ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವನ ಕೆಲಸಕ್ಕೆ ಬ್ಯಾಕ್ಟೀರಿಯಾ ಬಳಕೆ?

ವಿಜ್ಞಾನ ಲೋಕದಿಂದ
Last Updated 4 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸರ್ವತ್ರ ಕಂಡುಬರುವ ಬ್ಯಾಕ್ಟೀರಿಯಾಗಳನ್ನು ಕಾರು ಚಲಾಯಿಸುವುದು, ಆಹಾರ ಶೈತ್ಯೀಕರಿಸುವುದು ಮುಂತಾದ ಕೆಲಸಗಳಿಗೆ ಬಳಸಬಹುದೇ?  ಅವು ವಿಮಾನಗಳಿಗೆ ಇಂಧನವಾಗಬಲ್ಲವೇ?

ಇದು ಕೂಡಾ ಸಾಧ್ಯ ಎನ್ನುತ್ತಾರೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಜವಾಹರಲಾಲ್ ನೆಹರೂ ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದ ವಿಜ್ಞಾನಿಗಳು.

ಒಂದು ಅದ್ಭುತ ಅಂತರಶಾಸ್ತ್ರೀಯ ಪ್ರಯೋಗದಲ್ಲಿ, ಈ ವಿಜ್ಞಾನಿಗಳ ತಂಡ, ಬ್ಯಾಕ್ಟೀರಿಯಾ ಸಂಗ್ರಾಹಕಗಳನ್ನು ಬಳಸಿಕೊಂಡು ಕೆಲಸ ಮಾಡುವ ಸೂಕ್ಷ್ಮ ಉಷ್ಣ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಅಧ್ಯಯನವು, ಭಾರತೀಯ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರ  ಪ್ರಾಧ್ಯಾಪಕ ಪ್ರೊ.ಅಜಯ್ ಸೂದ್, ಪದವಿ ವಿದ್ಯಾರ್ಥಿ ಸುಧೀಶ್ ಕೃಷ್ಣಮೂರ್ತಿ, ಜವಾಹರಲಾಲ್ ನೆಹರೂ ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಡಾ.ರಾಜೇಶ್ ಗಣಪತಿ, ಭಾರತೀಯ ವಿಜ್ಞಾನ ಸಂಸ್ಥೆಯ ಆಣ್ವಿಕ ಜೈವಿಕ ಭೌತಶಾಸ್ತ್ರ ಘಟಕದ ಪ್ರಾಧ್ಯಾಪಕ ಪ್ರೊ. ದೀಪಂಕರ್ ಚಟರ್ಜಿ ಮತ್ತು ಅವರ ವಿದ್ಯಾರ್ಥಿ ಸುಭೋ ಘೋಷ್ ಅವರ ಸಮೂಹ
ಪ್ರಯತ್ನದ ಫಲ.

ಸಾಮಾನ್ಯವಾಗಿ ಸ್ಟರ್ಲಿಂಗ್ ಅಥವಾ ಕಾರ್ನಟ್ ಎಂಜಿನ್‌ನಂತಹ ಶಾಖ ಎಂಜಿನ್ ಅಥವಾ ಉಷ್ಣದ ಎಂಜಿನ್‌, ಒಂದು ಬಿಸಿ ಸಂಗ್ರಾಹಕದಿಂದ ಶಾಖ ಶಕ್ತಿಯನ್ನು ಪಡೆದು, ಅದನ್ನು ಯಾಂತ್ರಿಕ ಕೆಲಸವನ್ನಾಗಿ ಪರಿವರ್ತಿಸುತ್ತದೆ. ಸ್ವಲ್ಪ ಪ್ರಮಾಣದ ಶಾಖವನ್ನು ಮತ್ತೊಂದು ತಂಪಾದ ಸಂಗ್ರಾಹಕಕ್ಕೆ ವರ್ಗಾಯಿಸುತ್ತದೆ. ಇಲ್ಲಿ ‘ಕಾರ್ಯನಿರ್ವಹಣಾ ಪದಾರ್ಥ’ವು ಸಾಮಾನ್ಯವಾಗಿ ದ್ರವ ಅಥವಾ ಅನಿಲವಾಗಿರುತ್ತದೆ.

ಅದನ್ನು  ಆವರ್ತಕ ಪ್ರಕ್ರಿಯೆಯಲ್ಲಿ ಸಂಗ್ರಾಹಕಗಳ ನಡುವೆ ಹರಿಯ ಬಿಡಲಾಗುತ್ತದೆ.  ಈ ಆವರ್ತಕ ಪ್ರಕ್ರಿಯೆಯನ್ನು ‘ಎಂಜಿನ್ ಸೈಕಲ್’ ಎನ್ನುತ್ತಾರೆ. ಈ ಪ್ರಕ್ರಿಯೆಯ ಭಾಗವಾಗಿದ್ದ ಅನಿಲದ ವಿಕಸನ ಮತ್ತು ಸಂಕೋಚನವನ್ನು ಒಂದು ಪಿಸ್ಟನ್ ತಳ್ಳಲು ಹಾಗೂ ಚಕ್ರವನ್ನು ತಿರುಗಿಸಲು ಬಳಸಲಾಗುತ್ತದೆ.

ಇದರ ಮುಂದುವರಿದ ಭಾಗವಾಗಿ,  ಎಂಜಿನ್  ಜೋಡಿಸಿರುವ ಭಾಗಕ್ಕೆ ಶಕ್ತಿ ಪೂರೈಕೆಯಾಗುತ್ತದೆ. ಉಗಿ ಯಂತ್ರದ  ಆವಿಷ್ಕಾರದೊಂದಿಗೆ ಈ ಸರಳ ತತ್ವ ಚಾಲ್ತಿಗೆ ಬಂತು. ನೂರಾರು ವರ್ಷಗಳ ಬಳಿಕವೂ, ಗೃಹೋಪಯೋಗಿ  ಉಪಕರಣಗಳಿಂದ ಹಿಡಿದು,  ಕಾರುಗಳು, ದೊಡ್ಡ ಪ್ರಮಾಣದ ಕೈಗಾರಿಕಾ ಯಂತ್ರಗಳವರೆಗೂ  ಬಳಕೆಯಾಗುವುದೂ ಇದೇ ತತ್ವ.

‘ಬಿಸಿ’ ಮತ್ತು ‘ತಣ್ಣನೆ’ಯ  ಸಂಗ್ರಾಹಕಗಳ ತಾಪಮಾನದ ನಡುವೆ ಹೇಳಿಕೊಳ್ಳುವಂತಹ ವ್ಯತ್ಯಾಸ ಇಲ್ಲದೆಯೇ   ಶಾಖವನ್ನು ಯಾಂತ್ರಿಕ ಕೆಲಸವನ್ನಾಗಿ ಪರಿವರ್ತಿಸಿರುವುದು ಇದೇ ಮೊದಲು. ಈ ಕಾರಣಕ್ಕಾಗಿ  ಪ್ರೊ.ಸೂದ್  ಅವರ ತಂಡದ ಸಂಶೋಧನೆ  ಮಹತ್ವದ್ದು.

ಒಂದು ‘ಸಕ್ರಿಯ’ ಚಲನಶೀಲ ಬ್ಯಾಕ್ಟೀರಿಯಾದ ಸಂಗ್ರಾಹಕವನ್ನು ಬಳಸಿದ ಈ ಚೊಚ್ಚಲ ಸಂಶೋಧನೆ ಬಗ್ಗೆ ‘ನೇಚರ್ ಫಿಸಿಕ್ಸ್’  ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಲೇಖನ ಪ್ರಕಟವಾಗಿದೆ. ಈ ಸಂಶೋಧನೆಯು, ಗ್ರಹಿಕೆಗೆ ನಿಲುಕದ ಜೈವಿಕ ಮೋಟಾರನ್ನು ಸಮರ್ಥವಾಗಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ.

ಸಾಂಪ್ರದಾಯಿಕ ಎಂಜಿನ್‌ಗಳು ‘ಕಾರ್ಯನಿರ್ವಹಣಾ ಪದಾರ್ಥ’ವಾದ ಅನಿಲವನ್ನು ಭಾರಿ ಪ್ರಮಾಣದಲ್ಲಿ ಬಳಸುತ್ತವೆ. ಆದರೆ, ಸೂಕ್ಷ್ಮ ಉಷ್ಣ ಎಂಜಿನ್‌ಗಳು  ಅದರ ಒಂದು ಕಣವನ್ನು ಬಳಸುತ್ತವೆ. ಈ ವಿಜ್ಞಾನಿಗಳ ತಂಡ,  ಕೇವಲ 5 ಮೈಕ್ರೊಮೀಟರ್ ಗಾತ್ರದ  ‘ಕಲಿಲ ಮಣಿ’ಯನ್ನು (ಕೊಲೋಯ್ಡಲ್‌ಬೀಡ್‌)  ‘ಕಾರ್ಯನಿರ್ವಹಣಾ ಪದಾರ್ಥ’ ವನ್ನಾಗಿ ಬಳಸಿದೆ.

ಕೇಂದ್ರೀಕೃತ ಲೇಸರ್ ಕಿರಣದ ‘ದೃಗ್ವಿಜ್ಞಾನೀಯ ಬಲೆ’ಯಲ್ಲಿ (ಆಪ್ಟಿಕಲ್‌ ಟ್ರ್ಯಾಪ್‌) ಸಿಲುಕಿದ ಕಲಿಲ ಮಣಿ ಇದಾಗಿದೆ. ಲೇಸರ್ ಬೆಳಕಿನ ತೀವ್ರತೆಯನ್ನು ಬದಲಾಯಿಸುವ ಮೂಲಕ  ಮಣಿಯ ಚಲನೆಯನ್ನು ನಿಯಂತ್ರಿಸ ಲಾಗುತ್ತದೆ. ಮಣಿಯು ‘ಪಿಸ್ಟನ್’ನ ಕ್ರಿಯೆಯನ್ನು ಅನುಸರಿಸುತ್ತದೆ.

ಈ ಹಿಂದಿನ ಎಲ್ಲಾ ಉಷ್ಣ ಎಂಜಿನ್‌ಗಳಲ್ಲಿ, ಸಂಗ್ರಾಹಕಗಳ ತಾಪಮಾನದ ಏರಿಳಿತ ನಗಣ್ಯವಾಗಿರುತ್ತಿತ್ತು. ಬಳಸುತ್ತಿದ್ದ ಸಂಗ್ರಾಹಕಗಳು  ನಿಷ್ಕ್ರಿಯವಾಗಿರುತ್ತಿದ್ದವು. ಈ ಅಧ್ಯಯನದಲ್ಲಿ, ಪ್ರೊ.ಸೂದ್ ಅವರ ತಂಡ ‘ಸಕ್ರಿಯ’ ಸಂಗ್ರಾಹಕವನ್ನು ಬಳಸುವ ಹೊಸ ಯೋಚನೆ ಮಾಡಿತು.

‘ಬ್ಯಾಸಿಲ್ಲಸ್ ಲೈಕೆನಿಫಾರ್ಮಿಸ್' (B.Licheniformis) ಎಂಬ ಚಲನಶೀಲ ಬ್ಯಾಕ್ಟೀರಿಯಾವನ್ನು ಸೂಕ್ಷ್ಮ ಸ್ಟರ್ಲಿಂಗ್ ಎಂಜಿನ್‌ನಲ್ಲಿ, ಸಕ್ರಿಯ ಸಂಗ್ರಾಹಕವಾಗಿ ಬಳಸಲಾಯಿತು.   ಜೈವಿಕ ಎಂಜಿನ್‌ಗಳನ್ನು ಅರ್ಥೈಸಿಕೊಳ್ಳಬೇಕೆಂಬ ಹಂಬಲವೇ ಇದಕ್ಕೆ ಪ್ರೇರಣೆ’ ಎನ್ನುತ್ತಾರೆ ಪ್ರೊ.ಸೂದ್.
ಜೀವಂತ ಜೀವಕೋಶಗಳೊಳಗೆ ಕಾರ್ಯನಿರ್ವಹಿಸುವ  ಜೈವಿಕ ಎಂಜಿನ್‌ಗಳು  ಸಕ್ರಿಯ ಸಂಗ್ರಾಹಕಗಳಿಗೆ ಅತ್ಯುತ್ತಮ ಉದಾಹರಣೆ.  ಸಕ್ರಿಯ ಸಂಗ್ರಾಹಕಗಳು  ಸದಾ ಅಸಮತೋಲನದಿಂದ ಕೂಡಿರುತ್ತವೆ.  ಅಥವಾ ಅವು ಭಾರಿ ಏರಿಳಿತಗಳಿಗೆ ಅಥವಾ ಗಲಿಬಿಲಿಗೆ ಒಡ್ಡಿಕೊಂಡಿರುತ್ತವೆ. ಸಂಗ್ರಾಹಕದ ಬ್ಯಾಕ್ಟೀರಿಯಾಗಳ ಚಲನಶೀಲತೆ ಮತ್ತು ಚಯಾಪಚಯ ಕ್ರಿಯೆ, ಈಗಲಿಬಿಲಿಯ ಮೂಲ.

ಕಲಿಲ ಮಣಿಯನ್ನು ಅದರ ಪಾಡಿಗೆ ಬಿಟ್ಟಾಗ, ಅದು ಕೇವಲ ಲೇಸರ್ ಕಿರಣದ ಕೇಂದ್ರದ ಸುತ್ತ ಸುತ್ತುತ್ತಿತ್ತು; ಆದರೆ ಬ್ಯಾಕ್ಟೀರಿಯಾಗಳ ಸಂಗ್ರಾಹಕದ ಹೊಸ ಬಗೆಯ ಗಲಿಬಿಲಿಯಿಂದಾಗಿ, ಅದು ಅತ್ಯುತ್ಸಾಹದಿಂದ  ಯರ್ರಾಬಿರ್ರಿಯಾಗಿ ಚಲಿಸಲು ಆರಂಭಿಸುತ್ತದೆ.

ಒಂದು ಸಾಮಾನ್ಯ ಉಷ್ಣ/ನಿಷ್ಕ್ರಿಯ ಸಂಗ್ರಾಹಕದಲ್ಲಿ,  ಕಲಿಲ ಮಣಿಗಳು ‘ಗಾಸಿಯನ್ ರೇಖಾಚಿತ್ರ ವಿವರಣೆ’ಗೆ ಅನುಗುಣವಾಗಿ ಚಲಿಸುತ್ತವೆ.  ಅವು ಲೇಸರ್ ಬೆಳಕಿನ ‘ದೃಗ್ವಿಜ್ಞಾನೀಯ ಬಲೆ’ಯ ಕೆಂದ್ರದಲ್ಲೇ ಉಳಿಯುವ ಸಾಧ್ಯತೆ ಹೆಚ್ಚು. ಅಂದರೆ, ಬಲೆಯ ಕೇಂದ್ರ ಸ್ಥಾನದಿಂದ ದೂರಕ್ಕೆ ಮಣಿಯ ಸುತ್ತಾಟವು ಬಹಳ ಕಡಿಮೆ. ಇದಕ್ಕೆ ತದ್ವಿರುದ್ಧವಾಗಿ, ಸಕ್ರಿಯ ಸಂಗ್ರಾಹಕದಲ್ಲಿನ ಕಣದ ಚಾಲಕಶಕ್ತಿಗಳು ‘ಗಾಸಿಯನ್ ರೇಖಾಚಿತ್ರ ವಿವರಣೆ’ಗೆ ಅನುಗುಣವಾಗಿರುವುದಿಲ್ಲ; ಅಂದರೆ, ಈ ಹೊಸ ವ್ಯವಸ್ಥೆಯಲ್ಲಿ, ಕಲಿಲ ಮಣಿಯು ಬಲೆಯ ಕೇಂದ್ರ ಸ್ಥಾನದಿಂದ ದೂರಕ್ಕೆ ಆಗಾಗ ಸುತ್ತಾಡಬಹುದು. ಪ್ರೊ.ಸೂದ್ ಅವರ ತಂಡವು, ಈ ಸಿದ್ಧಾಂತವನ್ನು ಬಳಸಿಕೊಳ್ಳುವ ಜಾಣ್ಮೆ ತೋರಿದೆ.

ಸಂಗ್ರಾಹಕದ ತಾಪಮಾನವು ಬ್ಯಾಕ್ಟೀರಿಯಾದ ಚಟುವಟಿಕೆ ಮೇಲೆ ಅತ್ಯಂತ ಸೂಕ್ಷ್ಮ ಪರಿಣಾಮ ಬೀರುತ್ತದೆ.  ಅಲ್ಲದೇ, ಇದು ಸುಲಭವಾಗಿ ಸಜ್ಜುಗೊಳಿಸಲು ಸಾಧ್ಯವಿರುವ ನಿಯತಾಂಕವಾಗಿದೆ. ನಿಯತಕಾಲಿಕವಾಗಿ ಬ್ಯಾಕ್ಟೀರಿಯಾದ ಚಟುವಟಿಕೆಯನ್ನು ಮಾರ್ಪಡಿಸುವ ಮೂಲಕ ಮತ್ತು ಲೇಸರ್‌ನ ತೀವ್ರತೆಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ, ಸೂಕ್ಷ್ಮ ಎಂಜಿನ್ ಕಾರ್ಯಗತಗೊಳಿಸಿದ ಪ್ರಕ್ರಿಯಾ ಚಕ್ರವು, ದೊಡ್ಡ ಉಷ್ಣ ಎಂಜಿನ್‌ನ ಸ್ಟರ್ಲಿಂಗ್ ಚಕ್ರವನ್ನು ಬಹುವಾಗಿ ಹೋಲುತ್ತದೆ.

ಈ ಅಧ್ಯಯನದ ಫಲಿತಾಂಶದ ಪ್ರಕಾರ, ಬ್ಯಾಕ್ಟೀರಿಯಾ ಎಂಜಿನ್‌ನ ಸಾಮರ್ಥ್ಯವು  ನಿಷ್ಕ್ರಿಯ ಎಂಜಿನ್‌ಗಿಂತ ಹೆಚ್ಚು ಉತ್ತಮವಾಗಿತ್ತು. ಅಷ್ಟೇ ಅಲ್ಲದೆ, ಜೈವಿಕ ಮೋಟಾರ್‌ಗಿಂತ ಇದು ಕೇವಲ ಅರ್ಧದಷ್ಟು ಚಿಕ್ಕದಾಗಿದೆ. ತಪಾಸಣೆ ಮಾಡಲಾದ  ಎಲ್ಲಾ ಚಟುವಟಿಕೆಯಲ್ಲೂ, ಬ್ಯಾಕ್ಟೀರಿಯಾ ಎಂಜಿನ್‌ನ ಕಾರ್ಯ ಕ್ಷಮತೆ ನಿಷ್ಕ್ರಿಯ ಎಂಜಿನ್‌ಗೆ ಸಮನಾಗಿತ್ತು; ಆದರೆ  ನಿಷ್ಕ್ರಿಯ ಎಂಜಿನ್‌ನ ಪ್ರಕ್ರಿಯಾ ಚಕ್ರದಲ್ಲಿ, ಸಂಗ್ರಾಹಕಗಳ ತಾಪಮಾನದ ನಡುವೆ 1800 ಕೆಲ್ವಿನ್ ನಷ್ಟು ಅಗಾಧ ಪ್ರಮಾಣದ ವ್ಯತ್ಯಾಸವಿತ್ತು.

ಸಕ್ರಿಯ ಎಂಜಿನ್‌ನ ಸಂಗ್ರಾಹಕದಲ್ಲಿನ ಬ್ಯಾಕ್ಟೀರಿಯಾದ ಚಟುವಟಿಕೆಯನ್ನು ಕುಶಲತೆಯಿಂದ ಮಾರ್ಪಡಿಸಲು, ಅಗತ್ಯವಾದ ತಾಪಮಾನ ಬದಲಾವಣೆ 20 ಕೆಲ್ವಿನ್ ಗಿಂತಲೂ ಕಡಿಮೆಯಾಗಿತ್ತು. ಸಕ್ರಿಯ ಸಂಗ್ರಾಹಕದಲ್ಲಿರುವ ‘ಗಾಸಿಯನ್ ತತ್ವ’ಕ್ಕೆ ಬದ್ಧವಲ್ಲದ ಏರಿಳಿತಗಳು, ಎಂಜಿನ್‌ನ ಕ್ಷಮತೆಯಲ್ಲಿ ಮಹತ್ತರ ಸುಧಾರಣೆ ತಂದಿವೆ.  ಇದು ಇಲ್ಲಿಯವರೆಗೂ ಬಳಸಿಲ್ಲದ ಶ್ರೀಮಂತ ಸಂಪನ್ಮೂಲ.

‘ಒಟ್ಟು ಕೆಲಸದ ಶೇ 57 ಭಾಗಕ್ಕೆ ಮತ್ತು ಒಟ್ಟು ಕ್ಷಮತೆಯ ಶೇ 55 ಭಾಗಕ್ಕೆ ‘ಗಾಸಿಯನ್ ತತ್ವ’ಕ್ಕೆ ಬದ್ಧವಲ್ಲದ ಏರಿಳಿತಗಳೇ ಕಾರಣ ಎಂಬುದನ್ನು ನಾವು ದೃಢಪಡಿಸಿದ್ದೇವೆ’ ಎಂದು ಕಾರ್ಯಕ್ಷಮತೆ ಹೆಚ್ಚಳದ ಹಿಂದಿನ ಕಾರಣವನ್ನು ವಿವರಿಸುತ್ತಾರೆ ಪ್ರೊ. ಸೂದ್.

ಉಪಯುಕ್ತ ಕೆಲಸ ಹೊರತೆಗೆಯುವ ಸಲುವಾಗಿ, ನೈಜ ಸಾಧನಗಳಿಗೆ ಈ ಸಿದ್ಧಾಂತವನ್ನು ನಿಖರವಾಗಿ ಜೋಡಿಸಲು ಬೇಕಾದ ಕಾರ್ಯವಿಧಾನಗಳ ಬಗ್ಗೆ, ಇನ್ನೂ ಅಧ್ಯಯನ ಆಗಬೇಕಿದೆ. ಈಗಾಗಲೇ, ಶೇಕಡ 50ರಷ್ಟು ಪ್ರಭಾವಶಾಲಿ ಕಾರ್ಯಕ್ಷಮತೆಯನ್ನು ಹೊಂದಿರುವ ಬ್ಯಾಕ್ಟಿರಿಯಾ ಎಂಜಿನ್‌  ಸದ್ಯದಲ್ಲಿಯೇ ಸೂಕ್ಷ್ಮ ಮತ್ತು ನ್ಯಾನೊ ವಿದ್ಯುದ್ಯಾಂತ್ರಿಕ ಸಾಧನಗಳಿಗೆ ಶಕ್ತಿ ತುಂಬುವ ಭರವಸೆ ಮೂಡಿಸಿದೆ.

ಮೂಲಭೂತ ಸೈದ್ಧಾಂತಿಕ ಊಹೆಯ ಪ್ರಕಾರವಾಗಿಯೇ, ಒಂದೇ ತಾಪಮಾನವನ್ನು ಹೊಂದಿರುವ ಎರಡು ಸಂಗ್ರಾಹಕಗಳಲ್ಲಿ  ಗಲಿಬಿಲಿ ಪ್ರಮಾಣದಲ್ಲಿ ಏರಿಳಿತ ಮಾಡುವ ಮೂಲಕ ಕೆಲಸ ಮಾಡಿಸಿಕೊಳ್ಳುವ ಈ ಸಂಶೋಧನೆಯು ಅತ್ಯಂತ ಆಸಕ್ತಿದಾಯಕವಾಗಿದೆ. 

‘ಸಕ್ರಿಯ ಬ್ಯಾಕ್ಟೀರಿಯಾ ಎಂಜಿನ್, ಕೆಲವು ಮೂಲಭೂತ ಸೈದ್ಧಾಂತಿಕ ಪರಿಣಾಮಗಳನ್ನು ಹೊಂದಿದೆ.  ಸಮತೋಲನದ  ಆಧಾರದಲ್ಲಿ ಕಾರ್ಯನಿರ್ವಹಿಸುವ ಎಂಜಿನ್‌ಗಳಲ್ಲಿ  ಈ  ಸಂಶೋಧನೆ ಅಳವಡಿಸುವುದಕ್ಕೆ  ಮುನ್ನ ದೃಢವಾದ ಸೈದ್ಧಾಂತಿಕ ಚೌಕಟ್ಟನ್ನು ಸ್ಥಾಪಿಸಲು ಬೇಕಾದ ಆಳವಾದ ತಪಾಸಣೆಯ ಅಗತ್ಯವಿದೆ’  ಎನ್ನುತ್ತಾರೆ ಪ್ರೊ.ಸೂದ್‌.

ಜೈವಿಕ ಎಂಜಿನ್‌ಗಳ ಕ್ಷಮತೆಗೆ ಹೋಲಿಸಿದರೆ ಮಾನವ ನಿರ್ಮಿತ ಎಂಜಿನ್‌ಗಳ ಕ್ಷಮತೆ ಏನೂ ಅಲ್ಲ.  ಈ ಜೈವಿಕ ಎಂಜಿನ್‌ಗಳ ಬಗ್ಗೆ ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ.

‘ಬ್ಯಾಕ್ಟೀರಿಯಾ ಎಂಜಿನ್’ನಂತೆಯೇ ಜೈವಿಕ ಎಂಜಿನ್‌ಗಳು ಕೂಡ ಸಕ್ರಿಯ ಸಂಗ್ರಾಹಕಗಳಲ್ಲಿ (ಜೀವಕೋಶಗಳು) ಮತ್ತು ಸ್ಥಿರ ಉಷ್ಣಾಂಶದ ವಾತಾವರಣದಲ್ಲಿ ಕೆಲಸ ಮಾಡುತ್ತವೆ ಎಂಬುದಷ್ಟೇ ನಮಗೆ ತಿಳಿದಿದೆ.

ಆದ್ದರಿಂದ, ಪ್ರಸ್ತುತ ಸಂಶೋಧನೆಯು, ಬಯಲಾಗದ ಜೈವಿಕ ರಹಸ್ಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಬಲ್ಲುದು ಎಂಬ ಆಶಾವಾದ ಮೂಡಿದೆ.

- ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT