ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿತರನ್ನು ಸದ್ದಿಲ್ಲದೇ ಬಲಿಪಡೆಯುತ್ತಿದೆ 'ಹ್ಯಾಪಿ ಹೈಪೋಕ್ಸಿಯಾ'

Last Updated 17 ಮೇ 2021, 5:19 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌-19 ಎರಡನೇ ಅಲೆಯು ದೇಶವನ್ನೇ ಬೆಚ್ಚಿಬೀಳಿಸಿದೆ. ಮೊದಲ ಅಲೆಯಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದರೆ, ಎರಡನೇ ಅಲೆಯಲ್ಲಿ ಯುವಜನರು ಸಹ ಸಾವಿಗೀಡಾಗುತ್ತಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಸಾವಿಗೀಡಾದ ಒಟ್ಟು ಸೋಂಕಿತರಲ್ಲಿ ಶೇಕಡಾ 20 ರಿಂದ 25ರಷ್ಟು ಸೋಂಕಿತರು 'ಹ್ಯಾಪಿ ಹೈಪೋಕ್ಸಿಯಾ'ಗೆ ಒಳಗಾಗಿದ್ದಾರೆ ಎಂದು ಶ್ವಾಸಕೋಶ ತಜ್ಞರು ತಿಳಿಸಿದ್ದಾರೆ.

'ಸೋಂಕಿತರು ಹ್ಯಾಪಿ ಹೈಪೋಕ್ಸಿಯಾ ಸ್ಥಿತಿಗೆ ತಲುಪುವುದು ಯಾವುದೇ ಮಾನಸಿಕ ಕಾರಣಗಳಿಂದಾಗಿ ಅಲ್ಲ. ಈ ಸ್ಥಿತಿಯು ಕೋವಿಡ್ ರೋಗಿಗಳಲ್ಲಿ ಕಂಡುಬಂದಷ್ಟು ಬೇರೆ ಯಾವುದೇ ರೋಗಿಗಳಲ್ಲಿಯೂ ಕಂಡುಬಂದಿಲ್ಲ' ಎಂದು ಅಪೊಲೊ ಆಸ್ಪತ್ರೆಗಳ ಹಿರಿಯ ಶ್ವಾಸಕೋಶ ತಜ್ಞ ಡಾ.ರವೀಂದ್ರ ಮೆಹ್ತಾ ಹೇಳಿದ್ದಾರೆ.

ಏನಿದು ಹ್ಯಾಪಿ ಹೈಪೋಕ್ಸಿಯಾ

'ಸೋಂಕಿನ ಆರಂಭಿಕ ಹಂತಗಳಲ್ಲಿ ರೋಗಿಯು ಉತ್ತಮವಾಗಿಯೇ ಸ್ಪಂದಿಸುತ್ತಾನೆ. ಬೇರೆಯವರಿಗೆ ಸಂತೋಷವಾಗಿಯೇ ಕಾಣುತ್ತಾನೆ. ಆ ಸಮಯದಲ್ಲಿ ರಕ್ತದಲ್ಲಿನ ಆಮ್ಲಜನಕದ ಅಂಶವು ಹಠಾತ್ತಾಗಿ ಕ್ಷೀಣಿಸುತ್ತದೆ. ಇದು ಉಸಿರಾಟದ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿ ರೋಗಿಯು ಸಾವಿನಂಚಿಗೆ ತಲುಪುತ್ತಾನೆ' ಎಂದು ಎಂದು ಡಾ. ಮೆಹ್ತಾ ವಿವರಿಸಿದ್ದಾರೆ.

'ಆರೋಗ್ಯವಂತ ವ್ಯಕ್ತಿಯಲ್ಲಿ ಆಮ್ಲಜನಕದ ಪ್ರಮಾಣವು ಸಾಮಾನ್ಯವಾಗಿ ಶೇಕಡಾ 95 ಕ್ಕಿಂತ ಹೆಚ್ಚಿರುತ್ತದೆ. ಆದರೆ, ಹ್ಯಾಪಿ ಹೈಪೋಕ್ಸಿಯಾ ಸ್ಥಿತಿಗೆ ತಲುಪುವವರಲ್ಲಿ 70ಕ್ಕಿಂತ ಕಡಿಮೆ ಆಮ್ಲಜನಕ ಪ್ರಮಾಣ ಹೊಂದಿರುವುದನ್ನು ನಾನು ಗಮನಿಸಿದ್ದೇನೆ' ಎಂದು ರಾಜೀವ್‌ ಗಾಂಧಿ ವೈದ್ಯಕೀಯ ಸಂಸ್ಥೆಯ ಎದೆ ರೋಗ ವಿಭಾಗದ ನಿರ್ದೇಶಕ ಡಾ.ಸಿ.ನಾಗರಾಜ ಹೇಳಿದ್ದಾರೆ.

'ನಮ್ಮಲ್ಲಿ ಸಾವಿಗೀಡಾದ ಶೇಕಡಾ 50 ಪ್ರಕರಣಗಳು ಹ್ಯಾಪಿ ಹೈಪೋಕ್ಸಿಯಾ ಸ್ಥಿತಿಯಿಂದಾಗಿವೆ. ಈ ಸ್ಥಿತಿಗೆ ತಲುಪಿರುವ ರೋಗಿಗಳು ತಡವಾಗಿಯೇ ಆಸ್ಪತ್ರೆಗೆ ಬಂದಿರುತ್ತಾರೆ. ಆಸ್ಪತ್ರೆಗೆ ಬಂದ ಎರಡು ಅಥವಾ ಮೂರು ದಿನಗಳ ನಂತರವೂ ನಾವು ಅನೇಕ ರೋಗಿಗಳನ್ನು ಕಳೆದುಕೊಂಡಿದ್ದೇವೆ' ಎಂದು ಡಾ.ನಾಗರಾಜ ವಿವರಿಸಿದ್ದಾರೆ.

ಸಣ್ಣ ಪ್ರಮಾಣದ ರೋಗಲಕ್ಷಣಗಳನ್ನು ಹೊಂದಿರುವ ಸೋಂಕಿತರಲ್ಲಿ ಹಠಾತ್‌ ಆಗಿ ಆಮ್ಲಜನಕ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ ಉಸಿರಾಟದ ತೊಂದರೆಗೆ ಒಳಗಾಗುವ ವ್ಯಕ್ತಿಗಳು ಸಾವಿನ ಅಂಚಿಗೆ ತಲುಪುತ್ತಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹ್ಯಾಪಿ ಹೈಪೋಕ್ಸಿಯಾ ಅಥವಾ ಸೈಲೆಂಟ್‌ ಹೈಪೋಕ್ಸಿಯಾ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT