ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ

ನಳಪಾಕ
Last Updated 2 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ನಮ್ಮ ಆರೋಗ್ಯ ನಮ್ಮ ಊಟದ ತಟ್ಟೆಯಲ್ಲಿದೆ. ನಾವು ತಿನ್ನುವ ಆಹಾರವೇ ನಮ್ಮ ಆರೋಗ್ಯದ ಮಾಪನ. ಹಾಗೆಯೇ, ನಾವು ಸೇವಿಸುವ ಆಹಾರ ನಮ್ಮ ದೇಹಕ್ಕೆ ಸೇರುವ ಸಕ್ಕರೆಯ ಪ್ರಮಾಣವನ್ನು ನಿರ್ಧರಿಸುತ್ತದೆ.

ಸಿಹಿಪ್ರಿಯರಿಗೆ ಈ ತಿನಿಸುಗಳಿಂದ ದೂರವಿರುವುದು ಕಷ್ಟವಾಗುತ್ತದೆ. ಗಣೇಶ ಚತುರ್ಥಿಗೆಂದೇ ತಯಾರಿಸುವ ಅನೇಕ ಸಾಂಪ್ರದಾಯಿಕ ಸಿಹಿತಿನಿಸುಗಳಿರುತ್ತವೆ. ಸಕ್ಕರೆಯ ಮಟ್ಟವನ್ನು ಏರುಪೇರು ಮಾಡಿಕೊಂಡು ಆರೋಗ್ಯವನ್ನು ಹಾಳು ಮಾಡಿಕೊಳ್ಳದೆ ಗಣೇಶ ಚತುರ್ಥಿಯನ್ನು ಶುಗರ್‌ಫ್ರೀ ಸಿಹಿತಿನಿಸುಗಳೊಂದಿಗೆ ಆಚರಿಸಿ’ ಎಂಬುದು ತಜ್ಞ ವೈದ್ಯರ ಅಭಿಮತ.

ಅತಿಯಾದ ಸಿಹಿಯಿಂದ ಕೂಡಿದ ಪದಾರ್ಥಗಳನ್ನು ಸವಿಯುವ ಬದಲು ಅದಕ್ಕೆ ಪರ್ಯಾಯ ಪದಾರ್ಥಗಳನ್ನು ಬಳಸಿ ತಯಾರಿಸಿದ ಪೌಷ್ಟಿಕವಾದ ತಿನಿಸುಗಳನ್ನು ಅದೇ ರುಚಿಯೊಂದಿಗೆ ಸವಿಯಿರಿ ಎನ್ನುತ್ತಾರೆ ಅಪೊಲೊ ಶುಗರ್‌ ಕ್ಲಿನಿಕ್ಸ್‌ನ ವೈದ್ಯ ಡಾ.ರಾಜ ಸೆಲ್ವರಾಜನ್‌.

ಲೌಕಿ/ಹಾಲಿನ ಖೀರ್
ಖೀರ್, ಭಾರತೀಯರ ಸಾರ್ವಕಾಲಿಕ ಜನಪ್ರಿಯ ಸಿಹಿ. ಇದನ್ನು ದಿನದ ಯಾವುದೇ ಸಮಯದಲ್ಲಿ ತಿನ್ನಬಹುದು. ಆದರೆ, ಇದರಲ್ಲಿ ಎಷ್ಟು ಕ್ಯಾಲರಿ ಇದೆ ಎಂದು ಎಲ್ಲರೂ ಚಿಂತಿಸುತ್ತಾರೆ. ಖೀರ್ ಆರೋಗ್ಯಕರವಾಗಿರಬಹುದು; ಕೆಲವು  ಪದಾರ್ಥಗಳನ್ನು ಮತ್ತು ಅದರ ಪ್ರಮಾಣವನ್ನು ಬದಲಿಸುವ ಮೂಲಕ ನಾವು ಅದನ್ನು ಮತ್ತಷ್ಟು ಆರೋಗ್ಯಕರವಾಗಿಸಬಹುದು.

ದೂಧಿ, ಬಾಟಲ್ ಗೋರ್ಡ್ ಎಂದು ಕರೆಯಲಾಗುವ ಲೌಕಿ ದೇಹಕ್ಕೆ ಬಹಳ ಒಳ್ಳೆಯದು. ಇದು ಬೇಸಿಗೆಯಲ್ಲಿ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆಯಾದ್ದರಿಂದ ಪ್ರತಿ ದಿನವೂ ಅರ್ಧ ಲೌಕಿಯನ್ನು ತಿನ್ನಲು ವೈದ್ಯರು ಹೇಳುತ್ತಾರೆ. ಆ್ಯಸಿಡಿಟಿಯಿಂದ ಬಳಲುತ್ತಿದ್ದರೆ, ಉರಿಯನ್ನು ಕಡಿಮೆಗೊಳಿಸಲು ಮತ್ತು ತಂಪು ಮಾಡಲು ಇದು ಸಹಕಾರಿ. ಲೌಕಿಯ ಖೀರ್‌ನ ಪ್ರತಿ ಕಪ್‌ 68 ಕ್ಯಾಲರಿ ಹೊಂದಿದ್ದು, ಇತರ ಖಾದ್ಯಗಳಿಗಿಂತ ಇದು ಆರೋಗ್ಯಕರವಾಗಿದೆ.

ಬೇಕಿರುವ ಪದಾರ್ಥಗಳು: ಒಂದು ಕಪ್ ತುರಿದ ಸೋರೆಕಾಯಿ (ದೂಧಿ/ಲೌಕಿ), 100 ಎಂಎಲ್ ಕಡಿಮೆ ಕೊಬ್ಬಿನ ಹಾಲು (ಶೇ. 99 ಕೊಬ್ಬು ರಹಿತ), ಒಂದು ಸ್ಪೂನ್ ಸಕ್ಕರೆ, ಏಲಕ್ಕಿ ಪುಡಿ.

ವಿಧಾನ: ಒಂದು ಪ್ಯಾನ್‌ನಲ್ಲಿ ಹಾಲು ಮತ್ತು ಲೌಕಿಯನ್ನು ಬೆರೆಸಿ, ಚೆನ್ನಾಗಿ ಕದಡಿ, ಸಣ್ಣ ಉರಿಯಲ್ಲಿ 10ರಿಂದ 12 ನಿಮಿಷಗಳಿಗೆ ಅಥವಾ ಲೌಕಿ ಪೂರ್ಣ ಬೇಯುವವರೆಗೆ ಮತ್ತು ತುರಿದ ಕಾಯಿ ಕಾಣದವರೆಗೆ ಬೇಯಿಸಿ, ಸತತವಾಗಿ ಕದಡುತ್ತಿರಿ. ಹಾಲು, ಲೌಕಿ ಮಿಶ್ರಣಕ್ಕೆ ಸಕ್ಕರೆ ಸೇರಿಸಿ, ಚೆನ್ನಾಗಿ ಬೆರೆಸಿ ಮತ್ತು  ಎರಡು ನಿಮಿಷಗಳಿಗೆ ಅಥವಾ ಸಕ್ಕರೆ ಕರಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಕಡೆಯದಾಗಿ ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಕದಡಿ. ನಂತರ ಅದನ್ನು ಆರಲು ಬಿಡಿ. ತಣ್ಣಗಾದ ಮೇಲೆ ಒಂದು ಗಂಟೆ ಫ್ರಿಡ್ಜ್‌ನಲ್ಲಿಡಿ. ಒಂದು ಗಂಟೆಯ ನಂತರ ಖೀರ್ ಅನ್ನು ಸೇವಿಸಬಹುದು.

ಸಾಮಾನ್ಯ ಖೀರ್‌ನಲ್ಲಿ, ಅಕ್ಕಿ ಮತ್ತು ಸೇಮಿಯಾ ಇರುವುದರಿಂದ ಕ್ಯಾಲರಿಗಳು ಅಧಿಕವಾಗಿರುತ್ತವೆ. ಪ್ರತಿ ಗ್ರಾಂ ಅಕ್ಕಿಯಲ್ಲಿ 130 ಕ್ಯಾಲರಿ, ಒಂದು ಲೀಟರ್‌ ಹಾಲಿನಲ್ಲಿ 300ಕ್ಕೂ ಅಧಿಕ ಕ್ಯಾಲರಿ, 10 ಗ್ರಾಂ ಸಕ್ಕರೆಯಲ್ಲಿ 387 ಕ್ಯಾಲರಿ ಇದ್ದು, ಉತ್ತಮ ರುಚಿಗಾಗಿ ಮಿಲ್ಕ್ ಮೇಡ್ ಮತ್ತು ಇತರ ಕೃತಕ ಸಿಹಿಕಾರಕಗಳನ್ನು ಸೇರಿಸಿದ ನಂತರ ಒಟ್ಟು 1000 ಕ್ಯಾಲರಿ ಆಗುತ್ತದೆ. ಸಾಮಾನ್ಯ ಅಕ್ಕ ಮತ್ತು ಮಿಲ್ಕ್ ಮೇಡ್ ಬದಲಿಗೆ ಮೇಲೆ ಹೇಳಿದ ಅಂಶಗಳನ್ನು ಬಳಸಿದರೆ, ಮಧುಮೇಹಿರೋಗಿಯೂ ಈ ಖಾದ್ಯವನ್ನು ಆನಂದಿಸಬಹುದು, ಅದೂ ಆರೋಗ್ಯಕ್ಕೆ ಹಾನಿಯಾಗದಂತೆ.

ಚಾಕೊಲೆಟ್‌ ಸಂದೇಶ್
ಸಂದೇಶ್ ಸಾರ್ವಕಾಲಿಕ ಅಚ್ಚುಮೆಚ್ಚಿನ ಬೆಂಗಾಲಿ ಸಿಹಿಯಾಗಿದೆ. ಇದರಲ್ಲಿ ಅಧಿಕ ಕ್ಯಾಲರಿ ಇರುವುದರಿಂದ ಇದನ್ನು ಅಪರೂಪಕ್ಕೊಮ್ಮೆ ಸೇವಿಸಬಹುದು. ಇದನ್ನು ವಾರದಲ್ಲಿ ಒಂದು ಬಾರಿಗಿಂತ ಹೆಚ್ಚಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಬೇಕಿರುವ ಪದಾರ್ಥಗಳು
60 ಗ್ರಾಂ ತಾಜಾ ಕಡಿಮೆ ಕೊಬ್ಬಿನ ಪನೀರ್ (ಮನೆಯಲ್ಲಿ ತಯಾರಿಸಿದ್ದು), ಎರಡು ಸ್ಪೂನ್ ಸಕ್ಕರೆ, ಕಾಲು ಸ್ಪೂನ್‌ ಕೊಕೊ ಪುಡಿ,  ಅರ್ಧ ಸ್ಪೂನ್ ವೆನಿಲ್ಲಾ ಎಸ್ಸೆನ್ಸ್.

ವಿಧಾನ: ಅಗಲವಾದ ಒಂದು ಬೌಲ್‌ ತೆಗೆದುಕೊಂಡು ಪನೀರ್ ಮತ್ತು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಕಲಸಿರಿ. ಕೊಕೊ ಪುಡಿ ಮತ್ತು ವೆನಿಲ್ಲಾ ಎಸ್ಸೆನ್ಸ್ ಅನ್ನು ಸೇರಿಸಿ, ಮಿಶ್ರಣ ನುಣುಪಾಗುವವರೆಗೂ ಚೆನ್ನಾಗಿ ಕಲಸಿರಿ. ಈ ಮಿಶ್ರಣವನ್ನು ಎಂಟು ಸಮಾನ ಭಾಗಗಳಾಗಿ ವಿಂಗಡಿಸಿ, ಪ್ರತಿ ಭಾಗವನ್ನೂ ಗುಂಡಗೆ, ಚಪ್ಪಟೆಯಾಗಿ ಮಾಡಿ. ಸೇವಿಸುವ ಮುನ್ನ ಕನಿಷ್ಠ 30 ನಿಮಿಷ ಫ್ರಿಡ್ಜ್‌ನಲ್ಲಿಡಿ.

ಪ್ರತಿ ಸಂದೇಶ್‌ನಲ್ಲಿ ಕೇವಲ 40 ಕ್ಯಾಲರಿ ಇರುತ್ತದೆ. ರಕ್ತದಲ್ಲಿ ಕರಗಲು ಸಕ್ಕರೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಹಾಗಾಗಿ, ಮಧುಮೇಹದಿಂದ ಬಳಲುವವರಿಗೆ ಜೇನು ಅಥವಾ ಕೃತಕ ಸಕ್ಕರೆ ಬಳಸುವುದು ಉತ್ತಮ. ಒಣ ಹಣ್ಣುಗಳಾದ ಬಾದಾಮಿ, ಗೋಡಂಬಿ ಇತ್ಯಾದಿಗಳನ್ನೂ ಇದಕ್ಕೆ ಸೇರಿಸಬಹುದು. ಇವು ಈ ಖಾದ್ಯಕ್ಕೆ ಹೆಚ್ಚು ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಹೆಚ್ಚು ಸಕ್ಕರೆ ಸೇರಿಸಬೇಡಿ, ಇಲ್ಲವಾದರೆ ಸಕ್ಕರೆಯ ಮಟ್ಟ ಬೇಗನೆ ಹೆಚ್ಚುತ್ತದೆ.

ಸಾಂಪ್ರದಾಯಿಕ ಸಂದೇಶ್‌ಗೆ ಹೆಚ್ಚು ತುಪ್ಪ ಮತ್ತು ಸಕ್ಕರೆ ಬೇಕಾಗುತ್ತದೆ. ಹೀಗಾಗಿ ಅದು ಬಹಳ ಸಿಹಿಯಾಗಿರುತ್ತದೆ. ಒಂದು ಸಂದೇಶ್‌ದಲ್ಲಿ 400ಕ್ಕೂ ಹೆಚ್ಚು ಕ್ಯಾಲರಿ ಇರುತ್ತದೆ. ಸಾಂಪ್ರದಾಯಿಕ ಸಂದೇಶ್ ಮಾಡುವಾಗ, ಪೂರ್ಣ ಕೊಬ್ಬಿನ ಹಾಲು ಮತ್ತು ಸಕ್ಕರೆಯಂತಹ ಅಂಶಗಳನ್ನು ಸೇರಿಸುತ್ತೇವೆ.

ಇದರ ಬದಲಿಗೆ, ಆರೋಗ್ಯಕರವಾದ ಪರ್ಯಾಯಗಳನ್ನು ಬಳಸಬಹುದು. ಕೆನೆರಹಿತ ಹಾಲನ್ನು ಬಳಸುವುದರಿಂದ ಹೆಚ್ಚು ಪ್ರೊಟೀನ್ ಮತ್ತು ಮೂಳೆಗಳಿಗೆ ಹೆಚ್ಚು ಕ್ಯಾಲ್ಶಿಯಂ ಸಿಗುತ್ತದೆ. ವಿಟಮಿನ್ ಎ ಮತ್ತು ಡಿ ಇರುವುದರಿಂದ ಇದು ಆರೋಗ್ಯಕರವಾಗಿದೆ.

ಕ್ಯಾಲರಿ ಕಡಿಮೆ ಮಾಡುವುದರಿಂದ, ನಿಮ್ಮ ಮೆಚ್ಚಿನ ಖಾದ್ಯವನ್ನು ವರ್ಜಿಸದೇ ದೇಹ ತೂಕ ಇಳಿಯುತ್ತದೆ. ಬದಲಾಯಿಸಿದ ಈ ಸಂದೇಶ್ ರೆಸಿಪಿ ರುಚಿಯೊಂದಿಗೆ ರಾಜಿ ಮಾಡಿಕೊಳ್ಳದೆ ಖಾದ್ಯವನ್ನು ಆನಂದಿಸಬಹುದು. ಈ ರೆಸಿಪಿ ಈ ಖಾದ್ಯಕ್ಕೆ ಒಂದು ಆರೋಗ್ಯಕರ ರೂಪವನ್ನು ನೀಡುತ್ತದೆ ಏಕೆಂದರೆ ಆಗಾಗ ಚೊಕೊಲೆಟ್ ಸೇವಿಸುವುದು ಆರೋಗ್ಯಕರವಾಗಿದೆ.

ಮೋದಕ
ಮೋದಕ ಗಣೇಶನಿಗೆ ಅತ್ಯಂತ ಪ್ರಿಯವಾದ ತಿನಿಸು. ಈ ಬಾರಿಯ ಗಣೇಶ ಚತುರ್ಥಿಗೆ ಹಣ್ಣು ಮತ್ತು ತರಕಾರಿಯ ಮೋದಕ ತಯಾರಿಸುವತ್ತಲೂ ಎಲ್ಲ ಯೋಚಿಸಬಹುದು. ಸಾಮಾನ್ಯ ಮೋದಕದಂತೆ ಇವು ಕೂಡ ರುಚಿಕಟ್ಟಾಗಿರುತ್ತವೆ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಆಯ್ಕೆ.

ಹಣ್ಣು ಮತ್ತು ತರಕಾರಿಯಿಂದ ಮೋದಕ ತಯಾರಿಸಲು ಹೊರಡುವವರು ತಮ್ಮಿಷ್ಟದ ಹಣ್ಣು–ತರಕಾರಿಯೊಂದಿಗೆ ಮೋದಕ ತಯಾರಿಸಬಹುದು. ಇಲ್ಲಿ ಮೋದಕ ತಯಾರಿಸಲು ಅಕ್ಕಿ ಹಿಟ್ಟಿನ ಬದಲಿಗೆ ಜೋಳದ ಹಿಟ್ಟು ಬಳಸುವುದು ಉತ್ತಮ. ಮೋದಕದ ಹೂರಣಕ್ಕೆ ತೇವಾಂಶರಹಿತ ಹಣ್ಣಿನ ಹೋಳುಗಳು ಮತ್ತು ಹಣ್ಣಿನ ತಿರುಳನ್ನು ಬಳಸಬಹುದು.

ಇದು ರುಚಿಕರವೂ, ಪೌಷ್ಟಿಕವೂ ಆಗಿರುತ್ತದೆ. ಈ ಮೋದಕವನ್ನು ಎಣ್ಣೆಯಲ್ಲಿ ಕರಿಯದೇ ಹಬೆಯಲ್ಲಿ ಬೇಯಿಸಬೇಕು. ಎಣ್ಣೆಯ ಬದಲಿಗೆ ಆರೋಗ್ಯಕರವಾದ ತುಪ್ಪವನ್ನು ಬಳಸಬಹುದು.

ಮತ್ತೊಂದು ವಿಧಾನವೆಂದರೆ, ಹುರಿದ/ಸುಟ್ಟ ಮೋದಕ. ಮೋದಕವನ್ನು ಓವೆನ್‌ನಲ್ಲಿ ಬಿಸಿ ಮಾಡುವುದು ಆರೋಗ್ಯಕರ ಮಾತ್ರವಲ್ಲ, ಇದರಿಂದ ಮೋದಕವು ಗರಿಗರಿಯಾಗಿ, ರುಚಿಕರವಾಗಿರುತ್ತದೆ. ಇದರ ಹೂರಣದಲ್ಲಿ ಓಟ್ಸ್, ಬೀಜಗಳು ಮತ್ತು ಹೆಚ್ಚಿದ ಹಣ್ಣುಗಳನ್ನು ಹಾಕಬಹುದು.

12-14 ಮೋದಕ ತಯಾರಿಸಲು ಬೇಕಿರುವ ಪದಾರ್ಥಗಳು
ಜೋಳದ ಹಿಟ್ಟು ಒಂದು ಕಪ್, ಬೆಲ್ಲ 10 ಗ್ರಾಂ, ತುರಿದ ತಾಜಾ ತೆಂಗಿನಕಾಯಿ ಕಾಲು ಕಪ್, ಎರಡು ಚಮಚ ಬಿಳಿ ಎಳ್ಳು, ಸ್ವಲ್ಪ ಉಪ್ಪು, ಒಂದು ಸ್ಪೂನ್‌ ತುಪ್ಪ.

ವಿಧಾನ: ಬಿಳಿ ಎಳ್ಳನ್ನು ಕಂದು ಬಣ್ಣ ಬರುವವರೆಗೂ ಹುರಿದುಕೊಂಡು, ಆರಲು ಬಿಡಿ. ನಂತರ ಅದನ್ನು ನುಣುಪಾಗಿ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೆಲ್ಲ ಕರಗುವವರೆಗೂ ಕಾಯಿಸಿ. ಮತ್ತೊಂದು ಪಾತ್ರೆಗೆ ಬೆಲ್ಲದ ಪಾಕವನ್ನು, ರುಬ್ಬಿದ ಎಳ್ಳನ್ನು ಮತ್ತು ತುರಿದ ತೆಂಗಿನಕಾಯಿಯನ್ನು ಸೇರಿಸಿ ಬೆರೆಸಿ. ಈ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಪಕ್ಕದಲ್ಲಿಟ್ಟುಕೊಳ್ಳಿ.

ಒಂದು ಅಗಲವಾದ ಪಾತ್ರೆಯಲ್ಲಿ ಹಿಟ್ಟನ್ನೂ, ಉಪ್ಪನ್ನೂ ಸೇರಿಸಿ. ಸ್ವಲ್ಪಸ್ವಲ್ಪವಾಗಿ ಬಿಸಿ ನೀರನ್ನು ಸೇರಿಸುತ್ತಾ, ಅದನ್ನು ಒಂದು ಸೌಟಿನಲ್ಲಿ ಚೆನ್ನಾಗಿ ಕಲೆಸಿ ಮೃದು ಮಾಡಿಕೊಳ್ಳಿ. ಅದನ್ನು ಮೂರು ನಿಮಿಷ ಆರಿಸಿ, ಚೆನ್ನಾಗಿ ನಾದಿರಿ. ಹಿಟ್ಟು ಮೃದುವಾಗಿಯೂ, ನಯವಾಗಿಯೂ ಇರಬೇಕು.

ಕೈಗಳಿಗೆ ಸ್ವಲ್ಪ ತುಪ್ಪ ಸವರಿಕೊಳ್ಳಿ. ಹಿಟ್ಟಿನ ಸಣ್ಣ ಉಂಡೆಯನ್ನು ತೆಗೆದುಕೊಂಡು, ಅದನ್ನು ಚಪ್ಪಟೆ ಮಾಡಿರಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗಳಲ್ಲಿ ಇದನ್ನು ಇಟ್ಟು 15 ನಿಮಿಷ ಬೇಯಿಸಿ. ಈ ಸಕ್ಕರೆರಹಿತ ಮೋದಕವು ನಿಮಗೆ ಖಂಡಿತ ಇಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT