ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru | ಮುಡಾ ಬಜೆಟ್: ಗುಂಪು ವಸತಿ, ಪೆರಿಫೆರಲ್‌ ರಿಂಗ್‌ ರಸ್ತೆಗೆ ಆದ್ಯತೆ

Published 7 ಮಾರ್ಚ್ 2024, 9:10 IST
Last Updated 7 ಮಾರ್ಚ್ 2024, 9:10 IST
ಅಕ್ಷರ ಗಾತ್ರ

ಮೈಸೂರು: ಗುಂಪು ವಸತಿ ಯೋಜನೆ, ಪೆರಿಫೆರಲ್‌ ರಿಂಗ್‌ ರಸ್ತೆ ಮತ್ತು ಅಲ್ಲಲ್ಲಿ ಗ್ರೇಡ್‌ ಸಪರೇಟರ್‌ಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿರುವ ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 2024–25ನೇ ಸಾಲಿನ ₹6.03 ಕೋಟಿ ಉಳಿತಾಯ ಬಜೆಟ್‌ಗೆ ಗುರುವಾರ ಅನುಮೋದನೆ ನೀಡಲಾಯಿತು.

ಅಧ್ಯಕ್ಷ ಕೆ.ಮರೀಗೌಡ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್‌ ಬಜೆಟ್‌ ಮಂಡಿಸಿದರು. ₹831.80 ಕೋಟಿ ಸಂಪನ್ಮೂಲ ಕ್ರೋಢೀಕರಿಸಲು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ಕೆ ₹825.77 ಕೋಟಿ ವ್ಯಯಿಸಲು ಉದ್ದೇಶಿಸಲಾಗಿದೆ.

ಇದೇ ವೇಳೆ, 2023–24ನೇ ಸಾಲಿನಲ್ಲಿ ಎಲ್ಲಾ ಮೂಲಗಳಿಂದ ಕ್ರೋಢೀಕರಿಸಲು ಉದ್ದೇಶಿಸಲಾಗಿದ್ದ ಒಟ್ಟು ಅಂದಾಜು ಸಂಪನ್ಮೂಲ ₹775.81 ಕೋಟಿ ಹಾಗೂ ಒಟ್ಟು ಅಂದಾಜು ವೆಚ್ಚ ₹788.24 ಕೋಟಿ ಪರಿಷ್ಕೃತ ಬಜೆಟ್‌ಗೂ ಅನುಮೋದನೆ ನೀಡಲಾಯಿತು.

ಶಾಸಕರಾದ ತನ್ವೀರ್‌ ಸೇಠ್, ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ಎಚ್.ವಿಶ್ವನಾಥ್‌, ರಮೇಶ್ ಬಂಡಿಸಿದ್ದೇಗೌಡ, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ದಿನೇಶ್‌ ಗೂಳಿಗೌಡ, ಕೆ.ಹರೀಶ್‌ ಗೌಡ, ದರ್ಶನ್‌ ಧ್ರುವನಾರಾಯಣ, ಮಹಾನಗರಪಾಲಿಕೆ ಆಯುಕ್ತೆ ಎನ್.ಎಸ್. ಮಧು, ನಗರ ಯೋಜನಾ ಸದಸ್ಯ ಆರ್.ಶೇಷ, ಎಂಜಿನಿಯರಿಂಗ್‌ ಸದಸ್ಯ ಎನ್.ಬಿ. ಚನ್ನಕೇಶವ, ಸೆಸ್ಕ್‌ ಎಸ್‌ಇ ಸುನೀಲ್‌ಕುಮಾರ್‌ ಎ.ಎ. ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆಸೀಫ್‌ ಇಕ್ಬಾಲ್‌ ಖಲೀಲ್‌ ಪಾಲ್ಗೊಂಡಿದ್ದರು.

ಯಾವ್ಯಾವುದರಿಂದ ಆದಾಯ?

ಮನೆ ಮತ್ತು ನಿವೇಶನ ಕಂದಾಯದಿಂದ ₹20 ಕೋಟಿ, ಖಾತೆ, ಕಂದಾಯ ಮತ್ತು ವರ್ಗಾವಣೆ ಶುಲ್ಕದಿಂದ ₹15 ಕೋಟಿ, ಕಾಮಗಾರಿ ಮೇಲ್ವಿಚಾರಣಾ ಶುಲ್ಕದಿಂದ ₹10 ಕೋಟಿ ನಿರೀಕ್ಷಿಸಲಾಗಿದೆ.

ಸಾಮಾನ್ಯ ಆಡಳಿತ ಹಾಗೂ ಮಹಾಯೋಜನೆಗೆ ವಿವಿಧ ಮೂಲಗಳಿಂದ ಬಡಾವಣೆ ನಕ್ಷೆ ಶುಲ್ಕ, ಕಾರ್ಮಿಕ ಕಲ್ಯಾಣ ನಿಧಿ, ಕುಡಿಯುವ ನೀರು ಮತ್ತು ಮಲಿನ ನೀರು ಹೊರಸೂಸುವ ಮಾರ್ಗ, ಎಂಆರ್‌ಟಿಎಸ್ ಶುಲ್ಕ, ಜಲಸಂಗ್ರಹಗಾರ ಶುಲ್ಕ, ಹಸಿರು ಶುಲ್ಕದಿಂದ ಒಟ್ಟು ₹82.05 ಕೋಟಿ ಅಂದಾಜಿಸಲಾಗಿದೆ. ಕೆರೆ ಪುನರುಜ್ಜೀವನ ಶುಲ್ಕದಿಂದ ₹5 ಲಕ್ಷ ನಿರೀಕ್ಷಿಸಲಾಗಿದೆ.

ಮಹಾಯೋಜನೆ–2031ಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿರುವುದರಿಂದ, ವಲಯ ನಿಯಮಗಳ ಅನ್ವಯ ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಯ ಬಡಾವಣೆ ನಕ್ಷೆಯ ಅನುಮೋದನೆ ಸಂದರ್ಭದಲ್ಲಿ ಉದ್ಯಾನ ಹಾಗೂ ಬಯಲು ಪ್ರದೇಶದ ವಿನಾಯಿತಿ ರದ್ದುಪಡಿಸಿರುವುದರಿಂದಾಗಿ ‘ಉದ್ಯಾನ ಹಾಗೂ ಬಯಲು ಪ್ರದೇಶದ ಅಭಿವೃದ್ಧಿ ಶುಲ್ಕ’ವನ್ನು ಪ್ರಸಕ್ತ ವರ್ಷದಲ್ಲಿ ನಿರೀಕ್ಷಿಸಲಾಗಿಲ್ಲ. ಕೊಳಚೆ ಪ್ರದೇಶಗಳ ಅಭಿವೃದ್ಧಿ ಶುಲ್ಕದಿಂದ ₹90 ಲಕ್ಷ ಅಂದಾಜಿಸಲಾಗಿದೆ.

ಅಭಿವೃದ್ಧಿ ನಿಧಿ–1ರ ಮೂಲಗಳಾದ ಮೂಲೆ ನಿವೇಶನ, ಮಧ್ಯಂತರ ನಿವೇಶನ ಮತ್ತು ಮನೆ ಹರಾಜು ಪ್ರಕ್ರಿಯೆಯಿಂದ ₹400 ಕೋಟಿ ಅಂದಾಜಿಸಲಾಗಿದೆ. ಪ್ರಾಧಿಕಾರದ ಬಡಾವಣೆಗಳಲ್ಲಿ ಲಭ್ಯವಾಗುವ ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆಯಿಂದ ₹5.08 ಕೋಟಿ, ನಿವೇಶನ ಹಂಚಿಕೆ ನಿಯಮ ಉಲ್ಲಂಘನೆ ಕ್ಷಯಪತ್ರ ದಂಡಶುಲ್ಕಗಳಿಂದ ₹10 ಕೋಟಿ ನಿರೀಕ್ಷಿಸಲಾಗಿದೆ.

ಅಭಿವೃದ್ಧಿ ನಿಧಿ–2ಕ್ಕೆ ಕ್ರೋಢೀಕೃತವಾಗುವ ಸಂಪನ್ಮೂಲಗಳಾದ ಪ್ರಾಧಿಕಾರದ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆ ಹಾಗೂ ವಾಣಿಜ್ಯ ಸಂಕೀರ್ಣಗಳ ಬಾಡಿಗೆ, ಗುತ್ತಿಗೆಯಿಂದ ಸಂದಾಯದಿಂದ ₹13.76 ಕೋಟಿ ಅಂದಾಜಿಸಲಾಗಿದೆ.

ಯಾವ್ಯಾವುದಕ್ಕೆ ವೆಚ್ಚ?

ಮಹಾಯೋಜನೆಯ ರಸ್ತೆಗಳ ಅಭಿವೃದ್ಧಿಗೆ ₹37 ಕೋಟಿ, ಆಡಳಿತ ವೆಚ್ಚ, ಅಧಿಕಾರಿ–ಸಿಬ್ಬಂದಿಯ ವೇತನ, ಕಾನೂನು ವೆಚ್ಚ, ಲೆಕ್ಕಪರಿಶೋಧನಾ ಶುಲ್ಕ, ಹೊರಗುತ್ತಿಗೆ ನೌಕರರ ವೆಚ್ಚಕ್ಕಾಗಿ ₹40 ಕೋಟಿ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ಮಹಾಯೋಜನೆಯ ಪರಿಷ್ಕರಣೆಗಾಗಿ ಸಾಮಾನ್ಯ ಆಡಳಿತ ವೆಚ್ಚವು ₹2 ಕೋಟಿಯಾಗಲಿದೆ. ಪ್ರಾಧಿಕಾರದ ಆಸ್ತಿ ಸಂರಕ್ಷಣೆಗಾಗಿ ₹2 ಕೋಟಿ, ಎಲ್ಲ ಶಾಖೆಗಳ ದಾಖಲೆಗಳ ಗಣಕೀಕರಣಕ್ಕಾಗಿ ₹5 ಕೋಟಿ, ಕಟ್ಟಡಗಳ ನಿರ್ವಹಣೆಗೆ ₹5 ಕೋಟಿ ವೆಚ್ಚಕ್ಕೆ ಅಂದಾಜಿಸಲಾಗಿದೆ.

ಪ್ರಾಧಿಕಾರದಿಂದ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ₹30 ಕೋಟಿ ಮತ್ತು ಕೆರೆಗಳ ಅಭಿವೃದ್ಧಿಗೆ ₹55 ಕೋಟಿ, ಕೊಳಚೆಪ್ರದೇಶಗಳ ಅಭಿವೃದ್ಧಿಗೆ ₹ 27 ಲಕ್ಷ ವ್ಯಯಿಸಲು ಯೋಜಿಸಲಾಗಿದೆ.

ಮೂಲಸೌಕರ್ಯ ಕಾಮಗಾರಿಗೆ ₹44 ಕೋಟಿ, ನೀರು ಸರಬರಾಜು ಯೋಜನೆಗೆ ₹100 ಕೋಟಿ, ಪ್ರಾಧಿಕಾರದ ಬಡಾವಣೆಗಳ ಉದ್ಯಾನ ಅಭಿವೃದ್ಧಿಗೆ ₹15 ಕೋಟಿ, ಅಂಬೇಡ್ಕರ್ ಭವನದ 2ನೇ ಹಂತದ ಕಾಮಗಾರಿಗೆ ₹25 ಕೋಟಿ ಹಾಗೂ ಭೂಸ್ವಾಧೀನ ವೆಚ್ಚಕ್ಕಾಗಿ ₹50 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

₹250 ಕೋಟಿ ವೆಚ್ಚದಲ್ಲಿ 560 ಮನೆಗಳ ನಿರ್ಮಾಣ

ಪ್ರಾಧಿಕಾರದ ಮೂಲ ಧ್ಯೇಯ ಸಾರ್ವಜನಿಕರಿಗೆ ನಿವೇಶನ ಅಥವಾ ಮನೆ ನಿರ್ಮಿಸಿ ಹಂಚಿಕೆ ಮಾಡುವುದಾಗಿದೆ. ಭೂಸ್ವಾಧೀನ ಕಾಯ್ದೆ 2013 ಚಾಲ್ತಿಗೆ ಬಂದ ನಂತರ ಪ್ರಾಧಿಕಾರದಿಂದ ಹೊಸದಾಗಿ ಬಡಾವಣೆ ರಚನೆಗೆ ಭೂಸ್ವಾಧೀನ ಪ್ರಕ್ರಿಯೆ ಕಷ್ಟಸಾಧ್ಯವಾಗಿದೆ. ಏಕೆಂದರೆ, ಪ್ರಸ್ತುತ ಚಾಲ್ತಿಯಲ್ಲಿರುವ ಭೂಸ್ವಾಧೀನ ಕಾಯ್ದೆಯಂತೆ ಭೂಮಾಲೀಕರಿಗೆ ನೀಡಬೇಕಾದ ಭೂಪರಿಹಾರ ಹಾಗೂ ಬಡಾವಣೆ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚ ಸೇರಿ ರಚಿಸಿದಲ್ಲಿ, ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಸಾಧ್ಯವಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ, ಪ್ರಾಧಿಕಾರದಿಂದ ಈಗಾಗಲೇ ನಿರ್ಮಿಸಿರುವ ಬಡಾವಣೆಗಳಲ್ಲಿ ಗುಂಪು ವಸತಿ ಯೋಜನೆಗೆ ಕಾಯ್ದಿರಿಸಿದ ಭೂಮಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿದಲ್ಲಿ ಮನೆ ಹಂಚಿಕೆ ಮಾಡಬಹುದಾಗಿದೆ. ನಿವೇಶನ ಕೋರಿ ಸಲ್ಲಿಕೆಯಾಗಿರುವ 80ಸಾವಿರಕ್ಕೂ ಹೆಚ್ಚು ಅರ್ಜಿಗಳು ಹಾಗೂ ಮನೆ ಕೋರಿ ಬೇಡಿಕೆ ಸಮೀಕ್ಷೆಯಲ್ಲಿ ಸಲ್ಲಿಕೆಯಾಗಿರುವ ₹ 26ಸಾವಿರ ಅರ್ಜಿಗಳನ್ನು ಗಮನದಲ್ಲಿಟ್ಟುಕೊಂಡು ಗುಂಪು ವಸತಿ ಯೋಜನೆಗೆ ಆದ್ಯತೆ ನೀಡಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಬಹುಮಹಡಿ ವಸತಿ ಯೋಜನೆಯನ್ನು ಹಸಿರು ಕಟ್ಟಡ–ಗ್ರೀನ್‌ ಬಿಲ್ಡಿಂಗ್‌ ರೇಟಿಂಗ್‌ ಪಡೆಯುಲು ಉದ್ದೇಶಿಸಲಾಗಿದ್ದು, ಈ ಅಂಶವನ್ನು ಡಿಪಿಆರ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ.

ಪ್ರತಿ ಸ್ಥಳದಲ್ಲಿ ಮೊದಲ ಹಂತದಲ್ಲಿ ಒಂದು ಟವರ್‌ನಂತೆ ಯೋಜನೆ ಅನುಷ್ಠಾನ ಪ್ರಾರಂಭಿಸಿ ಹಂತ ಹಂತವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆಯಲ್ಲಿ ಒಟ್ಟು 560 ಮನೆಗಳ 12 ಬಹುಮಹಡಿ ಕಟ್ಟಡವನ್ನು ಶಿಯರ್‌ವಾಲ್‌ ತಂತ್ರಜ್ಞಾನ ಅಳವಡಿಸಿಕೊಂಡು ಅಂದಾಜು ಮೊತ್ತು ₹ 250 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಹಂತ ಹಂತವಾಗಿ ಅನುಷ್ಠಾನಗೊಳಿಸಲು ಪ್ರಸಕ್ತ ವರ್ಷದಲ್ಲಿ ₹400 ಕೋಟಿ ಕಾಯ್ದಿರಿಸಲಾಗಿದೆ.

ಮಹಾಯೋಜನೆ–2031ಕ್ಕೆ ತಕ್ಕಂತೆ ಹೊರಪರಿಧಿ ರಸ್ತೆ

ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನದಟ್ಟಣೆಗೆ ಅನುಗುಣವಾಗಿ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪ್ರಾಧಿಕಾರದಿಂದ ಈಗಾಗಲೇ ನಿರ್ಮಿಸಿರುವ ಹೊರವರ್ತುಲ ರಸ್ತೆಯ ಹೊರಭಾಗಕ್ಕೆ 5ರಿಂದ 8 ಕಿ.ಮೀ.ವರೆಗೆ ಪ್ರಾಧಿಕಾರದ ಬಡಾವಣೆ, ಖಾಸಗಿ ಬಡಾವಣೆಗಳು, ಕೈಗಾರಿಕಾ ವಸಾಹತುಗಳಿವೆ. ಜೊತೆಗೆ ವಿಮಾನನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆಯೂ ಇದೆ. ಮಹಾಯೋಜನೆ–2031ರಲ್ಲಿ ಮೈಸೂರು–ಚೆನ್ನೈ ಬುಲೆಟ್ ಟ್ರೇನ್‌ ಹಾಗೂ ಮೈಸೂರು–ಮಂಗಳೂರು ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆ ಒಳಗೊಳ್ಳಲಾಗಿದೆ. ಆದ್ದರಿಂದ ನಗರದ ಬೆಳವಣಿಗೆ ವೇಗ ಪಡೆಯಲಿದ್ದು, ಸಂಚಾರ ದಟ್ಟಣೆಯೂ ಹೆಚ್ಚಾಗಲಿದೆ. ಆದ್ದರಿಂದ 73.25 ಕಿ.ಮೀ. ಪೆರಿಫೆರಲ್‌ ರಿಂಗ್‌ ರಸ್ತೆ (ಹೊರಪರಿಧಿ ರಸ್ತೆ) ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. 45 ಮೀ. ಅಗಲದ ರಸ್ತೆ ಇದಾಗಿರಲಿದೆ.

ಈ ರಸ್ತೆಯ ಅಕ್ಕಪಕ್ಕದಲ್ಲಿ ಪಾರಂಪರಿಕ, ಕ್ರೀಡೆ, ಗಾರ್ಮೆಂಟ್ಸ್‌, ಐಟಿ–ಬಿಟಿ, ಶಿಕ್ಷಣ–ಆರೋಗ್ಯ, ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ ಕ್ಲಸ್ಟರ್‌ಗಳನ್ನು ಪ್ರಸ್ತಾಪಿಸಲಾಗಿದೆ. ಈ ವಾಣಿಜ್ಯ ಕ್ಲಸ್ಟರ್‌ಗಳಿಂದ ಕೈಗಾರಿಕೆ ಅಭಿವೃದ್ಧಿ ಹೊಂದಲಿದ್ದು, ಸಮಗ್ರ ಬೆಳವಣಿಗೆಗೆ ಅನುಕೂಲವಾಗಲಿದೆ. ಈ ರಸ್ತೆಯು ಅರಣ್ಯ ಪ್ರದೇಶದಿಂದ ಮುಕ್ತವಾಗಿರಲಿದೆ. ನಿರ್ಮಾಣ ಸಂಬಂಧ ಡಿಪಿಆರ್‌ ತಯಾರಿಕೆಗೆ ₹ 10 ಕೋಟಿ ಅಂದಾಜಿಸಲಾಗಿದೆ.

ಗ್ರೇಡ್‌ ಸಪರೇಟರ್‌ಗಳ ನಿರ್ಮಾಣ

ನಗರದ ಹಾಲಿ ಇರುವ ವರ್ತುಲ ರಸ್ತೆಯಲ್ಲಿ ಮುಖ್ಯ ಜಂಕ್ಷನ್‌ಗಳಾದ ವಿಜಯನಗರ 4ನೇ ಹಂತ (ಬಸವನಹಳ್ಳಿ), ಬೋಗಾದಿ ರಸ್ತೆ ಹಾಗೂ ಜೆ.ಪಿ.ನಗರ ಕುಪ್ಪಲೂರು ರಸ್ತೆ ಜಂಕ್ಷನ್‌ಗಳಲ್ಲಿ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಆದರೆ, ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಕೆಳಸೇತುವೆ (ಅಂಡರ್‌ಪಾಸ್) ಅಥವಾ ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣ ಮಾಡಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಡಿಪಿಆರ್‌ ಸಿದ್ಧತೆಗಾಗಿ ಸಮಾಲೋಚಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಾಲಿನಲ್ಲಿ ₹40 ಕೋಟಿ ಮೊತ್ತ ಕಾಯ್ದಿರಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT