ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಹಾಕಿದ್ದು ಬಿಜೆಪಿಯವರ ಕೇಸರಿ ಶಾಲಲ್ಲ: ಜಿ.ಟಿ. ದೇವೇಗೌಡ

Published 7 ಫೆಬ್ರುವರಿ 2024, 9:07 IST
Last Updated 7 ಫೆಬ್ರುವರಿ 2024, 9:07 IST
ಅಕ್ಷರ ಗಾತ್ರ

ಮೈಸೂರು: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಈಚೆಗೆ ನಡೆದ ಪ್ರತಿಭಟನೆ ವೇಳೆ ಹಾಕಿದ್ದುದು ಬಿಜೆಪಿಯವರ ಕೇಸರಿ ಶಾಲಲ್ಲ. ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಭಕ್ತನೊಬ್ಬ ಹಾಕಿದ ಶಾಲದು’ ಎಂದು ಶಾಸಕ ಜಿ.ಟಿ. ದೇವೇಗೌಡ ಸಮರ್ಥಿಸಿಕೊಂಡರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಬಿಜೆಪಿಯವರ ಶಾಲು ಕೂಡ ಅದಾಗಿರಲಿಲ್ಲ. ಆದರೆ, ಕಾಂಗ್ರೆಸ್‌ನವರು ಅದನ್ನೇ ದೊಡ್ಡದು ಮಾಡಿದ್ದಾರಷ್ಟೆ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿ ಜೊತೆಗೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿರುವುದು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಾತ್ರವಷ್ಟೆ. ನಮ್ಮ‌ ತತ್ವ– ಸಿದ್ಧಾಂತವೇ ಬೇರೆ; ಬಿಜೆಪಿಯದ್ದೇ ಬೇರೆ. ಕೇಸರಿ ಶಾಲು ಹಾಕಿದಾಕ್ಷಣ ನಮ್ಮ ಸಿದ್ಧಾಂತ ಬದಲಾಗುವುದಿಲ್ಲ’ ಎಂದರು.

‘ಜನತಾ ಪಕ್ಷ ಕಟ್ಟಿದ ಜಯಪ್ರಕಾಶ್ ನಾರಾಯಣ್, ಪಕ್ಷ ಉಳಿಸಿ ಬೆಳೆಸಿದ ಎಚ್.ಡಿ. ದೇವೇಗೌಡರ ಹಾದಿಯಲ್ಲಿ ನಾವು ಸಾಗುತ್ತೇವೆ. ಮೈತ್ರಿ ಮಾಡಿಕೊಂಡ ಮಾತ್ರಕ್ಕೆ ಬದಲಾಗದು’ ಎಂದು ಹೇಳಿದರು.

‘ರಾಜಕೀಯ ಪಕ್ಷಗಳ ನಾಯಕರು ವಿವಿಧ ಕಾರ್ಯಕ್ರಮಕ್ಕೆ ಹೋದಾಗ ಸಂಘಟಕರು ಅವರವರ ಶಾಲನ್ನು ಹಾಕುತ್ತಾರೆ. ಬಿಎಸ್‌ಪಿ ಕಾರ್ಯಕ್ರಮದಲ್ಲಿ ಅವರದ್ದೇ ಶಾಲು ನೀಡುತ್ತಾರೆ. ಹಾಗೆಂದ ಮಾತ್ರಕ್ಕೆ ಪಕ್ಷದ ಸಿದ್ಧಾಂತ ಬಿಟ್ಟು ಕೊಟ್ಟಿದ್ದಾರೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ’ ಎಂದರು.

‘ಕರ್ನಾಟಕಕ್ಕೆ ಕೊಡಬೇಕಾದ ಎಲ್ಲವನ್ನೂ ಕೊಟ್ಟಿದ್ದೇವೆ ಎಂದು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಹೇಳುತ್ತಾರೆ. ಆದರೆ, ರಾಜ್ಯ ಸರ್ಕಾರದವರು ಅನುದಾನ ಕೊಟ್ಟಿಲ್ಲ ಎನ್ನುತ್ತಾರೆ. ಏನೇ ಇದ್ದರೂ ಸಭೆ ನಡೆಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಮುಖ್ಯಮಂತ್ರಿ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟಿಸಿದ್ದು ಸರಿಯಲ್ಲ. ಆ ಅಗತ್ಯ ಇರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬುದು ಮೈತ್ರಿಯ ಉದ್ದೇಶ. ಸೀಟು ಹಂಚಿಕೆ ವಿಚಾರ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT