ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹಿಂದೆ ಮೀಸಲಾತಿ ವಿರೋಧಿಸಿದ್ದ ಆರ್‌ಎಸ್‌ಎಸ್‌: ರಾಹುಲ್ ಗಾಂಧಿ

ದಾಮನ್‌ನಲ್ಲಿ ರ್‍ಯಾಲಿ * ಬಿಜೆಪಿ ತಮ್ಮ ನಾಯಕರನ್ನು ರಾಜರನ್ನಾಗಿ ಮಾಡಲು ಹೊರಟಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ
Published 28 ಏಪ್ರಿಲ್ 2024, 15:33 IST
Last Updated 28 ಏಪ್ರಿಲ್ 2024, 18:29 IST
ಅಕ್ಷರ ಗಾತ್ರ

ನವದೆಹಲಿ: ಆರ್‌ಎಸ್‌ಎಸ್‌ ಸದಾ ಮೀಸಲಾತಿಯನ್ನು ಬೆಂಬಲಿಸಿತ್ತು ಎನ್ನುವ ಮೋಹನ್ ಭಾಗವತ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಘದ ಮುಖ್ಯಸ್ಥರು ಈ ಹಿಂದೆ ಮೀಸಲಾತಿಯನ್ನು ವಿರೋಧಿಸಿದ್ದರು ಎಂದು ಭಾನುವಾರ ಹೇಳಿದರು.

ಕೇಂದ್ರಾಡಳಿತ ಪ್ರದೇಶವಾದ ದಾಮನ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಮೀಸಲಾತಿಯನ್ನು ವಿರೋಧಿಸಿದ್ದವರು ಅವರ ಪಕ್ಷವನ್ನು ಸೇರುತ್ತಿದ್ದು, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಆದರೆ, ಅವರು ಈಗ ನಾವು ಮೀಸಲಾತಿ ವಿರೋಧಿಗಳಲ್ಲ ಎನ್ನುತ್ತಿದ್ದಾರೆ’ ಎಂದು ಟೀಕಿಸಿದರು.

‘ತಮ್ಮ ನಾಯಕರನ್ನು ದೇಶದ ‘ರಾಜ’ರನ್ನಾಗಿ ಮಾಡಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನ ಮತ್ತು ವಿವಿಧ ಸಂಸ್ಥೆಗಳನ್ನು ನಾಶ ಮಾಡಲು ಹೊರಟಿವೆ’ ಎಂದು ಆರೋಪಿಸಿದರು.

‘ಆರ್‌ಎಸ್‌ಎಸ್ ಮತ್ತು ಬಿಜೆಪಿಯು ಸಂವಿಧಾನ ಮತ್ತು ವಿವಿಧ ಸಂಸ್ಥೆಗಳನ್ನು ರದ್ದುಪಡಿಸಿ ತಮ್ಮ ನಾಯಕರನ್ನು ದೇಶದ ರಾಜರನ್ನಾಗಿ ಮಾಡಲು ಮತ್ತು 20 ರಿಂದ 22 ಮಂದಿ ಶತಕೋಟ್ಯಧಿಪತಿಗಳಿಗೆ ನೆರವಾಗಲು ಪ್ರಯತ್ನಿಸುತ್ತಿವೆ’ ಎಂದು ಹೇಳಿದರು.

‘ಮೂಲಭೂತವಾಗಿ, ಇಬ್ಬರ ನಡುವಿನ ವ್ಯತ್ಯಾಸವೇನೆಂದರೆ, ನಾವು ಸಂವಿಧಾನವನ್ನು ಮತ್ತು ಅದು ದೇಶಕ್ಕೆ ಕೊಟ್ಟ ಎಲ್ಲವನ್ನೂ ಸಂರಕ್ಷಿಸುತ್ತಿದ್ದೇವೆ. ಇನ್ನೊಂದು ಕಡೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗುರಿ ಸಂವಿಧಾನವನ್ನು ಹೇಗಾದರೂ ನಾಶ ಮಾಡುವುದಾಗಿದೆ’ ಎಂದು ಪ್ರತಿಪಾದಿಸಿದರು.

‘ಕೇಂದ್ರಾಡಳಿತ ಪ್ರದೇಶವಾದ ದಾಮನ್, ದಿಯು, ದಾದ್ರಾ ಮತ್ತು ನಗರ ಹವೇಲಿಯ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಮೋದಿ ಪ್ರತಿಷ್ಠಾಪಿಸಿರುವ ರಾಜ’ ಎಂದ ರಾಹುಲ್, ‘ಜನರಿಗೆ ತೊಂದರೆ ಕೊಡಲು, ಅವರ ಮನೆ ಧ್ವಂಸ ಮಾಡಲು ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅವರು ಇಲ್ಲಿ ಏನು ಮಾಡುತ್ತಿದ್ದಾರೋ, ದೆಹಲಿಯಲ್ಲಿ ಮೋದಿ ಅದನ್ನೇ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.           

ದಿಯು ಮತ್ತು ದಾಮನ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಲಾಲುಭಾಯ್ ಪಟೇಲ್ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೇತನ್ ಪಟೇಲ್ ಸ್ಪರ್ಧಿಸಿದ್ದಾರೆ.

‘ಮೋದಿ ಮತ್ತು ಆರ್‌ಎಸ್‌ಎಸ್‌ ದೇಶವನ್ನು ಹಿಂದಿನ ರಾಜರಂತೆ ಆಳಲು ಹೊರಟಿದ್ದು ಅವರಿಗೆ ‘ಒಂದು ದೇಶ ಒಂದು ಭಾಷೆ ಮತ್ತು ಒಬ್ಬ ನಾಯಕ ಬೇಕು’
-ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT