ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ರಾಜ್ಯದ ಮೇಲೆ ಹೇರಲಾದ ಜಲ ಒಪ್ಪಂದ

ನೀರಿನ ವಿಚಾರದಲ್ಲಿ ಕರ್ನಾಟಕ ನಾಲ್ಕೂ ದಿಕ್ಕುಗಳಿಂದ ಒತ್ತಡ ಎದುರಿಸುತ್ತಿದೆ
Last Updated 14 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕರ್ನಾಟಕವು ತಮಿಳುನಾಡಿಗೆ ನೀರು ಕೊಟ್ಟಿದೆ. ಅಲ್ಲದೆ, ಅಲ್ಲಿನ ಜನರಿಗೆ ಉದ್ಯೋಗವನ್ನೂ ಕೊಟ್ಟಿದೆ. ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಲು ಅಲ್ಲಿನ ಜನರಿಗೆ ಅವಕಾಶ ನೀಡಿದೆ, ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದೆ, ತಮಿಳುನಾಡಿಗೆ ಒಬ್ಬ ಮುಖ್ಯಮಂತ್ರಿಯನ್ನು ನೀಡಿದೆ.

ಈ ಎರಡು ರಾಜ್ಯಗಳ ನಡುವಣ ಜಲ ವಿವಾದಕ್ಕೆ 150 ವರ್ಷಗಳಿಗಿಂತ ಹೆಚ್ಚಿನ ಇತಿಹಾಸ ಇದೆ. ವ್ಯಾಜ್ಯದ ಕೇಂದ್ರ ಇರುವುದು 1892 ಹಾಗೂ 1915ರಲ್ಲಿ ಆದ ಒಪ್ಪಂದಗಳ ಅರ್ಥೈಸುವಿಕೆಯಲ್ಲಿ. ಕಾವೇರಿ ನೀರು ಹಂಚಿಕೆ ವಿವಾದ 1980ರ ದಶಕದ ಉತ್ತರಾರ್ಧದಲ್ಲಿ ತೀವ್ರಗೊಂಡಾಗ, ಅಂದಿನ ಕರ್ನಾಟಕ ಸರ್ಕಾರ, ರಾಜ್ಯದ ಅಂದಿನ ಅಡ್ವೊಕೇಟ್ ಜನರಲ್ ಅವರನ್ನು ಸಂಪರ್ಕಿಸದೆ, ಬೇರೆ ಕಾನೂನು ತಜ್ಞರನ್ನು ಸಂಪರ್ಕಿಸಿತು. ಇದನ್ನು ವಿರೋಧಿಸಿ ಅಂದಿನ ಅಡ್ವೊಕೇಟ್ ಜನರಲ್ ರಾಜೀನಾಮೆ ನೀಡಿದರು. ಅದರ ನಂತರದ ಬೆಳವಣಿಗೆಗಳು ಈಗ ಇತಿಹಾಸದ ಭಾಗ.

ಕಾವೇರಿ ನದಿಯ ನೀರನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲದೆ, ಕೇರಳ ಹಾಗೂ ಪುದುಚೇರಿ ಕೂಡ ಪಡೆಯುತ್ತವೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ಕೇರಳ ನದಿ ಪಾತ್ರದ ಮೇಲ್ಭಾಗದ ರಾಜ್ಯಗಳು. ನದಿಯ ನೀರು ಕಡಿಮೆ ಸಿಗುವುದು ಈ ರಾಜ್ಯಗಳಿಗೆ. ತಮ್ಮ ನ್ಯಾಯಯುತ ಬಳಕೆಗೆ ಬೇಕಿರುವಷ್ಟು ಕಾವೇರಿ ನೀರು ಈ ರಾಜ್ಯಗಳಿಗೆ ಸಿಗುತ್ತಿಲ್ಲ.

ನದಿ ಪಾತ್ರದ ಕೆಳಭಾಗದ ರಾಜ್ಯಗಳ ಅರ್ಜಿಗಳನ್ನು ಆಧರಿಸಿ ಬಂದಿರುವ ನ್ಯಾಯಾಲಯದ ತೀರ್ಪುಗಳು ಈ ಪರಿಸ್ಥಿತಿಗೆ ಕಾರಣ. ನೀರಿನ ಬಳಕೆಯ ಹಕ್ಕು ಭೂಮಿಯ ಮೇಲಿನ ಆಸ್ತಿಯ ಹಕ್ಕಿಗೆ ಸಮ. ಕಾವೇರಿ ನದಿ ಪಾತ್ರದ ರಾಜ್ಯಗಳು ತಮಗೆ ಬೇಕು ಎಂದು ಮುಂದಿಟ್ಟಿರುವ ನೀರಿನ ಬೇಡಿಕೆ, ಅಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು. ಹಾಗಾಗಿ, ನೀರಿನ ಹಂಚಿಕೆಯ ಉದ್ದೇಶದಿಂದ ರಾಜ್ಯಗಳ ನಡುವೆ ಒಪ್ಪಂದ ಮಾಡಿಸುವ ಅನಿವಾರ್ಯತೆ ಇತ್ತು.

ತಮಿಳುನಾಡು ರಾಜ್ಯ 19ನೇ ಶತಮಾನದಿಂದಲೂ ಪಾಲಿಸಿಕೊಂಡು ಬಂದಿರುವ ಹಠಮಾರಿ ಧೋರಣೆಯಿಂದಾಗಿ, ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಸಿಕ್ಕಿಲ್ಲ.1892ರಲ್ಲಿ ಆದ ಒಪ್ಪಂದದ ಬಹುಪಾಲು ಅಂಶಗಳು ಕರ್ನಾಟಕದ ಪರ ಇದ್ದರೂ, ಕಾವೇರಿ ವಿವಾದದ ಉದ್ದಕ್ಕೂ ಕರ್ನಾಟಕ ಸೋತಿದ್ದೇ ಹೆಚ್ಚು. 1892ರ ಒಪ್ಪಂದದ ನಂತರ ಅಂದಿನ ಮೈಸೂರು ಸರ್ಕಾರ ಜಲಾಶಯವೊಂದನ್ನು ನಿರ್ಮಿಸಬೇಕು ಎಂಬ ತೀರ್ಮಾನ ಕೈಗೊಂಡಿತು. ಇದಕ್ಕೆ ಅದು ಅಂದಿನ ಮದ್ರಾಸ್ ಸರ್ಕಾರದ ಸಮ್ಮತಿ ಕೋರಿತು.

ಆದರೆ, ಆ ಒಪ್ಪಂದದ ನಿಯಮಗಳ ಅನ್ವಯ ಸಮ್ಮತಿ ನೀಡದಿರುವ ಅವಕಾಶ ಮದ್ರಾಸ್ ಸರ್ಕಾರಕ್ಕೆ ಇರಲಿಲ್ಲ. 1892ರ ಒಪ್ಪಂದವು ಕೃಷಿಗೆ ನೀರಿನ ಬಳಕೆಯ ಪರಂಪರಾಗತ ಅಧಿಕಾರವನ್ನು ಮದ್ರಾಸ್‌ ಸರ್ಕಾರಕ್ಕೆ ನೀಡಿರಲೇ ಇಲ್ಲ. ಆದರೆ ಇದು ತುಸು ವಿವಾದವಾಗಿ, ಅದನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಅಂದಿನ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಡಿ.ಗ್ರಿಫ್ಫಿನ್ ಎಂಬುವವರನ್ನು ಸಂಧಾನಕಾರರನ್ನಾಗಿ ನೇಮಿಸಲಾಯಿತು.

ನೀರಾವರಿ ಮಹಾನಿರ್ದೇಶಕ ಎನ್.ಎಂ.ನೆದರ್‌ಸೋಲ್‌ ಅವರನ್ನು ನ್ಯಾಯದರ್ಶಿಯನ್ನಾಗಿ ನೇಮಿಸಲಾಯಿತು. ರಾಜಿ ಸಂಧಾನ ಪ್ರಕ್ರಿಯೆ 1913ರ ಜುಲೈ 16ರಂದು ಊಟಿಯಲ್ಲಿ ಆರಂಭವಾಯಿತು. 1914ರ ಮೇ 12ರಂದು ನ್ಯಾಯಮೂರ್ತಿ ಗ್ರಿಫ್ಫಿನ್ ಅವರು ಆದೇಶ ನೀಡಿದರು. 1892ರ ಒಪ್ಪಂದವನ್ನು ಅರ್ಥೈಸಿ ನ್ಯಾಯಮೂರ್ತಿ ಗ್ರಿಫ್ಫಿನ್ ಅವರು ನೀಡಿದ್ದ ಆದೇಶದ ಬಹುಪಾಲು ಅಂಶಗಳು ಮದ್ರಾಸ್ ಸರ್ಕಾರದ ವಿರುದ್ಧವಾಗಿಯೇ ಇದ್ದವು.

ಆದರೆ, ದುರದೃಷ್ಟದ ಸಂಗತಿಯೆಂದರೆ, ನ್ಯಾಯಮೂರ್ತಿ ಗ್ರಿಫ್ಫಿನ್ ಅವರ ಆದೇಶವನ್ನು ಮದ್ರಾಸ್ ಸರ್ಕಾರದ ಕಾರ್ಯದರ್ಶಿಯ ಒತ್ತಾಸೆಯಿಂದಾಗಿ ಭಾರತದಲ್ಲಿನ ಬ್ರಿಟಿಷ್ ಸರ್ಕಾರದ ಲೋಕೋಪಯೋಗಿ ವಿಭಾಗದ ಅಧಿಕಾರಿಗಳು ಪ್ರಶ್ನಿಸಿದರು. ಬ್ರಿಟಿಷ್ ಸರ್ಕಾರದ ಕಾರ್ಯದರ್ಶಿಯು ನ್ಯಾಯಮೂರ್ತಿ ಗ್ರಿಫ್ಫಿನ್ ಆದೇಶವನ್ನು ಮಾನ್ಯ ಮಾಡಲಿಲ್ಲ.

ಈ ವಿಚಾರವನ್ನು ಮೈಸೂರು ಸರ್ಕಾರದಲ್ಲಿದ್ದ ಬ್ರಿಟಿಷ್‌ ರೆಸಿಡೆಂಟ್‌ಗೆ ತಿಳಿಸಲಾಯಿತು. ಇದರ ಪರಿಣಾಮವಾಗಿ 1914ರ ಫೆಬ್ರುವರಿ 18ರಂದು ಒಂದು ಒಪ್ಪಂದ ಏರ್ಪಟ್ಟಿತು.

ಆ ಸಂದರ್ಭದಲ್ಲಿ ಮೈಸೂರು ರಾಜ್ಯ, ಬಲಾಢ್ಯ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಮದ್ರಾಸ್‌ ಸರ್ಕಾರಕ್ಕೆ ಹೋಲಿಸಿದರೆ ಸಣ್ಣದಾಗಿತ್ತು. ಆಗ ಆದ ಒಪ್ಪಂದವು ಒತ್ತಡಗಳ ಪ್ರಭಾವಕ್ಕೆ ಒಳಗಾಗದೆ ಇರಲಿಲ್ಲ. ಅದರಲ್ಲಿ ನ್ಯಾಯಸಮ್ಮತ ಅಲ್ಲದ ಅಂಶವೂ ಇತ್ತು. ಈ ಒಪ್ಪಂದ ಒಂದು ಬಲಾಢ್ಯ ರಾಜ್ಯ ಹಾಗೂ ಒಂದು ಸಣ್ಣ ರಾಜ್ಯದ ನಡುವೆ ಆಗಿದ್ದು ಎಂಬುದನ್ನು ನೆನಪಿನಲ್ಲಿಡಬೇಕು. ಒಪ್ಪಂದವನ್ನು 50 ವರ್ಷಗಳ ನಂತರ ಪುನರ್ ಪರಿಶೀಲನೆಗೆ ಒಳಪಡಿಸಬಹುದು ಎಂಬ ಅಂಶ ಅದರಲ್ಲಿತ್ತು.

1970ರ ದಶಕದಲ್ಲಿ ಹಲವು ಬಾರಿ ಮಾತುಕತೆಗಳು ನಡೆದರೂ, ಕರ್ನಾಟಕ ಸರ್ಕಾರವು ವಿಶಾಲ ಮನೋಭಾವ ತೋರಿದರೂ, ತಮಿಳುನಾಡು ಮುಂದಿಡುತ್ತಿದ್ದ ಬೇಡಿಕೆಗಳು ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಸಿಗದಂತೆ ಮಾಡಿದವು. ಇದರಿಂದಾಗಿ ಎರಡನೆಯ ಸುತ್ತಿನ ನ್ಯಾಯಾಂಗ ಹೋರಾಟಕ್ಕೆ ದಾರಿಯಾಯಿತು. ನದಿ ನೀರಿನ ಹಂಚಿಕೆಗಾಗಿ ನ್ಯಾಯಮಂಡಳಿ ರಚಿಸಬೇಕು ಎಂದು ತಮಿಳುನಾಡು ಸರ್ಕಾರ, ಕೇಂದ್ರದ ಮೊರೆ ಹೋಯಿತು. ಆದರೆ, ಇದರಲ್ಲಿ ಕೈಹಾಕಲು ಕೇಂದ್ರಕ್ಕೆ ಮನಸ್ಸಿರಲಿಲ್ಲ.

ಈ ಸಂದರ್ಭದಲ್ಲಿ, ತಮಿಳುನಾಡಿನ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ನ್ಯಾಯಮಂಡಳಿ ರಚಿಸುವಂತೆ ಕೋರಿತು. ಇದನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ಅಂತರ್ ರಾಜ್ಯ ನದಿ ವಿವಾದ ಕಾಯ್ದೆ– 1966ರ ಸೆಕ್ಷನ್‌ 4ರಲ್ಲಿ ನೀಡಿರುವ ಅಧಿಕಾರ ಚಲಾಯಿಸಿ, ನ್ಯಾಯಮಂಡಳಿ ರಚಿಸುವಂತೆ ಕೇಂದ್ರಕ್ಕೆ ಸೂಚಿಸಿತು. ಇಂಥದ್ದೊಂದು ಅರ್ಜಿ ಸಲ್ಲಿಸಲು ತಮಿಳುನಾಡಿನ ಸಂಘಟನೆಯೊಂದಕ್ಕೆ ಯಾವ ಅರ್ಹತೆ ಇತ್ತು ಎಂಬುದು ಅನುಮಾನಾಸ್ಪದ.

ಇಂಥದ್ದೊಂದು ಅರ್ಜಿಯನ್ನು ತಮಿಳುನಾಡಿನ ಸಂಘಟನೆ ಸಲ್ಲಿಸಿರುವುದು ಎಷ್ಟು ಸರಿ, ಇದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಎಂಬ ತಕರಾರನ್ನು ಆ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ ಮುಂದಿಟ್ಟಿತ್ತು. ಆದರೆ, ಅದನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಲಿಲ್ಲ. ಯಾಕೆ ಪರಿಗಣಿಸಲಿಲ್ಲ ಎಂಬುದನ್ನು ಆ ಅರ್ಜಿಗೆ ಸಂಬಂಧಿಸಿದ ತೀರ್ಪಿನಲ್ಲಿ ಕೋರ್ಟ್‌ ವಿವರಿಸಿದೆ. ಅರ್ಜಿಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೌನವಾಗಿತ್ತು. ವಿಚಾರದ ಬಗ್ಗೆ ನ್ಯಾಯಾಲಯ ಸೂಕ್ತ ಆದೇಶ ನೀಡಲಿ ಎಂದು ಕಾಯುತ್ತಿತ್ತು.

ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಕೇಂದ್ರ ಸರ್ಕಾರವು 1990ರ ಜೂನ್‌ 2ರಂದು ನ್ಯಾಯಮಂಡಳಿ ರಚಿಸಿತು. ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳು, ‘1972ರ ಮೇ 31ರಂದು ಬಳಕೆ ಮಾಡುತ್ತಿದ್ದುದಕ್ಕಿಂತ ಹೆಚ್ಚಿನ ನೀರನ್ನು ಬಳಸುವಂತಿಲ್ಲ ಎಂಬ ಆದೇಶವನ್ನು ಕರ್ನಾಟಕ ಸರ್ಕಾರಕ್ಕೆ ನೀಡಬೇಕು’ ಎಂದು ನ್ಯಾಯಮಂಡಳಿಯನ್ನು ಕೋರಿದವು.

ನೀರಿನ ಬಳಕೆಗೆ ಸಂಬಂಧಿಸಿದ ಯಾವುದೇ ಹೊಸ ಯೋಜನೆಯನ್ನು ಆರಂಭಿಸದಂತೆ ಕರ್ನಾಟಕಕ್ಕೆ ಆದೇಶ ನೀಡಬೇಕು ಎಂದೂ ತಮಿಳುನಾಡು ಸರ್ಕಾರ ಕೋರಿತು.
1991ರ ಜೂನ್‌ 25ರಂದು ಮಧ್ಯಂತರ ಆದೇಶ ನೀಡಿದ ನ್ಯಾಯಮಂಡಳಿ, ಜೂನ್‌ನಿಂದ ಮೇ ನಡುವಿನ ಅವಧಿಯಲ್ಲಿ ಮೆಟ್ಟೂರು ಜಲಾಶಯದಲ್ಲಿ 205 ಟಿಎಂಸಿ ನೀರು ಇರುವಂತೆ ಕರ್ನಾಟಕ ಕ್ರಮ ಕೈಗೊಳ್ಳಬೇಕು, ತಮಿಳುನಾಡು ಸರ್ಕಾರವು ಪುದುಚೇರಿಗೆ 6 ಟಿಎಂಸಿ ನೀರು ಕೊಡಬೇಕು ಎಂದು ಸೂಚಿಸಿತು. ನೀರಾವರಿ ಪ್ರದೇಶವನ್ನು 11.20 ಲಕ್ಷ ಎಕರೆಗಿಂತ ಹೆಚ್ಚು ಮಾಡಬಾರದು ಎಂದು ನ್ಯಾಯಮಂಡಳಿ ಕರ್ನಾಟಕಕ್ಕೆ ನಿರ್ಬಂಧ ವಿಧಿಸಿತು.

ಇದರ ನಂತರ ಕರ್ನಾಟಕ ಸರ್ಕಾರವು, 1991ರಲ್ಲಿ ಕಾವೇರಿ ಜಲಾನಯನ ಸುಗ್ರೀವಾಜ್ಞೆಯನ್ನು ಹೊರಡಿಸಿತು. ಈ ಸುಗ್ರೀವಾಜ್ಞೆ ಎಷ್ಟರಮಟ್ಟಿಗೆ ಸಿಂಧು ಎಂಬುದನ್ನು ಪರಿಶೀಲಿಸುವಂತೆ ರಾಷ್ಟ್ರಪತಿ, ಸುಪ್ರೀಂ ಕೋರ್ಟ್‌ ಅನ್ನು ಕೇಳಿದರು. ಈ ಸುಗ್ರೀವಾಜ್ಞೆಯನ್ನು ಕರ್ನಾಟಕ ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿ ಮೀರಿ ಹೊರಡಿಸಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು. ನೀರಿನ ವಿಚಾರದಲ್ಲಿ ಕರ್ನಾಟಕವು ನಾಲ್ಕೂ ದಿಕ್ಕುಗಳಿಂದ ಒತ್ತಡ ಎದುರಿಸುತ್ತಿದೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರಗಳಿಂದ ಕರ್ನಾಟಕಕ್ಕೆ ಒತ್ತಡ ಇದೆ. ಈ ಎಲ್ಲ ರಾಜ್ಯಗಳ ಜೊತೆಯೂ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ವಿವಾದ ಇದೆ.

ಇದೇ ವೇಳೆ, ತನ್ನ ಪ್ರಜೆಗಳಿಗೆ ನೀರಾವರಿಗೆ ಬೇಕಿರುವ ನೀರು ಒದಗಿಸುವ ಸಮಸ್ಯೆಯನ್ನೂ ಕರ್ನಾಟಕ ಎದುರಿಸುತ್ತಿದೆ. ಈಚಿನ ದಿನಗಳಲ್ಲಿ ಮಳೆ ಕೂಡ ಚೆನ್ನಾಗಿ ಆಗುತ್ತಿಲ್ಲ. ಕರ್ನಾಟಕದ ರಾಜಧಾನಿಯು ಬೇರೆ ಕೆಲವು ರಾಜ್ಯಗಳಿಗೆ ಹತ್ತಿರದಲ್ಲಿರುವ ಕಾರಣ, ರಾಜಧಾನಿಯಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳು ವಲಸಿಗರ ಪಾಲಾಗುತ್ತಿರುವುದೂ ಇದೆ. ಕರ್ನಾಟಕದ ಕೆಲವು ಕೈಗಾರಿಕಾ ನಗರಗಳಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳ ಕತೆಯೂ ಇದೇ ಆಗಿದೆ.

ಕರ್ನಾಟಕದಲ್ಲಿ ಕೆಲವು ಉದ್ದಿಮೆಗಳು, ವಲಸಿಗರಿಂದಲೇ ತುಂಬಿಹೋಗಿವೆ. ಬೇರೆ ಆಯ್ಕೆಗಳಿಲ್ಲದ ಕನ್ನಡಿಗರಲ್ಲಿ ಇದು ಆತಂಕಕ್ಕೆ ಕಾರಣವಾಗುತ್ತದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವುದು, ತಮ್ಮಿಷ್ಟದ ಉದ್ಯೋಗಕ್ಕೆ ಸೇರಿಕೊಳ್ಳುವುದು ನಾಗರಿಕರ ಮೂಲಭೂತ ಹಕ್ಕು ಎಂಬುದು ನಿಜ. ವಲಸಿಗರಿಗೆ ಕರ್ನಾಟಕ ಸರ್ಕಾರ ರಕ್ಷಣೆ ಕೊಡಬೇಕು ಎಂಬುದೂ ಸತ್ಯ. ಬೇರೆಡೆಗಳಿಂದ ಕರ್ನಾಟಕಕ್ಕೆ ವಲಸೆ ಬಂದವರು ಹೆಚ್ಚು, ಇಲ್ಲಿಂದ ವಲಸೆ ಹೋದವರು ಕಡಿಮೆ ಎಂಬುದನ್ನು ಗಮನಿಸಬೇಕು. ನದಿ ಪಾತ್ರದ ಮೇಲ್ಭಾಗದಲ್ಲಿರುವ ಕರ್ನಾಟಕ, ತನ್ನ ಪ್ರಜೆಗಳ ಹಕ್ಕುಗಳನ್ನು ಕಾಯಬೇಕು.

ನ್ಯಾಯಮೂರ್ತಿ ಗ್ರಿಫ್ಫಿನ್ ಅವರು ನೀಡಿದ್ದ ಆದೇಶ ಕರ್ನಾಟಕಕ್ಕೆ ಅನುಕೂಲ ಆಗಿತ್ತು. ಆದರೆ, ಮದ್ರಾಸ್ ಸರ್ಕಾರದ ಒತ್ತಾಯದಿಂದಾಗಿ, ಬ್ರಿಟಿಷ್ ಸರ್ಕಾರ ಅದನ್ನು ಅಸಿಂಧುಗೊಳಿಸಿತು. ಅಂದಿನ ಬ್ರಿಟಿಷ್ ಸರ್ಕಾರದ ಕಾರ್ಯದರ್ಶಿಯು, ನ್ಯಾಯಸಮ್ಮತವಲ್ಲದ ಆದೇಶವನ್ನು ಸಣ್ಣ ಮೈಸೂರು ರಾಜ್ಯದ ಮೇಲೆ ಹೇರಿದ್ದರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರಿನ ಮೇಲೆ ತಮಿಳುನಾಡಿಗೆ ಪರಂಪರಾನುಗತ ಹಕ್ಕು ಇರಲಿಲ್ಲ.

ಪರಂಪರಾನುಗತ ಹಕ್ಕು ಇಲ್ಲದಿರುವಾಗ ತಮಿಳುನಾಡು ರಾಜ್ಯವು, ತನ್ನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಲು ಬಿಡಬಾರದಿತ್ತು. ತಮಿಳುನಾಡು ಒಪ್ಪಂದ ಮೀರಿ, ಕೃಷಿ ಜಮೀನು ವಿಸ್ತರಿಸಿದೆ ಎಂದು ಕಾವೇರಿ ನದಿ ನ್ಯಾಯಮಂಡಳಿ ಕೂಡ ಹೇಳಿದೆ. ಒಮ್ಮೆ ತಪ್ಪು ಮಾಡಿದವರಿಗೆ, ಇನ್ನೊಂದು ತಪ್ಪು ಮಾಡಿ, ಅದರ ಅಡಿ ಅವಿತುಕೊಳ್ಳಲು ಅವಕಾಶ ಕೊಡಬಾರದಿತ್ತು.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಸೋಮವಾರ ಆದೇಶ ನೀಡಿದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಯೊಬ್ಬರು ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪರ ವಾದಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂಥ ಸಂದರ್ಭಗಳು ಎದುರಾದಾಗ, ತಾನು ವಿಚಾರಣೆ ನಡೆಸಬೇಕೋ, ಬೇಡವೋ ಎಂಬುದನ್ನು ನ್ಯಾಯಮೂರ್ತಿಯೇ ನಿರ್ಧರಿಸಬೇಕು. ನ್ಯಾಯದಾನ ಮಾಡುವ ಜಾಗದಲ್ಲಿ ಇರುವ ವ್ಯಕ್ತಿ ಪೂರ್ವಗ್ರಹಗಳಿಂದ ಮುಕ್ತವಾಗಿರಬೇಕು.

ಕರ್ನಾಟಕದ ಜನರ ಮನಸ್ಸಿನಲ್ಲಿ ಮೂಡಬಹುದಾದ ಭಯವನ್ನು ಹೋಗಲಾಡಿಸುವ ಹೊಣೆ ಕೂಡ ಆ ನ್ಯಾಯಮೂರ್ತಿಯದ್ದೇ ಆಗಿರುತ್ತದೆ. ಇಂಥ ಪ್ರಕರಣಗಳು ಎದುರಾದಾಗ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದ ಉದಾಹರಣೆಗಳೂ ಇವೆ. ಈಗ ಕಾವೇರಿ ನೀರಿಗೆ ಸಂಬಂಧಿಸಿದ ಆದೇಶ ನೀಡಿರುವ ನ್ಯಾಯಪೀಠದ ನ್ಯಾಯಮೂರ್ತಿಯೊಬ್ಬರು ಹಾಗೆ ಮಾಡಲಿಲ್ಲ. ಅವರು ಈಗ ಕಾನೂನು ತಜ್ಞರು ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ವಸ್ತುವಾಗಿದ್ದಾರೆ.

ಪೂರ್ವಗ್ರಹಗಳನ್ನು ವ್ಯಾಖ್ಯಾನಿಸಲು ಆಗದು. ನ್ಯಾಯಪೀಠದಲ್ಲಿ ಕುಳಿತಿದ್ದವರು ತಮ್ಮ ಹಿತಾಸಕ್ತಿ ಏನಿತ್ತು ಎಂಬುದನ್ನು ಬಹಿರಂಗಪಡಿಸಲು ಅಗತ್ಯವಿರುವ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ನಡೆಸಬೇಕು. ನ್ಯಾಯದಾನ ಮಾಡುವುದು ಮಾತ್ರವಲ್ಲ, ನ್ಯಾಯದಾನ ಸರಿಯಾಗಿ ಆಗುತ್ತಿದೆ ಎಂಬುದು ಇನ್ನೊಬ್ಬರಿಗೆ ತಿಳಿಯುವಂತೆಯೂ ಆಗಬೇಕು.
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT