ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಹರಿದು ಬಿಸಾಡಲಿದೆ: ರಾಹುಲ್ ಗಾಂಧಿ

Published 30 ಏಪ್ರಿಲ್ 2024, 10:05 IST
Last Updated 30 ಏಪ್ರಿಲ್ 2024, 10:05 IST
ಅಕ್ಷರ ಗಾತ್ರ

ಭಿಂಡ್: 'ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಬಡವರು, ದಲಿತರು, ಎಸ್‌ಟಿಗಳು ಮತ್ತು ಒಬಿಸಿಗಳಿಗೆ ಹಕ್ಕುಗಳನ್ನು ಒದಗಿಸಿರುವ ಸಂವಿಧಾನವನ್ನು ಹರಿದು ಬಿಸಾಡಲಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಮಾತನಾಡಿದ ಅವರು, 'ಈ ಬಾರಿಯ ಲೋಕಸಭೆ ಚುನಾವಣೆ ಸಾಮಾನ್ಯ ಚುನಾವಣೆಯಲ್ಲ. ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ' ಎಂದು ಹೇಳಿದ್ದಾರೆ.

'ಸಂವಿಧಾನದಿಂದಾಗಿ ಬಡವರು, ಎಸ್‌ಟಿಗಳು, ಒಬಿಸಿಗಳಿಗೆ ಹಲವು ಹಕ್ಕುಗಳು ದೊರೆತಿವೆ. ದೇಶದ ಜನರಿಗೆ ನರೇಗಾ, ಭೂಹಕ್ಕು, ಮೀಸಲಾತಿ ಸೇರಿದಂತೆ ಅನೇಕ ಹಕ್ಕುಗಳನ್ನು ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಕಿತ್ತು ಹಾಕಲಿದೆ' ಎಂದು ಅವರು ಆರೋಪಿಸಿದ್ದಾರೆ.

'ಮತ್ತೆ ಗೆದ್ದರೆ ಸಂವಿಧಾನದ ಪುಸ್ತಕವನ್ನು ಹರಿದು ಬಿಸಾಡಲು ಪ್ರಧಾನಿ, ಅಮಿತ್ ಶಾ ಮತ್ತು ಅವರ ಸಂಸದರು ನಿರ್ಧರಿಸಿದ್ದಾರೆ. ಸರ್ಕಾರವನ್ನು 20-25 ಬಿಲಿಯನೇರ್‌ಗಳು ನಡೆಸಬೇಕೆಂದು ಬಿಜೆಪಿಯು ಬಯಸುತ್ತದೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

'ಬಿಜೆಪಿ ಮೀಸಲಾತಿ ವಿರುದ್ಧವಾಗಿದೆ. ರೈಲ್ವೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು (ಪಿಎಸ್‌ಯು) ಖಾಸಗೀಕರಣಗೊಳಿಸಿದೆ' ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 'ಮಹಾಲಕ್ಷ್ಮೀ ಯೋಜನೆ'ಯ ಮೂಲಕ ಮಹಿಳೆಯರನ್ನು 'ಲಕ್‌ಪತಿ'ಯಾಗಿ (ಲಕ್ಷಾಧಿಪತಿ) ಮಾಡಲಿದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು. ಈ ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗೆ ₹1 ಲಕ್ಷ ಜಮೆ (ತಿಂಗಳಿಗೆ ₹8,500) ಮಾಡುವುದಾಗಿ ಅವರು ತಿಳಿಸಿದ್ದಾರೆ.

20-25 ಉದ್ಯಮಿಗಳನ್ನು ಪ್ರಧಾನಿ ಮೋದಿ ಕೋಟ್ಯಾಧಿಪತಿಗಳನ್ನಾಗಿ ಮಾಡಿದರೆ ಕಾಂಗ್ರೆಸ್ ಕೋಟಿಗಟ್ಟಲೆ ಮಹಿಳೆಯರನ್ನು 'ಲಕ್‌ಪತಿ'ಯನ್ನಾಗಿ ಮಾಡಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT