ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಲಾಸಂ @ ನಂಜನಗೂಡು: ಮರೆತ ಅಧ್ಯಾಯದ ನೆನಪು

Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕೆಲವು ತಿಂಗಳುಗಳ ಹಿಂದೆ ನನ್ನ ಸೋದರತ್ತೆಯವರ ಮಗಳು ನಿವೃತ್ತ ಪ್ರೊಫೆಸರ್ ಎನ್.ಎಸ್. ಶಾಂತಮ್ಮನವರನ್ನು ಭೇಟಿಯಾಗಿದ್ದೆ. ಎಂದಿನಂತೆ ನಾವಿಬ್ಬರೂ ನಮ್ಮ ಪ್ರೀತಿಪಾತ್ರರ ಬಗ್ಗೆ, ಕಳೆದುಹೋದ ಸಂತಸದ ದಿನಗಳ ನೆನೆದು ಸಂತೋಷದಿಂದ ಮಾತುಕತೆಯಾಡುತ್ತಿದ್ದಾಗ, ಇದ್ದಕ್ಕಿದ್ದ ಹಾಗೆ ಶಾಂತಮ್ಮನವರು ತಮ್ಮ ಮಗಳು ಪ್ರತಿಮಾಳಿಗೆ “ಆ ಸಿಗರೇಟ್ ಡಬ್ಬಿಯನ್ನು ತಾ” ಎಂದರು.

“ನಮಗ್ಯಾಕೆ ಸಿಗರೇಟ್ ಡಬ್ಬಿ’ ಎಂದು ಚಕಿತಳಾದೆ. ಪ್ರತಿಮಾ ತಂದದ್ದು ಒಂದು ಹಳೆಯ ಕಾಲದ ಚಚ್ಚೌಕನೆಯ “ಪಾಸಿಂಗೊ ಶೊ” ಸಿಗರೇಟ್ ಡಬ್ಬಿ. ಶಾಂತಮ್ಮ ‘ತೆರೆದು ನೋಡು’ ಎಂದು ನಕ್ಕರು.

ಡಬ್ಬಿ ತೆರೆದಾಗ ಒಳಗಿದ್ದ ಓಬಿರಾಯನ ಕಾಲದ ಪತ್ರಗಳು! ಅವು ಪ್ರಹಸನ ಪಿತಾಮಹ ಟಿ.ಪಿ. ಕೈಲಾಸಂ ಅವರು ಶಾಂತಮ್ಮನವರ ಚಿಕ್ಕಪ್ಪ ಶ್ರೀಕಂಠೂರವರಿಗೆ ಬರೆದಂತಹ ಪತ್ರಗಳಾಗಿದ್ದವು. ಅಚ್ಚರಿಯಿಂದ ಮೂಕಳಾದ ನನಗೆ ಬಾಲ್ಯದಲ್ಲಿ ಕೇಳಿದ್ದ ಕೈಲಾಸಂರ ‘ತಿಪ್ಪಾರಳ್ಳಿ ಬಲ್‍ದೂರ’, ‘ಕೋಳಿಕೆ ರಂಗಾ’ ಹಾಡುಗಳು ನೆನಪಾಗಿಬಿಟ್ಟವು !

ಆ ಪತ್ರಗಳು, ಪತ್ರಗಳಲ್ಲಿನ ಕೈಲಾಸಂ ಹಸ್ತಾಕ್ಷರಗಳಿಂದ ಧುತ್ತನೆ ಕೈಲಾಸಂ ನಮ್ಮೆದುರಿಗೆ ನಿಂತಂತಾಗಿ ಉಂಟಾದ ಬೆರಗು ಕುತೂಹಲವಾಗಿ, ಶಾಂತಮ್ಮನವರನ್ನು ‘ನೀವು ಕೈಲಾಸಂರನ್ನು ನೋಡಿದ್ರಾ’ ಎಂದು ಪ್ರಶ್ನಿಸಿದೆ.

‘ಕೈಲಾಸಂರನ್ನ ನೋಡೋದೇನು? ನಾನು ಚಿಕ್ಕವಳಿದ್ದಾಗ ಕೈಲಾಸಂ ನಂಜನಗೂಡಿನ ನಮ್ಮ ಮನೆಯಲ್ಲಿ ಆರು ತಿಂಗಳು ಠಿಕಾಣಿ ಹೂಡಿದ್ದರು. ಆಗ ಅವರನ್ನ ನಾನು ಸಾಕಷ್ಟು ನೋಡಿದ್ದೆ. ಅವರ ನಾಟಕಗಳಲ್ಲಿ ಪಾರ್ಟ್ ಸಹ ಮಾಡಿದ್ದೆ’ ಎಂದು ಶಾಂತಮ್ಮನವರು ಹೇಳಿದರು.

ನನಗೆ ಮತ್ತೂ ಅಚ್ಚರಿ! ಅಂತೂ ಆ ಸಿಗರೇಟ್ ಡಬ್ಬಿ, ಅದರೊಳಗಿನ ‘ಕೈ’ ಬರಹದ ಪತ್ರಗಳು ನನಗೆ ಸಿಕ್ಕಿದ್ದು ಗತಕಾಲದ ಒಂದು ಅಪೂರ್ವ ನಿಧಿ ದೊರಕಿದಂತಾಯ್ತು. ಸುಮಾರು ಎಂಬತ್ತು ವರ್ಷಗಳ ಹಿಂದಿನ ಆ ಪತ್ರಗಳು ಕೈಲಾಸಂರವರು ಶಾಂತಮ್ಮನವರ ಚಿಕ್ಕಪ್ಪ ಶ್ರೀಕಂಠೂರವರ ಆತಿಥ್ಯದಲ್ಲಿ ಆರು ತಿಂಗಳ ಕಾಲ ನಂಜನಗೂಡಿನಲ್ಲಿದ್ದು, ನಂತರ ಅವರ ಸ್ವಭಾವಕ್ಕೆ ತಕ್ಕಂತೆ ಸ್ಥಳಾಂತರವಾದ ಮೇಲೆ ಬರೆದಂತಹ ಪತ್ರಗಳು.

ನಂಜನಗೂಡಿನ ನನ್ನ ಸೋದರತ್ತೆಯವರ ಮನೆಗೆ ಕೈಲಾಸಂ ಹೇಗೆ ಆಗಮಿಸಿ, ತಂಗಿದರು ಎಂದು ಕುತೂಹಲದಿಂದ ಪ್ರಶ್ನಿಸಿದಾಗ, ಶಾಂತಮ್ಮನವರ ನೆನಪಿನ ಪುಟಗಳು ತೆರೆದುಕೊಂಡವು. ಶಾಂತಮ್ಮನವರ ಪ್ರಕಾರ ಎಚ್.ವೈ. ಶಾರದಾ ಪ್ರಸಾದ್ ಮತ್ತು ಸಿದ್ದಪ್ಪ ಎಂಬುವವರು ಆಗ ಮೈಸೂರಿಂದ ನಂಜನಗೂಡಿಗೆ ಆಗಾಗ್ಗೆ ಬರುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು.

ಇವರಿಬ್ಬರು ಮತ್ತು ಕೈಲಾಸಂರನ್ನು ಇಷ್ಟಪಡುತ್ತಿದ್ದ ಕೆಲವು ಹುಡುಗರು ಮನೆಮಠ ಬಿಟ್ಟು ಅಲೆಮಾರಿ ಜೀವನ ನಡೆಸುತ್ತಿದ್ದ ಕೈಲಾಸಂರವರನ್ನು ನಂಜನಗೂಡಿಗೆ ಕರೆತಂದಿರಬೇಕು. ನಂಜನಗೂಡಿನಲ್ಲಿ ಆಗ ಶಾಂತಮ್ಮನವರ ತಾತ ಸಾಹುಕಾರ್ ಪಾಪಣ್ಣನವರು ಪ್ರತಿಷ್ಠಿತ ವ್ಯಕ್ತಿಯಾಗಿದ್ದರು.

ಅವರು ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಪಾಪಣ್ಣನವರು ವಾಸವಿದ್ದ ಮನೆಯ ಪಕ್ಕದಲ್ಲೇ ಅವರದ್ದೇ ಇನ್ನೊಂದು ದೊಡ್ಡ ಮಹಡಿಮನೆ ಅತಿಥಿಗೃಹವಾಗಿತ್ತು. ಈ ಮನೆಯಲ್ಲಿ ನಾಟಕ ಆಡುವವರಿಗೆ, ನಂಜನಗೂಡಿನ ಜಾತ್ರೆಗೆ ಬರುವವರಿಗೆ ತಂಗಲು ಅವಕಾಶವಿತ್ತು. ಪಾಪಣ್ಣನವರ ಮನೆಯಲ್ಲಿ ಪ್ರತಿಷ್ಠಾಪಿತರಾದ ಕೈಲಾಸಂರ ಬೇಕುಬೇಡಗಳನ್ನು ನೋಡಿಕೊಂಡವರು ಶಾಂತಮ್ಮನವರ ಚಿಕ್ಕಪ್ಪನವರಾದ ಶ್ರೀಕಂಠಯ್ಯನವರು.

ಇವರು ಕೈಲಾಸಂ ಮೊದಲುಗೊಂಡು ಎಲ್ಲರಿಗೂ ‘ಶ್ರೀಕಂಠೂ’ ಆಗಿದ್ದರು. ಮುಂದೆ ಆರು ತಿಂಗಳುಗಳ ಕಾಲ ಆ ಮನೆ ಕೈಲಾಸಂ ಮತ್ತು ಅವರ ಸ್ನೇಹ ಬಳಗಕ್ಕೆ ರಂಗಸ್ಥಳವಾಯಿತು. ಶಾಂತಮ್ಮನವರು ಮತ್ತೂ ನೆನಪಿಸಿಕೊಂಡು ಹೇಳಿದ್ದು, ಅವರ ಮನೆಯ ಅತಿಥಿಗೃಹದ ಮಹಡಿಯ ಹಾಲ್‌ನಲ್ಲಿ ಕೈಲಾಸಂರ ವಾಸ್ತವ್ಯವಂತೆ, ಅವರ ಅವಶ್ಯಕತೆಗಳಿಗೆ ತಕ್ಕಂತೆ ನಡೆಯಲು ಶ್ರೀಕಂಠೂ ಇದ್ದರು.

ಪ್ರತಿರಾತ್ರಿ ಶಾಂತಮ್ಮನವರ ತಾಯಿ ಗೌರಮ್ಮನವರು ಒಂದು ದೊಡ್ಡ ಫ್ಲಾಸ್ಕ್ ತುಂಬಾ ಕಾಫಿ ತುಂಬಿಸಿಕೊಡುತ್ತಿದ್ದರಂತೆ. ಅದನ್ನು ಸೇವಿಸುತ್ತ ತಮ್ಮ ಪಟಾಲಂ ಜತೆ ಕೈಲಾಸಂ ಮಾತುಕತೆ, ನಾಟಕ ಹೇಳಿ ಬರೆಸುವುದು, ನಾಟಕ ಅಭ್ಯಾಸ ಮಾಡಿಸುವುದು ನಡೆಯುತ್ತಿತ್ತು.

ಒಂದು ಸ್ವಾರಸ್ಯಕರ ವಿಚಾರವೆಂದರೆ ಬಾಲಕಿ ಶಾಂತಮ್ಮ ಕೈಲಾಸಂರ ನಾಟಕ ‘ಹೋಂ ರೂಲ್’ನಲ್ಲಿ ಅಭಿನಯಿಸಿದ್ದು, ‘ಹೋಂ ರೂಲ್’ ನಾಟಕದಲ್ಲಿ ಶಾಂತಮ್ಮನವರಿಗೆ ಭಾರತಮಾತೆಯ ಪಾತ್ರ. ಭಾರತಮಾತೆ ಪಾತ್ರಧಾರಿ ಶಾಂತಮ್ಮ ಮಧ್ಯೆ ನಿಂತಿರುವಾಗ, ಎರಡೂ ಪಕ್ಕಗಳಲ್ಲಿ ಸರ್ವಧರ್ಮ ಸಮನ್ವಯದ ಸಂಕೇತವಾಗಿ ಪಾರ್ಸಿ, ಮುಸಲ್ಮಾನ್, ಹಿಂದೂ ವ್ಯಕ್ತಿಗಳು ನಿಂತು ಹಾಡುವುದು.

ಹೀಗೆ ಪ್ರತಿದಿನ ರಂಗ ತಾಲೀಮು, ತಮ್ಮ ಅಭಿಮಾನಿ ಕಿರಿಯ ಸ್ನೇಹಿತರಿಂದ ನಾಟಕಗಳನ್ನು ಹೇಳಿ ಬರೆಸುವುದು ನಡೆಯುತ್ತಿತ್ತು. ಇಂತಿರುವಾಗ ಒಂದು ಸಂಜೆ ಹುಡುಗಿ ಶಾಂತಮ್ಮ ಕೈಲಾಸಂ ಪಟಾಲಂಗೆ ಉಪ್ಪಿಟ್ಟಿನ ತಟ್ಟೆಗಳಿದ್ದ ‘ಟ್ರೇ’ಯನ್ನು ಹಿಡಿದು ಮಹಡಿಯ ಹಾಲ್‌ಗೆ ಬಂದಾಗ ಕೈಲಾಸಂ ಯಾವುದೋ ನಾಟಕದ ಪಾತ್ರವನ್ನು ಅಭಿನಯಿಸುತ್ತ ಕಣ್ಣರಳಿಸಿ, ಮುಖವನ್ನು ವಕ್ರವಾಗಿ ಮಾಡಿದರಂತೆ! ಕೈಲಾಸಂರ ಮುಖಚರ್ಯೆಯನ್ನು ನೋಡಿ ಗಾಬರಿಗೊಂಡ ಶಾಂತಮ್ಮ ಉಪ್ಪಿಟ್ಟಿನ ತಟ್ಟೆಗಳನ್ನು ಎತ್ತಿ ಹಾಕಿ ದಡದಡನೆ ಮೆಟ್ಟಿಲಿಳಿದು ಓಡಿಬಿಟ್ಟರಂತೆ!

ಕೈಲಾಸಂ ವಿಚಿತ್ರ ದಿನಚರಿಯ ಬಗ್ಗೆ ಅವರ ಅಭಿಮಾನಿ ಸ್ನೇಹಿತರು ಬರೆದಿರುವುದನ್ನೇ ಶಾಂತಮ್ಮ ಸಹ ಹೇಳಿದರು. ರಾತ್ರಿಯೆಲ್ಲಾ ಕಾಫಿ ಕುಡಿಯುತ್ತ ನಾಟಕ ಬರೆಸುವುದು, ನಾಟಕದ ರಿಹರ್ಸಲ್ ಮಾಡಿಸುತ್ತಿದ್ದ ಕೈಲಾಸಂ ಬೆಳಿಗ್ಗೆ ಆರರ ಹೊತ್ತಿಗೆ ನಿತ್ಯಕರ್ಮ ಮುಗಿಸಿ ಮಲಗುತ್ತಿದ್ದರು.

ನಾಟಕ ಬರೆದುಕೊಳ್ಳಲು ನಂಜನಗೂಡಿನವರೇ ಆದ ಇ.ಆರ್. ಸೇತೂರಾಮ್ ಮತ್ತು ಅವರ ಸಹೋದರ ಇ.ಆರ್. ಶ್ರೀಕಂಠಯ್ಯ ಬರುತ್ತಿದ್ದರಂತೆ. ಮುಂದೆ ಕೈಲಾಸಂ ಅವರನ್ನು ನಿಕಟವಾಗಿ ಕಂಡವರು, ಆಪ್ತರು ‘ಕೈ’ ಬಗ್ಗೆ ಅನೇಕ ಲೇಖನಗಳನ್ನು ಬರೆದರೂ ಕೈಲಾಸಂ ನಂಜನಗೂಡಿಗೆ ಚಿಕ್ಕ ಭೇಟಿ ಕೊಟ್ಟಿದ್ದನ್ನು ಉಲ್ಲೇಖಿಸಿದ್ದಾರೆಯೇ ಹೊರತು ಎಲ್ಲೂ ನಂಜನಗೂಡಿನ ಪಾಪಣ್ಣನವರ ಮನೆಯಲ್ಲಿ ಕೈಲಾಸಂ ವಾಸ್ತವ್ಯ ಮಾಡಿದ್ದು, ನಾಟಕ ಬರೆಸಿ, ಆಡಿಸಿದ್ದರ ಪ್ರಸ್ತಾಪವಿಲ್ಲದಿರುವುದು ಆಶ್ಚರ್ಯಕರ.

ಇರಲಿ, ಈ ಸಂಗತಿಯನ್ನು ಪಕ್ಕಕ್ಕೆ ಸರಿಸೋಣ. ಇಂದಿಗೂ ಸತ್ಯವಾಗಿ ನಮ್ಮೆದುರಿಗಿರುವ ಆ ಮಹತ್ವದ ಪ್ರಹಸನ ಪಿತಾಮಹನ ಪತ್ರಗಳು ಏನು ಹೇಳುತ್ತವೆ ಎಂಬುದನ್ನು ಕೊಂಚ ನೋಡೋಣ.

ಕೈಲಾಸಂ ನಂಜನಗೂಡನ್ನು ಬಿಟ್ಟ ನಂತರ ಶ್ರೀಕಂಠೂ ಅವರಿಗೆ ಬರೆದ ಪತ್ರಗಳ ಅವಧಿ 1935–1937. ಈ ಪತ್ರಗಳು ಕೈಲಾಸಂರ ವಿಕ್ಷಿಪ್ತತೆ, ಅಲೆಮಾರಿ ಜೀವನದ ಹಿಂದಿದ್ದ ಕೋಮಲ ಅಂತಃಕರಣ, ಮೃದು ಹಾಸ್ಯ, ತನ್ನನ್ನು ಪೋಷಿಸಿದವರ ಬಗ್ಗೆ ಕೈಲಾಸಂ ತೋರಿದ ಪ್ರೀತಿ, ಗೌರವಗಳನ್ನು ಸಾದರಪಡಿಸುತ್ತವೆ. ಅವರ ವ್ಯಕ್ತಿತ್ವದ ವಿಶೇಷತೆಯನ್ನು ಅನಾವರಣಗೊಳಿಸುವ ಕೆಲವು ಪತ್ರಗಳ ಸಾರಾಂಶವನ್ನು ಮುಂದೆ ನೋಡಬಹುದು.

ಕೈಲಾಸಂ ಶ್ರೀಕಂಠೂ ಅವರಿಗೆ ಬರೆದ ತಮ್ಮ 28.8.1935ರ ಪತ್ರದಲ್ಲಿ – ನಾನೊಂದು ತೊಡಕಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಅದು ನನ್ನನ್ನು ಸೆಪ್ಟೆಂಬರ್‌ವರೆಗೆ ಎಳೆಯಬಹುದು. ಅದರಿಂದ ನೀನು “ರಾಕ್ಷಸ ವಿಗ್, ಒಡವೆಗಳು ಮತ್ತು ಕರಿಸೀರೆಗಳನ್ನು ಕಳಿಸಿಕೊಡು.

‘So sorry dear Krishnappa did not as I learnt get thro. But then October is not far off! With respects to your parents and love to you all’’ ಎಂದು ಪತ್ರವನ್ನು ಮುಗಿಸಿದ್ದಾರೆ. ಪರೀಕ್ಷೆಯಲ್ಲಿ ನಪಾಸಾಗಿ ಕೈಲಾಸಂರಿಂದ ಚುಡಾಯಿಸಲ್ಪಟ್ಟ ಕೃಷ್ಣಪ್ಪ ಶ್ರೀಕಂಠೂ ಅವರ ಅಣ್ಣ. ಇವರು ಮುಂದೆ ‘ಲಾ’ ಕಾಲೇಜ್ ಪ್ರೊಫೆಸರ್ ಆದರು.

ಕೈಲಾಸಂ ತಮ್ಮ ಪ್ರತಿಯೊಂದು ಪತ್ರದಲ್ಲಿ ಶ್ರೀಕಂಠೂರವರ ತಂದೆತಾಯಿಯರಿಗೆ ಗೌರವ ಸೂಚಿಸಿ ಕಿರಿಯರ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ಕೈಲಾಸಂರು ನಾಟಕ ಬರೆದು, ಆಡಿಸುವುದರ ಜೊತೆಗೆ ತಾವೇ ಪಾತ್ರ ವಹಿಸುತ್ತಿರೆಂಬುದು ಕೆ.ವಿ. ಅಯ್ಯರ್‌ ಅವರ ಕೃತಿ ‘ಕೈಲಾಸಂ ಸ್ಮರಣೆ’ಯಲ್ಲಿ ನಿರೂಪಿತವಾಗಿದೆ.

‘ಭದ್ರಾಚಲ ರಾಮದಾಸ್’ ಎಂಬ ನಾಟಕದಲ್ಲಿ ಕೈಲಾಸಂ ಹೆಣ್ಣು ವೇಷ ಧರಿಸಿ ಒಂದು ತೆಲುಗು ಹಾಡು ಹಾಡುತ್ತ ಕುಣಿದಿದ್ದನ್ನು ಅಯ್ಯರ್‌ ದಾಖಲಿಸಿದ್ದಾರೆ. ಹೀಗಿರುವಾಗ ಕೈಲಾಸಂ – ಶ್ರೀಕಂಠೂ ಅವರನ್ನು ರಾಕ್ಷಸ ವಿಗ್, ಕರಿಸೀರೆಗಳನ್ನು ಕಳಿಸೆಂದು ಕೇಳಿರುವುದು ಯಾವುದೋ ಸ್ತ್ರೀ ಪಾತ್ರ ವಹಿಸಲು ಇರಬಹುದೆಂದು ಊಹಿಸಬಹುದು. ಇದೇ ರೀತಿ ಮತ್ತೊಂದು ಪತ್ರದಲ್ಲಿ ಸಲೀಂ ಎಂಬ ಸಂಚಾರಿ ನಟನ ಬಗ್ಗೆ ಕೈಲಾಸಂ ಹೇಳಿದ್ದಾರೆ.

ಸಲೀಂ ಊರೂರುಗಳಲ್ಲಿ ಶೇಕ್ಸ್‌ಪಿಯರ್‌ನ ನಾಟಕಗಳ ‘ಒನ್ ಮ್ಯಾನ್ ಶೋ’ ಕೊಡುವ ನಟನಾಗಿದ್ದ. ಇವನ ಜೊತೆ ನಾನು ನಾಟಕವಾಡುತ್ತ ಪ್ರವಾಸ ಮಾಡಬಹುದು ಎಂದು ಕೈಲಾಸಂ ಬರೆದಿದ್ದಾರೆ. ಇದೇನು ಕಾರ್ಯಗತವಾಯ್ತೋ ಇಲ್ಲವೋ ತಿಳಿಯದು.

ಕೈಲಾಸಂ ನಂಜನಗೂಡಿನಲ್ಲಿದ್ದಾಗ, ಅವರ ಸುತ್ತ ನಾಟಕ ಕೇಳುವ, ಬರೆಯುವ ಮತ್ತು ಅಭಿನಯಿಸುವ ಒಂದು ಸ್ನೇಹಿತರ ವಲಯವೇ ಇದ್ದದ್ದು ಸರಿಯಷ್ಟೆ. ಬೆಂಗಳೂರಿನಲ್ಲಿ ಅವರು ಕೆ.ವಿ.ಅಯ್ಯರ್ ಜೊತೆ ಇದ್ದಾಗ, 28.5.1935ರಲ್ಲಿ ಈ ಸ್ನೇಹಿತರ ಗುಂಪನ್ನೂ, ಶ್ರೀಕಂಠೂ ಅವರ ಮನೆಯವರನ್ನೂ ಸ್ಮರಿಸಿ ಬರೆದ ಪತ್ರ ಹೀಗೆ ಕೊನೆಗೊಳ್ಳುತ್ತದೆ.

‘All my love to self. Gadaf Khan Nagu and all the boys of the ಶ್ರೀಕಂಠೂ ಪ್ರಸಾದ Company’.  ‘ಕೈ’ ಅವರ ಪತ್ರದಲ್ಲಿ ಕೈಲಾಸಂ ಒಲುಮೆಯನ್ನು ಪಡೆದ ಈ ಗಡಫ್ ಖಾನ್ ಯಾರು? ಎಂದು ಶಾಂತಮ್ಮನವರನ್ನು ಪ್ರಶ್ನಿಸಿದೆ.

ಅವರು, ‘ನಮ್ಮ ಶಾಮೂನೇ ಆ ಗಡಫ್ ಖಾನ್’ ಎಂದು ನಕ್ಕರು. ಶಾಂತಮ್ಮನವರ ಚಿಕ್ಕಪ್ಪ ಪ್ರೊ. ಕೃಷ್ಣಪ್ಪನವರ ಮಗ ಪಿ.ಕೆ. ಶಾಮಸುಂದರ್ ಕೈಲಾಸಂ ನಂಜನಗೂಡಿನಲ್ಲಿದ್ದಾಗ ಆಗಿನ್ನೂ ಮಗು. ಇವರು ಮುಂದೆ ಹೈಕೋರ್ಟ್ ನ್ಯಾಯಾಧೀಶರಾದರು ಮತ್ತು ದೆಹಲಿಯಲ್ಲಿ ಸೆಂಟ್ರಲ್ ಬ್ಯಾಕ್‌ವರ್ಡ್ ಕಮಿಷನ್ ಅಧ್ಯಕ್ಷ ಪೀಠವನ್ನು ಅಲಂಕರಿಸಿದರು.

ಗಡಫ್‌ಖಾನ್ ಎನ್ನುವುದು ಕೈಲಾಸಂರ ‘ತಾವರೆಕೆರೆ’ ಎಂಬ ಏಕೈಕ ಕಥಾಸಂಕಲನದಲ್ಲಿ ‘ಕೈ’ ಚಿತ್ರಿಸಿರುವ ಒಂದು ಕತೆ ಹೇಳುವ ಪಾತ್ರ. ತಮ್ಮನ್ನು ಆದರಿಸಿ, ಯೋಗಕ್ಷೇಮ ನೋಡಿಕೊಂಡ ನಂಜನಗೂಡಿನ ಪಾಪಣ್ಣನವರ ಮೊಮ್ಮಗನಿಗೆ ಕೈಲಾಸಂ ಕೊಟ್ಟ ಮುದ್ದಿನ ಹೆಸರು ಗಡಫ್‌ಖಾನ್!

ಇದೇ ಪತ್ರದಲ್ಲಿ ‘ನಾಗು’ ಎಂಬ ಹೆಸರು ಪ್ರಸ್ತಾಪವಾಗಿದೆ. ನಾಗು ಶಾಂತಮ್ಮನವರ ಅತ್ಯಂತ ಸಮೀಪದ ಬಂಧು. ನನ್ನ ಸೋದರತ್ತೆ ಹೇಳಿದ ಒಂದು ಪ್ರಸಂಗ ನೆನಪಾಗುತ್ತಿದೆ. ಕೈಲಾಸಂ ನಂಜನಗೂಡಿನಲ್ಲಿದ್ದಾಗ ಒಂದು ದಿನ ಬೆಳಗಿನ ಕೆಲಸಗಳಿಗಾಗಿ ಮಹಡಿ ಇಳಿದು ಬಂದಾಗ, ನಾಗು ಮತ್ತು ಮೀನಾಕ್ಷಿ ಸೋದರಿಯರು ಹಿತ್ತಲಿನ ಅಂಗಳದಲ್ಲಿದ್ದರಂತೆ.

ಮೀನಾಕ್ಷಿಯ ಮುಖ ನೋಡಿ ಕೈಲಾಸಂ ಗಳಗಳನೆ ಅತ್ತುಬಿಟ್ಟರಂತೆ. ಶ್ರೀಕಂಠೂ ಮೆಲ್ಲಗೆ ‘ಏಕೆ ಕಣ್ಣೀರು’ ಎಂದು ವಿಚಾರಿಸಲಾಗಿ, ಕೈಲಾಸಂ ‘ನನ್ನ ಮಗಳು’ ಎಂದು ಮೌನವಾದರಂತೆ. ವಿಕ್ಷಿಪ್ತ ವ್ಯಕ್ತಿತ್ವ, ವಿಲಕ್ಷಣ ನಡವಳಿಕೆಗಳಿಂದ ಕೂಡಿ ರೂಢಿಗೆ ಹೊರತಾದ ಬಾಳನ್ನು ಬದುಕಿದ ಕೈಲಾಸಂ ಎಂಬ ವ್ಯಕ್ತಿಯ ಅಂತರಂಗದೊಳಗಿದ್ದ ಒಂದು ಅತೀವ ಕೋಮಲತೆ, ಅದರಾಳದಲ್ಲಿ ಅಡಗಿದ್ದ ದುಃಖದ ಮಡುವು ಇದರಿಂದ ನಮಗೆ ಅರಿವಾಗುತ್ತದೆ.

ಇನ್ನೊಂದು ಮುಖ್ಯವಾದ ಪತ್ರ ಎಂದರೆ 3.1.1936ರಲ್ಲಿ ಕೈಲಾಸಂ ಶ್ರೀಕಂಠೂರವರಿಗೆ ಬೆಂಗಳೂರಿಂದ ಬರೆದದ್ದು. ಇದನ್ನು ಅವರು ಕೆ.ವಿ. ಅಯ್ಯರ್‌ ಅವರೊಡನೆ ಇದ್ದಾಗ ಬರೆದು – “ಈಗಷ್ಟೆ ನಾನು ‘ಕರ್ಣ’ ಎಂಬ 5 ಆಕ್ಟ್‌ಗಳ ನಾಟಕವನ್ನು ಬರೆದು ಮುಗಿಸಿದ್ದೇನೆ. It is far ahead of purpose and fulfillment ಎಂದು ತಿಳಿಸಿದ್ದಾರೆ”. ಕರ್ಣ ನಾಟಕದ ಬಗ್ಗೆ ಕೆ.ವಿ. ಅಯ್ಯರ್‌ ತಮ್ಮ

‘ಶ್ರೀ ಕೈಲಾಸಂ ಸ್ಮರಣೆ’ ಗ್ರಂಥದಲ್ಲಿ ಹೇಳಿರುವ ಹೃದಯಂಗಮ, ರೋಮಾಂಚಕ ಸನ್ನಿವೇಶವನ್ನು ಇಲ್ಲಿ ನೆನೆಯಬಹುದು. “ಡಿಸೆಂಬರ್ ತಿಂಗಳಿನ ಒಂದು ಗದಗುಡುವ ಚಳಿರಾತ್ರಿ, ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ಬೆಂಗಳೂರಿನ ಕಂಟೋನ್‌ಮೆಂಟ್‌ನ ಬಿ.ಆರ್.ವಿ. ಥಿಯೇಟರ್‌ನಲ್ಲಿ ಒಂದು ಇಂಗ್ಲಿಷ್ ನಾಟಕ ನೋಡಿ ಹಿಂತಿರುಗುವಾಗ, ‘Now I have a great idea. This Karna is to be a big drama by kailasam’ ಎನ್ನುತ್ತ ನನ್ನನ್ನು ಆ ರೋಡಿನ ಕೊನೆಯಲ್ಲಿ ನಿಲ್ಲಿಸಿಕೊಂಡು ಅವರಿಗೆ ಆಗ ತಾನೆ ಹೊಳೆದಿದ್ದ ಕರ್ಣನ ಕತೆಯನ್ನು ಕೈಲಾಸಂ ಮಾತ್ರ ಹೇಳಬಲ್ಲ ರೀತಿಯಲ್ಲಿ ಅಮೋಘವಾಗಿ ಅದ್ಭುತವಾಗಿ ಹೇಳಿದರು.

ಕೇಳುತ್ತ ಕೇಳುತ್ತಾ ನನಗೆ ಮೈಮೇಲಿನ ಸ್ಮರಣೆಯೇ ತಪ್ಪಿತು. ನಾನೂ ಕುರುಕ್ಷೇತ್ರದಲ್ಲಿ ದೂರ ಸಾಕ್ಷಿಯಾಗಿ ನಿಂತು, ಕರ್ಣ, ಕುಂತಿ ಇವರ ಸಂವಾದವನ್ನು ಕಿವಿಯಾರೆ ಕೇಳುತ್ತಿರುವೆನೆಂದೇ ಅನ್ನಿಸಿತು. ನಿಂತಿದ್ದ ಸ್ಥಳ, ಹೊರಗಿನ ಚಳಿ ಒಂದೂ ಲಕ್ಷ್ಯಕ್ಕೆ ಬರಲೇ ಇಲ್ಲ’’. ನಾಟಕದ ಕಲ್ಪನೆ ಮನಸ್ಸಿಗೆ ಬಂದಾಗ ಕೆ.ವಿ. ಅಯ್ಯರ್ ಕಣ್ಮುಂದೆ ಅದ್ಭುತವಾಗಿ ಕುರುಕ್ಷೇತ್ರ ನಿರ್ಮಿಸಿದ ಕೈಲಾಸಂ ಅಷ್ಟೇ ಆಸ್ಥೆಯಿಂದ ಕರ್ಣ ನಾಟಕವನ್ನು ಬರೆದು ಮುಗಿಸಿದಾಗ ಶ್ರೀಕಂಠೂ ಅವರಿಗೆ ಪತ್ರ ಮುಖೇನ ತಿಳಿಸಿದ್ದಾರೆ.

ಎಲ್ಲವೂ ಇದ್ದೂ ಇಲ್ಲದಂತಿದ್ದವರು ಕೈಲಾಸಂ. ಡಿ.ವಿ.ಜಿ.ಯವರು ಕೈಲಾಸಂ ಬಗ್ಗೆ ‘‘ಆತನದ್ದು ಸ್ವಸಹಾಯ ಶೂನ್ಯ ಚೈತನ್ಯ. ಅಯ್ಯರ್ ಅಂತಹವರು ಕೈಲಾಸಂರ ಪಾಲನೆ, ಪೋಷಣೆ ಮಾಡದಿದ್ದರೆ, ಅದು ಎಲ್ಲೆಲ್ಲಿ ಅಲೆದು, ಸವೆದು ಅವತಾರ ಮುಗಿಸಿಕೊಳ್ಳುತ್ತಿತ್ತೊ’’ ಎಂದಿದ್ದಾರೆ.

ಇದೇ ಮಾತು ಕನ್ನಡದ ಮಹತ್ವದ ನಾಟಕಕಾರನನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಅವರ ಎಲ್ಲ ಅವಶ್ಯಕತೆಗಳನ್ನು ನೋಡಿಕೊಂಡ ನಂಜನಗೂಡಿನ ಪಾಪಣ್ಣನವರ ಮನೆಯವರಿಗೂ ಸಲ್ಲುತ್ತದೆ. ಕನ್ನಡದ ಮಹತ್ವದ ನಾಟಕಕಾರನನ್ನು ನಂಜನಗೂಡಿನ ಪಾಪಣ್ಣನವರ ಮನೆತನದವರು ಸಲಹಿದ್ದು ಹೆಮ್ಮೆಯ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT