ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಿಮನ್‌ ಕಾವೇರಿ ಕಟಕಟೆಯಲ್ಲಿ ನಿಂತ ನ್ಯಾಯನಿಪುಣ

ವ್ಯಕ್ತಿ
Last Updated 10 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಎರಡನೇ ವಿಶ್ವಯುದ್ಧದಲ್ಲಿ ಜಪಾನೀಯರು ಬರ್ಮಾ (ಈಗಿನ ಮ್ಯಾನ್ಮಾರ್‌) ದೇಶದ ರಾಜಧಾನಿಯಾಗಿದ್ದ ರಂಗೂನಿನ (ಈಗಿನ ಯಾಂಗೂನ್) ಮೇಲೆ ಬಾಂಬ್‌ ದಾಳಿ ಮಾಡದೆ ಹೋಗಿದ್ದರೆ, ಫಾಲಿ ಎಸ್‌. ನಾರಿಮನ್ ಎಂಬ ನ್ಯಾಯವೇತ್ತರೊಬ್ಬರು ಕಾವೇರಿ ಜಲವಿವಾದದಲ್ಲಿ ಕರ್ನಾಟಕದ ಪರ ವಕಾಲತ್ತು ವಹಿಸುತ್ತಲೇ ಇರಲಿಲ್ಲ.

ಹೌದು, ರಂಗೂನಿನಲ್ಲಿ ನೆಲೆಸಿದ್ದ ನಾರಿಮನ್ ಪಾರ್ಸಿ ಕುಟುಂಬ ಈ ಬಾಂಬ್‌ ದಾಳಿಯ ಕಾರಣದಿಂದಾಗಿ ಭಾರತಕ್ಕೆ ಬಂದು ನೆಲೆಸುತ್ತದೆ. 1929ರಲ್ಲಿ ರಂಗೂನ್‌ನಲ್ಲಿ ಜನಿಸಿದ ಫಾಲಿ ಸ್ಯಾಮ್ ನಾರಿಮನ್ ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ  ಹೀಗೆ ಭಾರತಕ್ಕೆ ಬರುತ್ತಾರೆ. ತಂದೆ ಸ್ಯಾಮ್ ಬರಿಯಾಮ್ಜೀ ನಾರಿಮನ್, ತಾಯಿ ಬಾನೂ ನಾರಿಮನ್. ಶಿಮ್ಲಾದಲ್ಲಿ ಶಾಲೆ ಮತ್ತು ಮುಂಬೈನಲ್ಲಿ  ಪದವಿ ಶಿಕ್ಷಣ. ಮಗನನ್ನು ಐ.ಸಿ.ಎಸ್. ಅಧಿಕಾರಿ ಮಾಡಬೇಕೆಂಬುದು ಅವರ ತಂದೆಯ ಮಹದಾಸೆ. ಲಂಡನ್ನಿಗೆ ಕಳುಹಿಸುವಷ್ಟು ಹಣ ಅವರ ಬಳಿ ಇರುವುದಿಲ್ಲ, ಹೀಗಾಗಿ ಆ ಆಸೆ ಈಡೇರುವುದಿಲ್ಲ. ಗಣಿತ ಮತ್ತು ವಿಜ್ಞಾನ ತಲೆಗೆ ಹತ್ತುವುದಿಲ್ಲ. ಬಿ.ಎ. ಪದವಿ ಪೂರೈಸಿ ಕಾನೂನು ವ್ಯಾಸಂಗ ಮಾಡುತ್ತಾರೆ.

ಜೀವಂತ ದಂತಕತೆ, ಮಹಾಮೇಧಾವಿ ಎಂಬೆಲ್ಲ ವಿಶೇಷಣಗಳು ನಾರಿಮನ್ ಕುರಿತು ಬಳಕೆಯಾಗುತ್ತವೆ. ಕಾವೇರಿ ಮತ್ತು ಕೃಷ್ಣಾ ಜಲವಿವಾದಗಳಲ್ಲಿ ಕಳೆದ 23 ವರ್ಷಗಳಿಂದ ಕರ್ನಾಟಕದ ಪರ ವಾದ ಮಂಡಿಸುತ್ತಾ ಬಂದಿರುವ ನಾರಿಮನ್ ಮತ್ತು ಅವರ ತಂಡ ಈ ಬಾರಿ ಎಂದೂ ಇಲ್ಲದ ಕಹಿ ಟೀಕೆಗೆ ಗುರಿಯಾಗಿದೆ. ಅವರನ್ನು ಬದಲಿಸಬೇಕೆಂಬ ಕೂಗೆದ್ದಿದೆ. ಬದಲಿಸುವುದು ವಿವೇಕವಲ್ಲ ಎಂಬ ದನಿಗಳೂ ಕೇಳಿ ಬರುತ್ತಿವೆ.

ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರುಗಳಿಗೆ ಹೆಚ್ಚಿಸುವ ಸಂಬಂಧದ ವ್ಯಾಜ್ಯವನ್ನು ಕರ್ನಾಟಕಕ್ಕೆ ಗೆದ್ದು ಕೊಟ್ಟದ್ದು ಇದೇ ನಾರಿಮನ್ ತಂಡ. ತಮಿಳುನಾಡಿಗೆ ಕರ್ನಾಟಕ ಪ್ರತಿವರ್ಷ ಬಿಡುಗಡೆ ಮಾಡಬೇಕಿದ್ದ ಕಾವೇರಿ ನದಿ ನೀರಿನ ಭಾರವನ್ನು 380 ಟಿ.ಎಂ.ಸಿ. ಅಡಿಗಳಿಂದ 192 ಟಿ.ಎಂ.ಸಿ. ಅಡಿಗಳಿಗೆ ಇಳಿಸಿಕೊಟ್ಟ ಸಾಧನೆಯೂ ಇದೇ ನಾರಿಮನ್ ಅವರದು ಎಂಬ ಅಂಶವನ್ನು ಹಾಲಿ ಟೀಕೆ ಟಿಪ್ಪಣಿಗಳ ನಡುವೆಯೂ ಮರೆಯುವಂತಿಲ್ಲ.

ಆರು ಸಾವಿರ ಕ್ಯುಸೆಕ್‌ ನೀರು ಈಗಾಗಲೇ ತಮಿಳುನಾಡಿಗೆ ಹರಿದು ಹೋಗುತ್ತಿರುವ ಸಂದರ್ಭದಲ್ಲಿ, ಹತ್ತು ಸಾವಿರ ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡುತ್ತೇವೆ ಎಂದು ಅವರು ಮೊನ್ನೆ ನ್ಯಾಯಾಲಯದಲ್ಲಿ ಹೇಳಿದ್ದುಂಟು. 2012ರಲ್ಲಿ ಇಂತಹುದೇ ಹೇಳಿಕೆಯನ್ನು ನಾರಿಮನ್ ನೀಡಿದ್ದರು. ನ್ಯಾಯಾಲಯ ಒಪ್ಪಿತ್ತು.

ಸಾರ್ವಜನಿಕವಾಗಿಯೂ ಅವರ ಹೇಳಿಕೆಯನ್ನು ಪ್ರಶಂಸಿಸಲಾಗಿತ್ತು. ಆದರೆ ಈ ಬಾರಿ ನ್ಯಾಯಾಲಯ ಈ ಪ್ರಮಾಣವನ್ನು 15 ಸಾವಿರ ಕ್ಯುಸೆಕ್‌ಗೆ ಹೆಚ್ಚಿಸಿದ್ದು ಉರಿವ ಗಾಯಕ್ಕೆ ಉಪ್ಪೆರಚಿದಂತೆ ಆಗಿದೆ. ವಯಸ್ಸು ಸಂದು ಹೋಗಿರುವ ನಾರಿಮನ್ ನಿವೃತ್ತರಾಗುವುದಿಲ್ಲ ಯಾಕೆ ಎಂಬ ವ್ಯಂಗ್ಯಭರಿತ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. 87ರ ಪ್ರಾಯದ ಈ ‘ಯುವಕ’ ನಿವೃತ್ತಿ ಇರಾದೆಯಿಂದ ಬಲು ದೂರ. ಈಗಲೂ ತಮ್ಮ ವೃತ್ತಿ ಬಹಳ ಸಂತೋಷ ಕೊಡುತ್ತದಾದ ಕಾರಣ ನಿವೃತ್ತಿ ಕುರಿತು ಆಲೋಚಿಸಲು ಅವರಿಗೆ ಸಮಯ ಇಲ್ಲವಂತೆ.

ನಾರಿಮನ್ ವಕೀಲಿ ವೃತ್ತಿ ಹಿಡಿದು ಆರು ದಶಕಗಳೇ ಉರುಳಿವೆ. ದೇಶದ ನ್ಯಾಯಕ್ಷೇತ್ರದ ಸಾಕ್ಷಿಪ್ರಜ್ಞೆ ಅವರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ್ದನ್ನು ಪ್ರತಿಭಟಿಸಿ ಅಡಿಷನಲ್ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ವೃತ್ತಿ ಮತ್ತು ವ್ಯಕ್ತಿ ಚಾರಿತ್ರ್ಯ ಗಟ್ಟಿಯಿರುವ ನೇರನಡೆಯ ನ್ಯಾಯಾಧೀಶರ ಕುರಿತು ಅವರದು ಭಿಡೆಯಿಲ್ಲದ ಮೆಚ್ಚುಗೆ. ‘ಸರ್ಕಾರ ಹೇಳಿದರೆ ಮಾತ್ರ ಆಸ್ತಿಪಾಸ್ತಿ ವಿವರ ಬಹಿರಂಗಪಡಿಸುತ್ತೇವೆ ಎಂಬ ಉನ್ನತ ಹಂತದ ನ್ಯಾಯಾಂಗದ ನಿಲುವು ಸರಿಯಲ್ಲ. ಯಾವೊತ್ತಿದ್ದರೂ ಸರ್ಕಾರ ನ್ಯಾಯಾಧೀಶರನ್ನು ನಿಯಂತ್ರಿಸಲು ಬಯಸುತ್ತದೆ ಎಂಬುದನ್ನು ಮರೆಯಕೂಡದು’ ಎಂದು ನಾರಿಮನ್ ಹೇಳಿದ್ದುಂಟು.

ಅಂತಾರಾಷ್ಟ್ರೀಯ ಖ್ಯಾತಿಯ ನ್ಯಾಯಕೋವಿದ, ಸಂವಿಧಾನ ಮತ್ತು ಜಲವಿವಾದ ಕಾಯ್ದೆಯಲ್ಲಿ ಅವರಂತೆ ವಾದಿಸುವವರು ಭಾರತದಲ್ಲಿ ಮತ್ತೊಬ್ಬರಿಲ್ಲ ಎಂದೇ ಹೇಳಲಾಗುತ್ತದೆ. ಅಳ್ಳೆದೆಯವರು ಉತ್ತಮ ನ್ಯಾಯವಾದಿಯಾಗಲು ಸಾಧ್ಯವಿಲ್ಲ, ಸಿಂಹಹೃದಯದ ಔದಾರ್ಯ ಬೇಕೇ ಬೇಕು ಎನ್ನುತ್ತಾರೆ ನಾರಿಮನ್‌. ಬದುಕಿನಲ್ಲಿ ತಾವು ಏನಾದರೂ ಸಾಧಿಸಿದ್ದರೆ ಅದರ ಸಿಂಹಪಾಲು ಶ್ರೇಯಸ್ಸು ತಮ್ಮ ಪತ್ನಿ ಬಾಪ್ಸಿ ನಾರಿಮನ್‌ಗೆ ಸಲ್ಲಬೇಕು ಎಂಬುದು ಅವರ ಸಾರ್ವಜನಿಕ ನಿವೇದನೆ. ಅವರ ಪುತ್ರ ರೋಹಿಂಟನ್ ನಾರಿಮನ್ ಅವರು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ.

ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಹೊಂದಿದರೂ ರಾಜಕಾರಣದಲ್ಲಿ ಸಕ್ರಿಯರಾಗುವ ಆಸಕ್ತಿ ನಾರಿಮನ್ ಅವರಿಗೆ ಎಂದಿಗೂ ಮೂಡಲಿಲ್ಲ. ‘ಮೇಧಾವಿ ನ್ಯಾಯವಾದಿಯಾಗಿದ್ದರೂ ನ್ಯಾಯಾಧೀಶರಾಗಲಿಲ್ಲ ಯಾಕೆ’ ಎಂಬ ಪ್ರಶ್ನೆಗೆ ಅವರ ಉತ್ತರ ಆಸಕ್ತಿಕರ-‘ನನ್ನ 38ನೆಯ ವಯಸ್ಸಿಗೇ ನ್ಯಾಯಮೂರ್ತಿ ಹುದ್ದೆ ಅರಸಿ ಬಂದಿದ್ದು ಹೌದು. ಆದರೆ ಆ ಕಾಲದಲ್ಲಿ ನ್ಯಾಯಾಧೀಶರಿಗೆ ಸಂಬಳ ಸಾರಿಗೆ ಬಹಳವೇ ಕಮ್ಮಿ ಇತ್ತು. ನಾನಾದರೋ ನನ್ನ ತಾಯಿ, ಅಜ್ಜಿಯನ್ನು ಒಳಗೊಂಡ ದೊಡ್ಡ ಕುಟುಂಬವನ್ನು ಸಲಹಬೇಕಿತ್ತು. ನ್ಯಾಯಾಧೀಶರ ಸಂಬಳ ಸಾಲುತ್ತಿರಲಿಲ್ಲ’.

ಭೋಪಾಲದ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಪರ ವಕೀಲಿ ಹಿಡಿದದ್ದು ಅವರ ವೃತ್ತಿಜೀವನದ ಒಂದು ಕಪ್ಪುಚುಕ್ಕೆ. ಅಂದಿನ ಕಾಲಕ್ಕೆ ಈ ಕೇಸನ್ನು ಸವಾಲೆಂದು ಸ್ವೀಕರಿಸಿದ್ದೆ, ಅಷ್ಟೊಂದು ಜೀವಗಳ ಬಲಿ ತೆಗೆದುಕೊಂಡು ನೂರಾರು ಕುಟುಂಬಗಳನ್ನು ಬೀದಿಪಾಲು ಮಾಡಿದ ಅಕೃತ್ಯ ಅಂದು ತನಗೆ ಕಾಣದೇ ಹೋಯಿತು ಎಂಬ ಪಶ್ಚಾತ್ತಾಪ ಅವರನ್ನು ಇಂದಿಗೂ ಬಾಧಿಸಿದೆ.

ನರ್ಮದಾ ಮುಳುಗಡೆ ಸಂತ್ರಸ್ತರ ವಿರುದ್ಧ ಗುಜರಾತ್ ಸರ್ಕಾರದ ಪರ ಹಿಡಿದ ವಕಾಲತ್ತನ್ನು ಅವರು ಒಂದು ಹಂತದ ತನಕ ಸಮರ್ಥಿಸಿಕೊಂಡಿದ್ದಾರೆ. ಭಾರೀ ಜಲಾಶಯಗಳು ಮನುಕುಲದ ಪಾಲಿಗೆ ಅನಿಷ್ಟಗಳು ಎಂಬ ಟೀಕೆ ಅವರಿಗೆ ಒಪ್ಪಿಗೆ ಇಲ್ಲ. ಆದರೆ ಅವುಗಳಿಂದ ಸಂತ್ರಸ್ತರಾಗುವವರಿಗೆ ಮರುವಸತಿ ಕಲ್ಪಿಸಬೇಕು ಎಂಬುದು ಅವರ ವಾದ.

ಬೈಬಲ್ ಪ್ರತಿಗಳು, ಚರ್ಚುಗಳನ್ನು ಸುಡುವ ಪ್ರಕರಣಗಳ ಕುರಿತು ಕ್ರಮ ಜರುಗಿಸಬೇಕು ಎಂದು ಗುಜರಾತಿನ ಅಂದಿನ ಮುಖ್ಯಮಂತ್ರಿ ಕೇಶೂಭಾಯಿ ಪಟೇಲ್ ಅವರಿಗೆ ನಾರಿಮನ್ ತಾಕೀತು ಮಾಡುತ್ತಾರೆ. ಆದರೆ ಫಲಶ್ರುತಿ ಶೂನ್ಯ ಎಂಬುದನ್ನು ಮನಗಂಡ ನಂತರ ಗುಜರಾತ್ ಸರ್ಕಾರದ ವಕಾಲತ್ತನ್ನು ಹಿಂದಿರುಗಿಸುತ್ತಾರೆ.

ವಾದಮಂಡನೆ ವೇಳೆ ನಾರಿಮನ್ ವ್ಯಂಗ್ಯ, ವಿಡಂಬನೆ, ವಿನೋದ ಪ್ರವೃತ್ತಿ ನ್ಯಾಯಮೂರ್ತಿಗಳ ತಲೆದೂಗಿಸುವ ಪ್ರಕರಣಗಳು ಹಲವಾರು. ಕಾವೇರಿ ನ್ಯಾಯಮಂಡಳಿಯ ಕಲಾಪವೊಂದರಲ್ಲಿ ನಾರಿಮನ್ ಹೇಳಿದ್ದ ಕತೆಯೊಂದು ಹೀಗಿತ್ತು- ‘ವಯಸ್ಸಾದ ಕಾನೂನು ಮೇಷ್ಟ್ರೊಬ್ಬರು ದಿಲ್ಲಿಯಲ್ಲಿ 1938 ಮಾಡೆಲ್‌ನ ಮಾರಿಸ್ ಕಾರು ಓಡಿಸುತ್ತಿದ್ದರು.

ವೇಗ ತಾಸಿಗೆ 20 ಕಿ.ಮೀ. ಮೀರುತ್ತಿರಲಿಲ್ಲ. ಕಾರಿನ ಹಿಂದೆ ಅವರು ಅಂಟಿಸಿದ್ದ ಸ್ಟಿಕರ್ ಹೀಗಿತ್ತು- ಈ ಕಾರನ್ನು ಓಡಿಸುತ್ತಿರುವವರು ಒಬ್ಬ ಮೇಷ್ಟ್ರು. ದಯಮಾಡಿ ನನ್ನನ್ನು ಓವರ್‌ಟೇಕ್ ಮಾಡಿ. ನನ್ನ ಎಲ್ಲ ಶಿಷ್ಯಂದಿರು ನನ್ನನ್ನು ಓವರ್‌ಟೇಕ್ ಮಾಡಿರುವಂತೆ ನೀವೂ ನನ್ನ ಕಾರನ್ನು ಓವರ್‌ಟೇಕ್ ಮಾಡಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT