ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಬರೆದ ದೀಪಾ ಮಲಿಕ್‌

Last Updated 13 ಸೆಪ್ಟೆಂಬರ್ 2016, 8:38 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ:  ಭಾರತದ ದೀಪಾ ಮಲಿಕ್ ಸೋಮವಾರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ನೂತನ ಇತಿಹಾಸ ಬರೆದರು. ಅವರು ಮಹಿಳೆಯರ ಶಾಟ್‌ಪಟ್‌ನಲ್ಲಿ ಬೆಳ್ಳಿ ಪದಕ ಗೆದ್ದರು.

ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾ ಪಟು ಎಂಬ ಹೆಗ್ಗಳಿಕೆಗೆ 45 ವರ್ಷದ ದೀಪಾ ಪಾತ್ರರಾದರು. ಅದರೊಂದಿಗೆ 17 ವರ್ಷಗಳಿಂದ ಅನುಭವಿಸಿದ ಯಾತನೆಯನ್ನೂ ಮರೆತರು. ಎಫ್‌–53 ವಿಭಾಗದಲ್ಲಿ (ಗಾಲಿಕುರ್ಚಿ) ಅವರು 4.61 ಮೀಟರ್ಸ್ ದೂರ ಶಾಟ್‌ಪಟ್ ಎಸೆದು ಎರಡನೇ ಸ್ಥಾನ ಪಡೆದರು. 

17 ವರ್ಷಗಳ ಹಿಂದೆ ಹರಿಯಾಣದ ದೀಪಾ ಮಲಿಕ್ ಅವರು ಬೆನ್ನುಹುರಿಯ ಗಡ್ಡೆಯ ಸಮಸ್ಯೆಯಿಂದ ಬಳಲಿದ್ದರು. ಗಡ್ಡೆ  ಯ ನ್ನು ತೆಗೆಯಲು 31 ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರ ದೇಹದಲ್ಲಿ ಒಟ್ಟು 183 ಹೊಲಿಗೆಗಳನ್ನು ಹಾಕಲಾಗಿತ್ತು. ಆದರೂ ಸೊಂಟದಿಂದ ಪಾದದವರೆಗಿನ ಚೈತನ್ಯವನ್ನು ಕಳೆದು ಕೊಂಡಿದ್ದರು.  ಸೇನಾಧಿಕಾರಿಯ ಪತ್ನಿ ಯಾಗಿರುವ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

ಶಾಟ್‌ಪಟ್ ಅಲ್ಲದೆ, ಜಾವೆಲಿನ್ ಥ್ರೋ, ಈಜು ಸ್ಪರ್ಧೆಗಳಲ್ಲಿಯೂ ಸ್ಪರ್ಧಿಸಿದ್ದರು. 2011ರ ವಿಶ್ವ ಚಾಂಪಿಯನ್‌ಷಿಪ್‌ ಶಾಟ್‌ಪಟ್ ಮತ್ತು ಡಿಸ್ಕಸ್‌ ಥ್ರೋನಲ್ಲಿ ಅವರು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ದೀಪಾಗೆ ಪೈಪೋಟಿ ಒಡ್ಡಿದ ಬಹರೇನ್‌ನ ಫಾತೀಮಾ ನೆದಾಮ್ (ದೂರ: 4.76 ಮೀ) ಮತ್ತು  ಗ್ರೀಸ್‌ ದೇಶದ ದಿಮಿತ್ರಾ ಕೊರೊಕಿಡಾ (4.28ಮೀ) ಅವರು ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದರು.
ಹರಿಯಾಣ ಕ್ರೀಡಾ ಯೋಜನೆಯಲ್ಲಿ ದೀಪಾ ಅವರಿಗೆ ₹ 4 ಕೋಟಿ ಪುರಸ್ಕಾರ ನೀಡಲಾಗುವುದು.

ಪ್ಯಾರಾಲಿಂಪಿಕ್ಸ್ ಅಂಗಳದಲ್ಲಿ ಪುಟಿದೆದ್ದ ಅಮೆರಿಕ
15 ವರ್ಷಗಳ ಹಿಂದಿನ ಕರಾಳ ಘಟನೆಯ ನೆನಪು ಮನಕಲಕಿದ ಸಂದರ್ಭದಲ್ಲಿ ರಿಯೊ ಪ್ಯಾರಾಲಿಂಪಿಕ್ಸ್‌ ಗ್ರಾಮದಲ್ಲಿ ಅಮೆರಿಕದ ರಾಷ್ಟ್ರಗೀತೆ ಮೊಳಗಿತು. ಭಾನುವಾರ ರಾತ್ರಿ ಅಮೆರಿಕದ ಅಲೀಸಾ ಸೀಲಿ,  ಹೀಲಿ ಡೆನಿಸವಿಜ್ ಮತ್ತು ಮೆಲಿಸಾ ಸ್ಟಾಕ್‌ವೆಲ್    ಅವರು ರಿಯೊ ಪ್ಯಾರಾಲಿಂಪಿಕ್ಸ್‌ನ ಟ್ರಯಥ್ಲಾನ್‌ ಸ್ಪರ್ಧೆಯ  ಪಿಟಿ 2 ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಗೆದ್ದರು. 

‘ಅಮೆರಿಕದ ಪಾಲಿಗೆ ಇದು ಮಹತ್ವದ ದಿನವಾಗಿದೆ’ ಎಂದು ಡೆನಿಸವಿಜ್ ಪದಕ ಪ್ರದಾನ ಸಮಾರಂಭದ ನಂತರ ಹೇಳಿದರು. ಸೀಲಿ ಅವರು ಒಂದು ಗಂಟೆ, 22 ನಿಮಿಷ, 55 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನಕ್ಕೆ ಕೊರಳೊಡ್ಡಿದರು. ಅವರಿಗಿಂತ 48 ಸೆಕೆಂಡುಗಳಷ್ಟು ತಡವಾಗಿ ಗುರಿ ಸೇರಿದ ಡೆನಿಸವಿಜ್ ಎರಡನೇ ಸ್ಥಾನ ಪಡೆದರು.    1 ಗಂಟೆ, 25 ನಿಮಿಷ, 24 ಸೆಕೆಂಡುಗಳಲ್ಲಿ ಗುರಿ ಸೇರಿದ ಸ್ಟಾಕ್‌ವೆಲ್ ಕಂಚು ಪಡೆದರು.

ಅಮೆರಿಕ ಸೇನೆಯಲ್ಲಿದ್ದ  ಸ್ಟಾಕ್‌ವೆಲ್ ಅವರು 2004ರಲ್ಲಿ ಇರಾಕ್‌ನಲ್ಲಿ ನಡೆದಿದ್ದ ಬಾಂಬ್ ದಾಳಿಯಲ್ಲಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದರು. ಕೃತಕ ಕಾಲು (ಬ್ಲೇಡ್) ಅಳವಡಿಸಿಕೊಂಡು ಅವರು ಟ್ರಯಥ್ಲಾನ್‌ನಲ್ಲಿ ಸ್ಪರ್ಧಿಸಿದ್ದರು.   ಅವರು 2008ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.

ಆದರೆ ಸೀಲಿ ಮತ್ತು ಡೆನಿಸವಿಜ್ ಅವರು ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಇವರಿಬ್ಬರೂ ಕೃತಕ ಕಾಲು ಹೊಂದಿದ್ದಾರೆ. ಸೈಕ್ಲಿಂಗ್, ಈಜು ಮತ್ತು ಓಟದ ಸ್ಪರ್ಧೆಗಳನ್ನು ಮೇಳೈಸಿ ಟ್ರಯಥ್ಲಾನ್ ಸ್ಪರ್ಧೆಯನ್ನು ರೂಪಿಸಲಾಗಿರುತ್ತದೆ.  ಕಠಿಣ ಸ್ಪರ್ಧೆಯಲ್ಲಿ ಪದಕ ಸಾಧನೆ ಮಾಡಿದ ಅಮೆರಿಕದ ವನಿತೆಯರು ವಿಜಯದ ಗೆರೆಯ ಬಳಿ ಒಂದೇ ರಾಷ್ಟ್ರಧ್ಜಜವನ್ನೂ ಹೊದ್ದುಕೊಂಡು ಪರಸ್ಪರ ಅಲಂಗಿಸಿಕೊಂಡರು.

‘ಅಡೆತಡೆ, ಸವಾಲುಗಳು, ಹಿನ್ನಡೆಗಳು ಏನೇ ಇರಲಿ ಪುಟಿದೇಳುವ ಛಲ ಮತ್ತು ಶಕ್ತಿ ಎರಡೂ ಅಮೆರಿಕದ ಜನರಲ್ಲಿದೆ.  ಬೆಂಕಿಯಲ್ಲಿ ಅರಳುವ ಛಲ ಇದೆ’ ಎಂದು ಸ್ಟಾಕ್‌ವೆಲ್ ಹೆಮ್ಮೆಯಿಂದ ಹೇಳಿದರು. ಪಿಟಿ 4 ವಿಭಾಗದ ಸ್ಪರ್ಧೆಯಲ್ಲಿ ಅಮೆರಿಕದ  ಗ್ರೇಸ್ ನಾರ್ಮನ್ ಕೂಡ ಚಿನ್ನದ ಪದಕ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT