ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಮೊಗದ ಗಣಪನಿಗೆ ಗರಿಕೆಯ ಅರಿಕೆ

Last Updated 2 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದರ್ಭೆ, ಕುಶ, ಮುಂಜ ಮತ್ತು ಗರಿಕೆಯಂತಹ ಹುಲ್ಲುಗಳನ್ನು ವೇದಕಾಲದಿಂದ ಮಾನವ ಸಮುದಾಯಗಳು ಕಂಡಿವೆ. ಆದರದಿಂದ ಗೌರವಿಸಿವೆ.  ನಮ್ಮ ಆದರಣೀಯ ಯಾತ್ರಾಸ್ಥಳ ಕಾಶಿಯ ಹೆಸರಿನ ಹಿಂದೆ ನದಿ ಬದಿಯ ಕಾಶ ಎಂಬ ಕಾರಣ. ಹುಲು ಮಾನವ ಎಂಬ ಪದದ ಹಿಂದೆಯೋ, ತೇನ ವಿನಾ ತೃಣಮಪಿ ನ ಚಲತಿ ಅಂದರೆ ಭಗವಂತನ ಚಿತ್ತವಿರದೆ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ನುಡಿಗಟ್ಟಿನ ಹಿಂದೆ ಹುಲ್ಲಿನ ಬಗ್ಗೆ ಕೊಂಚ ಕೀಳರಿಮೆ ಇದೆ ನಿಜ. ಆದರೆ ವರ್ಷಕ್ಕೊಮ್ಮೆ ಗೌರಿ-ಗಣಪನ ಉಡಿಗೆ ಮಡಿಗೇರುವ ಗರಿಕೆಯದು ಮಾತ್ರ ವಿಶಿಷ್ಟ ಹಿನ್ನೆಲೆ.

ಗಣಪನ ಮೂರ್ತರೂಪದ ಆರಾಧನಾ ಸಂಸ್ಕೃತಿಯ ಆರಂಭದ ಜೊತೆಗೆ ಗರಿಕೆಯ ಬಳಕೆ ಕೂಡ ಶುರು ಆಗಿದೆ. ವಿಶ್ವದ ಎಲ್ಲೆಡೆ ಗರಿಕೆ ಇದೆ. ಬರ್ಮುಡಾದಿಂದ ಬಹಾಮಸ್ ತನಕ ಉತ್ತರ ಕಾಶ್ಮೀರದ ಬಾರಾಮುಲ್ಲಾದಿಂದ ದಕ್ಷಿಣ ತುದಿಯ ನಾಗರ ಕೋಯಿಲ್ ತನಕ ಎಲ್ಲೆಲ್ಲೂ ಗರಿಕೆ ಬೆಳೆದೀತು.

ನಮ್ಮ ರಾಜ್ಯದ ದಕ್ಷಿಣದ ಕೊಡಿನಾಡು ಕೊಡಗು. ಆ ಜಿಲ್ಲೆಯ ತುತ್ತ ತುದಿಯ ಪುಟ್ಟ ಹಳ್ಳಿಯ ಹೆಸರೇ ಕರಿಕೆ. ಅದರ ಹಿಂದೆ ಗರಿಕೆಯ ಹೆಸರೇ ಇದೆ. ಇತರ ದೇಶಗಳಲ್ಲಿ ಗರಿಕೆ ಒಂದು ಕಳೆ. ನಮಗೆ ಪೂಜಾರ್ಹ ಹುಲ್ಲು. ಅದರ ನಾನಾ ಬಳಕೆಗಳ ದೊಡ್ಡ ಪಟ್ಟಿ ಆಯುರ್ವೇದದ ಸಂಸ್ಕೃತಗ್ರಂಥಗಳಲ್ಲಿವೆ. 

ಐಹೊಳೆ, ಪಟ್ಟದ ಕಲ್ಲು, ಬೇಲೂರು, ಹಳೆಬೀಡುಗಳ ಶಿಲ್ಪ ಕಲೆ ಕಂಡಿದ್ದೀರಿ. ಅವುಗಳ ಕಲ್ಲು ಕೆತ್ತನೆಗೆ ಕೆಲವು ಮೂಲಿಕೆ ರಸ ಹಚ್ಚಿ ಕಲ್ಲು ಮಿದು ಮಾಡುವ ಕಲೆ ನಮ್ಮವರಿಗೆ ತಿಳಿದಿತ್ತು. ಹೀಗೆಂದು ದೇವನಹಳ್ಳಿಯ ಶಿಲ್ಪಕಲಾಶಾಲೆಯ ಸ್ಥಾಪಕ ದಿ. ಹನುಮಂತಾಚಾರ್ಯ ಹೇಳಿದ್ದರು. ಅಂತಹ ಮೂಲಿಕೆ ಪೈಕಿ ಗರಿಕೆ ಸಹ ಒಂದು. ಏಕೆಂದರೆ ಗರಿಕೆಯ ಪರ್ಯಾಯ ಹೆಸರುಗಳ ಪೈಕಿ ಒಂದು ಹೆಸರು ಲೋಹದ್ರಾವಿಣೀ! ಅಂದರೆ ಕಬ್ಬಿಣದಂತಹ ಲೋಹಗಳನ್ನೇ ಕರಗಿಸುವ ಕಸುವು ಗರಿಕೆಗಿದೆ ಎಂದರ್ಥವಾಗುತ್ತದೆ. ಆದರೆ ಆ ಮಾಹಿತಿ, ಬಳಕೆ ಲುಪ್ತವಾಗಿದೆ.

ಲೋಹಶಾಸ್ತ್ರದ ಉತ್ತುಂಗ ಶಿಖರ ಕುತುಬ್ ಮಿನಾರ್ ಸನಿಹದ ಲೋಹಸ್ತಂಭ. ಅಷ್ಟು ಎತ್ತರದ ಅಶೋಕ ಲೇಖದ ಶಿಲಾಸ್ತಂಭ ನಿರ್ಮಾಣ, ಎರಕದ ಹಿಂದೆ ಗರಿಕೆಯಂತಹ ಹುಲ್ಲು, ಮೂಲಿಕೆ ಬಳಕೆಯಾಗಿದ್ದಿರಬಹುದಲ್ಲವೇ? ಗರಿಕೆಯ ಅಂತಹ ಬಳಕೆ ಇಂದು ಮರೆತೆವೇಕೆ? ವೈದ್ಯನಾಗಿ ನನ್ನ ಒಂದು ಅನುಭವ.

ಅನಿಯಮಿತ ಮುಟ್ಟಿನ ಸ್ರಾವದ ಹಿಂದೆ ಗರ್ಭಾಶಯದ ಒಳಗಂಟು(ಫೈಬ್ರಾಯಿಡ್) ಪ್ರಬಲ ಕಾರಣ. ಅಂತಹ ಸಂದರ್ಭಗಳಲ್ಲಿ ದಾಳಿಂಬೆ ಸಿಪ್ಪೆ ಕಷಾಯ ಮತ್ತು ಗರಿಕೆಯ ರಸದ ಕುಡಿಸುವ ಮನೆ ಮದ್ದು ಹೇಳುವವ ನಾನು. ಅನೇಕರಿಗೆ ಗರ್ಭಕೋಶದ ಶಸ್ತ್ರ ಕ್ರಿಯೆ ನಡೆಸದಂತ ಗರಿಕೆ ರಸಸೇವನೆ ಒಳಿತು ಮಾಡಿದೆ. ಅಂದರೆ ಕಲ್ಲು, ಲೋಹ ಕರಗಿಸುವ ಗರಿಕೆ ಜೀವಂತ ಒಡಲ ಪುಟ್ಟ ಗಂಟು ಕರಗಿಸಿದರೆ ಅಚ್ಚರಿ ಇಲ್ಲ. ಮಹಿಳೆಯರ ತಿಂಗಳ ತೊಂದರೆ ಪರಿಹರಿಸಲು ಗರಿಕೆ ಸಂಜೀವಿನಿ.

ಗಂಡದೂರ್ವಾ, ಗಂಡಾಲಿ, ಶತವೀರ್ಯಾ, ಗೋಲೋಮಿ, ಮತ್ಸ್ಯ ಶಕುಲಾದನೀ ಇತ್ಯಾದಿ ಪರ್ಯಾಯ ಗರಿಕೆಯದು. ಇಲ್ಲಿ ಗಂಡ ಅಂದರೆ ಗಿಣ್ಣು ಅಥವಾ ಗಂಟು. ಗಂಟು ಗಂಟುಗಳಲ್ಲಿ ಬೇರು. ಅಲ್ಲಿಯೇ ಹೊಸ ಕವಲು. ಅದನ್ನೇ ಉಪನಿಷದ್‌ಗಳು ಕಾಂಡಾತ್ ಕಾಂಡಾತ್ ಪ್ರರೋಹಂತಿ  ಎಂಬ ಸುಂದರ ಬಣ್ಣನೆಯೊಂದಿಗೆ ಸಸ್ಯಶಾಸ್ತ್ರೀಯ ವರ್ಣನೆ ಮಾಡುತ್ತವೆ.

ಹಸುಗಳು ಅತಿಯಾಗಿ ಇಷ್ಟ ಪಡುವ ಗರಿಕೆಗೆ ಗೋಲೋಮ ಎಂದರೆ ಹಸುವಿನ ಮೈಕೂದಲಿನ ಉಪಮೆ ನೀಡುವರು. ಶತವೀರ್ಯಾ ಹೆಸರಡಿ ಒಂದು ಹುಲ್ಲು ನೂರು ಗುಣ ಎಂಬ ಗರಿಕೆಯ ಅತಿಶಯೋಪಕಾರ ಕಾಣುವೆವು. ನಿಮ್ಮ ಮನೆಯ ನಾಯಿ ಹರಿಕೆಹುಲ್ಲನ್ನು ಮೆಲ್ಲುವ ಮತ್ತು ಕೆಲವೊಮ್ಮೆ ಉದರಶುದ್ಧಿ ಮಾಡಿಕೊಳ್ಳುವ ಪ್ರಕೃತಿ ಚಿಕಿತ್ಸೆ ಕಂಡಿದ್ದೀರಿ. ಚರಕಸಂಹಿತೆಯ ಜೀವನೀಯ, ಅಂದರೆ ಜೀವನಕ್ಕೆ ಉಪಕರಿಸುವ ಗಣ(ಗುಂಪು)ದಲ್ಲಿ ಗರಿಕೆಗೆ ಇದೆ ಸ್ಥಾನ.

ಜ್ವರ, ಮೈಉರಿ, ಕಫ ಉಲ್ಬಣತೆ, ಚರ್ಮಗಾದರಿ, ಗುಳ್ಳೆ, ನೀರೂಡುವ ತುರಿಗಜ್ಜಿ, ಸರ್ಪಸುತ್ತು ಪರಿಹಾರಕ್ಕೆ ಗರಿಕೆ ಮದ್ದು. ಬಾಯಿ ರುಚಿ ಹೆಚ್ಚಿಸೀತು. ವಾಂತಿಗೆ ಕಡಿವಾಣ. ಮೂರ್ಛೆ ತಿಳಿವಿಗೆ ಗರಿಕೆರಸದ ಮೂಗಿನ ಬಳಕೆಗೆ ಉಲ್ಲೇಖಗಳಿವೆ. ಎಂತಹದೇ ರಕ್ತಸ್ರಾವ ನಿಲುಗಡೆಗೆ ಗರಿಕೆ ಬೇಕು. ವಿಷಚಿಕಿತ್ಸೆಗೆ ಗರಿಕೆ ಉತ್ತಮ ಮದ್ದು.  ಕೇರುಗಾಯದ ಮದ್ದಾಗಿ ಗರಿಕೆರಸದ ಲೇಪ ಬಯಲು ಸೀಮೆಯ ಜನಪದ ವೈದ್ಯ. ಮೂತ್ರಕಟ್ಟು, ಉರಿ ಮತ್ತು ಕಲ್ಲುಪರಿಹಾರಕ್ಕೆ ಗರಿಕೆರಸ ಪಾನ ಚಿಕಿತ್ಸೆಯನ್ನು ಹೇಳಲಾಗಿದೆ.

ಗರಿಕೆಯ ತುದಿ ಚಿಗುರು ಆಯ್ದು ತರುವಿರಿ. ಬರೋಬ್ಬರಿ ನೂರೆಂಟು ಗಂಟು! ಅಂತಹ ಗರಿಕೆ ಚಿಗುರಿನ ಹಾರ ಗಣಪನಿಗರ್ಪಿಸಿರಿ. ಆದರೆ ಅದನ್ನು ಮರುದಿನ ಮೋರಿಗೆ ಎಸೆಯದಿರಿ. ನೂರೈವತ್ತು ವರ್ಷಗಳ ಹಿಂದೆ ನಮ್ಮ ನೆಲದಲ್ಲಿ ಒಂದು ಪುಸ್ತಕ ಸಂಪದಿತ. ಅದರ ಹೆಸರು ‘ಸಹಸ್ರಾರ್ಧ ವೃಕ್ಷಾದಿ ವರ್ಣನಂ.’ ಅಂದರೆ ಐನೂರು ಗಿಡ ಮರಗಳ ಬಣ್ಣನೆ. ಹಾರದ  ಗರಿಕೆ ಆಹಾರವಾಗುವ ಸುಂದರ ವರ್ಣನೆ ಅಂತಹ ಗ್ರಂಥದ ಅಮೂಲ್ಯ ಮಾಹಿತಿ.

ಗರಿಕೆರಸ ಕುಡಿಯುವ ನೀವು ಗರಿಕೆ ಹಾರದ ಪಲ್ಯ ಮಾಡಿ ಆಹಾರವಾಗಿ ಬಳಸಿರಿ. ಕಲ್ಲು ಕರಗಿಸುವ ಈ ಹುಲ್ಲು ಗಣಪನ ಹಬ್ಬದ ಉಂಡೆ, ಚಕ್ಲಿ, ಕೋಡುಬಳೆ, ಒಬ್ಬಟ್ಟು ಕರಗಿಸೀತಲ್ಲವೇ? ಈ ಗ್ರಂಥದ ಮತ್ತೊಂದು ಮಾಹಿತಿ ಕೂಡ ಸ್ವಾರಸ್ಯದ್ದೇ. ಗರಿಕೆಯ ಬೇರಗೆದು ತೆಗೆಯಿರಿ. ಬೆಲ್ಲದ ಪಾನಕ ಮಾಡಿ ಕುಡಿಯಿರಿ. ಅದು ಬಹಳ ತಂಪು. ಆದರೆ ಬೇರಗೆಯುವ ಕೆಲಸ ಮಾತ್ರ ಸುಲಭದ್ದಲ್ಲ.  ಗರಿಕೆಯ ಹುಲ್ಲು ಒಂದು ದೊಡ್ಡ ಸಾಮ್ರಾಜ್ಯದ ಸ್ಥಾಪನೆಯ ಕತೆಗೆ ತಳುಕು ಹಾಕಿಕೊಂಡಿದೆ.

ನಂದ ರಾಜ್ಯದ ರಾಜಕುಮಾರರು ಒಮ್ಮೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಒಬ್ಬ ಬ್ರಾಹ್ಮಣ ರಸ್ತೆ ಪಾಟಲಿಪುರದ ಹೆದ್ದಾರಿಯ ಗರಿಕೆಗೆ ತೊಡರಿಕೊಂಡು ಎಡವಿದ. ಆತನ ಶಿಖೆ ಬಿಚ್ಚಿಹೋಯಿತು. ಅದನ್ನು ಕಂಡ ರಾಜಕುಮಾರರು ಬಿದ್ದು ಬಿದ್ದು ಕೇಕೆ ಹಾಕಿ ನಗತೊಡಗಿದರು. ಆಗ ಸಿಟ್ಟಿಗೆದ್ದ ಬ್ರಾಹ್ಮಣ ಹೀಗೆಂದನು: ‘ಎಲವೋ ದುಷ್ಟರೇ, ಇಂತಹ ರಾಜಪಥದಲ್ಲಿ ಗರಿಕೆಯ ಹುಲ್ಲು ಸ್ವೇಚ್ಛೆಯಾಗಿ ಬೆಳೆಯಲು ನಿಮ್ಮ ಅರಾಜಕತೆ ಕಾರಣ.

ಇಂದು ನನ್ನ ಬಿಚ್ಚಿದ ಶಿಖೆ ಕಟ್ಟಲಾರೆ. ನಿಮ್ಮ ನಂದವಂಶ ನಿರ್ವಂಶ ಮಾಡದೆ ಇರಲಾರೆ. ಇಗೋ ನೋಡಿರಿ. ಈ ಗರಿಕೆಯನ್ನು ಬುಡ ಸಮೇತ ಕಿತ್ತು ಹಾಕುವೆನು. ಇಲ್ಲಿ ಬೆಂಕಿ ಹಾಕಿ ಸುಡುವೆನು. ಮತ್ತೆ ಇಂತಹ ಹುಲ್ಲು ಇಲ್ಲಿ ಹುಟ್ಟದಿರಲಿ. ನಿಮ್ಮಂತಹ ದುಷ್ಟರು ಮತ್ತೆ ನಮ್ಮ ನೆಲ ಆಳದಿರಲಿ.’ ಕೂಡಲೇ ನೆಲ ಬಗೆದು ಬ್ರಾಹ್ಮಣ ಗರಿಕೆ ತರಿದನು.

ಆಗ ಅಲ್ಲಿಗೆ ಚಂದ್ರಗುಪ್ತ ಆಗಮಿಸಿದನು. ಅನಂತರ ನಂದ ಸಾಮ್ಯಾಜ್ಯದ ಅಳಿವು, ಗುಪ್ತರ ಸ್ಥಾಪನೆ ಇತಿಹಾಸದ ಪುಟಗಳು. ಜುಟ್ಟು ಬಿಚ್ಚಿ ಶಪಥ ಮಾಡಿದಾತನೇ ಚಾಣಕ್ಯ. ಅರ್ಥಶಾಸ್ತ್ರ ಗ್ರಂಥದ ಕರ್ತೃ. ಭಾರತದಲ್ಲಿ ಹೊಸ ಶಕೆಗೆ ಗರಿಕೆಯ ಹುಲ್ಲು ಕಾರಣವಾದ ಕತೆ ಇದು.

ನಮ್ಮ ನಾಯಿ ಡೇಲ್ ದಿನಚರಿ ಶುರುವಾಗುವುದು ಆತನ ಗರಿಕೆ ಭಕ್ಷಣದಿಂದ. ಗರಿಕೆಗೆ ಆಂಗ್ಲ ಹೆಸರು ಡಾಗ್ಸ್ ಟೂತ್. ಅಂದರೆ ಹಲ್ಲು ಶುಚಿಯಾಗಲೋ, ಬಾಯಿ ರುಚಿ ಹೆಚ್ಚಳಕ್ಕೋ ಡೇಲ್ ಗರಿಕೆ ಭಕ್ಷಿಸುತ್ತಾನೆ. ಅದು ಜೀರ್ಣ ಮಾಡಿಕೊಳ್ಳುವ ಶಕ್ತಿ ನಾಯಿಯ ಜೀರ್ಣಾಂಗ ವ್ಯವಸ್ಥೆಯಲ್ಲಿಲ್ಲ ಎನ್ನುತ್ತಾರೆ ಪಶುವೈದ್ಯರು.

ಗರಿಕೆಯ ಲ್ಯಾಟಿನ್ ಹೆಸರ ಹಿಂದೆ ಕೂಡ ನಾಯಿ ಮೆಲ್ಲುವ ಸಂಗತಿ ಇದೆ. ‘ಸಿನೋಡಾನ್ ಡ್ಯಾಕ್ಟಿಲಾನ್’ ಎಂಬ ದ್ವಿನಾಮದ ಹಿಂದೆ ನಾಯಿಯ ಮೆಲ್ಲುವಿಕೆ ಇದೆ. ‘ಪೊಯೇಸೀ’ ಎಂಬ ಹುಲ್ಲುಕುಟುಂಬದ ಸಸ್ಯ ಇದು. ಕೊಂಕಣಿಗರು ದಿರ್ಬಾಂಕುರ್ ಎಂಬರು. ಹಿಂದಿಯ ‘ದೂಬ್’ ಕೂಡ ‘ದೂರ್ವಾ’ ಎಂಬ ಸಂಸ್ಕೃತಹೆಸರಿನ ಮೂಲದ್ದೇ; ದರ್ಭ ಹೆಸರಿನ ನಿಕಟ ಶಬ್ದ ಅದು. ಹರಿಯಾಲಿ ಎಂಬ ಹೆಸರಿನ ಹಿಂದೆ ಜಾನುವಾರಿನ ಪ್ರಿಯ ಮೇವು ಎಂಬ ತಥ್ಯ ಇದೆ. ಗಜಮುಖ ಗಣಪನಿಗಿಷ್ಟದ ಗರಿಕೆ ಗಜಪ್ರೀತಿಗೆ ಕೂಡ ಅರ್ಹವಾಗಿದೆ.

ಸಾವಿರ ವರ್ಷದ ಹಿಂದಿನ ಗ್ರಂಥದ ‘ಮಾನಸೋಲ್ಲಾಸ’. ಅದರ ಲೇಖಕ ಉತ್ತರ ಚಾಳುಕ್ಯರ ಅರಸ ಸೋಮೇಶ್ವರ ಕವಿ. ಮಾನಸೋಲ್ಲಾಸದಲ್ಲಿ ಕಾಡಿನ ಆನೆ ಹಿಡಿಯುವ ಮತ್ತು ಪಳಗಿಸುವ ವಿವರಗಳಿವೆ. ಖೆಡ್ಡಾ ಮಾದರಿಯ ಬಣ್ಣನೆ ಅದರಲ್ಲಿದೆ. ಸಿಲುಕಿದ ಆನೆ ಪಳಗಿಸುವ ಮುನ್ನ ಕಟ್ಟಿ ಹಾಕುವೆವಲ್ಲ. ಆಗ ಅದಕ್ಕೆ ಯಥೇಚ್ಛ ಗರಿಕೆ ಹುಲ್ಲು ತಿನ್ನಲು ಕೊಡುವ ನಿರ್ದೇಶನ ಮಾನಸೋಲ್ಲಾಸದಲ್ಲಿದೆ. ಕಲ್ಲು ಕೂಡ ಕರಗಿಸಬಲ್ಲ ಗರಿಕೆಹುಲ್ಲನ್ನು ಕಡಿನ ಮದಗಜದ ಮನ ಕರಗಿಸಲು ಬಳಕೆಯಾಗುತ್ತಿದ್ದುದು ವಿಶೇಷ. ಅದರ ಬಗ್ಗೆ ಸಂಶೋಧನೆ ಕೂಡ ಇಂದಿನ ಅಗತ್ಯ.

ತುಳು ಭಾಷಿಗರ ಹಳೆಯ ಶಬ್ದಭಂಡಾರದಲ್ಲಿ ಒಂದು ಪದ ಇದೆ. ಅದಕ್ಕೆ ‘ಪಸ್ಕಡಿ’ ಎಂಬ ಹೆಸರು. ‘ಅಗರ್’ ಎಂದರೆ ಮಣ್ಣಗೆದು ಮಾಡಿದ ಕಂದಕದ ಬದಿಯ ಮಣ್ಣುಗುಡ್ಡೆಯ ಸಾಲು. ಅದು ಮತ್ತೆ ಮಳೆಗೆ ಕೊಚ್ಚಿ ಹೋಗದಂತೆ ಪಸ್ಕಡಿ ಅಂಟಿಸುವರು. ಗರಿಕೆಯಂತಹ ಹುಲ್ಲು ಯಥೇಚ್ಛ ಬೆಳೆದ ನೆಲದ ಪುಟ್ಟ ಹಾಸು ಪಸ್ಕಡಿ.

ಮಣ್ಣು ಸವಕಳಿ ತಡೆಯುವ ಸುಲಭ ವಿಧಾನ. ಇಂತಹ ಗರಿಕೆ ಹುಲ್ಲಿನ ಉಪಕಾರ ನೆನೆದವರಿಲ್ಲ. ಅಂತಹ ಪಸ್ಕಡಿಗಳು ಅರ್ಥಾತ್ ಗರಿಕೆ ಹಸಿರುಹಾಸು ಇಂದು ಎಲ್ಲ ನರ್ಸರಿಗಳಲ್ಲಿ ಲಭ್ಯ. ಅದರ ಬೆಲೆ ಚದರ ಮೀಟರ್‌ಗೆ ಸಾವಿರಗಟ್ಟಲೆ! ಉದ್ಯಾನಗಳ, ಕೈದೋಟಗಳ ಅಂದ ಚಂದಕ್ಕೆ ಗರಿಕೆಯ ಹಸಿರು ಮೆರುಗು ಕಳೆಗಟ್ಟೀತು. 

ಇಂದು ಜೆಸಿಬಿ ಯುಗ. ಎಂತಹ ಹಸಿರುಹಾಸನ್ನು ಕೂಡ ಕ್ಷಣಾರ್ಧದಲ್ಲಿ ಎತ್ತಲಾದೀತು. ಸಂಡೂರು ಪರಿಸರದ ಗಣಿಧೂಳು ಮರೆಮಾಚಲು ಬೆಟ್ಟಗಳಿಗೆ ಕೆರಯಂಗಳದ ಗರಿಕೆ ಹುಲ್ಲು ಹಾಸು ತೇಪೆ ಹಚ್ಚಿದ ಸುದ್ದಿ ಇದೀಗ ಹಳಸಲು. ಅದಿರಲಿ. ಇಂತಹ ಗರಿಕೆ ಚಾಪೆಗಳನ್ನು ಹಡಗುಗಳಲ್ಲಿ ಹೇರಿಕೊಂಡು ಕೊಲ್ಲಿರಾಷ್ಟ್ರದ ಕ್ರಿಕೆಟ್ ಪಿಚ್ ತಯಾರಾದ ಕತೆ ಓದಿದ್ದೀರಲ್ಲ? ಅದರ ಸಾರ್ವತ್ರಿಕತೆ ನಿಜಕ್ಕೂ ಅಗಾಧ! ಕ್ರಿಕೆಟ್ ಕೋರ್ಟ್‌ಗೂ ಸೈ, ಫುಟ್ ಬಾಲ್ ಕೋರ್ಟ್‌ಗೂ ಜೈ.

ಸಾಸಿವೆಗಿಂತಲೂ ಕಿರಿದಾದ ಗರಿಕೆ ಬೀಜ ಯಥೇಚ್ಛ ಬೆಳೆದರೆ ಎರಡೂವರೆ ಚದರ ಮೀಟರ್ ಹರಹು ಪಡೆಯಬಲ್ಲುದು. ಕೇವಲ ಐದು ತಿಂಗಳಲ್ಲಿ ಅಂತಹ ಬೆಳೆ. ಐದಡಿ ತಳಕ್ಕಿಳಿವ ಬೇರು! ಸಮುದ್ರ ತಟದ ಉಪ್ಪು ನೀರು ಸಹ ಗರಿಕೆಯ ಕೆಚ್ಚಡಗಿಸದು. ಬಂಜರು ನೆಲದಲ್ಲೂ ಗರಿಕೆ ಬೆಳೆದೀತು. ಇಂತಹ ಹಸುರು ಹೊನ್ನಿನ ಮಹತ್ವ ಅರಿತು ಈ ಬಾರಿ ಗಣಪನಿಗೆ ಹೊಸ ಅರಿಕೆ ಮಾಡಿಕೊಳ್ಳೋಣವೇ? ಗರಿಕೆಯ ಜೊತೆಗೆ ಪೊಡವಿಯ ಹಸಿರು ಕಾಯುವ ವರವನ್ನು ಗಜಮುಖದವನು ಕೊಡವಂತೆ ಬೇಡೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT