್ಯೆಗೆ ಇಳಿದಿದೆ. ಇದು ಹೀಗೆ ಮುಂದುವರಿದ್ದಲ್ಲಿ ಮುಂದಿನ ಶೈಕ್ಷಣಿಕ ಸಾಲಿಗೆ ಶಾಲೆ ಬಾಗಿಲು ಮುಚ್ಚುವುದು ನಿಶ್ಚಿತ’ ಎನ್ನುತ್ತಾರೆ ರೈತ ಮುಖಂಡ ಕೆ.ಜಿ. ಉಮೇಶ್.

ಗ್ರಾಮದಲ್ಲಿ ಧಾನ್ಯ ಒಕ್ಕಣೆ ರಸ್ತೆಯಲ್ಲಿಯೇ ನಡೆಯುತ್ತಿದ್ದು, ದ್ವಿಚಕ್ರವಾಹನ ಸವಾರರಿಗೆ ಕಿರಿಕಿರಿಯಾಗಿದೆ.   ರೈತರ ಅನುಕೂಲಕ್ಕಾಗಿ ಧಾನ್ಯ ಒಕ್ಕಣೆ ಕಣ ನಿರ್ಮಾಣದ ಅವಶ್ಯಕತೆಯಿದೆ. ಇದರೊಂದಿಗೆ ಗ್ರಾಮದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಸುಧಾರಣೆಗೆ ಕ್ಷೇತ್ರ ಶಾಸಕರು ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT