ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳದಲಿŃ ಜಳಕದ ಪುಳಕ

ತ್ರಿವೇಣಿ ಸಂಗಮ; ನೀರಿನ ಹರಿವು ಕಡಿಮೆ ಇದ್ದರೂ ಕುಂದದ ಭಕ್ತರ ಉತ್ಸಾಹ
Last Updated 22 ಫೆಬ್ರುವರಿ 2016, 11:07 IST
ಅಕ್ಷರ ಗಾತ್ರ

ಮೈಸೂರು: ಒಂದೆಡೆ ಮೊಳಗುತ್ತಿದ್ದ ವೇದ, ಮಂತ್ರಘೋಷಗಳು. ಮತ್ತೊಂದು ಕಡೆ ಹೋಮ– ಹವನದ ಕಂಪು. ತ್ರಿವೇಣಿ ಸಂಗಮದಲ್ಲಿ ಮುಳುಗೇಳುತ್ತಿದ್ದ ಭಕ್ತರು. ಇನ್ನೊಂದು ಕಡೆ ಸಾಂಸ್ಕೃತಿಕ ಕಾರ್ಯಕ್ರಮ ಆಸ್ವಾದಿಸುತ್ತಿದ್ದ ಸಹೃದಯಿಗಳು...
ಕಪಿಲೆ, ಕಾವೇರಿ, ಸ್ಫಟಿಕ ಸರೋವರಗಳು ಕೂಡುವ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಕಡಿಮೆ ಇದ್ದರೂ ಉತ್ಸಾಹ ಕುಂದದೆ ಭಕ್ತರು ದಡದ ಮೇಲೆ ಸಾಗಿ ಬರುತ್ತಿದ್ದರು...

ಇದು ತಿ. ನರಸೀಪುರದ ತಿರುಮಕೂಡಲಿನಲ್ಲಿ ನಡೆಯುತ್ತಿರುವ 10ನೇ ಮಹಾ ಕುಂಭಮೇಳದಲ್ಲಿ ಭಾನುವಾರ ಕಂಡು ಬಂದ ಚಿತ್ರಣ.

ಸೂರ್ಯನ ಕಿರಣಗಳು ಪ್ರಖರವಾಗುತ್ತಿದ್ದಂತೆ ರಜಾದಿನ ಆಗಿರುವ ಕಾರಣ ಭಕ್ತರ ಸಂಖ್ಯೆಯೂ ಅಧಿಕವಾಗತೊಡಗಿತು. ಭಕ್ತರು ಖಾಸಗಿ ವಾಹನಗಳಲ್ಲಿ, ಬಸ್‌ಗಳಲ್ಲಿ ಮತ್ತೆ ಕೆಲವರು ಕಾಲ್ನಡಿಗೆಯಲ್ಲೇ ಕುಂಭಮೇಳ ನಡೆಯುವ ಸ್ಥಳಕ್ಕೆ ಬರತೊಡಗಿದರು.

ಬಳಿಕ ಕುಂಭಮೇಳ ಆಚರಣಾ ಸಮಿತಿಯವರು ಸೂಚಿಸಿರುವ ನದಿಯ ನಿಗದಿತ ಸ್ಥಳಗಳಲ್ಲಿ ಪುಣ್ಯಸ್ನಾನ ಮಾಡಿದರು. ಮಕ್ಕಳು ನೀರಿನಲ್ಲಿ ಈಜಾಡಿ ಸಂಭ್ರಮಿಸಿದರೆ ಹಿರಿಯರು ನದಿಯಲ್ಲಿ ಮುಳುಗೇಳಿ ಧಾರ್ಮಿಕ ಆಚರಣೆಯನ್ನು ಕೈಗೊಂಡರು.

ನದಿಯ ಮಧ್ಯೆ ಇರುವ ದ್ವೀಪ ಪ್ರದೇಶದಲ್ಲಿ ಹಾಕಿರುವ ಯಾಗಮಂದಿರದಲ್ಲಿ ತಮಿಳುನಾಡಿನ ತಿರುಚ್ಚಿ ಮಠದಿಂದ ಬಂದಿದ್ದ ಅರ್ಚಕರು ಸುದರ್ಶನಹೋಮ ನಡೆಸಿದರು.


ನದಿಯ ಮಧ್ಯೆ ಹಾಕಿರುವ ವೇದಿಕೆಯಲ್ಲಿ ಸಂಜೆ ನಡೆದ ಗಂಗಾಪೂಜೆ, ಗಂಗಾರತಿಯಲ್ಲಿ ವಾರಾಣಸಿಯಿಂದ ಬಂದಿದ್ದ 100 ಅರ್ಚಕರ ತಂಡ ಪಾಲ್ಗೊಂಡಿತ್ತು.
ವೃದ್ಧರಿಗೆ ನೆರವು: ನದಿಗೆ ಇಳಿಯಲು ನಿರ್ಮಿಸಿದ್ದ ಮೆಟ್ಟಿಲುಗಳನ್ನು ಇಳಿಯಲು, ಏರಲು ಕಷ್ಟಪಡುತ್ತಿದ್ದ ವೃದ್ಧರಿಗೆ ಕಲ್ಕಿ ಮಾನವ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸ್ವಯಂ ಸೇವಕರು ನೆರವಾದರು.

ಪುಣ್ಯಸ್ನಾನ ಮಾಡುವ ಸ್ಥಳಗಳಲ್ಲಿ ಗೃಹರಕ್ಷಕ ದಳ, ಪೊಲೀಸ್‌ ಸಿಬ್ಬಂದಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಕೂಡ ಭಕ್ತರಿಗೆ ಭದ್ರತೆ, ಸುರಕ್ಷತೆಗೆ ಕೈಗೊಳ್ಳಬೇಕಾದ ಮುನ್ಸೂಚನೆಗಳನ್ನು ನೀಡಿದರು.

ಭಕ್ತರ ಆರೋಗ್ಯದ ದೃಷ್ಟಿಯಿಂದ ಎರಡು ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಭದ್ರತೆಗಾಗಿ ಅಲ್ಲಲ್ಲಿ ಸಿಸಿ ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮುಜರಾಯಿ ತಹಶೀಲ್ದಾರ್‌ ಎಸ್‌.ಎನ್‌. ಯತಿರಾಜು ವಿವರಿಸಿದರು.

ತೆಪ್ಪಗಳ ಮೂಲಕ ಭಕ್ತರನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.

ಕುಂಭಮೇಳದ ಆವರಣದಲ್ಲಿ ಬಿದ್ದಿರುತ್ತಿದ್ದ ಕಸವನ್ನು ಹೆಕ್ಕುತ್ತಾ ಹಲವು ಸ್ವಯಂ ಸೇವಕರು ಸ್ವಚ್ಛತಾಕಾರ್ಯದಲ್ಲಿ ಪಾಲ್ಗೊಂಡಿದ್ದರು.


ದೇವರಿಗೆ ಅರ್ಪಿಸಲು ತುಳಸಿ, ಧೂಪಗಳನ್ನು ಹಲವು ವ್ಯಾಪಾರಿಗಳು ಮಾರಾಟ ಮಾಡಿದರು. ಬಿಸಿಲಿನ ಝಳದಿಂದ ಬಸವಳಿದವರು ತಂಪು ಪಾನೀಯಗಳು, ಹಣ್ಣಿನ ರಸ, ಐಸ್‌ಕ್ರೀಂಗಳ ಮೊರೆ ಹೋದರು.

ಸುಳಿಗಳತ್ತ ಭಕ್ತರು ತೆರಳದಂತೆ ಅಲ್ಲಲ್ಲಿ ತಡೆ ನಿರ್ಮಿಸಲಾಗಿದೆ. ಭಕ್ತರು ತೆಪ್ಪಗಳಲ್ಲಿ ತೆರಳುವಾಗ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದೇವೆ
ಎಸ್‌.ಎನ್‌. ಯತಿರಾಜು
ಮುಜರಾಯಿ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT