ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆಗಳಲ್ಲಿ ಸರಕುಗಳ ಖರೀದಿ ಸುಲಭಗೊಳಿಸುವ ಎಕ್ಸ್‌ಲಾಜಿಕ್ಸ್‌

Last Updated 6 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದಿನಬಳಕೆ, ಸೌಂದರ್ಯ ಪ್ರಸಾಧನ, ಸಿದ್ಧ ಉಡುಪು ಮತ್ತಿತರ ಸರಕುಗಳ ಖರೀದಿಗೆ  ಸರ್ವ ಸರಕು ಮಳಿಗೆಗಳಿಗೆ ಹೋದಾಗ ಗ್ರಾಹಕರು ಬಿಲ್ಲಿಂಗ್‌ ಕೌಂಟರ್‌ನಲ್ಲಿ ತುಂಬ ಹೊತ್ತು ಕಾಯಬೇಕಾಗುತ್ತದೆ. ಅದರಲ್ಲೂ ಹಬ್ಬ ಹರಿದಿನ, ವಿಶೇಷ ಕೊಡುಗೆಗಳ ದಿನಗಳಲ್ಲಂತೂ ಕ್ಯಾಷ್‌ ಕೌಂಟರ್‌ ಎದುರಿನ ಉದ್ದನೇಯ ಸಾಲ  ಕಂಡು ಗ್ರಾಹಕರ ಉತ್ಸಾಹವೇ ಉಡುಗುತ್ತದೆ. ಸರಕು ಖರೀದಿಸುವಾಗಲೇ ಬಿಲ್‌ ಮಾಡುತ್ತ, ಕೌಂಟರ್‌ನಲ್ಲಿ ತಕ್ಷಣ ಹಣ ಪಾವತಿಸಿ ಹೊರ ನಡೆಯುವಂತಿದ್ದರೆ ... ಎನ್ನುವ ಗ್ರಾಹಕರ ಕನಸು ಈಗ ನನಸಾಗುತ್ತಿದೆ.

ಗ್ರಾಹಕರು ತಮಗೆ ಬೇಕಾದ ಸರಕಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ತಮ್ಮ ಮೊಬೈಲ್ ಕ್ಯಾಮೆರಾ ಮೂಲಕ ಬಾರ್‌ಕೋಡ್‌ ಸ್ಕ್ಯಾನ್ ಮಾಡಿ ಬಿಲ್‌ ಪಟ್ಟಿ ಸಿದ್ಧಪಡಿಸುವ  ಸರಳ ತಂತ್ರಜ್ಞಾವನ್ನು ಅಮರ್‌ ಎಸ್‌. ರೇವಡಿ (46) ಮತ್ತು  ದೀಪಕ್‌ ಕೌಶಿಕ್‌ (44) ಅವರು ಅಭಿವೃದ್ಧಿಪಡಿಸಿದ್ದಾರೆ. ಮಾರುಕಟ್ಟೆ ಮತ್ತು ತಂತ್ರಜ್ಞಾನ ವೃತ್ತಿ ಹಿನ್ನೆಲೆಯಿಂದ ಬಂದಿರುವ ಈ ಇಬ್ಬರೂ ಕನ್ನಡಿಗರು, ಸದ್ಯಕ್ಕೆ ₹ 40ಲಕ್ಷದವರೆಗೆ ಸ್ವಂತ ಬಂಡವಾಳ ಹಾಕಿ ಎಕ್ಸ್‌ಲಾಜಿಕ್ಸ್‌  (Xlogix)  ಹೆಸರಿನ ನವೋದ್ಯಮ ಸ್ಥಾಪಿಸಿದ್ದಾರೆ.  ವಹಿವಾಟು ವಿಸ್ತರಣೆ ಉದ್ದೇಶಕ್ಕೆ ಹೊಸ ಹೂಡಿಕೆದಾರರ ಹುಡುಕಾಟದಲ್ಲಿ ಇದ್ದಾರೆ.

ಮನೆಗೆ ಬೇಕಾದ ಎರಡು ಸರಕುಗಳನ್ನು  ಎರಡೇ ನಿಮಿಷಗಳಲ್ಲಿ ಖರೀದಿಸಿದರೂ ಬಿಲ್‌ ಕೌಂಟರ್‌ನಲ್ಲಿ ಅರ್ಧಗಂಟೆಗಿಂತ ಹೆಚ್ಚು ಸಮಯ ಕಾಯ್ದು ರೋಷಿ ಹೋದ ದೀಪಕ್‌ ಕೌಶಿಕ್‌ ಅವರ ಪತ್ನಿ, ‘ಏನ್ರಿ, ತಂತ್ರಜ್ಞಾನ ಇಷ್ಟು ಮುಂದುವರೆದಿದೆ.  ಸಾಫ್ಟ್‌ವೇರ್‌ ಉದ್ದಿಮೆಯಲ್ಲಿ ಕೆಲಸ ಮಾಡುವ ನಿಮಗೆ  ತ್ವರಿತವಾಗಿ ಬಿಲ್ಲಿಂಗ್‌ ಪ್ರಕ್ರಿಯೆ ಮುಗಿಸುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲವೆ’ ಎಂದು  ನಯವಾಗಿ ತರಾಟೆಗೆ ತೆಗೆದುಕೊಂಡಿದ್ದೇ ಈ ಎಕ್ಸ್‌ಲಾಜಿಕ್ಸ್‌ ಸ್ಟಾರ್ಟ್‌ಅಪ್‌ ಸ್ಥಾಪಿಸಲು ಮೂಲ ಪ್ರೇರಣೆಯಾಗಿದೆ. 

ಸಿಟಿಬ್ಯಾಂಕ್‌ ಮತ್ತು ಐಬಿಎಂನಲ್ಲಿ  ಕೆಲಸ ಮಾಡಿರುವ ಅಮರ್‌ ಮತ್ತು ದೀಪಕ್‌  ತಮ್ಮ ಅನುಭವ ಬಳಸಿ ಈ ಸುಲಭ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. 2010ರಲ್ಲಿ ಈ ಪರಿಕಲ್ಪನೆ ಮೂಡಿದ್ದರೂ, ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ.  ಕೊನೆಗೂ ಇವರಿಬ್ಬರೂ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ 2015ರ ಜನವರಿಯಲ್ಲಿ ಹೊಸ ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಿದರು.

ದಿನಸಿ, ಚಿಲ್ಲರೆ ಮಳಿಗೆ, ಸರ್ವ ಸರಕು ಮಳಿಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ದೊರೆಯುವ ಆ್ಯಪ್‌ ಅನ್ನು ಇಂಟರ್‌ನೆಟ್‌ ಸಂಪರ್ಕ ಇಲ್ಲದೆಯೇ  ಮೊಬೈಲ್‌ಗೆ ಡೌನ್‌ಲೋಡ್‌ ಮಾಡಿಕೊಂಡು ಸುಲಭವಾಗಿ ಬಳಸಬಹುದು. ನಂತರದ ದಿನಗಳಲ್ಲಿ ಇದು ಪ್ಲೇಸ್ಟೋರ್‌ನಲ್ಲಿ ಲಭ್ಯವಾಗಲಿದೆ.

‘ಕಿರಾಣಿ ಅಂಗಡಿ ಅಥವಾ ಸರ್ವ ಸರಕು ಮಳಿಗೆಗಳಲ್ಲಿ ಖರೀದಿಸುವ ಸರಕುಗಳ ಬಾರ್‌ಕೋಡ್  ಅನ್ನು ಮೊಬೈಲ್‌ ಮೂಲಕ ಸ್ಕ್ಯಾನ್‌ ಮಾಡುತ್ತಿದ್ದಂತೆ,  ಬೆಲೆಯೂ ಸೇರಿದಂತೆ ಸರಕಿನ ವಿವರಗಳೆಲ್ಲ ಮೊಬೈಲ್‌ನಲ್ಲಿ ದಾಖಲಾಗುತ್ತವೆ. ಈ ವಿವರಗಳನ್ನು ಸಬ್‌ಮಿಟ್‌ ಮಾಡಿದಾಗ, ಮಳಿಗೆಯ ಕಂಪ್ಯೂಟರ್‌ನಲ್ಲಿ ಈ ವಿವರಗಳು ಸ್ವಯಂಚಾಲಿತವಾಗಿ ದಾಖಲಾಗುತ್ತವೆ.  

ಕ್ಯಾಷ್‌ ಕೌಂಟರ್‌ಗೆ ತೆರಳಿ ಅಲ್ಲಿರುವ ಸಿಬ್ಬಂದಿಗೆ ಮೊಬೈಲ್‌ ಸಂಖ್ಯೆ ನೀಡಿದಾಗ ಗ್ರಾಹಕ ಖರೀದಿಸಿದ ಸರಕುಗಳ ವಿವರ, ಬೆಲೆ ಮೊತ್ತ ಎಲ್ಲವೂ ಅಲ್ಲಿನ ಕಂಪ್ಯೂಟರ್‌ನಲ್ಲಿ ಈ ಮೊದಲೇ ಮೂಡಿರುತ್ತದೆ. ಅಲ್ಲಿ ನಗದು ಪಾವತಿಸಿ ಮಳಿಗೆಯಿಂದ ಹೊರ ನಡೆಯಬಹುದು’ ಎಂದು ಅಮರ್‌ ಮತ್ತು ದೀಪಕ್ ವಿವರಿಸುತ್ತಾರೆ. ಈ ತಂತ್ರಜ್ಞಾನವು  ಇಂಟರ್‌ನೆಟ್‌ ಸಂಪರ್ಕ ಇಲ್ಲದೆ ಕೆಲಸ ಮಾಡುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ವೈಫೈ ರೌಟರ್‌ ಅನ್ನು ಸ್ಥಳೀಯ ಸಂಪರ್ಕ ಜಾಲಕ್ಕೆ  ಸಂಪರ್ಕಕೆ ಕಲ್ಪಿಸಲಾಗುವುದು.

ಇಲ್ಲಿ ಮಳಿಗೆಯ ಮಾಲೀಕರು ವೈಫೈ ರೌಟರ್‌ ಮಾತ್ರಕ್ಕೆ ಖರ್ಚು ಮಾಡಬೇಕಾಗುತ್ತದೆ. ಮಳಿಗೆಯ ಗಾತ್ರ ಆಧರಿಸಿ ಎರಡು ಮೂರು ರೌಟರ್‌ ಬೇಕಾಗುತ್ತವೆ. ಸರಕು ಕೈಗೆ ತೆಗೆದುಕೊಳ್ಳುತ್ತಿದ್ದಂತೆ ಬಾರ್‌ಕೋಡ್‌ ಮೇಲೆ ಕ್ಯಾಮೆರಾದಿಂದ ಸ್ಕ್ಯಾನ್‌ ಮಾಡಬೇಕಾಗುತ್ತದೆ. ಗ್ರಾಹಕರು ತಮ್ಮ ಬಜೆಟ್‌ ಆಧರಿಸಿ ಸರಕು ಖರೀದಿಸಲೂ ಇದು  ನೆರವಾಗಲಿದೆ.

ದೊಡ್ಡ ದೊಡ್ಡ ಮಳಿಗೆಗಳಲ್ಲಿ ಖರೀದಿದಾರರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿ ಇದ್ದಾಗ, ಮಳಿಗೆಯ ಸಿಬ್ಬಂದಿಯೇ ಗ್ರಾಹಕರ ಮೊಬೈಲ್‌ ಮೂಲಕ  ಸರಕುಗಳ ಬಾರ್‌ಕೋಡ್‌ ಸ್ಕ್ಯಾನ್‌ ಮಾಡಲು ನೆರವಾಗಬಹುದು.  ಇದರಿಂದಲೂ ಗ್ರಾಹಕರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಬಾರ್‌ಕೋಡ್‌ ಸ್ಕ್ಯಾನ್‌ ಮಾಡುವಾಗಲೇ ಉತ್ಪನ್ನದ ವಿಶೇಷತೆಯ ವಿವರ ನೀಡುವ ಪುಟ್ಟ ವಿಡಿಯೊ ಪ್ರದರ್ಶನಗೊಳ್ಳುವಂತೆ ಮಾಡುವ ಆಲೋಚನೆಯೂ ಇವರಿಗೆ ಇದೆ.

 ‘ಈ  ಸೌಲಭ್ಯವನ್ನು ಹೊಸ ರುಚಿ ತಯಾರಿಕೆ, ಸೌಂದರ್ಯ ಪ್ರಸಾಧನಗಳ ಬಳಕೆ, ಮಕ್ಕಳ ಆಟಿಕೆ ಸಾಮಾನುಗಳ ಜೋಡಣೆ, ರೆಸ್ಟೊರೆಂಟ್‌ಗಳಲ್ಲಿ ತಿಂಡಿ ತಿನಿಸುಗಳ ವೈಶಿಷ್ಟ್ಯ ನೀಡಲು ಬಳಸಬಹುದು. ಇದರಿಂದ ಗ್ರಾಹಕರಿಗೆ ತಾವು ಖರೀದಿಸುವ ಸರಕಿನ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ ಒದಗಿಸಬಹುದು’ ಎಂದು ದೀಪಕ್‌ ಹೇಳುತ್ತಾರೆ.ಈ ತಂತ್ರಜ್ಞಾನ ಬಳಸುವ   ರೆಸ್ಟೋರೆಂಟ್‌ಗಳಲ್ಲಿ  ಮಾಲೀಕರು ಬೆಲೆ ಪಟ್ಟಿ ಜತೆಗೆ ಬಾರ್‌ಕೋಡ್‌ ಕೂಡ ಕೊಡಲಾಗುತ್ತದೆ.

‘ಈ ಸೌಲಭ್ಯ ಅಳವಡಿಕೆಗೆ ಸಂಬಂಧಿಸಿದಂತೆ, ಸಣ್ಣ ಸಣ್ಣ ಮಳಿಗೆಗಳು ಕಿರಾಣಿ ಅಂಗಡಿ ಮಾಲೀಕರೂ ಸೇರಿದಂತೆ,  ದೇಶದಾದ್ಯಂತ ಬೃಹತ್‌ ಸರಣಿ ಮಳಿಗೆಗಳನ್ನು ನಿರ್ವಹಿಸುವ  ಫ್ಯೂಚರ್‌ ಗ್ರೂಪ್‌, ಡಾಬರ್‌, ಟೂಂಜ್‌, ಆದಿತ್ ಬಿರ್ಲಾ ಮತ್ತಿತರ ಕಾರ್ಪೊರೇಟ್‌  ಸಂಸ್ಥೆಗಳ ಜತೆಗೂ  ಮಾತುಕತೆ ನಡೆಯುತ್ತಿದೆ’ ಎಂದು ಅಮರ್‌ ಮತ್ತು ದೀಪಕ್‌ ಹೇಳುತ್ತಾರೆ. 

ಅಂಗಡಿ ಮಾಲೀಕರೇ ತಮ್ಮಲ್ಲಿ ಇಂತಹ ಸೌಲಭ್ಯ ಇರುವುದನ್ನು ಗ್ರಾಹಕರಿಗೆ ಪರಿಚಯಿಸಬೇಕಾಗುತ್ತದೆ. ಸದ್ಯಕ್ಕೆ ಬೆಂಗಳೂರಿನ ಕೆಲ ಆಯ್ದ ಮಳಿಗೆಗಳಲ್ಲಿ ಈ ತಂತ್ರಜ್ಞಾನವನ್ನು  ಅಳವಡಿಸಲಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಇರುವ ಮೀನಾಕ್ಷಿ ಮಾಲ್‌ ಮತ್ತು ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಬಳಸಲಾಗುತ್ತಿದೆ.

ಈ ತಂತ್ರಜ್ಞಾನವನ್ನು  ಕಟ್ಟಡ ನಿರ್ಮಾಣದಲ್ಲಿ ಬಳಸುವ ಬಣ್ಣ, ನೆಲಹಾಸು ಮತ್ತಿತರ ಸರಕುಗಳ  ಖರೀದಿಗೂ ಅನ್ವಯಿಸುವುದರಿಂದ ಮನೆ ಕಟ್ಟುವವರಿಗೆ ಹಲವು ರೀತಿಯಲ್ಲಿ ನೆರವಾಗಲಿದೆ ಎಂದು ಅಮರ್‌ ಹೇಳುತ್ತಾರೆ. ಮಳಿಗೆಗಳಿಂದ ಸರಕು ಕದಿಯುವುದು ಜಾಗತಿಕ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದೂ ಅವರು ಹೇಳುತ್ತಾರೆ.
 ಮಾಹಿತಿಗೆ –   98455 38607 / contact@xlogix.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT