ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸಮಾಜಶಾಸ್ತ್ರಕ್ಕೆ ಬೇಕಿದೆ ನಮ್ಮದೇ ಅನುಭವ

Last Updated 11 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕನ್ನಡದ ಸಂದರ್ಭದಲ್ಲಿ ಲಭ್ಯವಿರುವ ಪಠ್ಯಪುಸ್ತಕಗಳು ಮತ್ತು ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಪಠ್ಯಕ್ರಮಗಳನ್ನು ನೋಡಿದರೆ, ಅವು ಸಮಾಜಶಾಸ್ತ್ರವನ್ನು ಒಂದು ಅಧ್ಯಯನ ಕ್ರಮವಾಗಿ ಕಲಿಸದೆ, ಬಹುಪಾಲು ಆ ಶಿಸ್ತಿನ ಚರಿತ್ರೆಯನ್ನು ಕಲಿಸುತ್ತವೆ ಎನ್ನುವುದು ಸ್ಪಷ್ಟ.

ಭಾರತದ ಸಂದರ್ಭದಲ್ಲಿ ಸಮಾಜಶಾಸ್ತ್ರದ ಬೋಧನೆ ಮತ್ತು ಸಂಶೋಧನೆ ಎಂದರೆ ಪಶ್ವಿಮದ ಸಿದ್ಧಾಂತಗಳ, ಪರಿಕಲ್ಪನೆಗಳ ವ್ಯಾಖ್ಯಾನ, ಅವುಗಳ ಇತಿಹಾಸವನ್ನು ಓದುವುದಲ್ಲ; ಬದಲಾಗಿ ನಮ್ಮ ಸಮಾಜ ಹೇಗೆ ತನ್ನನ್ನು ವ್ಯವಸ್ಥೀಕರಿಸಿಕೊಂಡಿದೆ ಎನ್ನುವುದನ್ನು ಕಂಡುಕೊಳ್ಳುವುದು.

ಭಾರತದ ಬೌದ್ಧಿಕ ಸಂದರ್ಭದಲ್ಲಿ ಸಮಾಜಶಾಸ್ತ್ರೀಯ ಶಿಸ್ತುಗಳ ಪರಿಸ್ಥಿತಿಯು ಅಷ್ಟೇನು ಉತ್ತಮವಾಗಿಲ್ಲ. ಈ ಅಭಿಪ್ರಾಯವು ಈ ಶಿಸ್ತುಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿಯೂ ಮತ್ತು ಅದರಿಂದಾಚೆ ಕೆಲಸ ಮಾಡುತ್ತಿರುವವರಲ್ಲಿಯೂ ಇದೆ.

ಪರಿಸ್ಥಿತಿಯು ಉತ್ತಮವಾಗಿಲ್ಲ ಎಂದರೇನು? ಎಂದರೆ, ಈ ಶಿಸ್ತುಗಳಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆಗಳು ಬರುತ್ತಿಲ್ಲ. ನಡೆಯುತ್ತಿರುವ ಸಂಶೋಧನೆಗಳಿಗೂ ನಮ್ಮ ಸಮಾಜಕ್ಕೂ ಇರುವ ಸಂಬಂಧವೇನೆನ್ನುವುದೂ ಅರ್ಥವಾಗುತ್ತಿಲ್ಲ ಎನ್ನುತ್ತಾರೆ. ಈ ಅಭಿಪ್ರಾಯ ಮತ್ತು ಅದಕ್ಕೆ ನೀಡುತ್ತಿರುವ ಕಾರಣಗಳೆರಡನ್ನು ನಾನೂ ಒಪ್ಪುತ್ತೇನೆ.

ಸಾಮಾನ್ಯವಾಗಿ, ಸಂಶೋಧನೆಯ ಗುಣಮಟ್ಟದ ಮಾತು ಬಂದಾಗ ಅಧ್ಯಾಪಕರು, ವಿದ್ಯಾರ್ಥಿಗಳ ಹಿನ್ನೆಲೆ, ಅಂದರೆ, ಕನ್ನಡ (ತಮಿಳು ತೆಲುಗು ಇನ್ಯಾವುದೇ) ಮಾಧ್ಯಮದವರೇ ಬಹುಸಂಖ್ಯಾತ ವಿದ್ಯಾರ್ಥಿಗಳಾಗಿರುವುದು,  ಸ್ಥಳೀಯ ಭಾಷೆಯಲ್ಲಿ ಪಠ್ಯಪುಸ್ತಕಗಳ ಅಲಭ್ಯತೆಗಳ ಕಾರಣಗಳನ್ನು ಕೊಡುತ್ತಾರೆ.

ಆದರೆ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳೆರಡನ್ನೂ ಬಲ್ಲವರು ಈ ಕ್ಷೇತ್ರದಲ್ಲಿ ಕೆಲಸ ಮಾಡಬಹುದಲ್ಲವೆ – ಎನ್ನುವಾಗ, ಕನ್ನಡದಂತ ಸ್ಥಳೀಯ ಭಾಷೆಗಳಲ್ಲಿ ಇಂಗ್ಲಿಷ್‌ನಲ್ಲಿರುವಂತಹ ಪಾರಿಭಾಷಿಕ ಪದಗಳಾಗಲಿ, ಅಥವಾ ಅವುಗಳಿಗೆ ಸಮಾನಾಂತರವಾದ ಪದಗಳಾಗಲಿ ಇಲ್ಲವೆನ್ನುತ್ತಾರೆ. ಅನೇಕ ವೇಳೆ  ಇಂಗ್ಲಿಷ್‌ನಲ್ಲಿ ವಿಷಯವನ್ನು ಓದಿ ಅರಗಿಸಿಕೊಂಡವರು ಅದನ್ನು ಕನ್ನಡದಲ್ಲಿ ಹೇಳುವಾಗ ಪರದಾಡುತ್ತಾರೆ.

ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಯುವವರು ಇಂತಹ ಸಂಗತಿಯ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ, ಒಂದು ಪದವನ್ನು ತಾವೇ ಸೃಷ್ಟಿಸಿ, ಇಲ್ಲವೇ ಸಂಸ್ಕೃತದಿಂದ ಯಾವುದೋ ಪದವನ್ನು ಹೆಕ್ಕಿ ಬರೆದುಬಿಡುತ್ತಾರೆ.

ಪಠ್ಯಪುಸ್ತಕ ಬರೆಯುವವರು, ಬರೆಯದೇ ಇರುವುದಕ್ಕಿಂತಲೂ ಏನೋ ಒಂದು ಬರೆಯುವುದು ಉತ್ತಮವೆಂದು ವಾದಿಸುತ್ತಾರೆ. ಬರೆಯದೇ ಇರುವವರು ಉಪಯುಕ್ತವಲ್ಲದನ್ನು ಬರೆಯುವುದಕ್ಕಿಂತ ಬರೆಯದಿರುವುದೇ ವಾಸಿ ಎಂದು ವಾದಿಸುತ್ತಾರೆ. ಈ ಎರಡು ವಾದಗಳು ಅಂತಿಮವಾಗಿ ಸಮಾಜಶಾಸ್ತ್ರದ ದುಃಸ್ಥಿಯ ಬಗೆಗೆ ಗಮನ ಹರಿಸುವುದಿಲ್ಲ.

ಸಮಾಜವಿಜ್ಞಾನವು ಒಂದು ಅಧ್ಯಯನ ಶಿಸ್ತಾಗಿ, ಅದು ಒಂದು ಸಮಾಜವು ತನ್ನನ್ನು ಹೇಗೆ ಸಂಘಟಿಸಿಕೊಂಡಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ. ಅಂದರೆ, ಒಂದು ಆಚರಣೆಯ ಸಂಪ್ರದಾಯ, ಅಥವಾ ಸಾಮಾಜಿಕ ಸಮಸ್ಯೆಯ – ಅದು ಅಸ್ತಿತ್ವದಲ್ಲಿರುವ ಸಮಾಜದಲ್ಲಿ ಯಾವ ಅರ್ಥವನ್ನು ಪಡೆದುಕೊಂಡಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದೇ ಸಮಾಜಶಾಸ್ತ್ರದ ಕೆಲಸ.

ಹೀಗಿರುವಾಗ ನಮ್ಮ ಸಮಾಜದಲ್ಲಿ ನಮ್ಮ ಬದುಕಿನ ಬಗೆಗೆ, ನಮ್ಮ ಜೀವನ ವ್ಯವಹಾರಕ್ರಮದ ಬಗೆಗೆ ನಮ್ಮ ಸಮಾಜದ ಸದಸ್ಯರು ಹಂಚಿಕೊಂಡಿರುವ ತಿಳಿವಳಿಕೆಯ ಹಿನ್ನೆಲೆಯಲ್ಲಿ ನಾವೇಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ? ಹೀಗೆ ಮಾಡಿದ್ದರೆ, ನಾವು ಕಲಿಯುತ್ತಿರುವ ಸಮಾಜಶಾಸ್ತ್ರಕ್ಕೂ ನಮ್ಮ ಸಮಾಜಕ್ಕೂ ಏನು ಸಂಬಂಧ? ಎನ್ನುವಂತಹ ಪ್ರಶ್ನೆಗಳು ಬರುತ್ತಿರಲಿಲ್ಲ. ಹಾಗಾದರೆ ನಾವು ಈಗ ಮಾಡುತ್ತಿರುವುದೇನು?

ಕನ್ನಡದಂತಹ ಸಂದರ್ಭದಲ್ಲಿ ಲಭ್ಯವಿರುವ ಪಠ್ಯಪುಸ್ತಕಗಳು ಮತ್ತು ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಪಠ್ಯಕ್ರಮಗಳನ್ನು ನೋಡಿದರೆ, ಅವು ಸಮಾಜಶಾಸ್ತ್ರವನ್ನು ಒಂದು ಅಧ್ಯಯನ ಕ್ರಮವಾಗಿ ಕಲಿಸದೆ, ಬಹುಪಾಲು ಆ ಶಿಸ್ತಿನ ಚರಿತ್ರೆಯನ್ನು ಕಲಿಸುತ್ತವೆ ಎನ್ನುವುದು ಸ್ಪಷ್ಟ.

ಈ ಶಿಸ್ತು ಹೇಗೆ ಹುಟ್ಟಿಕೊಂಡಿತು? ಅದರ ಮುಖ್ಯ ಚಿಂತಕರು ಯಾರು? ಪ್ರಮುಖ ಪರಿಭಾಷೆಗಳ ವ್ಯಾಖ್ಯಾನಗಳೇನು? ಇತ್ಯಾದಿ. ಅದೂ ಸಹ, ಈ ಪರಿಭಾಷೆಗಳು, ಸಿದ್ಧಾಂತಗಳು ನಮ್ಮ ಸಾಮಾಜಿಕ ಸಂದರ್ಭಕ್ಕೆ ಯುಕ್ತವಾಗಿವೆಯೇ? ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳದೆಯೇ!

ಪಶ್ವಿಮದ ಸಂಸ್ಕೃತಿಯಲ್ಲಿ ಚಾಲ್ತಿಯಲ್ಲಿರುವ ಯಾವುದೋ ಪರಿಭಾಷೆಗೆ ಕನ್ನಡ ಅಥವಾ ಭಾರತದ ಯಾವುದೇ ಭಾಷೆಯಲ್ಲಿ ಸಮಾನಾಂತರ ಪದವಿಲ್ಲ ಎಂದರೆ ಏನರ್ಥ? ಇದರರ್ಥ ಈ ಭಾಷೆಗಳು ಸಮೃದ್ಧವಾಗಿಲ್ಲ ಎನ್ನುವುದಲ್ಲ. ಬದಲಾಗಿ, ಭಾಷಾಶಾಸ್ತ್ರದ ಪ್ರಾಥಮಿಕ ತಿಳಿವಳಿಕೆಯಲ್ಲಿಯೇ ಹೇಳುವುದಾದರೆ, ಒಂದು ಸಂಸ್ಕೃತಿಯಲ್ಲಿ ಒಂದು ಪರಿಕಲ್ಪನೆಯು ಚಾಲ್ತಿಯಲ್ಲಿದೆ ಎಂದರೆ, ಅದು ಅಲ್ಲಿನ ಸಾಮಾಜಿಕ ಸಂದರ್ಭವನ್ನು ತನ್ನದಾಗಿಸಿಕೊಂಡಿದೆ ಎಂದರ್ಥ.

ಉದಾಹರಣೆಗೆ ಸೆಕ್ಯುರಿಸಂ, ಈ ಪರಿಭಾಷೆಯ ಹಿಂದೆ, ಪಶ್ವಿಮದ ಸಂಸ್ಕೃತಿಯಲ್ಲಿ ಶತಶತಮಾನಗಳಷ್ಟು ಕಾಲ ಜರುಗಿದ ಬೌದ್ಧಿಕ, ಸಾಮಾಜಿಕ ಬೆಳವಣಿಗಳ ಹಿನ್ನೆಲೆಯಿದೆ: ಕ್ರಿಶ್ವಿಯಾನಿಟಿಯಲ್ಲಿಯ ಲೌಕಿಕ ಮತ್ತು ಅಲೌಕಿಕ ಜಗತ್ತಿನ ವರ್ಗೀಕರಣ, ಇದನ್ನು ಅನುಸರಿಸಿ, ಚರ್ಚ್ ಮತ್ತು ಸ್ಟೇಟಗಳು ಲೌಕಿಕ ಪ್ರಪಂಚದ ಮೇಲೆ ತಮ್ಮ ಹಿಡಿತ ಸಾಧಿಸಲು ನಡೆಸಿದ ನಾಗರಿಕ ಯುದ್ಧಗಳು, ಅಂತಿಮವಾಗಿ ಲೌಕಿಕ ಅಧಿಕಾರವು ಸ್ಟೇಟ್‌ಗೆ ಸಿಕ್ಕಿದ್ದು, ಸೆಕ್ಯುಲ್ಯುರಿಸ್ಟ್ ಸ್ಟೇಟ್ ಎಲ್ಲ ಪಂಥಗಳನ್ನು ಸಮಾನ ದೂರದಲ್ಲಿಟ್ಟು ಮುನ್ನಡೆಸುವುದು, ಇತ್ಯಾದಿ.

ಅಂದರೆ ಪರಿಭಾಷೆಯೊಂದು ನಿರ್ದಿಷ್ಟ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭದ ಗೈರುಹಾಜರಿಯಲ್ಲಿ ಸಂಸ್ಕೃತಿಯೊಂದರಲ್ಲಿ ಹುಟ್ಟುವುದಿಲ್ಲ. ಆ ಸಮಾಜಿಕ ಸಂದರ್ಭದ ಗೈರಿನಲ್ಲಿ ಅ ಪದಕ್ಕೆ ಅರ್ಥವು ದಕ್ಕುವುದಿಲ್ಲ.  ಆದ್ದರಿಂದಲೇ ಭಾರತದ ಯಾವುದೇ ಭಾಷೆಯಲ್ಲಿ ಸೆಕ್ಯುಲರಿಸಂಗೆ ಸೂಕ್ತ ಪರಿಭಾಷೆಯಿಲ್ಲ.

ಎಲ್ಲರು ತಮಗೆ ಬೇಕಾದಂತೆ ಅದನ್ನು ವ್ಯಾಖ್ಯಾನಿಸುತ್ತಿದ್ದಾರೆ. ಇದನ್ನೇ ವಿಸ್ತರಿಸುವುದಾರೆ, ಭಾರತೀಯ ಮಾನವಿಕಗಳಲ್ಲಿ ಪಶ್ವಿಮ ಸಂಸ್ಕೃತಿಯಲ್ಲಿಯ ಇಂತಹ ಅನೇಕ ಪರಿಭಾಷೆಗಳು ಕಿಕ್ಕಿರಿದಿವೆ. ಇವೇ ನಮ್ಮ ಸಾಮಾಜಿಕ ಸಂದರ್ಭದಲ್ಲಿಯ ವ್ಯವಹಾರಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ತೊಡಕಾಗಿವೆ.

ಅದು ಹೇಗೆ? ಒಂದು ಉದಾಹರಣೆಯನ್ನು ಕೊಡುವುದಾದರೆ, ಆಸ್ಟ್ರೇಲಿಯಾವನ್ನು ಎಂದು ನೋಡದ, ಅದರ ಬಗೆಗೆ ಏನು ತಿಳಿಯದೇ ಇರುವ ಭಾರತೀಯನೊಬ್ಬನು ಅಲ್ಲಿಗೆ ಹೋಗುತ್ತಾನೆಂದು ಭಾವಿಸೋಣ.

ಅಲ್ಲಿ ಕಾಂಗರೂವನ್ನು ನೋಡಿ, ಆಶ್ಚರ್ಯವಾಗಿ, ‘ಇದು ನೋಡಲಿಕ್ಕೆ ನಮ್ಮ ದೇಶದ ನಾಯಿಯಂತಿದೆ, ಆದರೆ ಇದಕ್ಕೆ ನಮ್ಮ ನಾಯಿಗಳಿಗೆ ಇಲ್ಲದ ಚೀಲವೊಂದು ಹೊಟ್ಟೆಯಲ್ಲಿದೆ. ಆದ್ದರಿಂದ ಇದು ಚೀಲದ ನಾಯಿ’ ಎಂದು ಕರೆಯುತ್ತಾನೆ ಎಂದುಕೊಳ್ಳೋಣ.

ಇದರಿಂದ ಏನಾಯಿತು? ನಾಯಿಗೆ ಆರೋಪಿಸುವ ಲಕ್ಷಣವೆಲ್ಲಾ ಕಾಂಗರೂಗೆ ಆರೋಪಿಸಿದಂತಾಯಿತು. ಪರಿಣಾಮ ನಾಯಿ ಮತ್ತು ಕಾಂಗರೂಗಳಿಗಿರಬಹುದಾದ ವ್ಯತ್ಯಾಸಗಳು ಹಾಗೂ ಕಾಂಗರೂವಿಗೆ ಇರುವ ವಿಶಿಷ್ಟತೆ ಅವನ ಅರಿವಿಗೆ ಬರುವುದಿಲ್ಲ.

ಭಾರತದ ಬಗೆಗಿನ ಸಮಾಜಶಾಸ್ತ್ರಿಯ ಅಧ್ಯಯನದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ಸಮಾಜದ ಬಗೆಗೆ ಲಭ್ಯವಿರುವ ಸೈದ್ಧಾಂತಿಕ ವಿವರಣೆಗಳನ್ನು ನೀಡಿದವರು ಪಾಶ್ಚಾತ್ಯರೇ. ಈ ಪ್ರಕ್ರಿಯೆಯಲ್ಲಿ ಪಶ್ಚಿಮವು ಪೂರ್ವದ (ಭಾರತದ) ಸಂಸ್ಕೃತಿಯನ್ನು, ಸಮಾಜದ ವಿಕಾಸಹಾದಿಯಲ್ಲಿ ತಾನು ದಾಟಿ ಬಂದ ಬಾಲ್ಯದ ಪ್ರತಿರೂಪವೆಂದು ಭಾವಿಸಿತು.

ಪರಿಣಾಮ ತಮ್ಮ ಬಾಲ್ಯಲಕ್ಷಣಗಳೇ ಭಾರತಕ್ಕೂ ಇರಲು ಸಾಧ್ಯ. ಮುಂದೊಂದು ದಿನ ಭಾರತವೂ ತನ್ನಂತೆ, ತನ್ನದೇ ಅರ್ಥದಲ್ಲಿ ಮತ್ತು ರೂಪದಲ್ಲಿ ಆಧುನಿಕವೂ ಆಗುತ್ತದೆ ಎನ್ನುವ ತಿಳಿವಳಿಕೆಯು ಪಶ್ಚಿಮಕ್ಕಿತ್ತು. ಈ ತಿಳಿವಳಿಕೆಯು ಅದು ರೂಪಿಸಿದ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಅಂತರ್ಗತವಾಗಿದೆ.

ಇದರಿಂದಲೇ ಪಶ್ಚಿಮವು ತನ್ನ ಸಮಾಜದಲ್ಲಿನ ಪರಿಭಾಷೆಗಳನ್ನು ಪಶ್ಚಿಮೇತರ ಸಂಸ್ಕೃತಿಗಳ ವಿವರಣೆಗೂ ಬಳಸಿಕೊಂಡಿತು. ಅದನ್ನೇ ನಮ್ಮ ಸಮಾಜದ ಜ್ಞಾನವಾಗಿಯೂ ರೂಪಿಸಿತು ಮತ್ತು ಬೋಧಿಸಿತು.

ಆದರೆ ಇಂದು ಜಾಗತಿಕ ಬೌದ್ಧಿಕ ವಲಯವು ಪಶ್ಚಿಮದ ಈ ತಿಳಿವಳಿಕೆಯನ್ನು ಪ್ರಶ್ನಿಸುತ್ತಿದೆ. ಅಲ್ಲದೇ ಪಶ್ಚಿಮವು ಭಾವಿಸಿದಂತೆ ಎಲ್ಲ ಸಮಾಜಗಳು ಒಂದೇ ರೀತಿಯಲ್ಲಿ ಬದುಕನ್ನು ಸಂಘಟಿಸಿಕೊಳ್ಳಬೇಕಾದ ಅಗತ್ಯ, ಅನಿವಾರ್ಯತೆಗಳು ಏನಿಲ್ಲ ಎನ್ನುವುದನ್ನು ಕಂಡುಕೊಂಡಿದೆ.

ಪರಿಣಾಮ ಪಶ್ಚಿಮವು ನಮ್ಮ ವಿದ್ಯಮಾನಗಳನ್ನು ಗ್ರಹಿಸಲು ಬಳಸಿದ ಪರಿಭಾಷೆಗಳಿಗಿಂತ ನಮ್ಮ ಬದುಕಿನ ಕ್ರಮ ಭಿನ್ನವಾಗಿದ್ದರೆ, ನಮ್ಮ ಸಮಾಜದ ಬಗೆಗಿನ ತಿಳಿವಳಿಕೆಯು ಬೇರೆ ರೀತಿಯಲ್ಲಿರಲು ಸಾಧ್ಯ.

ಇದು ಸತ್ಯವಾದರೆ, ಪಾಶ್ಚಾತ್ಯ ಸಿದ್ಧಾಂತಗಳ ಪಾರಿಭಾಷಿಕ ಪದಗಳಿಗೆ ಸಮಾನಾಂತರ ಪದಗಳು ಹುಡುಕುವುದಕ್ಕಿಂತ, ಹೊಸ ಪದಗಳನ್ನು ಸೃಷ್ಟಿಸಿ ಗೊಂದಲ ಮಾಡುವುದಕ್ಕಿಂತ, ಈ ಸಮಾಜದಲ್ಲಿ ಲಭ್ಯವಿರುವ ವಿದ್ಯಮಾನಕ್ಕೆ ಈ ಸಮಾಜದ ಗ್ರಹಿಕೆ ಏನು? ಎನ್ನುವುದನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಚಾಲನೆ ಕೊಡಬೇಕಿದೆ.

ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ ಪಾಶ್ಚಾತ್ಯಸಂಸ್ಕೃತಿಯ ಪಾರಿಭಾಷಿಕ ಪದಗಳು ಮತ್ತು ಅವು ಜನಿಸಿರುವ ಸೈದ್ಧಾಂತಿಕ ಚೌಕಟ್ಟಗಳ ಭಾರವಿಲ್ಲದೇ ನಮ್ಮ ಸಮಾಜದ ಸ್ವರೂಪ, ನಂಬಿಕೆಗಳು, ಆಚರಣೆಗಳು, ಕಂದಾಚಾರಗಳು, ಅನಿಷ್ಟಗಳೆಲ್ಲವನ್ನು ಈ ಸಂಸ್ಕೃತಿಯ ಹಿನ್ನೆಲೆಯಲ್ಲಿಯೇ – ಅಂದರೆ ಅವು ಹುಟ್ಟಿರುವ ಸಂಸ್ಕೃತಿಯ ನೆಲೆಯಲ್ಲಿಯೇ – ಅರ್ಥ ಮಾಡಿಕೊಳ್ಳಬಹುದು. ಬೇಡವಾದುದ್ದನ್ನು ನಿವಾರಿಸುವ ಕೆಲಸವನ್ನೂ ಮಾಡಬಹುದು.

ಇಂಥ ಪ್ರಕ್ರಿಯೆಗೆ ಇಂಗ್ಲಿಷ್‌ಜ್ಞಾನ ಮತ್ತು ಡುರ್ಖೈಂ, ವೇಬರ್, ಮಾರ್ಕ್ಸ್‌ರು ತೀರ ಅನಿವಾರ್ಯವಲ್ಲ. ಹಾಗೆಂದ ಮಾತ್ರಕ್ಕೆ ಇಂಗ್ಲಿಷನ್ನಾಗಲೀ ಈ ಸಿದ್ಧಾಂತಿಗಳನ್ನಾಗಲೀ ಅಭ್ಯಾಸ ಮಾಡಬಾರದೆಂದಲ್ಲ. ಈ ಸಿದ್ಧಾಂತಿಗಳು ತಮ್ಮ ದೇಶ–ಕಾಲದ ಸಂದರ್ಭದಲ್ಲಿ ರೂಪಿಸಿರುವ ಚಿಂತನೆಗಳು ನಮ್ಮ ಸಂದರ್ಭಕ್ಕೆ ಎಷ್ಟು ಪ್ರಸ್ತುತ ಎನ್ನುವುದನ್ನು ಪರಿಶೀಲಿಸಲು ಇವರನ್ನು ಓದಲೇ ಬೇಕು.

ಅವರು ರೂಪಿಸಿರುವ ಅಧ್ಯಯನಮಾರ್ಗಗಳನ್ನು ನಾವು ಬಳಸಿಕೊಳ್ಳಬಹುದು. ಆದರೆ ಅವರಿಗೆ ತಮ್ಮ ಮತ್ತು ಇತರ ಸಂಸ್ಕೃತಿಗಳ ಬಗೆಗೆ ಇದ್ದ ಪೂರ್ವಗ್ರಹಗಳನ್ನು ನಾವು ಪರಿಶೀಲಿಸಬೇಕು.

ಈ ಪರಿಶೀಲನೆಯ ಸಂದರ್ಭದಲ್ಲಿ ನಮ್ಮ ಸಮಾಜದ ವ್ಯವಹಾರಗಳನ್ನು ನಾವು ನಮ್ಮ ಗ್ರಹಿಕೆಯ ನೆಲೆಯಲ್ಲಿ ತಿಳಿಯಲಿರುವ ಸಾಧ್ಯತೆಯನ್ನು ಏಕೆ ಕೈ ಬಿಡಬೇಕು? ಜಗತ್ತಿನ ಶ್ರೇಷ್ಠ ಚಿಂತಕರ ಬಗೆಗೆ ನಾವು ಮಾತನಾಡುವಾಗ ಅವರು ತಮ್ಮ ಮಾತೃ ಭಾಷೆಯಲ್ಲಿಯೇ ಬರೆದರೆಂದು ಹೇಳುತ್ತಲೇ ಇರುತ್ತೇವೆ.

ಅವರ ಚಿಂತನೆಯ ಶ್ರೇಷ್ಠತೆಯು ಕೇವಲ ಅವರು ತಮ್ಮ ಮಾತೃಭಾಷೆಯಲ್ಲಿ ಬರೆದದ್ದರಿಂದಲೇ ಶ್ರೇಷ್ಠವಾದುದಲ್ಲ; ಬದಲಾಗಿ ಒಂದು ಸಂಸ್ಕೃತಿಯ ವಿಶ್ಲೇಷಣೆಯು ಅ ಸಂಸ್ಕೃತಿಯ ಭಾಷೆಯನ್ನು ಬಿಟ್ಟು ದೊರಕುವುದಿಲ್ಲ. ಏಕೆಂದರೆ, ವಿಟ್‌ಗೈನ್‌ಸ್ಟೈನ್ ಹೇಳುವಂತೆ - ಒಂದು ಭಾಷೆಯಲ್ಲಿ ಅ ಸಂಸ್ಕೃತಿಯ ಎಲ್ಲ ವಿವರಗಳೂ ಇರುತ್ತವೆ.

ಆದ್ದರಿಂದಲೇ ಹಿಂದೆ ಹೇಳಿರುವಂತೆ, ಒಂದು ಸಂಸ್ಕೃತಿಯಲ್ಲಿರುವ ಪರಿಭಾಷೆಯನ್ನು ಬಳಸಿ, ಇನ್ನೊಂದು ಸಂಸ್ಕೃತಿಯ ಲೋಕವ್ಯವಾಹರವನ್ನು ಚಿತ್ರಿಸುವುದು ಎಂದರೆ ಭಿನ್ನ ಸಂಸ್ಕೃತಿಗಳು ಭಿನ್ನರೀತಿಯಲ್ಲಿ ಬದುಕನ್ನು ಕಟ್ಟಿಕೊಂಡಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕಿದಂತಾಗುತ್ತದೆ.

ಇದನ್ನು ಬಿಟ್ಟು ಒಂದು ಸಂಸ್ಕೃತಿಯ ಪರಿಭಾಷೆಗೆ ಇನ್ನೊಂದು ಸಂಸ್ಕೃತಿಯಲ್ಲಿ ಇಲ್ಲದ ಪದವನ್ನು ಸೃಷ್ಟಿಸಿ ಬಳಸಿದರೆ ಆ ಪದವನ್ನು ಅನುವಾದಿಸುವ (ಉದಾಹರಣೆಗೆ, ಫೂಡಲ್= ಊಳಿಗಮಾನ್ಯ, ಲಿಬರಲ್=ಉದಾರವಾದ ಎನ್ನುವಂತೆ) ಅಗತ್ಯವೇನು ಇಲ್ಲ. ಇಂತಹ ಅನುವಾದಗಳು ನಮ್ಮ ಸಮಾಜದ ತಿಳಿವಳಿಕೆಗೆ ಹೆಚ್ಚಿನ ಕೊಡುಗೆಯನ್ನೇನೂ ಕೊಡುವುದಿಲ್ಲ.

ಆದ್ದರಿಂದ ನಾನಿಲ್ಲಿ ಮಾತನಾಡುತ್ತಿರುವುದು ಪದಗಳ ಆಯ್ಕೆ ಮತ್ತು ಅನುವಾದದ ಸಮಸ್ಯೆಯನ್ನಲ್ಲ; ನಮ್ಮಲ್ಲಿ ಇರುವ ಲೋಕವ್ಯವವಹಾರಕ್ಕೆ ಇನ್ನೊಂದು ಸಂಸ್ಕೃತಿಯ ಪರಿಭಾಷೆ ಮತ್ತು ಅದು ಒಳಗೊಂಡಿರುವ ಪೂರ್ವಗ್ರಹಿಕೆಯ ಬಗೆಗೆ.

ಇದು ನಮ್ಮ ಸಮಾಜಶಾಸ್ತ್ರದ, ನಮ್ಮ ಸಮಾಜದ ಅಗತ್ಯಕ್ಕೆ ತಕ್ಕಂತೆ ಪಾತ್ರ ನಿರ್ವಹಿಸಲು ಸಾಧ್ಯವಾಗದಿರುವ ಪರಿಸ್ಥಿತಿಯ ಬಗೆಗೆ. ಆದ್ದರಿಂದ ಭಾರತದ ಸಂದರ್ಭದಲ್ಲಿ ಸಮಾಜಶಾಸ್ತ್ರದ ಬೋಧನೆ ಮತ್ತು ಸಂಶೋಧನೆ ಎಂದರೆ ಪಶ್ವಿಮದ ಸಿದ್ಧಾಂತಗಳ, ಪರಿಕಲ್ಪನೆಗಳ ವ್ಯಾಖ್ಯಾನ, ಅವುಗಳ ಇತಿಹಾಸವನ್ನು ಓದುವುದಲ್ಲ.

ಬದಲಾಗಿ ನಮ್ಮ ಸಮಾಜ ಹೇಗೆ ತನ್ನನ್ನು ವ್ಯವಸ್ಥೀಕರಿಸಿಕೊಂಡಿದೆ ಎನ್ನುವುದನ್ನು ಕಂಡುಕೊಳ್ಳುವುದು. ಇದು ನಮ್ಮ ಸಮಾಜಶಾಸ್ತ್ರಕ್ಕೆ ನಮ್ಮ ಸಂದರ್ಭಕ್ಕೆ ಸಾವಯವತೆಯನ್ನು ತಂದುಕೊಡುತ್ತದೆ ಮತ್ತು ಇದು ನಮ್ಮ ಸ್ಥಳೀಯ ಭಾಷೆಗಳಲ್ಲಿ ಸಂಶೋಧನೆಯ ಹೊಸ ಕ್ಷಿತಿಜವನ್ನು ತೆರೆಯಲು ಅನುವು ಮಾಡಿಕೊಡಬಹುದಲ್ಲವೆ?
- ಮಹೇಶ್ ಕುಮಾರ್ ಸಿ. ಎಸ್.
(ಲೇಖಕರು ಸಮಾಜಶಾಸ್ತ್ರದ ಅಧ್ಯಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT