ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವಹಕ್ಕುಗಳು ಮತ್ತು ನೈತಿಕ ಅನುಭವ

ಆಮ್ನೆಸ್ಟಿ
Last Updated 27 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮಾನವ ಹಕ್ಕುಗಳ ಘನತೆಯನ್ನು ಎತ್ತಿಹಿಡಿಯುವ ಹೋರಾಟದಲ್ಲಿ ನೊಬೆಲ್‌ ಸೇರಿದಂತೆ ಹಲವು ಅಂತರರಾಷ್ಟ್ರೀಯ ಗೌರವಗಳಿಗೆ ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್’ ಒಳಗಾಗಿದೆ. ಮತ್ತೊಂದೆಡೆ, ಐದು ದಶಕಗಳಿಗೂ ಹೆಚ್ಚಿನ ತನ್ನ ಹೋರಾಟದ ಹಾದಿಯಲ್ಲಿ ಹಲವಾರು ದೇಶಗಳ ಮತ್ತು ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇದೀಗ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರ ಮೂಲಕ ಆಮ್ನೆಸ್ಟಿ ಮತ್ತೆ ಸುದ್ದಿಯಲ್ಲಿದೆ. ಆಮ್ನೆಸ್ಟಿಯ ಎರಡೂ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಲೇ – ಮಾನವಹಕ್ಕುಗಳ ಭಾಷೆ, ದೇಶಪ್ರೇಮ ಅಥವಾ ದೇಶದ್ರೋಹ ಹಾಗೂ ಸರ್ಕಾರದ ನಿಲುವುಗಳ ಕುರಿತು ಪುನರ್‌ ಚಿಂತಿಸಬೇಕಾಗಿದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್’ ನಡೆಸಿದ ಕಾಶ್ಮೀರ ಕುರಿತಾದ ಸಂವಾದ ಕಾರ್ಯಕ್ರಮ ಮತ್ತು ಅದರ ಬಗ್ಗೆ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ಸಲ್ಲಿಸಿದ ದೂರಿನ ಅನ್ವಯ ಪೊಲೀಸರು ಆಮ್ನೆಸ್ಟಿಯ ಬಗ್ಗೆ ದಾಖಲಿಸಿರುವ ‘ಎಫ್‌ಐಆರ್’ – ಇವುಗಳು ಪ್ರಜಾಪ್ರಭುತ್ವದ ಒಂದು ಮುಖ್ಯ ಸಮಸ್ಯೆಯನ್ನು ಮುನ್ನೆಲೆಗೆ ತಂದು ನಿಲ್ಲಿಸಿವೆ.

ಅದೇನೆಂದರೆ, ಒಂದು ಗುಂಪಿನ ಮಾನವಹಕ್ಕುಗಳು ಮತ್ತು ಒಂದು ದೇಶದ ಸಾರ್ವಭೌಮತ್ವ ಈ ಎರಡೂ ಒಂದಕ್ಕೊಂದು ವಿರುದ್ಧವಾಗಿದೆ ಎಂದು ಕಂಡಾಗ, ಮತ್ತು ಈ ಎರಡರ ಮಧ್ಯೆಯೇ ನಾವು ಆಯ್ಕೆ ಮಾಡಬೇಕು ಎಂದಾದಾಗ, ಅಂತಹ ಆಯ್ಕೆಯನ್ನು ಮಾಡುವುದು ಹೇಗೆ ಎಂಬ ವಿಚಾರ.

ಆಮ್ನೆಸ್ಟಿಗೆ ಇಂತಹ ಘಟನೆಯೇನೂ ಹೊಸತಲ್ಲ. 1961ರಿಂದ ಈವರೆಗಿನ ಅದರ ಐದು ದಶಕಗಳಿಗೂ ಹೆಚ್ಚಿನ ಮಾನವಹಕ್ಕುಗಳ ಹೋರಾಟದಲ್ಲಿ ಆಮ್ನೆಸ್ಟಿ ಪ್ರಪಂಚದ ಹಲವಾರು ದೇಶಗಳ ಮತ್ತು ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿದೆ.

ತನ್ನ ದೇಶದಿಂದ ವಲಸಿಗರನ್ನು ದೂರವಿಡಲು ಮಾನವ ಕಳ್ಳಸಾಗಣೆದಾರರಿಗೆ ಆಸ್ಟ್ರೇಲಿಯಾ ಸರ್ಕಾರ ಹಣ ಕೊಟ್ಟಿದೆ ಎಂದು 2015ರಲ್ಲಿ ಆಮ್ನೆಸ್ಟಿ ವರದಿ ಮಾಡಿತ್ತು. ಆಗ ಆಸ್ಟ್ರೇಲಿಯಾ ಆಮ್ನೆಸ್ಟಿಯ ವರದಿಯನ್ನು ಅಲ್ಲಗೆಳೆದಿತ್ತು.

ಅದೇ ವರ್ಷ ಝೆಕ್ ಗಣರಾಜ್ಯದ ಸಾರ್ವಜನಿಕ ಶಾಲೆಗಳಲ್ಲಿ ರುಮೇನಿ ಮಕ್ಕಳು ಜನಾಂಗೀಯ ಭೇದಕ್ಕೆ ಗುರಿಯಾಗಿದ್ದಾರೆ ಎಂದೂ ಆಮ್ನೆಸ್ಟಿ ಹೇಳಿತ್ತು. ಅಲ್ಲಿನ ಸರ್ಕಾರ ಆಮ್ನೆಸ್ಟಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಈ ಸಂಸ್ಥೆಯ ಎಲ್ಲಾ ಸಂಶೋಧನೆಯೂ ಸುಳ್ಳು ಎಂದು ವಾದಿಸಿತ್ತು.

2001ರ ತನ್ನ ವರದಿಯಲ್ಲಿ ಚೀನಾದಲ್ಲಿ ಅಧಿಕಾರಿಗಳು ಬಲಪ್ರಯೋಗ ಮತ್ತು ಲೈಂಗಿಕ ಶೋಷಣೆಯ ಮೂಲಕ ಜನರನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆಮ್ನೆಸ್ಟಿ ಹೇಳಿತ್ತು. ಇದರಿಂದ ಸಿಟ್ಟಿಗೆದ್ದ ಚೀನಾ, ‘ಆಮ್ನೆಸ್ಟಿ ಸಂಸ್ಥೆಯು ಚೀನಾದಂತಹ ದೇಶಗಳ ವಿಚಾರಕ್ಕೆ ಬಂದಾಗ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಚಲಿತವಿರುವ ಊಹಾಪೋಹಗಳನ್ನೇ ಸತ್ಯವರದಿ ಎನ್ನುವಂತೆ ಬಿಂಬಿಸುತ್ತದೆ’ ಎಂದು ಆಪಾದಿಸಿತ್ತು.

2000ನೇ ಇಸವಿಯಲ್ಲಿ ಕಾಂಗೋ ದೇಶದ ಸರ್ಕಾರ ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ರಾಜಕಾರಣಿಗಳನ್ನು ಹೇಗೆ ವ್ಯವಸ್ಥಿತವಾಗಿ ಹತ್ತಿಕ್ಕುತ್ತಿದೆ ಎಂದು ವರದಿ ಮಾಡಿತ್ತು. ನಿರೀಕ್ಷೆಯಂತೆ ಅಲ್ಲಿನ ಸರ್ಕಾರ ಆಮ್ನೆಸ್ಟಿಯನ್ನು ಟೀಕಿಸಿ, ‘ದೇಶದಲ್ಲಿ ತೀವ್ರಗಾಮಿಗಳು ಮತ್ತು ಭಯೋತ್ಪಾದಕರು ಅರಾಜಕತೆಯನ್ನು ಹುಟ್ಟುಹಾಕಿದ್ದಾರೆ. ಆಮ್ನೆಸ್ಟಿಗೆ ನಿಜವಾಗಿಯೂ ಈ ದೇಶದ ಕಾಳಜಿ ಇದ್ದರೆ ಅದರ ಕುರಿತು ವರದಿ ಮಾಡಲಿ’ ಎಂದಿತ್ತು.

ಹಾಗೆಯೇ ಕತಾರ್‌ನಲ್ಲಿ ವಲಸಿಗ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎನ್ನುವ ಆಮ್ನೆಸ್ಟಿಯ 2015ರ ವರದಿಯೂ ಅಲ್ಲಿನ ಸರ್ಕಾರಕ್ಕೆ ಭಾರೀ ಮುಜುಗರ ಉಂಟುಮಾಡಿತ್ತು. ವಾಡಿಕೆಯಂತೆ ಈ ವರದಿಯನ್ನೂ ಅಲ್ಲಿನ ಸರ್ಕಾರ ಅಸತ್ಯವೆಂದು ನಿರಾಕರಿಸಿತ್ತು. ಆದರೆ, ಇದೇ ಐದು ದಶಕಗಳಲ್ಲಿ ಆಮ್ನೆಸ್ಟಿಯ ಮಾನವಹಕ್ಕುಗಳ ಕುರಿತಾದ ಕೆಲಸ ಮತ್ತು ಸಂಶೋಧನೆಗಾಗಿ ಹಲವಾರು ಮೆಚ್ಚುಗೆಯ ಪ್ರಶಸ್ತಿಗಳೂ ಗೌರವಗಳೂ ದೊರೆತಿದೆ.

1977ರಲ್ಲಿ ಯುದ್ಧ ಮತ್ತು ಇತರ ಪರಿಸ್ಥಿತಿಗಳಲ್ಲಿ ಚಿತ್ರಹಿಂಸೆಯನ್ನು ಬಳಸುವುದರ ವಿರುದ್ಧ ಆಮ್ನೆಸ್ಟಿ ನಡೆಸಿದ ಆಂದೋಲನವನ್ನು ಗಮನಿಸಿ ಅದಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ. 1978ರಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕ್ಷೇತ್ರದ ಪ್ರಶಸ್ತಿಯೂ ಆಮ್ನೆಸ್ಟಿಗೆ ದೊರೆತಿದೆ. ಪ್ರಪಂಚದಾದ್ಯಂತ ಇಂದು ಮಾನವಹಕ್ಕುಗಳ ವಿಚಾರದಲ್ಲಿ ಆಮ್ನೆಸ್ಟಿಗೆ ಅಗ್ರಸ್ಥಾನ. ಆಮ್ನೆಸ್ಟಿಯ ಸಂಶೋಧನೆ ಪ್ರತಿಪಾದಿಸಿದ ಎಷ್ಟೋ ವಿಚಾರಗಳನ್ನು ಇಂದು ಅಂತರರಾಷ್ಟ್ರೀಯ ಸಮುದಾಯ ಮಾನ್ಯ ಮಾಡಿದೆ.

ಆಮ್ನೆಸ್ಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಗಳ ಜೊತೆಗೆ ವಕಾಲತ್ತು ವಹಿಸಿದ ಕಾರಣದಿಂದಾಗಿಯೇ ವಿಶ್ವಸಂಸ್ಥೆ 1993ರಲ್ಲಿ ‘ಮಾನವಹಕ್ಕುಗಳ ಹೈಕಮೀಶನರ್’ ಎನ್ನುವ ಕಚೇರಿಯನ್ನು ಸ್ಥಾಪಿಸಿತು. 2002ರಲ್ಲಿ ‘ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌’ನ ಸ್ಥಾಪನೆಯೂ ಆಮ್ನೆಸ್ಟಿಯ ಶ್ರಮದ ಫಲ.

ಇತ್ತೀಚೆಗೆ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ವಿರುದ್ಧ, ಹಾಗೆಯೇ ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯಾಟ್ಟ ವಿರುದ್ಧ ಜನಾಂಗೀಯ ಹಿಂಸೆಯ ಆರೋಪದ ವಿಚಾರಣೆ ನಡೆಸಿದ್ದು, ನೆದರ್ಲೆಂಡ್‌ನ ದಿ ಹೇಗ್‌ನಲ್ಲಿರುವ ವಿಶ್ವಸಂಸ್ಥೆಯ ಈ ನ್ಯಾಯಾಲಯವೇ.

ಆಮ್ನೆಸ್ಟಿಯ ಹುಟ್ಟು ಮತ್ತು ಆಶಯ
ಆಮ್ನೆಸ್ಟಿ ಹುಟ್ಟಿದ್ದು 1961ರಲ್ಲಿ. ಇದನ್ನು ಸ್ಥಾಪಿಸಿದ್ದು ಲಂಡನ್‌ನಲ್ಲಿ ವಕೀಲನಾಗಿದ್ದ ಪೀಟರ್ ಬೆನೆನ್‌ಸನ್. ಪೋರ್ಚುಗಲ್‌ನ ಅಂತೋನಿಯೋ ಸಲಾಝಾರ್‌ನ ನಿರಂಕುಶ ಆಡಳಿತ ಇಬ್ಬರು ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯಕ್ಕಾಗಿ ಘೋಷಣೆ ಕೂಗಿದ ದೇಶದ್ರೋಹದ ಆಪಾದನೆಯ ಮೇಲೆ ಏಳು ವರ್ಷ ಬಂಧನಕ್ಕೆ ತಳ್ಳಿತು. ಇದರಿಂದ ವಿಚಲಿತನಾಗಿ ಬೆನೆನ್ಸನ್ ಈ ಸಂಸ್ಥೆಯನ್ನು ಸ್ಥಾಪಿಸಿದ.

ಆಮ್ನೆಸ್ಟಿ ಯಾವುದೇ ರಾಜಕೀಯ ಚಿಂತನೆಯ ಪರವಾಗಿಯೂ ತನ್ನನ್ನು ಗುರುತಿಸಿಕೊಂಡಿಲ್ಲ. ಅದು ರಾಜಕೀಯ ಹೋರಾಟದಲ್ಲಿ ಹಿಂಸೆಯನ್ನು ವಿರೋಧಿಸುವುದೂ ಇಲ್ಲ ಅಥವಾ ಸಮರ್ಥಿಸುವುದೂ ಇಲ್ಲ. ತಮ್ಮ ಆತ್ಮಸಾಕ್ಷಿಯ ಪ್ರಕಾರ ನಡೆದುಕೊಂಡದ್ದಕ್ಕಾಗಿ ಶಿಕ್ಷೆ ಅನುಭವಿಸುತ್ತಿರುವವರ ಬಿಡುಗಡೆಗೆ ಅಥವಾ ಕ್ಷಮಾದಾನಕ್ಕೆ ಹೋರಾಡುವುದು ಆಮ್ನೆಸ್ಟಿಯ ಮುಖ್ಯ ಉದ್ದೇಶಗಳಲ್ಲೊಂದು. ಆಮ್ನೆಸ್ಟಿ ಪದದ ಅರ್ಥವೇ ಕ್ಷಮಾದಾನ ಎಂದು.

ಆದರೆ, ಹಿಂಸೆಯನ್ನು ಪ್ರಚೋದಿಸಿ ಅದರ ಕಾರಣಕ್ಕೆ ಆಯಾಯಾ ದೇಶದ ಕಾನೂನುರೀತ್ಯ ಶಿಕ್ಷೆಗೆ ಈಡಾಗಿರುವವರ ಕ್ಷಮಾದಾನಕ್ಕೆ ಆಮ್ನೆಸ್ಟಿ ಸಾಮಾನ್ಯವಾಗಿ ಹೋರಾಡುವುದಿಲ್ಲ. ಹಾಗೆಯೇ ಸಾಮಾನ್ಯವಾಗಿ ರಾಜಕೀಯ ಪಕ್ಷಗಳಿಂದ ಮತ್ತು ಸರ್ಕಾರಗಳಿಂದ ಅದು ಧನಸಹಾಯವನ್ನೂ ಪಡೆಯುವುದಿಲ್ಲ. ಇದಕ್ಕೆ ಅಪವಾದವೆಂಬಂತೆ ಕೆಲವೊಮ್ಮೆ ಬ್ರಿಟನ್, ಅಮೆರಿಕಾ ಮತ್ತು ಯೂರೋಪಿಯನ್ ಕಮಿಶನ್‌ನಿಂದ ಅಮ್ನೆಸ್ಟಿ ಸಹಾಯ ಪಡೆದದ್ದಿದೆ.

ಪ್ರಪಂಚದಾದ್ಯಂತ ಸುಮಾರು ಎಪ್ಪತ್ತು ಲಕ್ಷ ಜನ ಆಮ್ನೆಸ್ಟಿಯ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಬೇರೆಬೇರೆ ದೇಶಗಳಲ್ಲಿರುವ ಆಮ್ನೆಸ್ಟಿಯ ಶಾಖೆಗಳನ್ನು ‘ಸೆಕ್ಷನ್‌’ಗಳು ಎಂದು ಕರೆಯಲಾಗುತ್ತದೆ. ಇವಕ್ಕೆ ತಮ್ಮದೇ ಸ್ವತಂತ್ರ ಕಾರ್ಯಕ್ಷೇತ್ರಗಳಿವೆ.

ಭಾರತದಲ್ಲಿ ಆಮ್ನೆಸ್ಟಿ ಗಲ್ಲುಶಿಕ್ಷೆಯ ವಿರುದ್ಧ, ಶ್ರೀಲಂಕಾದ ಜನಾಂಗೀಯ ಕಲಹದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ, ವಿಚಾರಣೆಗೆ ಮುನ್ನ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಶಿಕ್ಷೆಯ ಅವಧಿಯನ್ನೂ ಮೀರಿ ಬಂಧನದಲ್ಲೇ ಇರುವವರ ಹಕ್ಕುಗಳ ಪರವಾಗಿ – ಹೀಗೆ ಹಲವಾರು ವಿಷಯಗಳಲ್ಲಿ ಕೆಲಸ ಮಾಡುತ್ತಿದೆ. ಈ ಕೊನೆಯ ಯೋಜನೆ ಕರ್ನಾಟಕ ಸರ್ಕಾರದ ಜೊತೆಗೂಡಿ ಮಾಡುತ್ತಿರುವ ಯೋಜನೆಯೂ ಹೌದು.

ಕಾಶ್ಮೀರ ಮತ್ತು ಆಮ್ನೆಸ್ಟಿ
ಜಮ್ಮುಕಾಶ್ಮೀರ ಪೊಲೀಸರು 1989ರಿಂದಲೂ ಭಾರತೀಯ ಸೈನಿಕರಿಂದ ನಡೆದಿದೆ ಎನ್ನಲಾದ ಅಪರಾಧಗಳ ಕುರಿತು ಎಫ್‌ಐಆರ್‌ಗಳನ್ನು ದಾಖಲಿಸುತ್ತಲೇ ಬಂದಿದ್ದಾರೆ. ಈ ಅಪಾದನೆಗಳನ್ನು ಮಿಲಿಟರಿ ಕೋರ್ಟುಗಳಲ್ಲದೇ ಸಾಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಅಂದಿನಿಂದಲೂ ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ.

ಆದರೆ, 1990ರ ಜಮ್ಮು ಕಾಶ್ಮೀರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ 7ನೇ ಪರಿಚ್ಛೇದದ ಪ್ರಕಾರ, ಇಂತಹ ವಿಚಾರಣೆಗಳಿಂದ ಸಶಸ್ತ್ರ ಪಡೆಗಳಿಗೆ ವಿನಾಯಿತಿ ಇದೆ. ಈ ಪರಿಚ್ಛೇದವನ್ನು ತೆಗೆದು ಹಾಕಲು ಸರ್ಕಾರದ ಮೇಲೆ ಹಲವು ಗುಂಪುಗಳಿಂದ ಒತ್ತಾಯ ಬಂದಿದ್ದರೂ ಯಾವ ಸರ್ಕಾರವೂ ಇದನ್ನು ಮಾಡುವ ಗೋಜಿಗೆ ಹೋಗಿಲ್ಲ. ಅದಕ್ಕೆ ದೇಶದ ಭದ್ರತೆಯೂ ಸೇರಿದಂತೆ ಹಲವಾರು ಕಾರಣಗಳಿರಬಹುದು.

ಜೊತೆಗೆ ಕಾಶ್ಮೀರದಲ್ಲಿ ಕೇಂದ್ರದ ನಿಯಂತ್ರಣ ಮೀರಿ ನಡೆಯುವ ರಾಜಕೀಯ ಗುಂಪುಗಳ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶವೂ ಇರಬಹುದು. ಇತ್ತೀಚೆಗಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯ ಸೈನಿಕರಿಗೆ ಇರುವ ಈ ವಿನಾಯಿತಿಯನ್ನು ಕಡಿತ ಮಾಡಿದೆ. 

ಇಂತಹ ಸಂದರ್ಭದಲ್ಲಿ ತಮ್ಮ ಮಕ್ಕಳು ಮತ್ತು ಸಂಬಂಧಿಕರನ್ನು ಕಳೆದುಕೊಂಡಿರುವ ಕುಟುಂಬಗಳ ಅಹವಾಲುಗಳನ್ನು ಕೇಳುವ ಉದ್ದೇಶದಿಂದ ಆಮ್ನೆಸ್ಟಿ ಬೆಂಗಳೂರಿನಲ್ಲಿ ಒಂದು ಸಭೆ ಏರ್ಪಡಿಸಿತ್ತು. ಆ ಸಭೆಯಲ್ಲಿ ಕಾಶ್ಮೀರದ ಮುಸಲ್ಮಾನರಲ್ಲದೇ ಕಾಶ್ಮೀರವನ್ನು ತೊರೆದಿದ್ದ ಕಾಶ್ಮೀರಿ ಪಂಡಿತರಿಗೂ ಆಹ್ವಾನ ನೀಡಲಾಗಿತ್ತು.

ಭಾರತೀಯ ಸೈನ್ಯವನ್ನು ಟೀಕಿಸಿದ ಕಾಶ್ಮೀರದ ಒಬ್ಬ ವ್ಯಕ್ತಿಗೂ ಮತ್ತು ಸೇನೆಯ ಪರವಾಗಿ ಮಾತನಾಡಿದ ಒಬ್ಬ ಕಾಶ್ಮೀರಿ ಪಂಡಿತರಿಗೂ ಮಾತಿನ ಚಕಮಕಿ ನಡೆಯಿತು. ಅದರಲ್ಲಿ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಘೋಷಣೆಗಳನ್ನೂ ಕೂಗಲಾಯಿತು. ನಂತರ ಅಲ್ಲಿದ್ದ ‘ಎಬಿವಿಪಿ’ ಸದಸ್ಯರು ಇದು ದೇಶದ್ರೋಹದ ಅಪರಾಧ ಎಂದು ವಾದಿಸಿ ದೂರು ದಾಖಲಿಸಿದರು.

ಇದು ದೇಶದ್ರೋಹವೇ ಅಲ್ಲವೇ ಎನ್ನುವುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಕಾಶ್ಮೀರದ ಜನರು ತಮ್ಮ ವಿರುದ್ಧ ನಡೆಯುತ್ತಿರುವ ಅತ್ಯಾಚಾರವನ್ನು ಪ್ರತಿಭಟಿಸುವ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗುವ ಹಕ್ಕು ಹೊಂದಿದ್ದಾರೆ ಎನ್ನುವುದು ಎಷ್ಟು ನಿಜವೋ ಹಾಗೆಯೇ ಅದನ್ನು ಕಾನೂನು ರೀತಿಯಲ್ಲಿಯೇ ವಿರೋಧಿಸುವ ಹಕ್ಕನ್ನೂ ‘ಎಬಿವಿಪಿ’ ಸದಸ್ಯರೂ ಹೊಂದಿದ್ದಾರೆ ಎನ್ನುವುದೂ ಅಷ್ಟೇ ನಿಜ.

ಬಹುಶಃ ಈ ವಿಚಾರದಲ್ಲಿ ಭಯೋತ್ಪಾದಕರನ್ನು ಓಲೈಸುತ್ತಿದೆ ಎನ್ನುವ ಆಪಾದನೆ ಎಲ್ಲಿ ಬಂದುಬಿಡುತ್ತದೋ ಎಂದು ಹೆದರಿ ಕರ್ನಾಟಕ ಸರ್ಕಾರ ಸ್ವಲ್ಪ ಅತಿಯಾಗಿಯೇ ಪ್ರತಿಕ್ರಿಯೆ ಮಾಡಿರಲಿಕ್ಕೂ ಸಾಕು.

ಒಟ್ಟಾರೆಯಾಗಿ ಕಾಶ್ಮೀರದ ಕುರಿತ ವಿಚಾರ ಬಂದ ತಕ್ಷಣ ಈಗ ಭಾರತದಲ್ಲಿ ಸ್ಪಷ್ಟವಾಗಿ ಎರಡು ಗುಂಪುಗಳಾದಂತೆ ತೋರುತ್ತದೆ. ಒಂದು, ಕಾಶ್ಮೀರದ ವಿಚಾರವನ್ನು ಮಾತನಾಡುವುದು ಎಂದರೆ ಕಾಶ್ಮೀರಿಗಳ ಸ್ವಾತಂತ್ರ್ಯದ ಪರವಾಗಿ ಮಾತನಾಡುವುದು ಎಂದುಕೊಳ್ಳುವ ಗುಂಪು. ಇನ್ನೊಂದು ಇದು ದೇಶದ್ರೋಹಕ್ಕೆ ಸಮ ಎಂದು ವಾದಿಸುವ ಗುಂಪು.

ಭಾರತದ ಪತ್ರಿಕೆಗಳ ಆನ್‌ಲೈನ್ ಆವೃತ್ತಿಗಳಲ್ಲಿ, ಕಾಶ್ಮೀರದಲ್ಲಿ ಸೇನೆಯಿಂದ ನಡೆಯುತ್ತಿರುವ ಅಪರಾಧಗಳನ್ನು ಕುರಿತು ಬಂದಿರುವ ವರದಿಗಳಿಗೆ ಹಲವಾರು ಓದುಗರು ಪ್ರತಿಕ್ರಿಯಿಸಿದ್ದಾರೆ. ಹೆಚ್ಚಾಗಿ ಅವೆಲ್ಲವೂ ಭಾರತದ ಸೇನೆಯ ಪರವಾಗಿ ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕರ ವಿರುದ್ಧವಾಗಿ ಇವೆ. ಮತ್ತು ಅಂತಹ ಭಯೋತ್ಪಾದಕರಿಗೆ ಮರುಳಾಗಿದ್ದಾರೆ ಎನ್ನಲಾದ ಕಾಶ್ಮೀರಿಗಳ ವಿರುದ್ಧವೇ ಇವೆ.

ಅಷ್ಟೇ ಏಕೆ, ಬೆಂಗಳೂರಿನ ಘಟನೆಯ ಕುರಿತು ಆಮ್ನೆಸ್ಟಿ ತನ್ನದೇ ಜಾಲತಾಣದಲ್ಲಿ ಬರೆದ ಲೇಖನಕ್ಕೂ ನೂರಾರು ಪ್ರತಿಕ್ರಿಯೆಗಳು ಬಂದವು. ಅಪವಾದಕ್ಕಾದರೂ ಒಂದಿಲ್ಲದಂತೆ ಆ ಎಲ್ಲ ಪ್ರತಿಕ್ರಿಯೆಗಳೂ ಆಮ್ನೆಸ್ಟಿಯನ್ನು ಟೀಕಿಸುವ ಮತ್ತು ಅದರ ವಿದೇಶೀ ಮೂಲಗಳನ್ನು ಶೋಧಿಸುವುದಕ್ಕೇ ಮೀಸಲಾಗಿದ್ದವು.

ಜಾಲತಾಣಗಳಲ್ಲಿ ಅನಾಮಧೇಯವಾಗಿ ಬರೆಯುವ ಅನುಕೂಲ ಇರುವುದರಿಂದ ಜನ ಬೇಜವಾಬ್ದಾರಿಯಾಗಿ ಪ್ರತಿಕ್ರಿಯಿಸುತ್ತಾರೆ ಎನ್ನುವುದು ನಿಜವಾದರೂ, ಮತ್ತು ಈ ವಿಷಯದಲ್ಲಿ ಯಾವುದೋ ಒಂದು ಸಂಘಟನೆಯ ಬಗ್ಗೆ ಒಲವಿರುವ ಜನರೇ ಹೀಗೆ ನಕಾರಾತ್ಮಕ ಪ್ರತಿಕ್ರಿಯೆಗಳ ಅಭಿಯಾನವನ್ನೇ ಮಾಡಿರಬಹುದು ಎನ್ನುವುದು ಸಾಧ್ಯವಿದ್ದರೂ, ಇದರ ಹಿಂದಿರುವ ಮನೋಭಾವವನ್ನು ಅರ್ಥಮಾಡಿಕೊಳ್ಳದೇ ವಿಧಿಯಿಲ್ಲ.

ಇತ್ತೀಚೆಗಷ್ಟೇ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಮೂಲತಃ ಆ ಘಟನೆ ನಡೆದಿದ್ದು ಭಾರತದ ಸಂಸತ್ತಿನ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಗಲ್ಲುಶಿಕ್ಷೆಗೆ ಒಳಗಾದ ಅಫ್ಜಲ್ ಗುರುವಿನ ನೆನಪಿಗೆ ನಡೆದ ಕಾರ್ಯಕ್ರಮದಲ್ಲಿ.

ಅಫ್ಜಲ್ ಗುರುವಿನ ಮರಣದಂಡನೆಯ ಹಿಂದೆ ನ್ಯಾಯಾಂಗದ ವಿವೇಕಕ್ಕಿಂತ ರಾಜಕೀಯ ಲೆಕ್ಕಾಚಾರವೇ ಕೆಲಸ ಮಾಡಿದೆ ಎನ್ನುವುದು ಇವರ ಅಭಿಮತ. ಅದರ ಮಾರನೇ ದಿನವೇ ಅಂದರೆ ಫೆಬ್ರುವರಿ 10ರಂದು, ದೆಹಲಿ ವಿವಿಯ ಪ್ರಾಧ್ಯಾಪಕರು ಮತ್ತು ಇತರ ಕೆಲವು ಚಿಂತಕರು ದೆಹಲಿಯ ಪ್ರೆಸ್ ಕ್ಲಬ್‌ನಲ್ಲಿ ಇದೇ ಅಫ್ಜಲ್ ಗುರುವಿನ ನೆನಪಿಗೆ ಮತ್ತೊಂದು ಕಾರ್ಯಕ್ರಮ ಏರ್ಪಡಿಸಿದ್ದರು.

ಅದರ ನೇತೃತ್ವ ವಹಿಸಿದ್ದ ಎಸ್.ಎ.ಆರ್. ಗಿಲಾನಿಯನ್ನೂ ಪೊಲೀಸರು ಬಂಧಿಸಿದರು. ಆದರೆ ನಂತರದಲ್ಲಿ ಕನ್ಹಯಾ ಕುಮಾರ್ ಸೇರಿದಂತೆ ಎಲ್ಲಾ ವಿದ್ಯಾರ್ಥಿ ಮುಖಂಡರೂ ಕಾಶ್ಮೀರದ ಈ ವಿಷಯವನ್ನು ಮೂಲೆಗುಂಪು ಮಾಡಿ ತಮ್ಮ ಸಭೆ, ಪ್ರತಿಭಟನೆ ಇದ್ದದ್ದು ಯುಜಿಸಿಯ ವಿರುದ್ಧ, ಹೈದರಾಬಾದಿನಲ್ಲಿ ನಡೆದ ರೋಹಿತ್ ವೇಮುಲ ಆತ್ಮಹತ್ಯೆಯ ವಿರುದ್ಧ ಎಂದು ಹೇಳುವ ಮೂಲಕ ಅದಕ್ಕೆ ಒಂದು ವಿಶಾಲ ಜನಪ್ರಿಯತೆಯ ಲೇಪನವನ್ನು ನೀಡಲು ಪ್ರಯತ್ನಿಸಿದರು.

‘ಜೆಎನ್‌ಯು’ ವಿದ್ಯಾರ್ಥಿಗಳ ಪರವಾಗಿದ್ದ ಎಡಪಂಥೀಯ ಪಕ್ಷಗಳು ಮತ್ತು ಇತರ ಚಿಂತಕ ವಲಯವೂ ಸಹ ಜೋಪಾನವಾಗಿ ಕಾಶ್ಮೀರದ ವಿಷಯವನ್ನೇ ಬದಿಗೊತ್ತಿ, ಈ ವಿದ್ಯಾರ್ಥಿಗಳು ಒಂದು ಹೊಸ ಎಡಪಂಥೀಯ–ಅಂಬೇಡ್ಕರ್‌ವಾದೀ ಸಮ್ಮಿಲನಕ್ಕೆ ಹೋರಾಡಿದರು ಎನ್ನುವಂತೆ ಬಿಂಬಿಸಿದರು.

ದೆಹಲಿ ವಿವಿಯ ಪ್ರಾಧ್ಯಾಪಕರೊಬ್ಬರು ಹೇಳಿದಂತೆ, ಈಗ ನಾವೇನಾದರೂ ಗಿಲಾನಿ ಮತ್ತು ಕಾಶ್ಮೀರದ ವಿಷಯ ತಂದರೆ, ಇರುವ ಅಲ್ಪಸ್ವಲ್ಪ ಜನಬೆಂಬಲವನ್ನೂ ಕಳೆದುಕೊಂಡುಬಿಡುತ್ತೇವೆ ಎನ್ನುವ ಭಯ ಅವರಲ್ಲಿತ್ತು. ಹೀಗೆ ಕಾಶ್ಮೀರದ ವಿಷಯ ಒಂದು ವಿಚಿತ್ರ ರೀತಿಯ ಉದ್ವೇಗವನ್ನು, ಅಸಹನೆಯನ್ನು ಉಂಟುಮಾಡುವಂತೆ ಬೆಳೆದಿದೆ ಎನ್ನುವುದು ಸತ್ಯ.

ಮಾನವಹಕ್ಕುಗಳು ಮತ್ತು ಸಾಂಸ್ಥಿಕ ವ್ಯವಸ್ಥೆ
ಇಲ್ಲೆಲ್ಲಾ ಒಂದು ವಿಚಿತ್ರ ಸಮಸ್ಯೆ ಏಳುತ್ತದೆ. ಸೈನ್ಯದ ಯೋಧರು ರೈಲಿನಲ್ಲಿ ಅಸಭ್ಯವಾಗಿ ವರ್ತಿಸಿದರು ಎನ್ನುವ ಕಾರಣಕ್ಕೆ, ಟ್ರಾಫಿಕ್ ಪೋಲೀಸರಿಗೆ ಧಮಕಿ ಹಾಕಿದರು ಎನ್ನುವ ಕಾರಣಕ್ಕೆಲ್ಲಾ ಸಕಾರಣವಾಗಿಯೇ ಸಿಟ್ಟಿಗೇಳುವ ನಾವು ಅದೇ ಸೈನ್ಯದವರು ಸಾವಿರಾರು ಜನರನ್ನು ಅಕ್ರಮವಾಗಿ ಬಂಧಿಸುವುದರ ಬಗ್ಗೆ, ಹಿಂಸಿಸುವುದರ ಬಗ್ಗೆ, ಸೈನ್ಯದ ಕೈಯಲ್ಲಿ ಅಚಾನಕ್ಕಾಗಿ ಜನರು ಕಾಣೆಯಾಗುತ್ತಿರುವ ಬಗ್ಗೆ ಮಾನವಹಕ್ಕು ಗುಂಪುಗಳು ಕೂಗೆಬ್ಬಿಸಿದಾಗ ಸುಮ್ಮನಿರುತ್ತೇವೆ ಅಥವಾ ಸೈನ್ಯವನ್ನೇ ಸಮರ್ಥಿಸಿಕೊಂಡು ಮಾನವಹಕ್ಕುಗಳ ಕಾರ್ಯಕರ್ತ

ರನ್ನು ಟೀಕಿಸುತ್ತೇವೆ. ಒಂದು ದೃಷ್ಟಿಯಿಂದ ನೋಡಿದರೆ, ಜನರ ಈ ವರ್ತನೆ ರಾಷ್ಟ್ರೀಯತೆಯ ಅಮಲಿನಿಂದ ಉಂಟಾಗುವ ಸನ್ನಿ ಎಂದು ಕಾಣಿಸಬಹುದು. ಆದರೆ ಇನ್ನೊಂದು ದೃಷ್ಟಿಯಿಂದ ಇದರಲ್ಲಿ ಮಾನವಹಕ್ಕುಗಳ ಕಾರ್ಯಕರ್ತರೂ ಚಿಂತಿಸಬೇಕಾದ ಒಂದು ವಿಚಾರವಿರಬಹುದು. ಅದನ್ನು ಗಮನಿಸದೇ ಹೋದರೆ ಮಾನವಹಕ್ಕುಗಳನ್ನು ಸರ್ಕಾರಗಳು ದಮನ ಮಾಡುವುದರ ಜೊತೆಗೆ, ಅದನ್ನು ಸಾಮಾನ್ಯರೂ ತಿರಸ್ಕಾರದಿಂದ ನೋಡುವ ಸಾಧ್ಯತೆಯೇ ಹೆಚ್ಚು.

ಮಾನವಹಕ್ಕುಗಳು ಮನುಷ್ಯರಿಗೆ ಜನ್ಮಸಿದ್ಧವಾಗಿ ಬಂದಿರುವ ಹಕ್ಕುಗಳು, ವ್ಯಕ್ತಿಗಳಿಂದ ಇದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದೆಲ್ಲಾ ನಾವು ಎಷ್ಟೇ ವಾದಿಸಿದರೂ, ಒಂದು ಮರೆಯಲಾಗದ ಸತ್ಯವಿದೆ. ಅದೆಂದರೆ, ಈ ಹಕ್ಕುಗಳಿಗೆ ಅರ್ಥ ಬರುವುದು ಒಂದು ಪ್ರಜಾತಾಂತ್ರಿಕ ಸರ್ಕಾರದ ಸಾಂಸ್ಥಿಕ ವ್ಯವಸ್ಥೆಗಳ ಒಳಗೆ ಮಾತ್ರ. ತಾಲಿಬಾನಿಗಳ ಆಫ್ಘಾನಿಸ್ತಾನದಲ್ಲಿ, ಸಾಲಾಝಾರನ ಪೋರ್ಚುಗಲ್‌ನಲ್ಲಿ, ಸ್ಟಾಲಿನ್‌ನ ರಷ್ಯಾದಲ್ಲಿ ಇಂತಹ ಹಕ್ಕುಗಳಿಗೆ ಅರ್ಥವಿಲ್ಲ.

ಕೆಲವು ದೇಶಗಳಲ್ಲಿ ಮಾನವಹಕ್ಕುಗಳು ಹೆಚ್ಚಾಗಿ ಪಾಲನೆಯಾಗುವುದಕ್ಕೆ ಕಾರಣ ಆ ದೇಶದ ಜನ ಸಭ್ಯಸ್ಥರು, ನೀತಿವಂತರು ಎನ್ನುವುದಲ್ಲ. ಬದಲಾಗಿ, ತಲೆಮಾರುಗಳಿಂದ ಆ ದೇಶದಲ್ಲಿ ಸಾಂಸ್ಥಿಕ ವ್ಯವಸ್ಥೆಗಳು ಬೇರೂರಿವೆ, ಕಾನೂನಿನ ರೀತಿನೀತಿಗಳು ದಿನನಿತ್ಯದ ಸಾರ್ವಜನಿಕ ಬದುಕಿನಲ್ಲಿ ಪಾಲನೆಯಾಗುವ ಮತ್ತು ಪಾಲನೆಯಾಗದಿದ್ದರೆ ಅದನ್ನು ಗಮನಿಸುವ ಹತ್ತುಹಲವು ವ್ಯವಸ್ಥೆಗಳು ಸಮಾಜದಾದ್ಯಂತ ಕೆಲಸಮಾಡುತ್ತಿವೆ ಎನ್ನುವುದು.

ಅಂತೆಯೇ, ಕೆಲವು ದೇಶಗಳಲ್ಲಿ ಈ ಹಕ್ಕುಗಳು ಪಾಲನೆಯಾಗುತ್ತಿಲ್ಲವೆಂದರೆ ಅದಕ್ಕೆ ಕಾರಣ ಅಲ್ಲಿನ ಜನ ಅನಾಗರಿಕರು, ಮೂಲಭೂತವಾದಿಗಳು ಎನ್ನುವುದೂ ಅಲ್ಲ. ಅಂತಹ ದೇಶಗಳಲ್ಲಿ ಇವುಗಳು ಪಾಲನೆಯಾಗುವುದಕ್ಕೆ ಬೇಕಾದ ಸಾಂಸ್ಥಿಕ ವ್ಯವಸ್ಥೆ ಇನ್ನೂ ಆಳವಾಗಿ ಸಂಕೀರ್ಣವಾಗಿ ಬೇರೂರಿಲ್ಲದಿರುವುದು.

ಮಾನವಹಕ್ಕು ಎಂಬ ಪರಿಕಲ್ಪನೆ ಕಣ್ಣೆದುರಿಗೆ ಅನ್ಯಾಯಗಳು ನಡೆಯುವಾಗ ಉಪಯೋಗಕ್ಕೆ ಬರುವ ಪರಿಕಲ್ಪನೆಯಲ್ಲ. ಅದಿರುವುದು ಸರ್ಕಾರಗಳು ಯಾವ ರೀತಿಯ ಕಾನೂನುಗಳನ್ನು ಮಾಡಬಾರದು ಎನ್ನುವ ಕಾನೂನಾತ್ಮಕ ನಿಷೇಧವನ್ನು ಹೇರುವುದಕ್ಕೆ.

ಮಾನವಹಕ್ಕುಗಳ ಮೂಲಭೂತ ದಸ್ತಾವೇಜು ಎಂದು ಪರಿಗಣಿಸಲಾಗುವ ಅಮೆರಿಕ ಸಂವಿಧಾನದ ‘ಬಿಲ್ ಆಫ್‌ ರೈಟ್ಸ್’ ಎನ್ನಲಾಗುವ 1791ರ ಮೊದಲ ತಿದ್ದುಪಡಿ ಇದನ್ನು ಬಹಳ ನಿಖರವಾಗಿ ಗುರುತಿಸುತ್ತದೆ. ಅದರ ಪ್ರಕಾರ ‘ಅಮೆರಿಕದ ಕಾಂಗ್ರೆಸ್ (ಸಂಸತ್ತು) ಜನರ ಧಾರ್ಮಿಕ ಸ್ವಾತಂತ್ರ್ಯ, ವಾಕ್‌ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ ಮತ್ತು ಸರ್ಕಾರಕ್ಕೆ ಅಹವಾಲು ಸಲ್ಲಿಸುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಯಾವುದೇ ಕಾನೂನುಗಳನ್ನೂ ಮಾಡಬಾರದು’.

ಇದರರ್ಥ ಮಾನವಹಕ್ಕುಗಳ ಪರಿಕಲ್ಪನೆಯ ಮೂಲ ಆಶಯ ಇರುವುದು ಅಪರಾಧಗಳನ್ನು ಗುರುತಿಸುವುದಕ್ಕೆ ಅಥವಾ ಅವುಗಳನ್ನು ಶಿಕ್ಷಿಸುವುದಕ್ಕೆ ಅಲ್ಲ. ಬದಲಾಗಿ ಅದಿರುವುದು ಸರ್ಕಾರದ ಕಾನೂನುಗಳು ಯಾವ ರೀತಿ ಇರಬಾರದು ಎಂದು ಹೇಳುವುದಕ್ಕೆ. ಸರ್ಕಾರದ ವಿರುದ್ಧ ವ್ಯಕ್ತಿಗಳಿಗೆ ಇರುವ ಹಕ್ಕುಗಳನ್ನು ಮಾನ್ಯಮಾಡುವುದಕ್ಕೆ.

ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ನೀತಿಗಳು ಮತ್ತು ನ್ಯಾಯದಾನ ವ್ಯವಸ್ಥೆ ಪಾಲಿಸಬೇಕಾದ ವಿಧಾನಗಳು ಅಥವಾ ಪ್ರೊಸೀಜರ್‌ಗಳ ಬಗ್ಗೆ. ವಿಜ್ಞಾನದಲ್ಲಿ ಹೇಗೋ ಹಾಗೆಯೇ ಕಾನೂನಿನಲ್ಲೂ ಸತ್ಯ ನಿರ್ಧರಿತವಾಗುವುದು ಯಾವ ಪ್ರೊಸೀಜರ್‌ಗಳನ್ನು, ವಿಧಾನಗಳನ್ನು ಅನುಸರಿಸಿ ಈ ನಿಲುವಿಗೆ ಬರಲಾಗಿದೆ ಎನ್ನುವುದರಿಂದ.

ಮುಂಬೈ ದಾಳಿಯ ರೂವಾರಿ ಅಜ್ಮಲ್ ಕಸಾಬ್‌ನನ್ನು ಗಲ್ಲಿಗೇರಿಸಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ ಏನೇ ಇರಲಿ, ರಾಜೀವ್ ಗಾಂಧಿಯ ಹಂತಕರಿಗೆ ಮರಣದಂಡನೆ ತಪ್ಪಿಸಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ ಏನೇ ಇರಲಿ, ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ ಏನೇ ಇರಲಿ, ಸಲಿಂಗಕಾಮದ ಬಗೆಗೆ ನಿಮ್ಮ ಇಷ್ಟಾನಿಷ್ಟ ಏನೇ ಇರಲಿ, ಮತ್ತು ಈ ದೇಶದ ನ್ಯಾಯಾಲಯಗಳು ಈ ವಿಚಾರಗಳ ಬಗ್ಗೆ ನೀಡಿದ ತೀರ್ಪಿನ ಬಗ್ಗೆ ನೀವು ಏನೇ ಅಭಿಪ್ರಾಯ ಹೊಂದಿರಿ,

ಈ ಎಲ್ಲಾ ನಿರ್ಧಾರಗಳನ್ನೂ ಒಂದಲ್ಲಾ ಒಂದು ರೀತಿಯ ಮಾನ್ಯತೆಯುಳ್ಳ ಪ್ರೊಸೀಜರ್‌ಗಳ ಮೂಲಕ ಮಾಡಲಾಗಿದೆ ಎನ್ನುವುದು ಮುಖ್ಯವಾದದ್ದು. ಈ ಪ್ರೊಸೀಜರ್‌ಗಳಿಲ್ಲದೇ ತಲುಪುವ ನ್ಯಾಯ ತೀರ್ಮಾನಗಳಿಗೆ ಒಂದು ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗವಿಲ್ಲ. ‘ಎ ಮ್ಯಾನ್ ಫಾರ್ ಆಲ್ ಸೀಸನ್ಸ್’ ಎನ್ನುವ ನಾಟಕದಲ್ಲಿ ಸರ್ ಥಾಮಸ್ ಮೋರ್ ಒಂದು ಮಾತು ಹೇಳುತ್ತಾನೆ:

‘ಸೈತಾನನನ್ನು ಬೇಗ ಹಿಡಿಯಬೇಕು ಎನ್ನುವ ಭರದಲ್ಲಿ ಕಾನೂನಿನ ಗೋಜಲಾದ ಹಗ್ಗಗಳಿಂದ ನಾನು ಬಿಡಿಸಿ ಕೊಂಡುಬಿಟ್ಟರೆ, ಮುಂದೊಂದು ದಿನ ಅದೇ ಸೈತಾನ ನನ್ನನ್ನು ಹಿಡಿಯಲು ಬಂದಾಗ ಅವನನ್ನು ಬಂಧಿಸುವುದಕ್ಕೆ ನನಗೆ ಯಾವ ಹಗ್ಗವೂ ಸಿಗುವುದಿಲ್ಲ’.

ಹಾಗಾಗಿ, ಪೊಲೀಸರು ನಕಲಿ ಎನ್‌ಕೌಂಟರ್ ಮಾಡುವಾಗ ಮಾನವ ಹಕ್ಕುಗಳನ್ನು ರಕ್ಷಿಸಬೇಕು ಎನ್ನುವುದರಿಂದ ಪ್ರಯೋಜನವಿಲ್ಲ. ನಕಲಿ ಎನ್‌ಕೌಂಟರ್ ಒಂದು ಅಪರಾಧ ಮತ್ತು ಕೊಲೆಗೆ ಸಮ. ಹಾಗಾಗಿ ಈ ಪ್ರಕರಣವನ್ನು ಕೊಲೆಯ ಅಪರಾಧ ಎಂದು ವಿಚಾರಣೆ ನಡೆಸಬೇಕೇ ವಿನಾ ಅದರ ಜೊತೆಗೆ ಮಾನವಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಬೇಕಾದ ಅಗತ್ಯವಿಲ್ಲ.

ಒಬ್ಬ ಮಹಿಳೆಯ ವಿರುದ್ಧ ಬಲಾತ್ಕಾರವಾದಾಗ ಅದು ನೇರವಾಗಿ ಒಂದು ಹೇಯ ಅಪರಾಧ. ಅದನ್ನು ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ನೋಡಬೇಕೇ ಹೊರತು, ಮಾನವಹಕ್ಕುಗಳ ಉಲ್ಲಂಘನೆ ಎನ್ನುವ ಅತಿ ವಿಶಾಲವಾದ ಪರಿಕಲ್ಪನೆಯ ಅಡಿ ನೋಡಬಾರದು. ಯಾಕೆ ಇಂತಹ ಗೆರೆ ಕೊಯ್ಯುವ ಸೂಕ್ಷ್ಮಗಳು?

ಇವು ಕೇವಲ ಅಕಡೆಮಿಕ್ ಕಸರತ್ತುಗಳಷ್ಟೇ ಎಂದೂ ಕೆಲವರಿಗೆ ಅನ್ನಿಸಬಹುದು. ಸಮಸ್ಯೆ ಏನೆಂದರೆ, ಮಾನವಹಕ್ಕುಗಳ ಪರಿಕಲ್ಪನೆಯನ್ನು ಸಡಿಲವಾಗಿ ಬಳಸುವುದರಿಂದ ಸಂದಿಗ್ಧಕ್ಕೆ ಸಿಲುಕಿಕೊಳ್ಳುತ್ತೇವೆ.

ಹಕ್ಕುಗಳು ಕೆಲಸ ಮಾಡುವುದು ಒಂದು ನಿರ್ದಿಷ್ಟ ಸಂದರ್ಭದಲ್ಲಿ. ಅಂದರೆ, ಪ್ರಜಾತಾಂತ್ರಿಕ ಸರ್ಕಾರ ಮತ್ತು ಜನರ ನಡುವೆ ಇರುವ ಒಪ್ಪಿತವಾದ, ಅಲಂಘ್ಯವಾದ ಕರಾರುಗಳು ಎನ್ನುವ ರೀತಿಯಲ್ಲಿ. ಆದರೆ ಅಪರಾಧ ಎನ್ನುವ ಪರಿಕಲ್ಪನೆ ಒಂದು ರೀತಿ ಸಂದರ್ಭಾತೀತವಾದದ್ದು.

ನಮ್ಮ ಅನುಭವಕ್ಕೆ ಪ್ರತ್ಯಕ್ಷವಾಗಿ ಗೋಚರಿಸುವಂಥವು. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಯಾರಾದರೂ ಕೊಲೆ ಅಥವಾ ಕಳವು ಮಾಡಿದರೆ ನಮ್ಮ ಅನುಭವಕ್ಕೆ ನೇರವಾಗಿ ಅದು ತಪ್ಪು ಎಂದು ಗೊತ್ತಾಗುತ್ತದೆ. ಕ್ರಿಮಿನಲ್ ಕಾನೂನುಗಳು ನಿಂತಿರುವುದೇ ಇಂತಹ ನೇರವಾದ ನೈತಿಕ ಅನುಭವಗಳ (moral intuition) ಮೇಲೆ. ಆದರೆ, ಮಾನವಹಕ್ಕುಗಳು ನೇರವಾಗಿ ನೈತಿಕ ಅನುಭವಕ್ಕೆ ಗೋಚರವಲ್ಲ.

ಅದಿರುವುದು ಸರ್ಕಾರಗಳು ಮತ್ತು ಪ್ರಜೆಗಳ ನಡುವೆ ಇರಬೇಕಾದ ಒಪ್ಪಂದ ಎನ್ನುವ ಅರ್ಥದಲ್ಲಿ. ಹಾಗಾಗಿ, ನೇರವಾದ ಅಪರಾಧವನ್ನು, ಉದಾಹರಣೆಗೆ, ಕಾಶ್ಮೀರದಲ್ಲಿ ಸೈನ್ಯ ಮಾಡುತ್ತಿರುವುದನ್ನು, ಮಾನವಹಕ್ಕುಗಳ ಸಮಸ್ಯೆ ಎಂದು ಪುನರ್‌ವ್ಯಾಖ್ಯಾನಿಸಿದರೆ, ಅದರ ಪರಿಣಾಮವಾಗಿ ಆ ಕ್ರಿಯೆಯನ್ನು ಅಪರಾಧವನ್ನಾಗಿ ನೋಡುವ ನೈತಿಕ ಅನುಭವವನ್ನೇ ವಿಕೃತಗೊಳಿಸುತ್ತೇವೆ.

ಹಾಗೆಯೇ ನಮಗೆ ಅನಿಷ್ಟವೆಂದು ತೋರುವ ಸಂಪ್ರದಾಯಗಳನ್ನು ವಿರೋಧಿಸುವಾಗಲೂ, ಉದಾಹರಣೆಗೆ ಮಡೆಸ್ನಾನದಂಥವುಗಳನ್ನು ಮಾನವಹಕ್ಕುಗಳ ಉಲ್ಲಂಘನೆಯ ಅಪರಾಧ ಎಂದು ವ್ಯಾಖ್ಯಾನಿಸುವಾಗಲೂ ಇದೇ ತಪ್ಪನ್ನು ಮಾಡುತ್ತಿ ರುತ್ತೇವೆ. ಮಾನವಹಕ್ಕುಗಳ ಭಾಷೆ ತನ್ನ ನಿರ್ದಿಷ್ಟ ವ್ಯಾಪ್ತಿಯನ್ನು ಮೀರಿ ಹೀಗೆ ಅತಿವಿಸ್ತಾರವಾದಂತೆಲ್ಲಾ ಜನರ ನೈತಿಕ ಅನುಭವದ ಕಂಪಾಸುಗಳನ್ನು ವಿಕೃತಗೊಳಿಸುತ್ತಿರುತ್ತದೆ.

ಎಷ್ಟರ ಮಟ್ಟಿಗೆ ಎಂದರೆ, ಈಗ ಇಲ್ಲಿ ನಡೆಯುತ್ತಿರುವುದರಲ್ಲಿ ತಪ್ಪೇನು ಎಂದೂ ತಿಳಿಯಲಾರದಂತೆ ಆಗುತ್ತದೆ. ಹಾಗಾಗಿಯೇ, ಬಹಳ ಸ್ವಾಭಾವಿಕವಾಗಿ ‘ಕಾಶ್ಮೀರದಲ್ಲಿ ಭಾರತ ವಿರೋಧೀ ಘೋಷಣೆ ಕೂಗುವವರ, ಕಲ್ಲೆಸೆಯುವವರ ಮಾನವ ಹಕ್ಕುಗಳನ್ನು ಏಕೆ ರಕ್ಷಿಸಬೇಕು’ ಎಂದು ಹಲವರು ಕೇಳುವುದು.

ಒಂದೋ, ಹೀಗೆ ಕೇಳುವ ಜನ ರಾಕ್ಷಸರೋ ಬರ್ಬರರೋ ಆಗಿರಬೇಕು. ಹಾಗಲ್ಲದಿದ್ದರೆ, ಮತ್ತು ನಾನು ಹೇಳುತ್ತಿರುವುದರಲ್ಲಿ ತಥ್ಯವಿದ್ದರೆ, ಮಾನವಹಕ್ಕುಗಳ ಭಾಷೆಯೇ ಇವರ ನೈತಿಕ ಅನುಭವವನ್ನು ವಿಕೃತಗೊಳಿಸಿರಬೇಕು. ಮಾನವಹಕ್ಕುಗಳ ಕುರಿತು ಚಿಂತಿಸುತ್ತಿರುವವರು ಗಮನಿಸಬೇಕಾದ ಹಲವು ಸೂಕ್ಷ್ಮಗಳಲ್ಲಿ ಇದೂ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT