ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಮೀಸಲಾತಿ ರದ್ದು ಮಾಡುವುದಿಲ್ಲ; ಕಾಂಗ್ರೆಸ್ ಅನ್ನು ಬಿಡೆವು: ಅಮಿತ್ ಶಾ

Published 1 ಮೇ 2024, 10:23 IST
Last Updated 1 ಮೇ 2024, 10:23 IST
ಅಕ್ಷರ ಗಾತ್ರ

ಕೊರ್ಬಾ: 'ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡುವ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ. ಅದನ್ನು ರದ್ದುಗೊಳಿಸಲು ಕಾಂಗ್ರೆಸ್‌ ಅನ್ನು ಬಿಡಲಾರೆವು. ಇದುವೇ ಮೋದಿ ಗ್ಯಾರಂಟಿ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಛತ್ತೀಸ್‌ಗಢದ ಕೊರ್ಬಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರೋಜ್ ಪಾಂಡೆ ಪರ ಪ್ರಚಾರ ನಡೆಸಿದ ಅವರು, 'ಚುನಾವಣೆಯಲ್ಲಿ ಗೆಲ್ಲಲು ಭಯೋತ್ಪಾದನೆ ಹಾಗೂ ನಕ್ಸಲ್‌ವಾದವನ್ನು ಕಾಂಗ್ರೆಸ್ ಪೋಷಿಸುತ್ತಿದೆ' ಎಂದು ಆರೋಪಿಸಿದ್ದಾರೆ.

'ಸಾರ್ವಜನಿಕವಾಗಿ ಜೋರಾಗಿ ಸುಳ್ಳು ಹೇಳುವುದು ಮತ್ತು ಅದನ್ನೇ ಪುನರಾವರ್ತಿಸುವುದು ಕಾಂಗ್ರೆಸ್ ತಂತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಗೊಳಿಸುತ್ತಾರೆ ಎಂದು ಅವರು ಆರೋಪಿಸುತ್ತಿದ್ದಾರೆ. ಈ ಕುರಿತು ನಕಲಿ ವಿಡಿಯೊವನ್ನು ಹಂಚಿದ್ದಾರೆ. ಕಳೆದ 10 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಮೀಸಲಾತಿಯನ್ನು ತೆಗೆದು ಹಾಕಲಿಲ್ಲ. ಹಾಗೇ ಮಾಡುವುದೂ ಇಲ್ಲ' ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಮೋದಿ ಅಧಿಕಾರದ ಅವಧಿಯಲ್ಲಿ 370ನೇ ವಿಧಿ ಹಾಗೂ ತ್ರಿವಳಿ ತಲಾಖ್ ರದ್ದುಗೊಳಿಸಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. 'ಗಾಂಧಿ ಕುಟುಂಬಕ್ಕಾಗಿ ನೀವು ಏಕೆ ಸುಳ್ಳು ಹೇಳುತ್ತೀರಿ? ಜೂನ್ 4ರಂದು ಕಾಂಗ್ರೆಸ್ ಸೋಲಿನ ಬಳಿಕ ಎಲ್ಲ ಆರೋಪಗಳನ್ನು ನಿಮ್ಮ ಮೇಲೆ ಹೊರಿಸಲಾಗುವುದು. ಸಹೋದರ-ಸಹೋದರಿ (ರಾಹುಲ್ ಹಾಗೂ ಪ್ರಿಯಾಂಕಾ ಅವರನ್ನು ಉದ್ದೇಶಿಸಿ) ಸುರಕ್ಷಿತವಾಗಿರುತ್ತಾರೆ' ಎಂದು ಅವರು ಟೀಕಿಸಿದ್ದಾರೆ.

ನಕ್ಸಲ್ ನಿರ್ಮೂಲನೆ...

ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ, ಛತ್ತೀಸ್‌ಗಢದಲ್ಲಿ ಎರಡು ವರ್ಷದೊಳಗೆ ನಕ್ಸಲ್ ಚುಟುವಟಿಕೆಗಳನ್ನು ಬೇರು ಸಮೇತ ನಿರ್ಮೂಲನೆ ಮಾಡಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಮಾಜಿ ಸಿಎಂ ಭೂಪೇಶ್ ಬಘೇಲ್ ಅವಧಿಯಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಯಿತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿಎಂ ವಿಷ್ಣು ದೇವ್ ಸಾಯಿ ನೇತೃತ್ವದಲ್ಲಿ ನಾಲ್ಕು ತಿಂಗಳಲ್ಲೇ 95 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT