ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಹೈಟೆಕ್ ಸಂಚಾರಿ ಗ್ರಂಥಾಲಯ

Last Updated 26 ನವೆಂಬರ್ 2015, 9:14 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಕಳೆದ 4 ವರ್ಷಗಳಿಂದ ಚಲಿಸದೆ ಇದ್ದ ‘ಕುವೆಂಪು ಸಂಚಾರಿ ಗ್ರಂಥಾಲಯ’ ಶೀಘ್ರದಲ್ಲೇ ಹೈಟೆಕ್‌ ಆಗಿ ಸಂಚರಿಸಲಿದೆ. ಇದರಿಂದ ಜನರ ಬಳಿಗೇ ಗ್ರಂಥಾಲಯ ತೆರಳಲಿದೆ. ನಿಜ, ನಗರ ಕೇಂದ್ರ ಗ್ರಂಥಾಲಯದ ಮಹತ್ವದ ಯೋಜನೆಯಾದ ‘ಹೈಟೆಕ್ ಸಂಚಾರಿ ಗ್ರಂಥಾಲಯ’ಕ್ಕೆ ನೂತನ ಬಸ್ ಸಜ್ಜುಗೊಂಡಿದೆ.

ಟಾಟಾ ಕಂಪೆನಿಯಿಂದ ₹ 14.35 ಲಕ್ಷ ವೆಚ್ಚದಲ್ಲಿ ಛಾಸಿ ಖರೀದಿಸಿ, ₹ 14 ಲಕ್ಷ ವೆಚ್ಚದಲ್ಲಿ ಬಸ್ ಬಾಡಿ ಕಟ್ಟಿಸಲಾಗಿದೆ. ಇದರೊಳಗೆ ₹ 5–6 ಲಕ್ಷ ವೆಚ್ಚದ ಕನ್ನಡ ಪುಸ್ತಕಗಳನ್ನು ಖರೀದಿಸಿಡಲಾಗುತ್ತದೆ. ಈ ಬಸ್‌ನೊಳಗೆ ಏಳೆಂಟು ಸಾವಿರ ಪುಸ್ತಕಗಳು
ಲಭ್ಯ ಇರುತ್ತವೆ. ಕಥೆ, ಕಾದಂಬರಿ, ಮಕ್ಕಳ ಪುಸ್ತಕಗಳು, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ, ಅಧ್ಯಾತ್ಮ... ಹೀಗೆ ಎಲ್ಲ ಪ್ರಕಾರಗಳ ಪುಸ್ತಕಗಳು ಇಲ್ಲಿ ಸಿಗಲಿವೆ.

ಬಸ್‌ ವಿಶೇಷ: ಸಂಚಾರಿ ಬಸ್‌ನಲ್ಲಿ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟ್ಂ) ಅಳವಡಿಸುವುದರಿಂದ ನಗರ ಕೇಂದ್ರ ಗ್ರಂಥಾಲಯದ ಅಧೀನದಲ್ಲಿರುತ್ತದೆ. ಇದರಿಂದ ನಗರದ ಯಾವ ಸ್ಥಳದಲ್ಲಿ ಬಸ್‌ ನಿಂತಿದೆ ಎಂಬುದು ಗೊತ್ತಾಗಲಿದೆ. ಅಲ್ಲದೆ, ಗಣಕೀಕರಣಗೊಂಡಿರುವುದರಿಂದ ಪುಸ್ತಕ ಎರವಲು ಸೇವೆ ಪಡೆಯುವುದು ಸಾರ್ವಜನಿಕರಿಗೆ ಸುಲಭವಾಗಲಿದೆ. ಇದರ ಸದಸ್ಯತ್ವ ನೋಂದಣಿಯನ್ನು ‘ಬಾರ್ ಕೋಡಿಂಗ್‌ ಸಿಸ್ಟ್ಂ’ ಮೂಲಕ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಶಾಖೆಯಿಂದ ಪಿ.ವಿ.ಸಿ ಕಾರ್ಡ್‌ ಪಡೆಯಬಹುದು.

ಬಸ್‌ನಲ್ಲಿ ಡಿವಿಡಿ, ಆಡಿಯೊ ಸೌಲಭ್ಯ ಇರುತ್ತದೆ. ಇದರಿಂದ ಸರ್ಕಾರಿ ಯೋಜನೆಗಳ ಸಾಕ್ಷ್ಯಚಿತ್ರಗಳನ್ನು ನೋಡಬಹುದು. ಗ್ರಂಥಾಲಯಕ್ಕೆ ಸಂಬಂಧಿಸಿ ಮಾಹಿತಿಗಳನ್ನು ಕೇಳಬಹುದು ಮತ್ತು ನೋಡಬಹುದು. ಜತೆಗೆ, ಕುಡಿಯಲು ಬಿಸಿನೀರು ಹಾಗೂ ತಣ್ಣೀರು, ಫ್ಯಾನ್ ಸೌಲಭ್ಯ ಇದೆ. ಹೀಗೆ ಈ ಸೌಲಭ್ಯಗಳನ್ನು ಏಕಕಾಲಕ್ಕೆ 40–50 ಜನರು ಬಳಸಿಕೊಳ್ಳಬಹುದು.

ಈ ಸಂಚಾರಿ ಗ್ರಂಥಾಲಯದಿಂದ ಪುಸ್ತಕ ಪಡೆದ ಮೇಲೆ ಒಂದು ವಾರದವರೆಗೆ ಇಟ್ಟುಕೊಳ್ಳಬೇಕಾದುದು ಕಡ್ಡಾಯ. ಏಕೆಂದರೆ, ವಾರದ ನಂತರವೇ ಈ ಬಸ್‌ ನಿಗದಿತ ಸ್ಥಳಕ್ಕೆ ಬರಲಿದೆ. ಹೆಚ್ಚೆಂದರೆ 15 ದಿನಗಳವರೆಗೆ ಪುಸ್ತಕ ಇಟ್ಟುಕೊಳ್ಳಬಹುದು. ಆಮೇಲೆ ದಿನಕ್ಕೊಂದು ರೂಪಾಯಿಯಂತೆ ಗರಿಷ್ಠ 50 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.

ನಗರದ 65 ವಾರ್ಡುಗಳ ಪೈಕಿ 25 ವಾರ್ಡುಗಳಲ್ಲಿ 40 ಗ್ರಂಥಾಲಯಗಳಿವೆ. ಉಳಿದ 40 ವಾರ್ಡುಗಳಲ್ಲಿ ಗ್ರಂಥಾಲಯಗಳಿಲ್ಲ. ಈ ವಾರ್ಡುಗಳಿಗೆ ಸಂಬಂಧಿಸಿದ ಪಾಲಿಕೆ ಸದಸ್ಯರಿಗೆ ವಾಹನವನ್ನು ಎಲ್ಲಿ ನಿಲ್ಲಿಸಿದರೆ ಸೂಕ್ತ ಎಂದು ಈಗಾಗಲೇ ಗ್ರಂಥಾಲಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಇದಕ್ಕೆ 15 ಪಾಲಿಕೆ ಸದಸ್ಯರು ಉತ್ತರಿಸಿದ್ದಾರೆ.

ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಿಗದಿತ ಸ್ಥಳದಲ್ಲಿ ಅರ್ಧ ಗಂಟೆ ನಿಲ್ಲುವ ಬಸ್‌ ನಂತರ ಬೇರೆ ಸ್ಥಳಕ್ಕೆ ತೆರಳಲಿದೆ. ಒಂದೊಂದು ವಾರ್ಡಲ್ಲಿ ಒಂದು ವಾರ ನಿಗದಿಗೊಳಿಸಲಾಗಿದೆ. ದಿನಕ್ಕೆ 8 ಕಡೆ ನಿಲ್ಲಲಿದೆ.

ಸದಸ್ಯತ್ವ ಪಡೆದುಕೊಳ್ಳಲು ಮನವಿ:  ನಗರ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಶಾಖಾ/ ಸೇವಾ ಕೇಂದ್ರ ಗ್ರಂಥಾಲಯಗಳ ವಾರ್ಡ್‌ ಹೊರತು ಪಡಿಸಿ, ಉಳಿದ ವಾರ್ಡ್‌ಗಳಲ್ಲಿ ಸಂಚಾರಿ ಗ್ರಂಥಾಲಯ ಸಂಚರಿಸಲಿದೆ.

ಅವುಗಳೆಂದರೆ; 01, 02, 05, 06, 09, 13, 14, 17, 18, 19, 22, 23, 24, 25, 29, 30, 31, 33, 34, 36, 37, 38, 40, 41, 42, 43, 44, 45, 46, 48, 49, 51, 53, 54, 55, 57, 58, 61, 64ನೇ ವಾರ್ಡ್.

ಕುವೆಂಪು ಚಾಲನೆ ನೀಡಿದ್ದರು...
ಬೆಂಗಳೂರಿನಿಂದ 1979ರಲ್ಲಿ ಹಳೆಯ ವಾಹನವೊಂದು ಸಂಚಾರಿ ಗ್ರಂಥಾಲಯವಾಗಿ ನಗರದಲ್ಲಿ ಸಂಚರಿಸಿತ್ತು. ಅದು 1983ರವರೆಗೆ ಓಡಾಡಿತ್ತು. 1984ರಲ್ಲಿ ಕುವೆಂಪು ಅವರು ಮತ್ತೊಂದು ವಾಹನಕ್ಕೆ ಚಾಲನೆ ನೀಡಿದ ಪರಿಣಾಮ ‘ಕುವೆಂಪು ಸಂಚಾರಿ ಗ್ರಂಥಾಲಯ’ ಎಂಬ ಫಲಕ ಹೊತ್ತ ವಾಹನ 2011ರವರೆಗೆ ಸಂಚರಿಸಿತು. ಆಮೇಲೆ ಪಾಲಿಕೆಯು ವಾಹನ ಖರೀದಿಗೆ ₹ 25 ಲಕ್ಷ ನೀಡುವ ಭರವಸೆ ನೀಡಿತು. ಆದರೆ, ಈಡೇರಲಿಲ್ಲ. ನಂತರ ಗ್ರಂಥಾಲಯ ಕರದ ಮೊತ್ತದಲ್ಲೇ ಬಸ್‌ ಖರೀದಿಸಲು ಅನುಮತಿ ನೀಡಿದ ಪರಿಣಾಮ ನೂತನ ಸಂಚಾರಿ ಗ್ರಂಥಾಲಯ ಬಸ್‌ ಸಜ್ಜುಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT