ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಿಲ್ಲದ ನಾಯಿಗಳಿಗೆ ಗಾಲಿಗಾಡಿ ಆಸರೆ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಶಾಶ್ವತವಾಗಿ ಕಾಲುಗಳನ್ನು ಕಳೆದುಕೊಂಡ ಹಾಗೂ ಸೊಂಟದ ಸ್ವಾಧೀನವೇ ಇಲ್ಲದ ನಾಯಿಗಳನ್ನು ಸಾಮಾನ್ಯವಾಗಿ ಚಿರನಿದ್ರೆಗೆ ಜಾರಿಸಲಾಗುತ್ತದೆ. ಇಂಥ ನಾಯಿಗಳನ್ನು  ಜೀವನ ಪರ್ಯಂತ ಖುಷಿಯಾಗಿ ಸಲಹುವ ಅವಕಾಶವೂ ಇದೀಗ ಲಭ್ಯ.

ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ, ನರಕ್ಕೆ ಪೆಟ್ಟಾಗಿ ಚಲನಾಹೀನವಾಗಿರುವ ನಾಯಿ–ಬೆಕ್ಕುಗಳಿಗೆ ಗಾಲಿಗಾಡಿಯನ್ನು (ವೀಲ್‌ ಕಾರ್ಟ್‌) ಬಳಸಬಹುದು. ಓಡಾಡಲು ಆಗದೆ ಮೂಲೆ ಸೇರಿರುವ ಪ್ರಾಣಿಗಳು ಆತ್ಮವಿಶ್ವಾಸ ಕಳೆದುಕೊಂಡು ಮಂಕಾಗುತ್ತವೆ. ಮಲ–ಮೂತ್ರ ವಿಸರ್ಜನೆ ಮಾಡಲೂ ಆಗದ ಅಸಹಾಯಕ ಪರಿಸ್ಥಿತಿಯಲ್ಲಿ ಸರಿಯಾಗಿ ಊಟ ನಿದ್ದೆ ಮಾಡದೆ ಒದ್ದಾಡುತ್ತವೆ. ಇಂಥ ಪ್ರಾಣಿಗಳು ಕಳೆದುಕೊಂಡಿರುವ ಆತ್ಮವಿಶ್ವಾಸ ಮರಳಿಸುವ ಕೆಲಸವನ್ನು ಈ ಗಾಲಿಗಾಡಿಗಳು ಮಾಡುತ್ತವೆ.

ವಿವಿಧ ಗಾತ್ರದ ನಾಯಿ, ಬೆಕ್ಕುಗಳು ಗಾಲಿ ಇರುವ ಪುಟ್ಟ ಗಾಡಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಓಡಾಡುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಅವುಗಳ ಗಾತ್ರ, ಎತ್ತರ, ತೂಕಕ್ಕೆ ತಕ್ಕಂತೆ ಈ ಗಾಡಿಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ನಾಯಿಗಳು ಯಾವುದೇ ಕಾಲಿನ ಸ್ವಾಧೀನ ಕಳೆದುಕೊಂಡರೂ ಮನುಷ್ಯನ ನೆರವಿಲ್ಲದೆ ಮಲ–ಮೂತ್ರ ವಿಸರ್ಜನೆ ಮಾಡಲಾರವು. ಮಲ–ಮೂತ್ರ ವಿಸರ್ಜನೆ ಸರಿಯಾಗಿ ಆಗದಿದ್ದರೆ ಆರೋಗ್ಯದಲ್ಲಿ ಏರುಪೇರಾಗಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.

‘ಪಾರ್ಶ್ವವಾಯು ಸಮಸ್ಯೆ ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಶಾಶ್ವತವಾಗಿ ಸೊಂಟ ಹಾಗೂ ಕಾಲುಗಳ ಸ್ವಾಧೀನ ಕಳೆದುಕೊಳ್ಳುವ ನಾಯಿ, ಬೆಕ್ಕುಗಳನ್ನು ಚಿರನಿದ್ರೆಗೆ ಜಾರಿಸಲಾಗುತ್ತದೆ. ಬೆರಳೆಣಿಕೆ ಜನರು ಮಾತ್ರ ಇಂಥ ಜೀವಿಗಳನ್ನು ಕೊನೆಯುಸಿರು ಇರುವ ತನಕ ನೋಡಿಕೊಳ್ಳುತ್ತಾರೆ. ಗಾಲಿಗಾಡಿಗಳಿಂದ ಪ್ರಾಣಿಗಳ ದಯಾಮರಣವನ್ನು ನಿಲ್ಲಿಸಬಹುದು’ ಎನ್ನುತ್ತಾರೆ ಪ್ರಾಣಿಪ್ರಿಯ ಟೋನಿ.

ಈ ಹಿಂದೆ ಮೈಸೂರಿನಲ್ಲಿ ಬೀದಿ ನಾಯಿಯೊಂದು ಅಪಘಾತದಿಂದ ಹಿಂದಿನ ಕಾಲುಗಳನ್ನು ಕಳೆದುಕೊಂಡಿತ್ತು. ಆಗ ಅಲ್ಲಿನ ವೈದ್ಯರೊಬ್ಬರು ಅದಕ್ಕೆ ಈ ಗಾಲಿ ಗಾಡಿ ಮಾಡಿಸಿಕೊಟ್ಟಿದ್ದರು. ಇದೀಗ ಅನೇಕರು ನಾಯಿಗಳಿಗೆ ಗಾಲಿಗಾಡಿಗಳನ್ನು ಬಳಕೆ ಮಾಡುತ್ತಿದ್ದಾರೆ. ಗಾಲಿಗಾಡಿಯನ್ನು ವಿನ್ಯಾಸಗೊಳಿಸಲು ನಾಯಿಯ ಎತ್ತರ, ದೇಹದ ತೂಕ, ಯಾವ ಕಾಲುಗಳಿಗೆ ಪರ್ಯಾಯವಾಗಿ ಇದನ್ನು ಬಳಕೆ ಮಾಡಬೇಕೆಂಬ ಅಂಶಗಳನ್ನು ಮೊದಲು ಅರಿಯಬೇಕು. ನಾಯಿಯ ದೇಹದ ತೂಕವನ್ನು ಆ ಗಾಲಿ ಗಾಡಿ ಸಮತೋಲನ ಮಾಡುವಂತಿರಬೇಕು.

ಕಾರ್ಟ್‌ಗಳ ಆಯ್ಕೆ
ವೀಲ್‌ ಕಾರ್ಟ್‌ ಅನ್ನು ವಿದೇಶಗಳಲ್ಲಿ ತುಂಬಾ ನಾಜೂಕಾಗಿ ಸಿದ್ಧಪಡಿಸಲಾಗುತ್ತದೆ. ಅಲ್ಲಿ ಮುಂದಿನ ಕಾಲುಗಳಿಲ್ಲದ, ಹಿಂದಿನ ಕಾಲುಗಳಿಲ್ಲ, ಪಾರ್ಶ್ವವಾಯುವಿನಿಂದ ಸೊಂಟದ ಸ್ವಾಧೀನವನ್ನೇ ಕಳೆದುಕೊಂಡಿರುವ ಹಾಗೂ ಬೆನ್ನುಮೂಳೆ ಮುರಿತವಾಗಿರುವ ನಾಯಿ, ಬೆಕ್ಕುಗಳಿಗಾಗಿ ಸಂಶೋಧನೆಗಳು ನಡೆಯುತ್ತಿರುತ್ತವೆ.

ಆದರೆ ಭಾರತದಲ್ಲಿ ಹಿಂದಿನ ಕಾಲುಗಳಿಗೆ ತಕ್ಕಮಟ್ಟಿಗೆ ಹೊಂದಿಕೊಳ್ಳುವ ಕಾರ್ಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಗಾಲಿಗಾಡಿಯನ್ನು ತಂದ ತಕ್ಷಣ ಏಕಾಏಕಿ ಅದರ ಮೇಲೆ ಪ್ರಾಣಿಗಳನ್ನು ಕೂರಿಸಬಾರದು. ನಿತ್ಯ ಸ್ವಲ್ಪ ಸಮಯ ಅಭ್ಯಾಸ ಮಾಡಿಸಬೇಕು. ಆನ್‌ಲೈನ್‌ ಸ್ಟೋರ್‌ಗಳಲ್ಲಿ ಹಲವು ವಿನ್ಯಾಸದ ವೀಲ್‌ಕಾರ್ಟ್‌ಗಳು ಲಭ್ಯ. ಕೆಲ ಆನ್‌ಲೈನ್‌ ಸ್ಟೋರ್‌ಗಳು ಅವುಗಳನ್ನು ಬಾಡಿಗೆಗೂ ನೀಡುತ್ತವೆ.

ಕಾರ್ಟ್‌ಗಳ ಬಳಕೆ
ನಾಯಿಗಳನ್ನು ನಿಧಾನವಾಗಿ ಎಚ್ಚರಿಕೆಯಿಂದ ಕೂರಿಸುವುದು ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಕೆಲಸ. ಸ್ವಲ್ಪ ಎಚ್ಚರ ತಪ್ಪಿದರೂ ಮೂಳೆ ಮುರಿಯಬಹುದು. ಗಾಲಿಗಾಡಿ ಕಟ್ಟಿಕೊಂಡಿರುವ ನಾಯಿಯನ್ನು ಓಡಾಡಿಸುವುದು ಸಾಹಸವೇ ಸರಿ. ಅದಕ್ಕಾಗಿ ಸಮತಟ್ಟಾದ ಹಾಗೂ ಜನಸಂದಣಿ ಕಡಿಮೆ ಇರುವ ಪ್ರದೇಶವನ್ನು ಹುಡುಕಬೇಕು. ಮನೆಯಲ್ಲಿ ಅದು ಓಡಾಡುವ ಸ್ಥಳದಲ್ಲಿ ಅಡೆತಡೆಗಳಿಲ್ಲದಂತೆ ನೋಡಿಕೊಳ್ಳುವುದು ಬಹು ಮುಖ್ಯ.
ನಾಯಿ ಒಂದು ಕಾಲು ಕಳೆದುಕೊಂಡರೂ ಹೇಗಾದರೂ ಜೀವನ ನಡೆಸುತ್ತದೆ. ಎರಡೂ ಕಾಲು ಕಳೆದುಕೊಂಡರೆ, ಬದುಕು ನರಕವಾಗಿಬಿಡುತ್ತದೆ. ಸೊಂಟ ಸ್ವಾಧೀನವೇ ಇಲ್ಲ ಎಂದರೆ ಮುಗಿದೇ ಹೋಯಿತು. ಇಂಥ ಜೀವಿಗಳ ಬದುಕಿನಲ್ಲಿ ಆಶಾಕಿರಣ ಮೂಡಿಸುವ ಅವಕಾಶವನ್ನು ಕಳೆಯುವುದು ಯಾವ ನ್ಯಾಯ.

ಸಾಮಾಜಿಕ ಜಾಲತಾಣದಿಂದ ನೆರವು
‘ಗುಂಡ’ (ನಾಯಿ) ನಮ್ಮ ಮನೆಯ ಸದಸ್ಯನಿದ್ದಂತೆ. ಹಿಂದಿನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ. ವೀಲ್‌ಕಾರ್ಟ್‌ ಬಗ್ಗೆ ಚಿಕಿತ್ಸೆ ಆರಂಭದ ದಿನಗಳಲ್ಲೇ ತಿಳಿದಿದ್ದರೆ, ಅನಾಹುತವನ್ನು ತಪ್ಪಿಸಬಹುದಿತ್ತು. ಕಾಲುಗಳಿಲ್ಲದ ಅವನನ್ನು ಪ್ರಾಣಿ ದಯಾ ಸಂಘಕ್ಕೆ ಸೇರಿಸುವ ನಿರ್ಧಾರಕ್ಕೆ ಬಂದಿದ್ದೆವು. ಆದರೆ ಮನಸ್ಸು ಒಪ್ಪಲಿಲ್ಲ. ಜೊತೆಗೆ ಅಮೆರಿಕದಲ್ಲಿರುವ ನನ್ನ ಮಗಳು ಸ್ನೇಹಿತರ ಸಹಾಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಗುಂಡನ ಪರಿಸ್ಥಿತಿ ವಿವರಿಸಿ ಏನು ಮಾಡಬಹುದು ಎಂದು ಕೋರಿದ್ದಳು.

ನಗರದಲ್ಲೇ ವಾಸವಿರುವ ಪ್ರಾಣಿಪ್ರಿಯೆ ದೇಬೊಲಿನಾ ಅವರು ತಮ್ಮ ಸ್ನೇಹಿತ ಟೋನಿ ಅವರ ಬಳಿಯಿದ್ದ ಗಾಲಿಗಾಡಿಯನ್ನು ನನಗೆ ಕೊಡಿಸಿದರು. ನನಗೆ ಈಗ 62 ವರ್ಷ. 10 ವರ್ಷದ ಗುಂಡನನ್ನು ಗಾಲಿಗಾಡಿಯಲ್ಲಿ ಕೂರಿಸಲು ಸ್ವಲ್ಪ ಕಷ್ಟವಾಗುತ್ತಿತ್ತು. ಮೂರು ಜನರ ಸಹಾಯ ಪಡೆಯುತ್ತಿದ್ದೆ. ಈಗ ಅವನನ್ನು ಎತ್ತಿ ಕೂರಿಸಲು ನಾನೇ ಒಂದು ಚೈನ್‌ ಪುಲ್ಲಿ ಮಾಡಿಕೊಂಡಿದ್ದೇನೆ. ಪ್ರತಿದಿನ ಮೂರ್ನಾಲ್ಕು ಬಾರಿ ಗಾಡಿಯಲ್ಲಿ ಕೂರಿಸಿ ವಾಕಿಂಗ್‌ ಮಾಡಿಸುತ್ತೇನೆ.
ಕುಮಾರಸ್ವಾಮಿ, ಹೆಬ್ಬಾಳ

ಪ್ರಾಣಿ ಜಗತ್ತಿಗೆ ಆಶಾಕಿರಣ
ಚಲನಾಹೀನ ಸ್ಥಿತಿಯಲ್ಲಿರುವ ಪ್ರಾಣಿಗಳು ನೋವು ಹಾಗೂ ಅಸಹಾಯಕ ಸ್ಥಿತಿಯಿಂದಾಗಿ ಒತ್ತಡಕ್ಕೆ ಒಳಗಾಗುತ್ತವೆ. ಇದನ್ನು ತಪ್ಪಿಸಲು ವೀಲ್‌ಕಾರ್ಟ್‌ ಸಹಕಾರಿ. ಕೆಲ ಗಾಲಿಗಾಡಿಗಳಲ್ಲಿ ವೇಟ್‌ ಬ್ಯಾಲೆನ್ಸಿಂಗ್‌ ಸರಿಯಾಗಿರುವುದಿಲ್ಲ. ಇಂಥ ಗಾಡಿಗಳನ್ನು ಬಳಸುವಾಗ ಪ್ರಾಣಿಗಳು ಕೆಳಗೆ ಬಿದ್ದರೆ ಅವುಗಳಿಗೆ ಮತ್ತಷ್ಟು ಸಮಸ್ಯೆಯಾಗುತ್ತದೆ. ವಿದೇಶಗಳಿಂದ ಗಾಲಿಗಾಡಿಗಳನ್ನು ಆಮದು ಮಾಡಿಕೊಳ್ಳಲು ₹40 ಸಾವಿರದವರೆಗೆ ಖರ್ಚಾಗುತ್ತದೆ. ಸ್ಥಳೀಯವಾಗಿ ಇಂಥ ಗಾಡಿಗಳನ್ನು ₹12 ಸಾವಿರ ಮೊತ್ತಕ್ಕೆ ಸಿದ್ಧಪಡಿಸಿಕೊಳ್ಳಬಹುದು. ಇದು ಹೊಸ ಅನ್ವೇಷಣೆಯೇನಲ್ಲ. ನಾನು ಕಾಲೇಜಿನಲ್ಲಿರುವಾಗಲೇ ಡ್ಯಾಶ್‌ಹೌಂಡ್‌ ಒಂದಕ್ಕೆ ವೀಲ್‌ಕಾರ್ಟ್‌ ಅನ್ನು  ವಿದೇಶದಿಂದ ತರಿಸಲಾಗಿತ್ತು.
-ಶಿವಪ್ರಕಾಶ್‌, ಪಶುವೈದ್ಯ

ಮಾಹಿತಿ ಹಾಗೂ ವೀಲ್‌ಕಾರ್ಟ್‌ ಖರೀದಿಸಲು
www.handicappedpets.com/adjustable-dog-wheelchairs
info@k9carts.com
http://eddieswheels.com
http://www.doggon.com
doggon@doggon.com
useddogwheelchairs.com

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT