ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ‘ಕೋಟೆ’ಗಳ ಆಶ್ರಯದಲ್ಲಿ ಪಕ್ಷಗಳು

Last Updated 4 ಮೇ 2014, 19:30 IST
ಅಕ್ಷರ ಗಾತ್ರ

ಕರ್ನೂಲು (ಆಂಧ್ರಪ್ರದೇಶ): ರಾಯಲ­ಸೀಮದ ಪ್ರಮುಖ ನಗರ ಕರ್ನೂಲು. ಆಂಧ್ರದ ಏಕೀಕರಣಪೂರ್ವ ರಾಜಧಾನಿ. ಈ ಜಿಲ್ಲೆಯ ರಾಜಕಾರಣ, ಪ್ರಧಾನ­ವಾಗಿ ನಾಲ್ಕೈದು ಕುಟುಂಬಗಳ ‘ಕೋಟೆ’­ಗಳನ್ನು ಅವಲಂಬಿಸಿದೆ. ಪಕ್ಷ­ಗಳು ಈ ಕೋಟೆಗಳಿಗೆ ಹಬ್ಬಿದ ಬಳ್ಳಿಗಳು.

ಜಿಲ್ಲೆಯಲ್ಲಿ 14 ವಿಧಾನಸಭಾ ಕ್ಷೇತ್ರ­ಗಳಿವೆ. 2009ರ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿ ಮೇಲುಗೈ ಸಾಧಿಸಿದ್ದ ಕಾಂಗ್ರೆಸ್‌ ಸ್ಥಿತಿ ಈಗ ಸುಂಟರಗಾಳಿಗೆ ಸಿಲುಕಿದ ತರಗೆಲೆಯಂತಾಗಿದೆ. ಕಾಂಗ್ರೆಸ್‌ ಕೈಜಾರ­ಲಿರುವ ಮತಗಳು ಯಾರ ಕೈಹಿಡಿಯ­ಲಿವೆ ಎಂದು ಕಾಂಗ್ರೆಸ್ಸೇತರ ಪಕ್ಷಗಳ ಮುಖಂಡರು ಲೆಕ್ಕಾಚಾರದಲ್ಲಿ ಮುಳು­ಗಿ­ದ್ದರೆ, ವಿವಿಧ ಪಕ್ಷಗಳು ಸುರಿದಿರುವ ಭರವಸೆಗಳಿಂದ ಜನ ತಬ್ಬಿಬ್ಬು ಆಗಿ­ದ್ದಾರೆ. ಜನರೇ ಜೀರ್ಣಿಸಿಕೊಳ್ಳಲಾಗ­ದಷ್ಟು ಭರವಸೆಗಳನ್ನು ಪಕ್ಷಗಳು ನೀಡಿವೆ. ‘ಜಾರಿ ಸಾಧ್ಯವೇ’ ಎಂದು ಕೆಲವರು ಪ್ರಶ್ನಿಸುತ್ತಾರೆ. ಅದರಲ್ಲಿ ಬೆಳೆ ಸಾಲ ಮನ್ನಾ ಕೂಡ ಒಂದು.

ಕಡಲೆಕಾಯಿ (ಶೇಂಗಾ) ಈ ಭಾಗದ ಪ್ರಮುಖ ಬೆಳೆ. ಅತಿಹೆಚ್ಚು ಬೆಳೆಯುವ ಜಿಲ್ಲೆಯೂ ಹೌದು. ಆದರೆ ದಾಸ್ತಾನಿಗೆ ಗೋದಾಮುಗಳ ವ್ಯವಸ್ಥೆ ಇಲ್ಲ. ಪ್ರಭಾವಿ ಮುಖಂಡರು ಇದ್ದರೂ ರೈತರ ಕಷ್ಟ ಯಾರೊಬ್ಬರ ಕಣ್ಣಿಗೂ ಬಿದ್ದಿಲ್ಲ ಎಂದು ನಲ್ಲಗಟ್ಟದ ರೈತ ಸುಬ್ಬಾರೆಡ್ಡಿ ದೂರಿ­ದರು. ಸಾಲ ಮನ್ನಾಕ್ಕಿಂತ ಸೌಕರ್ಯ ಬೇಕು ಎಂಬ ಸಂದೇಶ ಅವರ ಮಾತಿನಲ್ಲಿತ್ತು.

ಕರ್ನೂಲು ಕಡೆಯಿಂದ ಕಡಪಕ್ಕೆ ಹೋಗುವ ನಾಲ್ಕು ಪಥದ ರಸ್ತೆ ಕಾಮಗಾರಿ ಸ್ಥಗಿತಗೊಂಡು ವರ್ಷವಾಗಿ­ದೆಯಂತೆ. ಈ ರಸ್ತೆಯಲ್ಲಿ ಸಂಚರಿಸು­ವುದು ಯಮಯಾತನೆಯ ಅನುಭವ. ಕಾಮಗಾರಿ ತ್ವರಿತವಾಗಿ ಪೂರ್ಣ­ಗೊಳಿಸಲು ಯಾರೂ ಶ್ರಮಿಸಿಲ್ಲ ಎಂದು ವಾಹನ ಸವಾರರು ಸಿಟ್ಟಾಗುತ್ತಾರೆ.

ಜಿಲ್ಲೆಯ ರಾಜಕಾರಣವನ್ನು ನಿಯಂತ್ರಿ­­­ಸುತ್ತಿರುವ ಕುಟುಂಬಗಳಲ್ಲಿ ಕೋಟ್ಲ ವಿಜಯಭಾಸ್ಕರ ರೆಡ್ಡಿ ಕುಟುಂಬ ಪ್ರಮುಖವಾದುದು. ಈ ಹಿರಿಯರು ಈಗ ಇಲ್ಲ. ಇವರ ಪುತ್ರ ಜಯ­ಸೂರ್ಯಪ್ರಕಾಶ್‌ ರೆಡ್ಡಿ ಕರ್ನೂಲು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ­ದ್ದಾರೆ. ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ. ಆದರೂ ಕಾಮಗಾರಿಗಳು ಹೀಗೆ ದೇಕುತ್ತಿವೆ. 
ಆಡಳಿತಾರೂಢ ಪಕ್ಷದ ಪ್ರತಿನಿಧಿ­ಗ­ಳಾಗಿ ಸವಲತ್ತು ಅನುಭವಿಸಿದ ಕಾಂಗ್ರೆಸ್ ನಾಯಕರು, ಚುನಾವಣೆಯ ಗಂಟೆ ಮೊಳಗಿದ ಕೂಡಲೇ ಗಾಳಿಯ ದಿಕ್ಕು ನೋಡಿಕೊಂಡು ಅನ್ಯಪಕ್ಷಗಳತ್ತ ಸಾಮೂ­ಹಿಕವಾಗಿ ವಲಸೆ ಹೋಗಿ­ದ್ದಾರೆ.

ಇಂತಹ ಕಷ್ಟ ಕಾಲದಲ್ಲಿ ಕಾಂಗ್ರೆಸ್‌ಗೆ ಬೆಂಬಲ­ವಾಗಿ ನಿಂತಿದೆ ಕೋಟ್ಲ ಕುಟುಂಬ. ಸೂರ್ಯಪ್ರಕಾಶ್‌ ರೆಡ್ಡಿ ನಿಷ್ಠೆ ಬದಲಿಸದೆ, ಕರ್ನೂಲು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ಸಿ­ನಿಂದಲೇ ಪುನರಾಯ್ಕೆ ಬಯಸಿ­ದ್ದಾರೆ. ಆಲೂರು ವಿಧಾನಸಭಾ ಕ್ಷೇತ್ರದಿಂದ ಇವರ ಪತ್ನಿ ಕೋಟ್ಲ ಸುಜಾತಮ್ಮ ಅವರೂ ಕಾಂಗ್ರೆಸ್ಸಿ­ನಿಂದಲೇ ಕಣಕ್ಕೆ ಇಳಿ­ದಿ­ದ್ದಾರೆ. ಆದರೆ ಸೂರ್ಯ­ಪ್ರಕಾಶ್‌ ರೆಡ್ಡಿ ಅವರ ಚಿಕ್ಕಪ್ಪ­ನ ಮಗ ಕೋಟ್ಲ ಹರಿಚಕ್ರ­ಪಾಣಿ ರೆಡ್ಡಿ ಅವರು ಪತ್ತಿಕೊಂಡ ವಿಧಾನಸಭಾ ಕ್ಷೇತ್ರದಿಂದ ವೈಎಸ್‌ಆರ್‌ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದಾರೆ.

ಬದಲಾದ ಪರಿಸ್ಥಿತಿಯಲ್ಲಿ ಜನರ ಮನವೊಲಿಸುವುದು ಸೂರ್ಯಪ್ರಕಾಶ್‌ ಅವರಿಗೆ ಕಠಿಣ ಸವಾಲಾಗಿದೆ.  ಟಿಡಿಪಿ ಬಿ.ಟಿ. ನಾಯ್ಡು ಅವರನ್ನು, ವೈಎಸ್‌ಆರ್‌ ಕಾಂಗ್ರೆಸ್‌ ಬುಟ್ಟಾ ರೇಣುಕಾ ಅವ­ರನ್ನು ಕಣಕ್ಕೆ ಇಳಿ­ಸಿವೆ. ಅಮೆರಿ­ಕದಲ್ಲಿ ಎಂ.ಎಸ್‌. ಪೂರೈಸಿ­ರುವ ವಿಸ್ಸಾ ಕಿರಣ್‌­ಕುಮಾರ್‌ ಆಮ್ ಆದ್ಮಿ ಅಭ್ಯರ್ಥಿ.

ಅಭ್ಯರ್ಥಿಯೇ ಬದುಕಿಲ್ಲ: ಆಳ್ಳಗಡ್ಡ­ವನ್ನು ಕೇಂದ್ರವಾಗಿಸಿ­ಕೊಂಡು ಜಿಲ್ಲೆಯ ರಾಜಕಾರಣವನ್ನು ನಿಯಂತ್ರಿಸುತ್ತಿರುವ ಇನ್ನೊಂದು ಪ್ರಮುಖ ಕುಟುಂಬ ಭೂಮಾ ನಾಗಿರೆಡ್ಡಿ ಅವರದು. ಈ ಕುಟುಂಬದ ಶೋಭಾ ನಾಗಿರೆಡ್ಡಿ ಅವರು ವೈಎಸ್‌ಆರ್ ಕಾಂಗ್ರೆಸ್ಸಿನಿಂದ ಆಳ್ಳಗಡ್ಡ ವಿಧಾನಸಭಾ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದರು. ಇವರು ಏ. 23ರಂದು ಪ್ರಚಾರ ಮುಗಿಸಿ, ರಾತ್ರಿ ಮನೆಗೆ ಬರುತ್ತಿದ್ದಾಗ ವಾಹನ ಅಪ­ಘಾತ­­ದಲ್ಲಿ ದುರ್ಮರಣ ಹೊಂದಿದರು.

ವೈಎಸ್‌ಆರ್‌ ಕಾಂಗ್ರೆಸ್‌ಗೆ ಚುನಾ­ವಣಾ ಆಯೋಗದಿಂದ ಇನ್ನೂ ಮಾನ್ಯತೆ ದೊರೆತಿಲ್ಲ. ಆದಕಾರಣ ಚುನಾವಣೆ ಮುಂದೂಡಲು ಬರುವು­ದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಹೀಗಾಗಿ ಉಮೇದುವಾರರ ಯಾದಿ­ಯಲ್ಲಿ ಇವರ ಹೆಸರೂ ಇದೆ. ಹೆಚ್ಚು ಮತ ಪಡೆ­ದರೆ ಗೆಲುವು ಇವರ ಹೆಸರಿಗೇ ದಾಖಲು ಆಗಲಿದೆ. ಆ ಬಳಿಕ ಉಪ­ಚುನಾವಣೆ ಜರುಗಲಿದೆ. ಈ ಕ್ಷೇತ್ರದಿಂದ ಇವರು ಸತತ ನಾಲ್ಕು ಸಲ ಗೆಲುವು ಕಂಡಿದ್ದರು. ಈ ಬಾರಿ ಅನುಕಂಪದ ಅಲೆ ಸೇರಿದೆ. ‘ಶೋಭಾ ಅವರಿಗೆ ಮತ ನೀಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸು­ತ್ತೇವೆ’ ಎಂದು ಆಳ್ಳಗಡ್ಡದ ನರಸಿಂಹುಲು ಅಭಿಮಾನದಿಂದ ಹೇಳಿದರು.

ಜಿಲ್ಲೆಯ ಹಲವೆಡೆ ಆಧಿಪತ್ಯಕ್ಕಾಗಿ ನಡೆಸಿದ ‘ಫ್ಯಾಕ್ಷನ್‌’ ಹೊಡೆದಾಟಗಳ ಸದ್ದು ಅಡಗಿದ್ದರೂ ನೆತ್ತರು ಕಲೆ ಪೂರ್ತಿ ಮಾಸಿಲ್ಲ. ಇದರ ಪ್ರಭಾವ ನಾಲ್ಕೈದು ಕ್ಷೇತ್ರಗಳ ಮೇಲೆ ಇದ್ದೇ ಇರುತ್ತದೆ. ಇಂತಹ  ಕ್ಷೇತ್ರಗಳಲ್ಲಿ ಆಳ್ಳಗಡ್ಡ ಒಂದು. ಇಲ್ಲಿ ತೆಲುಗುದೇಶಂ ಪಕ್ಷದಿಂದ ಗಂಗುಲ ಪ್ರಭಾಕರ ರೆಡ್ಡಿ ಸ್ಪರ್ಧಿಸಿದ್ದಾರೆ. ಇವರ ಕುಟುಂಬಕ್ಕೂ ಭೂಮಾ ಕುಟುಂಬಕ್ಕೂ ಹಗೆತನ ತುಂಬಾ ಹಳೆಯದು. ಶೋಭಾ ಅವರ ಪತಿ ಭೂಮಾ ನಾಗಿರೆಡ್ಡಿ ನಂದ್ಯಾಲದಿಂದ, ಸೋದರ ಎಸ್‌.ವಿ. ಮೋಹನ್‌ ರೆಡ್ಡಿ ಕರ್ನೂಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಇನ್ನೊಂದು ಪ್ರಭಾವಿ ಕುಟುಂಬಕ್ಕೆ ಸೇರಿದ ಕೆ.ಇ. ಕೃಷ್ಣಮೂರ್ತಿ, ಪತ್ತಿ­ಕೊಂಡ ವಿಧಾನಸಭಾ ಕ್ಷೇತ್ರದಿಂದ ಟಿಡಿಪಿ  ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿ­ದ್ದಾರೆ. ಡೋನ್‌ ಕ್ಷೇತ್ರದಿಂದ ಇವರ ಸಹೋದರ ಕೆ.ಇ. ಪ್ರತಾಪ್‌ ಸ್ಪರ್ಧಿಸಿ­ದ್ದಾರೆ. ಒಂದು ಕುಟುಂಬ, ನಾಲ್ಕಾರು ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸುವ ಪ್ರಯತ್ನ. ಜನತಂತ್ರದ ಅಣಕ ಅಂತ ಕೆಲವರಿಗಾದರೂ ಅನ್ನಿಸದೇ ಇರದು. ‘ಚುನಾವಣೆ ಎಂಬುದು ವ್ಯಕ್ತಿ ಹಾಗೂ ನಾಲ್ಕೈದು ಕುಟುಂಬಗಳ ಪ್ರಯೋಜ­ನಕ್ಕೊ ಇಲ್ಲವೇ ಸಮಾಜದ ಒಟ್ಟಾರೆ ಹಿತಕ್ಕೊ’ ಅಂತ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

ಈ ಪ್ರಶ್ನೆ ಮನಸ್ಸಿಗೆ ನಾಟಿದರೆ ಜನರ ಮನೋ­ಭಾವದಲ್ಲಿ ಸ್ವಲ್ಪಮಟ್ಟಿ­ಗಾದರೂ ಬದಲಾವಣೆ  ಸಾಧ್ಯವಾಗ­ಬಹುದು.
ರಾಜ್ಯ ವಿಭಜನೆ ತೀರ್ಮಾನ ಹೊರ­ಬೀಳುವವರೆಗೂ ಶಕ್ತಿಯುತವಾಗಿದ್ದ ಕಾಂಗ್ರೆಸ್‌ ಏಕಾಏಕಿ ಶಕ್ತಿಹೀನವಾಗಿದೆ.
ಸಚಿವರಾಗಿದ್ದ ಟಿ.ಜಿ.ವೆಂಕಟೇಶ್‌, ಏರಾಸು ಪ್ರತಾಪರೆಡ್ಡಿ, ಶಾಸಕರಾದ ಲಬ್ಬಿ ವೆಂಕಟಸ್ವಾಮಿ,  ಶಿಲ್ಪಾ ಮೋಹನ­ರೆಡ್ಡಿ ಮೊದಲಾದ ಕಾಂಗ್ರೆಸ್ಸಿಗರು ಟಿಡಿಪಿ ಸೇರಿದ ಕಾರಣ ಕ್ರಮವಾಗಿ ಅವರು ಸ್ಪರ್ಧಿಸಿರುವ ಕರ್ನೂಲು, ಪಾಣ್ಯಂ, ನಂದಿಕೊಟ್ಕೂರು, ನಂದ್ಯಾಲ ವಿಧಾನ­ಸಭಾ ಕ್ಷೇತ್ರಗಳಲ್ಲಿ ಟಿಡಿಪಿ ಬಲ ವೃದ್ಧಿ­ಸಿದೆ. ಆದರೆ ಅಲ್ಲಿ ಪಕ್ಷ ಬಲಪಡಿಸಲು ಬೆವರು ಸುರಿಸಿದ್ದವರಿಗೆ ಸಹಜ­ವಾಗಿಯೇ ನಿರಾಸೆಯಾಗಿದೆ. ಇದರ ಪರಿಣಾಮ ಹೇಗಿರಬಹುದು ಎಂಬುದು ನಿಗೂಢ. ವೈಎಸ್‌ಆರ್‌ ಕಾಂಗ್ರೆಸ್‌ ಜಿಲ್ಲೆಯಲ್ಲಿ ಟಿಡಿಪಿಗೆ ಪ್ರಬಲ ಸ್ಪರ್ಧೆ ಒಡ್ಡಿದೆ.

ಜಿಲ್ಲೆಯ ಮತ್ತೊಂದು ಲೋಕಸಭಾ ಕ್ಷೇತ್ರ ನಂದ್ಯಾಲ. ನೀಲಂ ಸಂಜೀವ ರೆಡ್ಡಿ, ಪಿ.ವಿ.ನರಸಿಂಹ ರಾವ್‌ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಂಧ್ರದ 42 ಕ್ಷೇತ್ರಗಳ ಪೈಕಿ 41ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಜನತಾ ಪಕ್ಷದಿಂದ ನೀಲಂ ಒಬ್ಬರೇ ಇಲ್ಲಿಂದ ಆಯ್ಕೆ­ಯಾಗಿದ್ದರು. ಈ ಸಲದ ಚುನಾವಣೆ­ಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌­ನಿಂದ ಎಸ್.ಪಿ.ವೈ. ರೆಡ್ಡಿ, ಟಿಡಿಪಿಯಿಂದ ಎನ್‌.ಎಂ.ಡಿ. ಫರೂಕ್‌ ಸ್ಪರ್ಧಿಸಿದ್ದಾರೆ. ನೀಲಂ, ಪಿ.ವಿ. ಅಂತಹ ಗಣ್ಯರನ್ನು ಆರಿಸಿ ಕಳುಹಿಸಿದ ನಂದ್ಯಾಲ, ಅಭಿವೃದ್ಧಿಯಲ್ಲಿ ಹಿಂದಿದೆ. ನಗರದ ರಸ್ತೆಗಳು ಇಕ್ಕಟ್ಟಿನಿಂದ ಕೂಡಿವೆ. ಪಾದ­ಚಾರಿ ಮಾರ್ಗಗಳೇ ಕಾಣಿ­ಸುವುದಿಲ್ಲ. ಓಣಿಗಳ ಸ್ಥಿತಿ ದಯನೀಯವಾಗಿದೆ.

ಕೈಮಗ್ಗ ನೆಚ್ಚಿಕೊಂಡ ನೇಕಾರರು ಕಷ್ಟ­ದಲ್ಲಿದ್ದಾರೆ. ಆದೋನಿ, ಎಮ್ಮಿಗನೂರು, ಕೋಡುಮೂರು, ಕರ್ನೂಲು ಭಾಗ­ದಲ್ಲಿ ಕೈಮಗ್ಗ ನೇಕಾರರು ಗಣನೀಯ ಸಂಖ್ಯೆ­ಯಲ್ಲಿದ್ದಾರೆ. ಕೈಮಗ್ಗ ಉತ್ಪನ್ನ­ಗಳು ದಲ್ಲಾಳಿಗಳನ್ನಷ್ಟೇ ಉದ್ಧಾರ ಮಾಡು­ತ್ತಿವೆ. ನೇಕಾರರು ಸಾಲದ ಸುಳಿಗೆ ಸಿಲುಕಿದ್ದಾರೆ ಎಂಬುದು ನೇಕಾರರ ಸಂಘದ ಪ್ರತಿನಿಧಿಗಳ ಅಳಲು. ಇಲ್ಲಿಯ­ವರೆಗೂ ಅವರ ಕಷ್ಟಕ್ಕೆ ಸ್ಪಂದಿಸದ ನೇತಾರ­ರಿಗೆ ಈಗ ನೇಕಾರರ ಬಗ್ಗೆ ಮಮಕಾರ ಉಕ್ಕಿದೆ. ಗೆಲ್ಲಿಸಿದರೆ ಭಾಗ್ಯ­ರೇಖೆ ಬದಲಿಸುವ ಮಾತಾಡು­ತ್ತಿದ್ದಾರೆ. ಆದರೆ ಪೊಳ್ಳು ಭರವಸೆಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಅಲ್ಪಸ್ವಲ್ಪ ವಿಶ್ವಾಸ ಕುದುರಿಸಬಲ್ಲವನೇ ದೊಡ್ಡ ನಾಯಕ. ಮತ ಪರಿವರ್ತನೆ ಇಂತಹ­ದೊಂದು ನಂಬಿಕೆಯ ಮೇಲೆ ನಿಂತಿದೆ.


 

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಗು­ವೊಂದನ್ನು ಎತ್ತಿಕೊಂಡಿದ್ದ ಶೋಭಾ ನಾಗಿರೆಡ್ಡಿ  –ಸಂಗ್ರಹ ಚಿತ್ರ

ಇಲ್ಲದ ಅಮ್ಮನ ಪರ ಮಕ್ಕಳ ಪ್ರಚಾರ...
ಹೈದರಾಬಾದ್‌
:  ನೆತ್ತಿ ಮೇಲೆ ಸುಡುವ ಸೂರ್ಯ.  ಆದರೂ ಮನೆ ಮನೆಗೆ ಹೋಗಿ ಪ್ರಚಾರ ಮಾಡುವ ಉಮೇದು. ತಾಯಿಯನ್ನು ಕಳೆದುಕೊಂಡ ಈ ಮೂವರು ಮಕ್ಕಳನ್ನು ನೋಡಿ ಗ್ರಾಮಸ್ಥರ ಕಣ್ಣಲ್ಲಿ ನೀರು...  ವೈಎಸ್‌ಆರ್‌ ಕಾಂಗ್ರೆಸ್‌ನಿಂದ ಆಳ್ಳಗಡ್ಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೋಭಾ ನಾಗಿರೆಡ್ಡಿ ಪರವಾಗಿ ಅವರ ಮಕ್ಕಳಾದ ಅಖಿಲ ಪ್ರಿಯಾ, ಮೌನಿಕಾ ಹಾಗೂ ಜಗತ್‌ ವಿಖ್ಯಾತ ರೆಡ್ಡಿ ಪ್ರಚಾರ ಮಾಡುತ್ತಿರುವುದನ್ನು ನೋಡಿ ಗ್ರಾಮಸ್ಥರು ಭಾವುಕರಾಗುತ್ತಾರೆ.

ಏಪ್ರಿಲ್‌ 23ರಂದು ಪ್ರಚಾರ ಮುಗಿಸಿ ಮನೆಗೆ ಬರುತ್ತಿ­ದ್ದಾಗ ಶೋಭಾ ಅಪಘಾತದಲ್ಲಿ ಮೃತಪಟ್ಟರು. ತಾಯಿ ಕೊನೆಯುಸಿರೆಳೆದ ನಂತರವೂ ಮಕ್ಕಳು ಮಾತ್ರ ಪ್ರಚಾರ ನಿಲ್ಲಿಸಿಲ್ಲ. ಹೇಗಾದರೂ ಮಾಡಿ ತಾಯಿ ಗೆಲ್ಲಬೇಕು ಎನ್ನುವ ಮಹದಾಸೆ ಇವರಲ್ಲಿದೆ.

ತಮ್ಮ ನೆಚ್ಚಿನ ನಾಯಕಿಯ ಮಕ್ಕಳನ್ನು ಗ್ರಾಮಸ್ಥರು ಅಕ್ಕರೆ­ಯಿಂದ ಕಾಣುತ್ತಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ಶೋಭಾ ಗೆದ್ದರೆ ಶೀಘ್ರವೇ ಉಪಚುನಾವಣೆ ನಡೆಯುತ್ತದೆ ಎನ್ನುವುದು ಮತದಾರರಿಗೆ ತಿಳಿಯದ ವಿಷಯವೇನಲ್ಲ. ಆದರೂ, ‘ನಾವು ನಿಮ್ಮ ಅಮ್ಮನಿಗೇ ಮತ ಹಾಕುತ್ತೀವಿ’ ಎಂದು ಈ ಮಕ್ಕಳಿಗೆ ಪ್ರೀತಿಯಿಂದ ಆಶ್ವಾಸನೆ ನೀಡುತ್ತಾರೆ.
ಶೋಭಾ ಗೆದ್ದರೆ, ಸತ್ತ ನಂತರ ಚುನಾವಣೆಯಲ್ಲಿ ಜಯಗಳಿಸಿದ ಮೊದಲ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT