ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದೇವನೂರ ಮಹಾದೇವ ಜೊತೆ ಮಾತುಕತೆ’ ಬಿಡುಗಡೆ

‘ಮಲೆಗಳಲ್ಲಿ ಮದುಮಗಳ ಮೊಮ್ಮಗಳಂತೆ ಕುಸುಮಬಾಲೆ’ ಹೇಳಿಕೆ ಇಷ್ಟ
Published : 25 ಏಪ್ರಿಲ್ 2024, 15:19 IST
Last Updated : 25 ಏಪ್ರಿಲ್ 2024, 15:19 IST
ಫಾಲೋ ಮಾಡಿ
Comments

ಮೈಸೂರು: ‘ವಿಮರ್ಶಕರೊಬ್ಬರು ನಿಮ್ಮನ್ನು ಕುವೆಂಪು ಅವರ ಉತ್ತರಾಧಿಕಾರಿಯೆಂದು ಹೇಳುತ್ತಾರೆ. ನಿಮ್ಮದೇನು ಅಭಿಪ್ರಾಯ’ ಎಂಬ ಲೇಖಕಿ ಎಚ್‌.ಜೆ.‌ಸರಸ್ವತಿ ಅವರ ಪ್ರಶ್ನೆಗೆ ಉತ್ತರಿಸಿದ ಲೇಖಕ ದೇವನೂರ ಮಹಾದೇವ, ‘ಕುಸುಮಬಾಲೆ ಕೃತಿ ವಿಮರ್ಶೆಗಳಲ್ಲಿ ನಿಮಗ್ಯಾವುದು ಇಷ್ಟವೆಂದು ಒಬ್ಬರು ನನ್ನನ್ನು ಕೇಳುತ್ತಾರೆ. ಆಗ ಯಾರೋ ಒಬ್ಬರು ‘ಮಲೆಗಳಲ್ಲಿ ಮದುಮಗಳ ಮೊಮ್ಮಗಳ ತರ ಕುಸುಮಬಾಲೆ ಇದ್ದಾಳೆ’ ಎಂದಿದ್ದಾರೆ. ಆ ಮಾತು ನನಗಿಷ್ಟ’ ಎಂದು ಉತ್ತರಿಸಿದರು.

ಇಂಥ ಅಪರೂಪದ ಸಂವಾದಕ್ಕೆ ನಗರದ ನವಕರ್ನಾಟಕ ಪುಸ್ತಕ ಮಳಿಗೆಯು ಗುರುವಾರ ಸಾಕ್ಷಿಯಾಯಿತು.

ತಮ್ಮ ಆಯ್ದ ಸಂದರ್ಶನ ಲೇಖನಗಳ ಸಂಗ್ರಹ ‘ದೇವನೂರ ಮಹಾದೇವ ಜೊತೆ ಮಾತುಕತೆ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಅವರು ಚುರುಕು, ಚುಟುಕು ಉತ್ತರಗಳನ್ನು ನೀಡಿದರು. 

‘ಕುವೆಂಪು ಪ್ರಶಸ್ತಿ ಬಂದಾಗ ಸಂದರ್ಶಿಸಿದ್ದ ವಿಮರ್ಶಕ ನಟರಾಜ್ ಹುಳಿಯಾರ್, ‘ಫೋಟೊದಲ್ಲಿನ ಕುವೆಂಪು ನಿಮ್ಮತ್ತ ನೋಡುತ್ತಿಲ್ಲವಲ್ಲವೆಂದಿದ್ದರು’. ಅದಕ್ಕೆ ನಾನು ‘ಇದು ತುಂಬಾ ಕ್ಷೇಮ. ಅವರು ನೋಡುತ್ತಿದ್ದರೆ ಬೇರೇನೂ ಮಾಡೋದಕ್ಕೆ ಆಗುವುದಿಲ್ಲ. ಗಂಭೀರವಾಗಿರಬೇಕೆಂದಿದ್ದೆ’ ಎಂದು ಸ್ಮರಿಸಿದರು.

ಕೃತಿ ಬಿಡುಗಡೆ ಮಾಡಿದ ಕೃಷ್ಣಮೂರ್ತಿ ಹನೂರು ಮಾತನಾಡಿ, ‘ದೇವನೂರ ಮಹಾದೇವ ಲೋಕ ಸಂವಾದಿ. ಅವರ ಮಾತಿನಲ್ಲಿ ಕಥೆಗಳಿರುತ್ತವೆ, ಅವುಗಳಲ್ಲಿ ವಿಚಾರ, ಜೊತೆಗೆ ಸದ್ಯದ ಪರಿಸ್ಥಿತಿಯ ಬಗೆಗಿನ ವಿಷಾದವಿರುತ್ತದೆ. ಏನು ಮಾಡಬೇಕೆಂಬ ಪರಿಹಾರ ಕೂಡ ಇರುತ್ತದೆ. ಅವರು ಯಾವ ಮತ–ಧರ್ಮಕ್ಕೂ ಸೇರದವರು. ಆದರೆ, ಎಲ್ಲ ಮತ– ಧರ್ಮಕ್ಕೂ ಸಲ್ಲುತ್ತಾರೆ’ ಎಂದರು.

‘ದೇವನೂರ ಜೊತೆ ಮಾತುಕತೆ ಪುಸ್ತಕ ಓದುತ್ತಿದ್ದರೆ ಬೆಳಗೆರೆ ಕೃಷ್ಣಶಾಸ್ತ್ರಿ, ಸಿರಿಯಜ್ಜಿ ಹಾಗೂ ಮಹಾದೇವ ಚಿತ್ರದುರ್ಗದ ಹಟ್ಟಿಯಲ್ಲಿ ಮಾತನಾಡಿದಂತಿದೆ. ಸಿರಿಯಜ್ಜಿ, ಕೃಷ್ಣಶಾಸ್ತ್ರಿಗಳ ಮನೆಯಲ್ಲೂ ಪುಸ್ತಕವಿರಲಿಲ್ಲ. ಆದರೆ, ಇಡೀ ಲೋಕದ ವಿಚಾರವೆಲ್ಲ ಮಾತನಾಡುತ್ತಿದ್ದರು’ ಎಂದು ಸ್ಮರಿಸಿದರು.

‘ಮಹಾದೇವರ ಕೃತಿಯನ್ನು ದೇಶದ ಎಲ್ಲ ಭಾಷೆಗಳಲ್ಲಿ ಅನುವಾದ ಮಾಡಿ ದಲಿತ ಸಮುದಾಯಗಳ ಐಕ್ಯತೆಗೆ ಮುಂದಾಗಬೇಕು’ ಎಂದು ನಿವೃತ್ತ ಮೇಜರ್‌ ಜನರಲ್‌ ಸುಧೀರ್‌ ಒಂಬತ್ಕೆರೆ ಸಲಹೆ ನೀಡಿದರು. ಸಂದರ್ಶಕರಾದ ಪ್ರೊ.ಓ.ಎಲ್‌.ನಾಗಭೂಷಣಸ್ವಾಮಿ, ಚಂದ್ರಶೇಖರ್‌ ಐಜೂರ್‌, ಚಿಕ್ಕಮಗಳೂರು ಗಣೇಶ್‌ ಹಾಗೂ ಪ್ರೊ.ತುಕಾರಾಂ ಅವರಿಗೆ ಗೌರವ ಪ್ರತಿ ನೀಡಲಾಯಿತು.

ರಂಗಕರ್ಮಿ ಸಿ.ಬಸವಲಿಂಗಯ್ಯ, ನಟ ಪ್ರಕಾಶ್‌ ರಾಜ್‌, ವನ್ಯಜೀವಿ ತಜ್ಞರಾದ ಕೃಪಾಕರ–ಸೇನಾನಿ, ರಂಗಕರ್ಮಿ ಎಚ್‌.ಜನಾರ್ಧನ್‌, ಡಾ.ಎಸ್‌‍.ನರೇಂದ್ರಕುಮಾರ್‌, ಪದ್ಮಾ ಶ್ರೀರಾಮ್‌, ಪ್ರಕಾಶಕ ಅಭಿರುಚಿ ಗಣೇಶ ಪಾಲ್ಗೊಂಡಿದ್ದರು.

ಪುಸ್ತಕ ವಿವರ

ಕೃತಿ: ದೇವನೂರ ಮಹಾದೇವ ಜೊತೆ ಮಾತುಕತೆ (ಆಯ್ದ ಸಂದರ್ಶನಗಳ ಸಂಕಲನ)

ಸಂಪಾದನೆ: ಬನವಾಸಿಗರು

ಪ್ರ: ಅಭಿರುಚಿ ಪ್ರಕಾಶನ

ಪುಟ: 232 ಬೆಲೆ: ₹ 220

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT