ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ವಾರ್ಷಿಕ ವರದಿ ಪ್ರಕಟ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಣದುಬ್ಬರ  ಈಗಲೂ ಆರ್‌ಬಿಐ ನಿಗದಿಪಡಿಸಿದ ಗರಿಷ್ಠ ಮಿತಿಗಿಂತ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ತಕ್ಷಣಕ್ಕೆ ಅಲ್ಪಾವಧಿ ಬಡ್ಡಿ ದರಗಳು ಇಳಿಯುವ ಸಾಧ್ಯತೆ ಕ್ಷೀಣಿಸಿವೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಸೋಮವಾರ ಬಿಡುಗಡೆ ಮಾಡಿರುವ 2015–16ನೆ ಸಾಲಿನ ವಾರ್ಷಿಕ ವರದಿಯ ಮುನ್ನುಡಿಯಲ್ಲಿ ಗವರ್ನರ್‌ ರಘುರಾಂ ರಾಜನ್‌ ವ್ಯಕ್ತಪಡಿಸಿರುವ ಅಭಿಪ್ರಾಯ ಇಂತಹ ಸಂಕೇತ ನೀಡಿದೆ.

ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಎರಡು ವರ್ಷಗಳ ಗರಿಷ್ಠ ಮಟ್ಟವಾದ ಶೇ 6.07ಕ್ಕೆ  ಮತ್ತು ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು 23 ತಿಂಗಳ ಗರಿಷ್ಠ ಮಟ್ಟವಾದ ಶೇ 3.55 ತಲುಪಿದೆ. ಇವೆರಡು  ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾದರೆ ಮಾತ್ರ ಬಡ್ಡಿ ದರ ಇಳಿಕೆಗೆ ಪೂರಕ ವಾತಾವರಣ ನಿರ್ಮಾಣ ಆಗಲಿದೆ ಎಂದು  ರಾಜನ್‌ ತಿಳಿಸಿದ್ದಾರೆ.

‘ಆರ್ಥಿಕ ಬೆಳವಣಿಗೆಯು ಚೇತರಿಕೆ ಕಾಣುತ್ತಿದ್ದರೂ, ಬೆಳವಣಿಗೆಯ ದರವು ದೇಶದ ಆರ್ಥಿಕ ಸಾಮರ್ಥ್ಯಕ್ಕೆ ಹೋಲಿಸಿದರೆ ಕಡಿಮೆ ಮಟ್ಟದಲ್ಲಿ ಇದೆ.  ಬಂಡವಾಳ ಹೂಡಿಕೆ ಹೆಚ್ಚದಿರುವುದೂ ಇದಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಬಂಡವಾಳ ಹೂಡಿಕೆ ಪ್ರಮಾಣ  ನಿಧಾನಗೊಂಡಿರುವುದರಿಂದ ಜಿಡಿಪಿ ಏರಿಕೆ ಕಾಣುತ್ತಿಲ್ಲ’ ಎಂದು ರಾಜನ್‌ ವಿಶ್ಲೇಷಿಸಿದ್ದಾರೆ.

‘ಸಣ್ಣ ಕೈಗಾರಿಕೆಗಳು ಮತ್ತು ಉದ್ದಿಮೆಗಳಿಗೆ  ಸಾಲ ನೀಡಿಕೆಯಲ್ಲಿ ಖಾಸಗಿ ಬ್ಯಾಂಕ್‌ಗಳಿಗಿಂತ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಹಿಂಜರಿಕೆ ಪ್ರವೃತ್ತಿ ಕಂಡು ಬರುತ್ತಿದೆ. ಹಣಕಾಸು ನೀತಿ ಸಮಿತಿ ರಚನೆಯು  ಸ್ವಾಗತಾರ್ಹ ಕ್ರಮವಾಗಿದ್ದು,  ಹಣಕಾಸು ನೀತಿಯ ಪಾರದರ್ಶಕತೆ ಹೆಚ್ಚಿಸಲಿದೆ’ ಎಂದು ರಾಜನ್‌ ಹೇಳಿದ್ದಾರೆ.

ಆರ್ಥಿಕ ವೃದ್ಧಿ ದರ: ಪ್ರಸಕ್ತ ಸಾಲಿನಲ್ಲಿ,  ದೇಶದ ಆರ್ಥಿಕ ವೃದ್ಧಿದರದ ಮುನ್ನೋಟವು ಈ ಹಿಂದಿನ ಹಣಕಾಸು ವರ್ಷಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂದು ಕೇಂದ್ರೀಯ  ಬ್ಯಾಂಕ್‌ ಅಂದಾಜಿಸಿದೆ.

ಜಿಡಿಪಿಯು ಈ ಹಿಂದಿನ ಶೇ 7.2ಕ್ಕೆ ಹೋಲಿಸಿದರೆ ಈ ಬಾರಿ ಶೇ 7.6ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಕ್ಷಣೆ, ನಾಗರಿಕ ವಿಮಾನಯಾನ ಮತ್ತು ಔಷಧಿ ತಯಾರಿಕೆ    ವಲಯಗಳಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸಿಕೊಡುವ ಮೂಲಕ  ಕೇಂದ್ರ ಸರ್ಕಾರವು ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಿದೆ.

ಸಾಲಗಾರರ ಮೇಲೆ ಹದ್ದಿನ ಕಣ್ಣು: ಸಾ ಮರುಪಾವತಿ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಣೆಗೆ ಆರ್‌ಬಿಐ ಕೈಗೊಂಡಿರುವ ಕ್ರಮಗಳನ್ನು ನಿಯೋಜಿತ ಗವರ್ನರ್‌ ಉರ್ಜಿತ್‌ ಪಟೇಲ್‌ ಮುಂದುವರೆಸುವ ಬಗ್ಗೆಯೂ ರಾಜನ್‌ ಸುಳಿವು ನೀಡಿದ್ದಾರೆ.

‘ಸಾಲ ವಸೂಲಾತಿ ತ್ವರಿತಗೊಳಿಸುವ, ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಸುಧಾರಿಸುವ ಮತ್ತು  ಬಡ್ಡಿ ದರ ನಿಗದಿಪಡಿಸಲು ಹಣಕಾಸು ನೀತಿ ಸಮಿತಿಗೆ ಅಗತ್ಯ ಮಾರ್ಗದರ್ಶನ ನೀಡುವ ಹೊಣೆಗಾರಿಕೆಗಳು ಪಟೇಲ್‌ ಅವರನ್ನು ಎದುರು ನೋಡುತ್ತಿವೆ’ ಎಂದೂ ರಾಜನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT