ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಸರ್ಕಾರ ಕಳೆದುಕೊಂಡ ಕಾಂಗ್ರೆಸ್‌

ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ ಸೇರಿದ ಶಾಸಕರು
Last Updated 16 ಸೆಪ್ಟೆಂಬರ್ 2016, 19:52 IST
ಅಕ್ಷರ ಗಾತ್ರ

ಇಟಾನಗರ: ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಶಾಸಕರು ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ (ಪಿಪಿಎ) ಸೇರಿದ್ದಾರೆ. ಇದರೊಂದಿಗೆ ಎರಡು ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ಆದೇಶದ ಮೂಲಕ ಮರಳಿ ಅಧಿಕಾರ ಪಡೆದಿದ್ದ ಕಾಂಗ್ರೆಸ್‌ ಈ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ.

ಖಂಡು ಅವರು 40ಕ್ಕೂ ಹೆಚ್ಚು ಶಾಸಕರ ಜತೆ ವಿಧಾನಸಭೆ ಸ್ಪೀಕರ್‌ ತೆನ್‌ಸಿಂಗ್‌ ನೊರ್ಬು ಥಾಂಗ್ಡಕ್‌ ಅವರನ್ನು ಭೇಟಿಯಾಗಿ ಪಕ್ಷಾಂತರದ ವಿಚಾರ ತಿಳಿಸಿದರು. ಈ ಶಾಸಕರು ಪಿಪಿಎ ಸೇರುವ ನಿರ್ಧಾರಕ್ಕೆ ಸ್ಪೀಕರ್‌ ಒಪ್ಪಿಗೆ ನೀಡಿದ್ದಾರೆ.

ಒಬ್ಬರನ್ನು ಹೊರತುಪಡಿಸಿ ಕಾಂಗ್ರೆಸ್‌ನ ಎಲ್ಲ ಶಾಸಕರೂ ಪಿಪಿಎ ಸೇರುವುದರೊಂದಿಗೆ ಆಡಳಿತ ಪಕ್ಷವೇ ಪಿಪಿಎ ಜತೆ ವಿಲೀನವಾದಂತಾಗಿದೆ. ಈ ರಾಜಕೀಯ ಬೆಳವಣಿಗೆಯಿಂದಾಗಿ ಈಶಾನ್ಯದಲ್ಲಿ ಮಣಿಪುರ, ಮೇಘಾಲಯ ಮತ್ತು ಮಿಜೊರಾಂನಲ್ಲಿ ಮಾತ್ರ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಉಳಿದಿದೆ.

ಖಂಡು ಅವರು ಎರಡು ತಿಂಗಳ ಹಿಂದೆ ಆಗಿನ ಮುಖ್ಯಮಂತ್ರಿ ನಬಾಂ ತುಕಿ ವಿರುದ್ಧ ಅಭಿಯಾನವನ್ನೇ ನಡೆಸಿದ್ದರು. ಅದರ ಪರಿಣಾಮವಾಗಿ ತುಕಿ ಅವರನ್ನು ಬದಲಾಯಿಸಿ ಆ ಸ್ಥಾನಕ್ಕೆ ಖಂಡು ಅವರನ್ನು ಕಾಂಗ್ರೆಸ್‌ ನೇಮಿಸಿತ್ತು.

ಜನವರಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ತುಕಿ ಅವರು ಅಧಿಕಾರ ಕಳೆದುಕೊಂಡಿದ್ದರು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ನಂತರ ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸಿ ಫೆಬ್ರುವರಿ 19ರಂದು ಕಲಿಕೊ ಪುಲ್‌ ಅವರು ಹೊಸ ಸರ್ಕಾರ ರಚಿಸಲು ಅವಕಾಶ ನೀಡಲಾಗಿತ್ತು.

ಜುಲೈ 13ರಂದು ಸುಪ್ರೀಂ ಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ಪುಲ್‌ ರಾಜೀನಾಮೆ ನೀಡಬೇಕಾಯಿತು. ನಂತರದ ಬೆಳವಣಿಗೆಯಲ್ಲಿ ಖಂಡು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
*
ಮುಖ್ಯಮಂತ್ರಿ ಸೇರಿ ಕಾಂಗ್ರೆಸ್‌ನ ಶಾಸಕರಿಗೆ ತಮ್ಮ ಪಕ್ಷದ ಕೇಂದ್ರ ನಾಯಕತ್ವದ ಮೇಲೆ ನಂಬಿಕೆ ಇಲ್ಲ. ಹಾಗಾಗಿಯೇ ಅವರು ಪ್ರಾದೇಶಿಕ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ.
-ಕಿರಣ್‌ ರಿಜಿಜು
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ
*
ಅರುಣಾಚಲದ ಜನ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಇಡೀ ಸರ್ಕಾರವೇ ಪಕ್ಷಾಂತರ ಮಾಡುವಂತೆ ತಂತ್ರ ರೂಪಿಸುವ ಅಧಿಕಾರ ಯಾರಿಗಿದೆ? ಪ್ರಧಾನಿ, ಬಿಜೆಪಿ ಅಧ್ಯಕ್ಷ ಇದಕ್ಕೆ ಹೊಣೆ.
ರಣದೀಪ್‌ ಸುರ್ಜೆವಾಲಾ
ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT