ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಲೆಮಾರಿನ ಸಾಹಿತಿಗಳಿಗೆ ತತ್ವಶಾಸ್ತ್ರದ ಗಂಧವೇ ಗೊತ್ತಿಲ್ಲ: ಭೈರಪ್ಪ

Last Updated 10 ಸೆಪ್ಟೆಂಬರ್ 2016, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗಿನ ಸಾಹಿತಿಗಳಿಗೆ ತತ್ವಶಾಸ್ತ್ರದ ಗಂಧವೇ ಗೊತ್ತಿಲ್ಲ. ಅವರ ಜೊತೆ ಮಾತನಾಡಲು ಬೇಸರವಾಗುತ್ತದೆ’ ಎಂದು ಸಾಹಿತಿ ಎಸ್‌.ಎಲ್.ಭೈರಪ್ಪ ಹೇಳಿದರು.

ನಗರದ ಶೇಷಾದ್ರಿಪುರ ಕಾಲೇಜು ಹಾಗೂ ಭಾರತೀಯ ತತ್ವಶಾಸ್ತ್ರ ಸಂಶೋಧನಾ ಮಂಡಳಿ (ಐಸಿಪಿಆರ್‌) ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಭಾರತೀಯ ಚಿಂತನೆ ರೂಪಿಸುವ ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪು.ತಿ.ನ ಅವರಿಗೆ ಸಾಹಿತ್ಯ ಮತ್ತು ತತ್ವಶಾಸ್ತ್ರಗಳೆರಡೂ ಗೊತ್ತಿತ್ತು. ಹಾಗಾಗಿ ಅವರ ಜೊತೆ ಹರಟೆ ಹೊಡೆದಾಗಲೆಲ್ಲ ಸಾಕಷ್ಟು ಒಳನೋಟಗಳು ಸಿಗುತ್ತಿದ್ದವು’ ಎಂದರು.

‘ತತ್ವಶಾಸ್ತ್ರಕ್ಕೆ ಸಾಹಿತ್ಯ ಹೇಗೆ ಮುಖ್ಯವೋ, ಸಾಹಿತ್ಯಕ್ಕೂ ತತ್ವಶಾಸ್ತ್ರ ಅಷ್ಟೇ ಮುಖ್ಯ. ಸಾಹಿತ್ಯ ಹೊರತುಪಡಿಸಿ ತತ್ವಶಾಸ್ತ್ರ ಇಲ್ಲ. ಸಾಹಿತ್ಯದ  ಪಾತ್ರಗಳ ಮೂಲಕ ಜೀವನ ಮೌಲ್ಯಗಳನ್ನು  ಮನಸ್ಸಿಗೆ ಅರ್ಥವಾಗುವಂತೆ ವ್ಯಕ್ತಪಡಿಸಲು ಸಾಧ್ಯ. ನಿಜವಾದ ತತ್ವಶಾಸ್ತ್ರ ಹುಟ್ಟಿದ್ದು ಸಾಹಿತ್ಯದ ಮೂಲಕ’ ಎಂದರು.

‘ಭಗವದ್ಗೀತೆ ದೊಡ್ಡ ತತ್ವಶಾಸ್ತ್ರ. ಗುರುಗಳು, ಬಂಧುಗಳ ಜೊತೆಗೆ ಯುದ್ಧ ಮಾಡಬೇಕೇ ಎಂದು ಅರ್ಜುನನಿಗೆ ಅನುಮಾನ ಮೂಡಿದಾಗ, ಅದು ತಪ್ಪು ಎಂದು ಶ್ರೀಕೃಷ್ಣ ವಿವರಿಸುವ ಸನ್ನಿವೇಶ ಅತ್ಯಂತ ಶಕ್ತಿಯುತವಾದುದು. ಇಂತಹ ಸಂದರ್ಭದ ಮೂಲಕವೇ ಭಗವದ್ಗೀತೆಯಂತಹ ದೊಡ್ಡ ತತ್ವದ ಸೃಷ್ಟಿ ಸಾಧ್ಯವಾಯಿತು’ ಎಂದರು.

‘ಭಗವದ್ಗೀತೆಯೂ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಇದನ್ನು ಗಾಂಧೀಜಿಯವರೂ ಹೇಳಿದ್ದಾರೆ. ಯಾರಾದರೂ ಮಾನಭಂಗ ಮಾಡಲು ಬಂದಾಗ ಏನು ಮಾಡಬೇಕು ಎಂದು ಯಾರೋ ಒಬ್ಬರು ಗಾಂಧೀಜಿಯನ್ನೊಮ್ಮೆ ಕೇಳಿದ್ದರಂತೆ. ಅದಕ್ಕವರು, ಅದು ಮಾನಭಂಗವೇ ಅಲ್ಲ ಎಂದು ಭಾವಿಸಿ ಅಂತರ್ಮುಖಿಯಾಗು ಎಂದು ಉತ್ತರಿಸಿದ್ದರಂತೆ. ಪ್ರಾಯೋಗಿಕವಾಗಿ ಇದು ಎಷ್ಟರಮಟ್ಟಿಗೆ ಸಾಧ್ಯ’ ಎಂದು  ಅವರು ಪ್ರಶ್ನಿಸಿದರು.

‘ಕೋಪಕ್ಕೆ  ಬಿದ್ದು  ಯುದ್ಧ ಮಾಡಬೇಡ.  ವಾಸ್ತವಿಕವಾಗಿ ಯೋಚಿಸಿ, ಯುದ್ದವೂ ಒಂದು ಕರ್ತವ್ಯ ಎಂದು ಭಾವಿಸಿ ಯುದ್ಧ ಮಾಡು. ಇಲ್ಲದಿದ್ದರೆ  ಹೇಡಿಯಾಗುತ್ತೀಯ ಎಂದಷ್ಟೇ ಭಗವದ್ಗೀತೆ ಹೇಳಿದೆ’ ಎಂದರು.

‘ಸಾಹಿತ್ಯದ ಸಂದರ್ಭ ಇಲ್ಲದಿದ್ದರೆ ದೊಡ್ಡ ತತ್ವ ಹುಟ್ಟದು. ರಾಮಾಯಣ ಮಹಾಭಾರತ ಹುಟ್ಟಿದ್ದು ಇದೇ ರೀತಿ. ಭಾರತೀಯ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರಗಳ ನಡುವೆ ವ್ಯತ್ಯಾಸ ಇದೆ. ಪಾಶ್ಚಾತ್ಯರ ಆಧುನಿಕ ತತ್ವಶಾಸ್ತ್ರ ಎಲ್ಲವನ್ನೂ ಪ್ರಬಂಧ ರೂಪದಲ್ಲಿ ಹೇಳುತ್ತದೆ. ಅದರಲ್ಲಿ ಸ್ವಾರಸ್ಯವೇ ಇಲ್ಲ’ ಎಂದರು.

‘ಇತ್ತೀಚೆಗೆ ಪದವಿ ತರಗತಿಗಳಲ್ಲಿ ತತ್ವಶಾಸ್ತ್ರ ಬೋಧನೆ ನಿಂತು ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಗೌರವ ಪ್ರಧಾನ ಕಾರ್ಯದರ್ಶಿ ವೂಡೆ ಪಿ.ಕೃಷ್ಣ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಸ್‌.ನಟರಾಜ್‌, ಅಧ್ಯಯನ ನಿರ್ದೇಶಕ ಎಂ.ಪ್ರಕಾಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT