ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಹಂತದಲ್ಲಿ ‘ಕ್ಯಾಸಿನಿ’ ಯಾತ್ರೆ

Last Updated 19 ಸೆಪ್ಟೆಂಬರ್ 2016, 21:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹನ್ನೆರಡು ವರ್ಷಗಳಿಂದ ಶನಿಗ್ರಹ, ಅದರ ಸುತ್ತಲಿನ ಉಂಗುರಗಳು ಮತ್ತು ಉಪಗ್ರಹಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ನಾಸಾ ನಿರ್ಮಿತ ‘ಕ್ಯಾಸಿನಿ’ ನೌಕೆಯು ತನ್ನ ಯಾತ್ರೆಯ ಅಂತಿಮ ಹಂತಕ್ಕೆ ತಲುಪಿದೆ.

2017ರ ಸೆಪ್ಟೆಂಬರ್‌ ತಿಂಗಳಲ್ಲಿ ನೌಕೆಯು ತನ್ನ ಐತಿಹಾಸಿಕ ಯಾತ್ರೆಗೆ ಮಂಗಳಹಾಡುವ ಸಾಧ್ಯತೆ ಇದೆ. ಅದಕ್ಕೂ ಮೊದಲಿನ ಒಂದು ವರ್ಷದ ಅವಧಿಯಲ್ಲಿ  ನೌಕೆಯು ಶನಿಗ್ರಹದ ಇನ್ನಷ್ಟು ಸನಿಹಕ್ಕೆ ತೆರಳಿ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲಿದೆ. ಈ ಅವಧಿಯಲ್ಲಿ ಅದು ಮಹತ್ವದ ಎರಡು ಕಾರ್ಯಗಳನ್ನು ನಿಭಾಯಿಸಲಿದೆ.

ಉಂಗುರದ ಅಧ್ಯಯನ: ಈ ವರ್ಷದ ನವೆಂಬರ್‌ 30ರಂದು ನೌಕೆಯು ಈಗಿನ ಕಕ್ಷೆಯಿಂದ ಶನಿಗ್ರಹದ ಪ್ರಮುಖ ಉಂಗುರಗಳ ಹೊರಭಾಗದ ಕಕ್ಷೆಗೆ ವರ್ಗಾವಣೆ ಹೊಂದಲಿದೆ.  20 ಸರಣಿಗಳ ಈ ಕಕ್ಷೆಯನ್ನು ಎಫ್‌ –ಉಂಗುರ ಕಕ್ಷೆ ಎಂದು ಕರೆಯಲಾಗಿದೆ.

ಈ ಕಕ್ಷೆಯಲ್ಲಿ ಸುತ್ತು ಹಾಕುವ ಸಂದರ್ಭದಲ್ಲಿ ನೌಕೆಯು ಶನಿಗ್ರಹದ   ವಿಲಕ್ಷಣ ಸರಪಣಿ ಮತ್ತು ಹೆಣಿಕೆ ರಚನೆ ಹೊಂದಿರುವ ಎಫ್‌–ಉಂಗುರದ ಕೇಂದ್ರದಿಂದ 7,800 ಕಿ.ಮೀ ದೂರದಲ್ಲಿ ಹಾದುಹೋಗಲಿದೆ ಎಂದು ನಾಸಾ ಹೇಳಿದೆ.

**
ಕೊನೆಯ ಹಂತ

ಕ್ಯಾಸಿನಿ ನೌಕೆಯು ತನ್ನ ಸೇವೆಯನ್ನು ಸ್ಥಗಿತಗೊಳಿಸುವುದಕ್ಕೂ ಕೆಲವೇ ತಿಂಗಳುಗಳ ಮುನ್ನ ಮತ್ತೊಂದು ಮಹತ್ವದ ಸಾಧನೆ ಮಾಡಲಿದೆ. ಈ ಹಂತವನ್ನು ನಾಸಾ ವಿಜ್ಞಾನಿಗಳು ‘ಗ್ರ್ಯಾಂಡ್‌ ಫಿನಾಲೆ’ ಎಂದು ಕರೆದಿದ್ದಾರೆ.

ಮುಂದಿನ ವರ್ಷದ ಏಪ್ರಿಲ್‌ನಿಂದ ಈ ಹಂತ ಆರಂಭವಾಗಲಿದೆ. ಕ್ಯಾಸಿನಿಯು ಶನಿಗ್ರಹದ ಅತ್ಯಂತ ದೊಡ್ಡ ಉಪಗ್ರಹ ಟೈಟಾನ್‌ನ ಸಮೀಪ ಹೋಗುತ್ತದೆ. ಆಗ  ಉಪಗ್ರಹವು ನೌಕೆಯ ಕಕ್ಷೆಗೆ ಹೊಸ ರೂಪಕೊಡಲಿದೆ.

ಇದರಿಂದಾಗಿ ಕ್ಯಾಸಿನಿಯು ಉಂಗುರಗಳ ಹಾಗೂ ಶನಿಗ್ರಹದ ನಡುವೆ ಹಾದುಹೋಗಲಿದೆ (ಉಂಗುರ ಮತ್ತು ಗ್ರಹದ ನಡುವಣ ಅಂತರ 2,400 ಕಿ.ಮೀ).
ನೌಕೆಯು 22 ಬಾರಿ ಈ ಅಂತರದಲ್ಲಿ ಹಾದು ಹೋಗುವ ನಿರೀಕ್ಷೆ ಇದೆ. 2017ರ ಏಪ್ರಿಲ್‌ 27ರಂದು ಮೊದಲ ಸಲ ಕ್ಯಾಸಿನಿಯು  ಶನಿಗ್ರಹ ಮತ್ತು ಉಂಗುರಗಳ ಮಧ್ಯೆ ಸಂಚರಿಸಲಿದೆ.

**
ಅಂತಿಮ ಹಂತದಲ್ಲಿ ನೌಕೆ ಮಾಡುವುದೇನು?

ಈ ಸಮಯದಲ್ಲಿ ನೌಕೆಯು ಅತ್ಯಂತ ಸನಿಹದಿಂದ ಶನಿಗ್ರಹದ ಅಧ್ಯಯನ ನಡೆಸಲಿದೆ. ಗ್ರಹದ ಕಾಂತ ಮತ್ತು ಗುರುತ್ವಾಕರ್ಷಣೆ ಕ್ಷೇತ್ರವನ್ನು ಅಳೆಯಲಿದೆ. ಅಲ್ಲದೇ ಗ್ರಹದ ವಾತಾವರಣಕ್ಕೆ ಸಂಬಂಧಿಸಿದ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕಲಿದೆ.

ಶನಿಗ್ರಹದ ಒಳ ರಚನೆ, ಉಂಗುರಗಳ ಒಟ್ಟು ದ್ರವ್ಯರಾಶಿಯ ಬಗ್ಗೆ ಹೆಚ್ಚಿನ ಒಳನೋಟ ನೀಡಲಿದೆ ಎಂಬುದು ವಿಜ್ಞಾನಿಗಳ ನಿರೀಕ್ಷೆ. ಅಂತಿಮವಾಗಿ ಇದರಿಂದ ಉಂಗುರಗಳ ವಯಸ್ಸನ್ನು ಲೆಕ್ಕಹಾಕಬಹುದು ಎಂಬುದು ಅವರ ಲೆಕ್ಕಾಚಾರ.

ಇದರ ಜೊತೆಗೆ, ಪ್ರಮುಖ ಉಂಗುರಗಳಲ್ಲಿರುವ  ದೂಳಿನ ಗಾತ್ರದ ಕಣಗಳು, ಶನಿಗ್ರಹದ ಹೊರ ವಾತಾವರಣದ ಮಾದರಿಗಳ ವಿಶ್ಲೇಷಣೆಯನ್ನೂ ಮಾಡಲಿದೆ.

**
ಕ್ಯಾಸಿನಿ ಜೊತೆ ಹ್ಯುಜೆನ್ಸ್‌...

‘ಕ್ಯಾಸಿನಿ’ ನೌಕೆಯೊಂದಿಗೆ ಹ್ಯುಜೆನ್ಸ್‌ ಎಂಬ ಮತ್ತೊಂದು ನೌಕೆಯನ್ನು ಅಳವಡಿಸಲಾಗಿತ್ತು. ಕ್ಯಾಸಿನಿ ಶನಿಗ್ರಹದ ಅಧ್ಯಯನ ನಡೆಸಿದರೆ, ಹ್ಯುಜೆನ್ಸ್‌ಗೆ ಶನಿಗ್ರಹದ ದೊಡ್ಡ ಉಪಗ್ರಹ ಟೈಟಾನ್‌ನ ಅಧ್ಯಯನದ ಹೊಣೆ ಹೊರಿಸಲಾಗಿತ್ತು.

*
1997, ಅಕ್ಟೋಬರ್‌ 15

ಕ್ಯಾಸಿನಿ ಮತ್ತು ಹ್ಯುಜೆನ್ಸ್‌ ನೌಕೆಯ ಉಡಾವಣೆ

2004, ಜುಲೈ 1
ಶನಿಗ್ರಹದ ಕಕ್ಷೆ ಪ್ರವೇಶಿಸಿದ ನೌಕೆ

2004, ಡಿಸೆಂಬರ್‌ 24
ಕ್ಯಾಸಿನಿಯಿಂದ ಬೇರ್ಪಟ್ಟ ಹ್ಯುಜೆನ್ಸ್‌

2005,ಜನವರಿ 14
ಮೂರು ವಾರಗಳ ಪ್ರಯಾಣದ ನಂತರ ಟೈಟಾನ್‌ನಲ್ಲಿ ಯಶಸ್ವಿಯಾಗಿ ಇಳಿದ  ಹ್ಯುಜೆನ್ಸ್‌

2008, ಜೂನ್‌ 1
ಶನಿಗ್ರಹದ ಪ್ರಾಥಮಿಕ ಅಧ್ಯಯನ ಮುಕ್ತಾಯಗೊಳಿಸಿದ ಕ್ಯಾಸಿನಿ

2010, ಫೆಬ್ರುವರಿ 3
‘ಕ್ಯಾಸಿನಿ–ಹ್ಯುಜೆನ್ಸ್‌’ ಯೋಜನೆಯನ್ನು 2017ರವರೆಗೆ ವಿಸ್ತರಿಸಿದ ನಾಸಾ

2017 ಸೆಪ್ಟೆಂಬರ್‌
ಅಧ್ಯಯನ ಸ್ಥಗಿತಗೊಳಿಸಲಿರುವ ಕ್ಯಾಸಿನಿಯು ಶನಿಗ್ರಹಕ್ಕೆ ಅಪ್ಪಳಿಸಲಿದೆ. ಶನಿಗ್ರಹದ ಬಗ್ಗೆ ನೌಕೆಯು ಅದುವರೆಗೆ ಕಲೆ ಹಾಕಿರುವ ಮಾಹಿತಿಗಳು, ಸಂಕೇತ ಲಭ್ಯವಿರುವವರೆಗೆ ಅದಕ್ಕೂ ಮುನ್ನ ಭೂಮಿಗೆ ರವಾನೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT