ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸಾರ ನೌಕ

80
Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಸಂಸಾರ ನೌಕ’ ಕನ್ನಡ ಚಿತ್ರರಂಗಕ್ಕೆ ಹೊಸ ಜಾಡು ಒದಗಿಸಿ ಕೊಟ್ಟ ಚಿತ್ರ. ‘ದಕ್ಷಿಣ ಭಾರತದ ಮೊದಲ ಸಾಮಾಜಿಕ ಚಿತ್ರ’ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ‘ಸಂಸಾರ ನೌಕ’ ಬಿಡುಗಡೆಯಾಗಿ ನಾಳೆ ಆಗಸ್ಟ್‌ 27ಕ್ಕೆ 80 ವರ್ಷ!

1936ರಲ್ಲಿ ತೆರೆಕಂಡ ‘ಸಂಸಾರ ನೌಕ’ ಕೇವಲ ಎರಡು ವರ್ಷಗಳ ಚರಿತ್ರೆ ಇದ್ದ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗಿದ್ದ ನಾಲ್ಕನೇ ಚಿತ್ರ. ಹಿಂದಿನ ಎಲ್ಲಾ ಕನ್ನಡ ಚಿತ್ರಗಳಂತೆ ಇದೂ ಕೂಡ ರಂಗಭೂಮಿಯಿಂದ ಬೆಳ್ಳಿತೆರೆಗೆ ಬಂದಿದ್ದ ಚಿತ್ರ.

ಮಹಮದ್‌ ಪೀರ್‌ ಹಾಗೂ ಎಚ್‌.ಎಲ್‌.ಎನ್‌. ಸಿಂಹ ಕನ್ನಡ ರಂಗಭೂಮಿಯಲ್ಲಿ ಹೆಸರಾಗಿದ್ದ ದಿನಗಳವು. ಬಹುತೇಕ ಪೌರಾಣಿಕ, ಆಗೀಗ ಚಾರಿತ್ರಿಕ ಕಥೆಗಳನ್ನೇ ರಂಗಭೂಮಿಯಲ್ಲಿ ಪ್ರದರ್ಶಿಸುತ್ತಿದ್ದ ದಿನಗಳಲ್ಲಿ ಸಮಕಾಲೀನ ಸಮಾಜದ ಆಗುಹೋಗುಗಳು, ಅಂಕುಡೊಂಕುಗಳನ್ನು ಒಳಗೊಂಡ ಕಥಾಹಂದರವಿದ್ದ ‘ಸಂಸಾರ ನೌಕ’ ನಾಟಕವನ್ನು ಪೀರ್‌ ಅವರಿಗಾಗಿ ಎಚ್‌.ಎಲ್‌.ಎನ್‌. ಸಿಂಹ ಬರೆದುಕೊಟ್ಟಿದ್ದರು.

ಚನೆಗೊಂಡ ಒಂದು ವರ್ಷದ ಬಳಿಕ ರಂಗಮಂಚಕ್ಕೆ ಬಂದ ‘ಸಂಸಾರ ನೌಕ’ ಯಶಸ್ವಿ ನಾಟಕವೆನ್ನಿಸಿಕೊಂಡು, ನಾಡಿನಲ್ಲಿ ಜನಮನ್ನಣೆ ಪಡೆಯಿತು. ಅಷ್ಟು ಮಾತ್ರವಲ್ಲ, ಮದ್ರಾಸ್‌ನ ‘ಸೌಂದರ್ಯ ಮಹಲ್‌’ನಲ್ಲಿ ಕೂಡ ಪ್ರದರ್ಶನಗೊಂಡಿತು.

ಕನ್ನಡ ರಂಗಭೂಮಿಯಲ್ಲಿ ಮನೆ ಮಾತಾಗಿದ್ದ ‘ಸಂಸಾರ ನೌಕ’ ನಾಟಕವನ್ನು ‘ನಾರದರ್‌’ ಪತ್ರಿಕೆಯ ಸಂಪಾದಕ ಶ್ರೀನಿವಾಸ ರಾವ್‌ ನೋಡಿ ಮೆಚ್ಚಿಕೊಂಡರು. ತಮ್ಮ ಸ್ನೇಹಿತ ವಾಣಿಜ್ಯೋದ್ಯಮಿ ಹಾಗೂ ಚಿತ್ರೋದ್ಯಮಿ ನಂಜಪ್ಪ ಚೆಟ್ಟಿಯಾರ್‌ ಅವರಿಗೆ ಇದನ್ನು ಚಿತ್ರ ಮಾಧ್ಯಮಕ್ಕೆ ಅಳವಡಿಸುವಂತೆ ಸಲಹೆ ನೀಡಿದರು. ಶ್ರೀನಿವಾಸ ರಾವ್‌ ಸಲಹೆಯ ಮೇರೆಗೆ ನಾಟಕ ನೋಡಿದ ಚೆಟ್ಟಿಯಾರ್‌ ತಮ್ಮ ‘ದೇವಿ ಫಿಲಂಸ್‌’ ಲಾಂಛನದಲ್ಲಿ ಚಿತ್ರ ತಯಾರಿಸಲು ಒಪ್ಪಿದರು.

ಆ ವೇಳೆಗಾಗಲೇ ಸಿನಿಮಾ ಎಂಬ ಹೊಸ ಕಲೆಯಲ್ಲಿ ಪಳಗಿದ್ದ ಹಾಗೂ ‘ಸಂಸಾರ ನೌಕ’ ಕೃತಿಯ ರಚನಕಾರರಾಗಿದ್ದ ಎಚ್‌.ಎಲ್‌.ಎನ್‌. ಸಿಂಹ ಅವರ ಹೆಗಲಿಗೆ ನಿರ್ದೇಶನದ ಹೊಣೆಗಾರಿಕೆಯೂ ಬಿತ್ತು. ನಾಟಕದಲ್ಲಿ ಅಭಿನಯಿಸುತ್ತಿದ್ದ ಬಹುತೇಕ ಕಲಾವಿದರೇ ಚಲನಚಿತ್ರಕ್ಕಾಗಿ ಬಣ್ಣ ಹಚ್ಚಿದರು. ಮದ್ರಾಸ್‌ನ ‘ವೇಲ್‌ ಪಿಕ್ಚರ್ಸ್‌ ಸ್ಟುಡಿಯೊ’ದಲ್ಲಿಯೇ ಚಿತ್ರದ ತಯಾರಿಕೆ ನಡೆಯಿತು.

ಅಜ್ಜನ ಆಸೆಗೆ ವಿರುದ್ಧವಾಗಿ ಸರಳಾ ಎನ್ನುವ ವಕೀಲರ ಪುತ್ರಿಯನ್ನು ಮದುವೆಯಾಗುವ ಸುಂದರ್‌ ಎನ್ನುವ ತರುಣ, ಎರಡೂ ಕುಟುಂಬಗಳ ಅಸಹಕಾರದಿಂದ ಅನುಭವಿಸುವ ಪಡಿಪಾಟಲುಗಳ ಕಥೆ ಚಿತ್ರದ್ದು. ನಾಯಕಿ ಕೊಲೆ ಆರೋಪದಲ್ಲಿ ಸಿಕ್ಕಿಬೀಳುತ್ತಾಳೆ. ಕೊನೆಗೆ ಸತ್ಯ ಹೊರಬಿದ್ದು, ಸಮಸ್ಯೆಗಳ ಸುಳಿಯಿಂದ ಸುಂದರ್‌ ಹೊರಬಿದ್ದು ಸಿನಿಮಾ ಸುಖಾಂತ್ಯಗೊಳ್ಳುತ್ತದೆ.

‘ಸಂಸಾರ ನೌಕ’ ಚಿತ್ರದ ಪ್ರಿವ್ಯೂ ನಡೆದದ್ದು ಮದ್ರಾಸ್‌ನಲ್ಲಿ. ಆನಂತರ ಬೆಂಗಳೂರಿನ ‘ಸಾಗರ್’ ಹಾಗೂ ಮೈಸೂರಿನ ‘ಒಲಿಂಪಿಯ’ ಚಿತ್ರಮಂದಿರಗಳಲ್ಲಿ (1936ರ ಆಗಸ್‌್ಟ 27ರಂದು) ಚಿತ್ರ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತು. ಸುಮಾರು 22 ಸಾವಿರ ರೂಪಾಯಿ  ಬಂಡವಾಳದಲ್ಲಿ ನಿರ್ಮಾಣಗೊಂಡ ‘ಸಂಸಾರ ನೌಕ’ ಆ ಕಾಲಕ್ಕೆ ಎರಡೂವರೆ ಲಕ್ಷ ರೂಪಾಯಿ ಗಳಿಸಿತೆಂಬ ಅಂದಾಜಿದೆ.

ಸತ್ಯ ಹೇಳಿದಾಗ ತೊಂದರೆಗಳು ಸಾಮಾನ್ಯ ಎಂಬ ಅಂಶವನ್ನು ಪ್ರತಿಪಾದಿಸುವ ‘ಸಂಸಾರ ನೌಕ’ ಕನ್ನಡ ಚಿತ್ರರಂಗಕ್ಕೆ ಮಹತ್ವದ ತಿರುವು ಕೊಟ್ಟ ಚಿತ್ರ. ಹಾಗೆಯೇ ದಕ್ಷಿಣ ಭಾರತ ಚಿತ್ರರಂಗದಲ್ಲೂ ಒಂದು ಮೈಲುಗಲ್ಲು.

ತಮಿಳು–ತೆಲುಗು ಭಾಷೆಗಳಲ್ಲೂ ನಿರ್ಮಾಣಗೊಂಡಿದ್ದು ಮತ್ತೊಂದು ವಿಶೇಷ. ಕನ್ನಡಿಗನೇ ನಿರ್ದೇಶಿಸಿದ ಪ್ರಥಮ ಕನ್ನಡ ಚಿತ್ರವೆಂದೂ ದಾಖಲಾದ ‘ಸಂಸಾರ ನೌಕ’ ಕನ್ನಡಕ್ಕೆ ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರೋದ್ಯಮಕ್ಕೆ ಸಾಮಾಜಿಕ ಚಿತ್ರ ಪರಂಪರೆಗೆ ಬುನಾದಿ ಹಾಕಿಕೊಟ್ಟಿತು.

ಕನ್ನಡ ಚಿತ್ರರಂಗಕ್ಕೆ ಅನನ್ಯ ಕೊಡುಗೆ ಕೊಟ್ಟ ಬಿ.ಆರ್‌. ಪಂತುಲು ನಾಯಕರಾಗಿ ಮೊದಲಬಾರಿಗೆ ಕ್ಯಾಮೆರಾ ಎದುರಿಸಿದ ಈ ಚಿತ್ರದಲ್ಲಿ ನಾಯಕಿ ಸರಳಾ ಪಾತ್ರ ವಹಿಸಿದ್ದವರು ಕನ್ನಡದ ಪ್ರಸಿದ್ಧ ನಾಯಕ ನಟಿ ಎಂ.ವಿ. ರಾಜಮ್ಮ.

ಕನ್ನಡದ ಮೊದಲ ನಿರ್ಮಾಪಕಿ ಎಂಬ ದಾಖಲೆ ಹೊಂದಿರುವ ಎಂ.ವಿ. ರಾಜಮ್ಮ, ಟಿ.ಎನ್‌. ಬಾಲಕೃಷ್ಣ, ಜಿ.ವಿ. ಅಯ್ಯರ್‌ ಅವರಂತಹ ಪ್ರತಿಭೆಗಳನ್ನು ಚಿತ್ರರಂಗಕ್ಕೆ ತಂದವರು.

ತೊಂಬತ್ತರ ಅಂಚಿನಲ್ಲಿಯೂ ಚಟುವಟಿಕೆಯಿಂದ ಈಗಲೂ ನಮ್ಮೊಂದಿಗಿರುವ ಎಸ್‌.ಕೆ. ಪದ್ಮಾದೇವಿ ‘ಸಂಸಾರ ನೌಕ’ದಲ್ಲಿ ಸುಶೀಲೆ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದರು.

ಸರೋಜಮ್ಮ (ಗಿರಿಜೆ), ಎಂ.ಎಸ್‌. ಮಾಧವರಾವ್‌ (ಮಾಧು), ಎಂ. ಮಾಧವರಾವ್‌ (ಡಿಕ್ಕಿ), ಎಚ್‌. ಕೃಷ್ಣಮೂರ್ತಿ (ಬ್ಯಾರಿಸ್ಟರ್‌), ಎಚ್‌.ಆರ್‌. ಹನುಮಂತರಾವ್‌, ಜಿ.ಟಿ. ಬಾಲಕೃಷ್ಣರಾವ್‌ ಅವರಂತಹ ರಂಗಭೂಮಿ ಪರಿಣಿತರನ್ನ ಚಿತ್ರರಂಗಕ್ಕೆ ತಂದ ನಿರ್ದೇಶಕ ಎಚ್‌.ಎಲ್‌.ಎನ್‌. ಸಿಂಹ ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇವರೊಂದಿಗೆ ಹುಣಸೂರು ಕೃಷ್ಣಮೂರ್ತಿ, ಸೋರಟ್‌ ಅಶ್ವತ್‌ ಕೂಡ ತಾರಾಗಣದಲ್ಲಿದ್ದರು.

ಸಹೋದರ ನಂಜಪ್ಪನವರ ಒತ್ತಾಸೆಯಿಂದ ತಮ್ಮ ದೇವಿ ಫಿಲಂಸ್‌ ಮೂಲಕ ‘ಸಂಸಾರ ನೌಕ’ವನ್ನು ತಯಾರಿಸಿದ ಕೆ. ರಾಜಗೋಪಾಲ ಚೆಟ್ಟಿಯಾರ್‌ ನಿರ್ಮಾಣದ ಯಾವುದೇ ಹಂತದಲ್ಲೂ ಗುಣಮಟ್ಟಕ್ಕೆ ರಾಜಿ ಮಾಡಿಕೊಳ್ಳಲಿಲ್ಲ.

ಚಿತ್ರ ಚೆನ್ನಾಗಿ ಮೂಡಿ ಬರಬೇಕೆಂದು ಉತ್ತಮ ತಂತ್ರಜ್ಞರನ್ನು ಉಪಯೋಗಿಸಿಕೊಂಡರು. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಡಿ.ಬಿ. ಚವಾಣ್ ಹಾಗೂ ವಿದೇಶಿ ತಂತ್ರಜ್ಞ ಟಿ. ಟೆಲಂಗ್‌ ಕೆಲಸ ಮಾಡಿದ್ದರು. ಶರ್ಮ ಬ್ರದರ್ಸ್‌ ವಾದ್ಯಗೋಷ್ಠಿ ಹಾಗೂ ಎಸ್‌. ನಾಗರಾಜರಾವ್‌ ಸಂಗೀತ ಚಿತ್ರಕ್ಕಿತ್ತು.

ನಾಯಕನ ದುಃಖದ ಸನ್ನಿವೇಶಗಳಲ್ಲಿ ಹೆಸರಾಂತ ಸಂಗೀತ ವಿದ್ವಾಂಸ ಎಂ.ಎಂ. ದಂಡಪಾಣಿ ದೇಶಿಕರ್‌ ಅವರು ಕಲ್ಯಾಣಿ ರಾಗದ ಹಾಡುಗಳನ್ನು ಸಂಯೋಜಿಸಿದ್ದರು. ‘ಮಿರುಗುವ ತಾರೆ ಧರೆಗೀಗ ಬಾರೆ...’ ಸೇರಿದಂತೆ ಹದಿನೇಳಕ್ಕೂ ಹೆಚ್ಚು ಹಾಡುಗಳಿದ್ದ ಈ ಚಿತ್ರಕ್ಕಾಗಿ ಕಾಂಬೋಜಿ, ಮೋಹಿನಿ, ಬೈರವಿ, ಸಾರಂಗ, ಮಧುಮನೆ ಇತ್ಯಾದಿ ರಾಗಗಳು ಬಳಕೆಯಾಗಿದ್ದವು.

ಒಟ್ಟು 189 ನಿಮಿಷಗಳ ಅವಧಿಯ ‘ಸಂಸಾರ ನೌಕ’ ಚಿತ್ರದ ವಿಮರ್ಶೆಯನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಪತ್ರಿಕೆಗಳೂ ಪ್ರಕಟಿಸಿದ್ದವು. ಈ ಚಿತ್ರದ ಕುರಿತ ಸವಿವರವಾದ ಮಾಹಿತಿಯನ್ನು ಆಗಿನ ಪ್ರಸಿದ್ಧ ಆಂಗ್ಲ ವಾರಪತ್ರಿಕೆ ‘ಸಂಡೇ ಟೈಮ್‌್ಸ’ ಪ್ರಕಟಿಸಿತ್ತು. ಆಗ ಅದರ ಸಂಪಾದಕರಾಗಿದ್ದವರು ಕನ್ನಡಿಗ ಎಂ.ವಿ. ಕಾಮತ್‌.

ರಂಗಭೂಮಿಯಂತೆ ಚಲನಚಿತ್ರರಂಗದಲ್ಲೂ ಇತಿಹಾಸ ಸೃಷ್ಟಿಸಿದ ‘ಸಂಸಾರ ನೌಕ’ ಎಂಟು ದಶಕಗಳ ಹಿಂದೆ 1936ರಲ್ಲಿ ತೆರೆಗೆ ಬಂದ ಏಕೈಕ ಕನ್ನಡ ಚಿತ್ರವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT