ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿ ಜನರಿಗೆ ಗಂಗೆಯ ‘ಮೈಲಿಗೆ’ ಕಳೆವ ನಿರೀಕ್ಷೆ

Last Updated 7 ಮೇ 2014, 19:30 IST
ಅಕ್ಷರ ಗಾತ್ರ

ವಾರಾಣಸಿ (ಉತ್ತರ ಪ್ರದೇಶ): ‘ಗಂಗಾ ಸ್ನಾನ, ತುಂಗಾ ಪಾನ’ ಎಂಬ ಮಾತು ಕನ್ನಡ­ದಲ್ಲಿ ಬಳಕೆಯಲ್ಲಿದೆ. ‘ಈ ನದಿಗಳ ನೀರು ಶ್ರೇಷ್ಠ’ ಎನ್ನುವುದು ಈ ಮಾತಿನ ಅರ್ಥ. ಆದರೆ, ಎರಡೂ ನದಿಗಳೀಗ ‘ಮೈಲಿಗೆ’­ಯಾಗಿವೆ. ಆಧ್ಯಾತ್ಮಿಕ ಬದುಕಿನ ಭಾಗವಾಗಿರುವ ಗಂಗಾ ನದಿಯ ಸ್ನಾನ, ರೋಗ– ರುಜಿನಗಳಿಗೆ ಕಾರಣವಾಗು­ತ್ತಿದೆ. ತೀವ್ರ ಆತಂಕ ಹುಟ್ಟಿಸಿರುವ ನದಿಯ ಮಾಲಿನ್ಯದ ವಿರುದ್ಧ ದೊಡ್ಡ ಕೂಗೆ­ದ್ದಿದೆ. ಅನೇಕ ಹೋರಾಟಗಳು ನಡೆಯುತ್ತಿವೆ.

ಉತ್ತರಾಖಂಡದಲ್ಲಿ ಹುಟ್ಟಿ, ಬಂಗಾಳ ಕೊಲ್ಲಿಯಲ್ಲಿ ಸಮುದ್ರ ಸೇರು­ವ­ವರೆಗೆ ಸುಮಾರು 2,525 ಕಿ.ಮೀ. ಹರಿಯುವ ಗಂಗಾ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಜೀವನದಿ. ಸುಮಾರು 42 ಕೋಟಿ ಜನ­ರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಆಸರೆ­ಯಾ­ಗಿರುವ ಈ ನದಿಯನ್ನು ಶುಚಿಗೊ­ಳಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದ್ದರೂ, ಅದ್ಯಾವುದೂ ನಿರೀಕ್ಷಿತ ಫಲ ನೀಡಿಲ್ಲ.

ಲೋಕಸಭೆ ಚುನಾವಣೆಯಲ್ಲಿ ವಾರಾ­ಣಸಿ­ಯಿಂದ ಸ್ಪರ್ಧಿಸಿರುವ ಅಭ್ಯರ್ಥಿ­ಗಳೂ, ಗಂಗಾ ಮಾಲಿನ್ಯದ ವಿರುದ್ಧ ದನಿ ಎತ್ತಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಗಂಗೆ­ಯನ್ನು ‘ಅಮ್ಮ’ನಿಗೆ ಹೋಲಿಸಿದ್ದಾರೆ. ‘ನಾನು ವಾರಾಣಸಿಗೆ ಬಂದಿರುವುದು, ಕಂದ ಅಮ್ಮನ ಮಡಿಲಿಗೆ ಬಂದಂತಾಗಿದೆ’ ಎಂದಿ­ದ್ದಾರೆ. ‘ಆಮ್‌ ಆದ್ಮಿ ಪಕ್ಷ’ದ ಅಭ್ಯರ್ಥಿ ಅರವಿಂದ ಕೇಜ್ರಿವಾಲ್‌ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಗಂಗೆ­ಯಲ್ಲಿ ಮಿಂದಿದ್ದಾರೆ. ಕಾಶಿಯ ಮತದಾ­ರ­ರನ್ನು ಓಲೈಸಲು ಇವೆರಡೂ ಪಕ್ಷಗಳು ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಭರವಸೆ ನೀಡಿವೆ.

ಊಹೆಗೂ ನಿಲುಕದ ಪ್ರಮಾಣದಲ್ಲಿ ಗಂಗೆ ಮಲಿನವಾಗುತ್ತಿದೆ. ಹರಿದ್ವಾರ, ಹೃಷಿ­ಕೇಶದಿಂದ ಹಿಡಿದು ಬಾಂಗ್ಲಾದ­ವರೆಗೂ ನದಿ ದಂಡೆಯಲ್ಲಿರುವ ನಗರ, ಪಟ್ಟಣ­ಗಳು ಹೊರಗೆಸೆಯುವಂಥ ಕಲ್ಮ­ಶ­ಗಳು ನದಿ ಒಡಲನ್ನು ಸೇರುತ್ತಿವೆ. ಕಾನ್ಪು­­ರ­ದಲ್ಲಿ  ನದಿ ದೊಡ್ಡ ಪ್ರಮಾ­ಣ­ದಲ್ಲಿ ಕಲುಷಿತಗೊಳ್ಳುತ್ತಿದೆ. ತೊಗಲಿನ ಉದ್ದಿಮೆ ಹೊರಬಿಡುತ್ತಿರುವ ವಿಷಕಾರಿ ವಸ್ತು­ಗಳು ಅಪಾಯ ತಂದೊಡ್ಡಿವೆ. ಒಳ­ಚರಂಡಿ ನೀರು, ಕಾರ್ಖಾನೆ ತ್ಯಾಜ್ಯವನ್ನು ಸಂಸ್ಕರಿ­ಸಬೇಕೆಂಬ ಷರತ್ತನ್ನು ಯಾರೂ ಪಾಲಿ­ಸುತ್ತಿಲ್ಲ ಪ್ರತಿದಿನ ಸುಮಾರು ನೂರು ಕೋಟಿ ಲೀಟರ್‌ ಕಲುಷಿತ ನೀರನ್ನು ಗಂಗಾ ನದಿಗೆ ಬಿಡಲಾಗುತ್ತಿದೆ. ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿದು ದ್ವಿಗುಣ ಆಗಲಿದೆ ಎಂದು ಅಂದಾಜು ಮಾಡಲಾಗಿದೆ.

ವಾರಾಣಸಿಯಲ್ಲಿ ಅರೆಬರೆ ಸುಟ್ಟ, ಸಂಸ್ಕಾರ ಮಾಡಲಾಗದ ಶವಗಳು ನದಿ­ಯಲ್ಲಿ ತೇಲಾಡುತ್ತವೆ. ‘ಮೋಕ್ಷ’ದ ಹೆಸ­ರಿ­ನಲ್ಲಿ, ಸುಟ್ಟ ದೇಹಗಳ ಬೂದಿ ತಂದು ನದಿ­ಯೊಳಗೆ ಬಿಡಲಾಗುತ್ತಿದೆ. ಪ್ರತಿದಿನ ಸುಮಾರು ಎರಡು ಕೋಟಿ ಜನ ಗಂಗಾ ಸ್ನಾನ ಮಾಡುತ್ತಿದ್ದಾರೆ. ಕುಂಭಮೇಳದ ಸಮಯ­ದಲ್ಲಿ ಗಂಗಾ– ಯಮುನಾ ನದಿ ಸಂಗಮವಾಗುವ ಅಲಹಾಬಾದಿನಲ್ಲಿ 10 ಕೋಟಿ ಜನ ಸ್ನಾನ ಮಾಡಿದ್ದಾ­ರೆಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಶ್ವ ಆರೋಗ್ಯ ಸಂಸ್ಥೆ ‘ಸುರಕ್ಷಿತ’ ಎಂದು ನಿಗದಿಪಡಿಸಿದ ಪ್ರಮಾಣಕ್ಕಿಂತ ಮೂರು ಸಾವಿರ ಪಟ್ಟು ಹೆಚ್ಚು ವಿಷ­ಕಾರಿ, ರಾಸಾಯನಿಕ ಮತ್ತು ಬ್ಯಾಕ್ಟೀರಿ­ಯಾ­ಗಳು ಗಂಗಾ ನದಿಗೆ ಹರಿದು ಬರು­ತ್ತಿವೆ ಎಂದು ವೈಜ್ಞಾನಿಕ ಅಧ್ಯಯನಗಳು ಖಚಿತಪಡಿಸಿವೆ.

ಗಂಗಾ ಸ್ವಚ್ಛಗೊಳಿಸಲು ಈವರೆಗೆ ಸಾವಿ­ರಾರು ಕೋಟಿ ರೂಪಾಯಿ ಖರ್ಚು ಮಾಡ­ಲಾಗಿದೆ. ರಾಜೀವ್‌ ಗಾಂಧಿ 1984­ರಲ್ಲಿ ಪ್ರಧಾನಿಯಾಗಿದ್ದಾಗ ‘ಗಂಗಾ ನದಿ ಶುದ್ಧೀಕರಣ ಯೋಜನೆ’ ಆರಂಭಿ­ಸಿದರು. ರೂ. 1500 ಕೋಟಿ ಬಿಡುಗಡೆ ಮಾಡಿದರು. ಆದರೆ, ಈ ಹಣ ದುರುಪಯೋಗವಾಗಿದ್ದು ಸಾರ್ವ­ತ್ರಿಕ ಸತ್ಯ. ನಂತರದ ಎನ್‌ಡಿಎ ಸರ್ಕಾರ ಸ್ವಲ್ಪ ಹಣ ನೀಡಿತು. ಜಪಾನ್‌ ರೂ. 2600 ಕೋಟಿ ನೆರವು ನೀಡಿದೆ. ವಿಶ್ವಬ್ಯಾಂಕ್‌ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಿದೆ. ಏಳು ಸಾವಿರ ಕೋಟಿ ರೂಪಾಯಿ ಯೋಜನೆ ಸದ್ಯ ಸಿದ್ಧವಾ­ಗಿದ್ದು, ಸರ್ಕಾರದ ಅನುಮತಿ ನಿರೀಕ್ಷೆಯಲ್ಲಿದೆ.

‘ರಾಷ್ಟ್ರೀಯ ಗಂಗಾ ನದಿ ಪ್ರಾಧಿ­ಕಾರ’ದ ಸದಸ್ಯ ಡಾ. ಬಿ.ಡಿ. ತ್ರಿಪಾಠಿ ‘ಪ್ರಜಾವಾಣಿ’ ಜತೆ ಮಾತನಾಡಿದರು. ಗಂಗಾ ನದಿ ಮಾಲಿನ್ಯ ನಾಲ್ಕು ದಶಕಗಳ ಸಮಸ್ಯೆ. ಎರಡು ದಶಕಗಳಿಂದ ಈ ಸಮಸ್ಯೆ ತೀವ್ರವಾಗಿದೆ. ನದಿ ಮಾಲಿನ್ಯ ತಡೆಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿದೆ. ಅಂದಾಜು ಶೇ. 20ರಷ್ಟು ನೀರು ಕಡಿಮೆಯಾಗಿದೆ. ನದಿ ಹೂಳು ದೊಡ್ಡ ತಲೆನೋವು. ಜೀವ ರಸಾಯನ ಆಮ್ಲ­ಜನಕ ಪ್ರತಿ ಲೀಟರ್‌ ನೀರಿಗೆ ಮೂರು ಎಂ.ಜಿ ಇರಬೇಕು. ಆದರೆ, ಕೆಲವೆಡೆ 20­ರಿಂದ 25 ಎಂ.ಜಿ ಇದೆ. ಅಲಹಾಬಾದ್‌ ಕುಂಭಮೇಳಕ್ಕೆ ಮೊದಲು ಇದು 7ರಿಂದ 8 ಎಂ.ಜಿ ಇತ್ತು ಎಂದು ಪರಿಸರ ತಜ್ಞರೂ ಆಗಿರುವ ತ್ರಿಪಾಠಿ ವಿವರಿಸಿದರು.

‘ಗಂಗಾ ನದಿಯಲ್ಲಿ ಸಮರ್ಪಕವಾದ ಪ್ರಮಾಣ­ದಲ್ಲಿ ನೀರು ಹರಿಯುವಂತೆ ನೋಡಿಕೊಳ್ಳುವುದೊಂದೇ ಮಾಲಿನ್ಯ ತಡೆಗೆ ಇರುವ ದಾರಿ’. ಆದರೆ, ಯಾವುದೇ ಸರ್ಕಾರ ಈ ಕೆಲಸ ಮಾಡು­ತ್ತಿಲ್ಲ. ಪ್ರಧಾನಿ ಮನಮೋಹನ್‌ಸಿಂಗ್‌ ಅಧ್ಯಕ್ಷತೆಯಲ್ಲಿ ಈಚೆಗೆ ಸೇರಿದ್ದ ಪ್ರಾಧಿಕಾ­ರದ ಸಭೆಯಲ್ಲೂ ಇದೇ ಸಲಹೆ ಮಾಡಲಾಗಿದೆ. ಮಂದಾಕಿನಿ ಮತ್ತು ಭಾಗೀ­ರಥಿ ಜಲ ವಿದ್ಯುತ್‌ ಯೋಜನೆ­ಗಳು ಬೇಕಾಬಿಟ್ಟಿ ನೀರು ಬಳಸುವುದನ್ನು ತಡೆಯಬೇಕು. ನೀರಾವರಿ ಹೆಸರಿನಲ್ಲಿ ನೀರು ಪೋಲಾಗುವುದಕ್ಕೆ ಕಡಿವಾಣ ಹಾಕ­ಬೇಕು. ಸಣ್ಣ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕು. ಪ್ರವಾಹ ನಿರ್ವಹಣೆ ತಂತ್ರಗಳಿಗೆ ಅವಕಾಶವಿರಬೇಕು. ಅಂತರ್ಜಲ ಶೋಷಣೆ ತಪ್ಪಿಸಬೇಕು. ಮಳೆ ನೀರು ಕೊಯ್ಲು ಆರಂಭಿಸಬೇಕೆಂದು ಅವರು ಅಭಿಪ್ರಾಯಪಟ್ಟರು.

ಮಾಲಿನ್ಯದ ವಿಷಯದಲ್ಲಿ ಗಂಗೆ­ಯನ್ನು ಯಮುನೆ ಮೀರಿಸಿದೆ. ಇವೆ­ರಡೂ ನದಿಗಳ ಮಾಲಿನ್ಯ ಕುರಿತು ಸಂಸ­ತ್ತಿ­ನಲ್ಲಿ ಅನೇಕ ಸಲ ಬಿರುಸಿನ ಚರ್ಚೆಗಳು ನಡೆ­ದಿವೆ. ಕಳೆದ ವರ್ಷ ಕೂಡಾ ಕಾವೇ­ರಿದ ಚರ್ಚೆ ನಡೆದಿತ್ತು. ರಾಜ್ಯಸಭೆ ಬಿಜೆಪಿ ಉಪ ನಾಯಕ ರವಿಶಂಕರ್ ಪ್ರಸಾದ್‌ ದನಿ ಏರಿಸಿದ್ದರು. ಯಮುನಾ ನದಿ ದೆಹಲಿಯಲ್ಲಿಯೇ ಶೇ. 70ರಷ್ಟು ಮಲಿ­ನ­ವಾಗುತ್ತಿದೆ ಎಂದು ಆತಂಕ ವ್ಯಕ್ತಪ­ಡಿಸಿದ್ದರು. ಆದರೂ ಸರ್ಕಾರ ಸಮ­ಸ್ಯೆ­ಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ.

ಬಿಜೆಪಿ ನಾಯಕ ನರೇಂದ್ರ ಮೋದಿ ಗಂಗೆ ಸ್ವಚ್ಛಗೊಳಿಸುವ ಭರವಸೆ ನೀಡಿ­ದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿ­ಕಾರಕ್ಕೆ ಬಂದರೆ ಮಾಲಿನ್ಯ ಸಮಸ್ಯೆಗೆ ಪರಿ­ಹಾರ ಸಿಗಬಹುದೇನೊ ಎಂದು ವಾರಾ­ಣಸಿ ಮತ್ತಿತರ ನಗರಗಳ ಜನ ಭಾವಿಸಿ­ದ್ದಾರೆ. ಅನೇಕ ಪರಿಸರ ಸಂಘಟ­ನೆ­ಗಳು ಗಂಗೆ ಉಳಿಸಿ ಎಂದು ಕೂಗೆಬ್ಬಿಸಿವೆ. ಉತ್ತರದ ಈ ಜೀವನದಿ ಉಳಿಯದಿದ್ದರೆ ಅನಾಹುತ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT