ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಾರು ಆಚರಣೆಗಳಿಗೆ ಅರ್ಥವೇ ಗೊತ್ತಿಲ್ಲ

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಿ. ಪರಮೇಶ್ವರ ಹೇಳಿಕೆ
Last Updated 12 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಧಾರ್ಮಿಕ ಆಚರಣೆಗಳು ಬಹಳ ಸಂಕೀರ್ಣ ಮತ್ತು ವೈವಿಧ್ಯಮಯ ಆಗಿವೆ. ಸಾವಿರಾರು ಅರ್ಥ ಗೊತ್ತಿಲ್ಲದ ಸಾಂಪ್ರದಾಯಿಕ ಆಚರಣೆಗಳನ್ನು ನಾವು ನಡೆಸುತ್ತಾ ಬಂದಿದ್ದೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ  ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಪ್ನ ಬುಕ್‌ ಹೌಸ್‌ ಸೋಮವಾರ ಹಮ್ಮಿಕೊಂಡಿದ್ದ ಪ್ರೊ. ಕೆ.ಈ. ರಾಧಾಕೃಷ್ಣ ಅವರ ‘ಪ್ರೇತಂಭಟ್ಟರ ನಿಂತಿಲ್ಲರು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ನಮಗೆ ಯಾವ ಸಂಪ್ರದಾಯಗಳು ಸಹ ಸರಿಯಾಗಿ ಅರ್ಥ ಆಗುವುದಿಲ್ಲ, ಅವುಗಳ ಉದ್ದೇಶವೂ ತಿಳಿಯುವುದಿಲ್ಲ. ಪ್ರಶ್ನೆ ಮಾಡಿದರೆ ಉತ್ತರವೂ ಸಿಗುವುದಿಲ್ಲ. ಆದರೂ ಅವುಗಳನ್ನು ನಾವು ಆಚರಿಸುತ್ತಿದ್ದೇವೆ. ಅಂತಹ ಆಚರಣೆಗಳಲ್ಲಿ ಒಂದಾದ ಶಿವಳ್ಳಿ ಬ್ರಾಹ್ಮಣರಲ್ಲಿ ಇರುವ ಪ್ರೇತ ಉಣ್ಣುವ ಸಂಪ್ರದಾಯದ ಬಗ್ಗೆ ಈ ಪುಸ್ತಕ ವಿವರಿಸುತ್ತದೆ’ ಎಂದು ಹೇಳಿದರು.

‘ಈ ಪುಸ್ತಕ ನಮಗೆ  ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಚರ್ಚೆಯನ್ನು ಆರಂಭಿಸಿದೆ. ಬ್ರಾಹ್ಮಣ ಸಮಾಜದಲ್ಲಿ ಆಗುವಂತಹ ಅನೇಕ  ಸಂಪ್ರದಾಯಗಳ ಒಳನೋಟವನ್ನು ನೀಡುವ ಮೂಲಕ ಬದಲಾವಣೆಗೆ ಈ ಪುಸ್ತಕ ದಾರಿಯಾಗಬಹುದು’ ಎಂದರು.

‘ಮೂಢನಂಬಿಕೆ ವಿರುದ್ಧ ಈಗ ಧ್ವನಿ ಎದ್ದಿದೆ. ಮೂಢನಂಬಿಕೆಯಿಂದ ಆಗುವ ಶೋಷಣೆ ಆಧುನಿಕ ಕಾಲದಲ್ಲಿ ಆದರೂ ನಿಲ್ಲಲಿ ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೆ ಚಿಂತನೆ ನಡೆಸಿದೆ’ ಎಂದು ತಿಳಿಸಿದರು.

ವಿಮರ್ಶಕ ಮನು ಚಕ್ರವರ್ತಿ ಮಾತನಾಡಿ, ‘ತೃತೀಯ ಜಗತ್ತುಗಳು ಎಂದು ಕರೆದುಕೊಳ್ಳುವ ಬಡ ರಾಷ್ಟ್ರಗಳ ಬಹುಮುಖಿ ಅಸ್ಮಿತೆಗಳನ್ನು ಈ ಕೃತಿ ಪ್ರೇತಂಭಟ್ಟ ನಿಂತಿಲ್ಲರು ಮತ್ತು ಅವರ ಮಕ್ಕಳ ಮೂಲಕ ಹುಡುಕುತ್ತದೆ. ಈ ಆಯಾಮವನ್ನು ಗ್ರಹಿಸದಿದ್ದರೆ ಕೃತಿಯ ವ್ಯಾಖ್ಯಾನ ಸಿಗುವುದಿಲ್ಲ’ ಎಂದರು.

‘ವೈಯಕ್ತಿಕ ಅಸ್ಮಿತೆಯ ಹುಡುಕಾಟದಿಂದ ಪ್ರೇತಂಭಟ್ಟರು ನಿಂತಿಲ್ಲರು ಕೃತಿ ಪ್ರಾರಂಭವಾಗುತ್ತದೆ. ಗುವಾಹಟಿಯಿಂದ ವಾಪಸ್‌ ತಮ್ಮ ಅಗ್ರಹಾರಕ್ಕೆ ಬರುವ ಪ್ರೇತಂಭಟ್ಟರ ಯಾನ, ಎಷ್ಟೇ ಆಧುನಿಕವಾಗಿದ್ದರೂ ಮನುಷ್ಯ ಪ್ರಜ್ಞೆಯ ಮೂಲಗಳು ಶತಮಾನಗಳ ಹಿಂದೆ ಸರಿಯುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ’ ಎಂದು ಹೇಳಿದರು.

‘ಕನ್ನಡದಲ್ಲಿ ಅನಂತಮೂರ್ತಿ ಅವರ  ಸಂಸ್ಕಾರ ಪುಸ್ತಕದ ನಂತರ ಬ್ರಾಹ್ಮಣರ, ಅವರ ಪ್ರಜ್ಞೆಯ ಚೌಕಟ್ಟಿನಲ್ಲಿ ಬ್ರಾಹ್ಮಣ್ಯ, ಸಂಪ್ರದಾಯ,  ವಿಧಿವಿಧಾನ ಹಾಗೂ ಕರ್ಮಗಳನ್ನು ಮೀರುವಂತಹ ಅತ್ಯತ್ತಮ ಕೃತಿ ಇದಾಗಿದೆ’ ಎಂದರು.

ಇತಿಹಾಸ ತಜ್ಞ ಷ. ಶೆಟ್ಟರ್‌  ಮಾತನಾಡಿ, ‘ಮೊದಲ ಓದಿಗೆ ನನಗೆ ಕೃತಿಯ ವಸ್ತು ಅರ್ಥವಾಯಿತು, ಕಥೆ ಅರ್ಥವಾಗಲಿಲ್ಲ. ಕಾರಣ ಶಿವಳ್ಳಿ ಬ್ರಾಹ್ಮಣ ಸಮುದಾಯದ ಭಾಷೆ ಮತ್ತು ಬದುಕು ವಿಚಿತ್ರವಾಗಿ ಕಂಡದ್ದು. ಮೂರನೇ ಓದಿಗೆ ಕಥೆ, ಅದರೊಳಗಿರುವ ಸಮಾಜದ ಚಿಂತನೆ, ಆಚರಣೆ ಬಗ್ಗೆ ಇರುವ ಪರ–ವಿರೋಧದ ಮನೋಪ್ರವೃತ್ತಿಯನ್ನು ಕಂಡುಕೊಂಡೆ’ ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಲ್ಲೇಪುರ ಜಿ. ವೆಂಕಟೇಶ್‌ ಮಾತನಾಡಿ, ‘ಜನಪ್ರಿಯತೆ ಮತ್ತು ಮಾರುಕಟ್ಟೆ ಪೂರಕವಾಗಿ ಹೇಗೆ ಬರೆಯುವುದು ಎಂಬುದನ್ನು ಯೋಚಿಸುವವರ ಮಧ್ಯೆ ಅದರ ಆಚೆ ಸಾಂಸ್ಕೃತಿಕ ವಿಕೃತಿಯನ್ನು ಹೇಗೆ ನೋಡವುದು ಎಂಬುದಕ್ಕೆ ಈ ಕೃತಿ ಉತ್ತರವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT