ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಗುಟ್ಟು ಪರಿಶ್ರಮ

Last Updated 21 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ವರ್ಕ್‌ ಜಿಪ್ಪಿ ತಂಡ
ದೆಹಲಿ ಮೂಲದ ಜಸ್ಪಾಲ್ ಸಿಂಗ್ ಮತ್ತು ಜಸ್‌ಪ್ರೀತ್ ಸಿಂಗ್ ಅವರ ಸಾಧನೆಯ ಕಥೆ ಇದು. ಜಸ್ಪಾಲ್ ಮತ್ತು ಜಸ್‌ಪ್ರೀತ್ ಇಬ್ಬರೂ ಬಾಲ್ಯದ ಗೆಳೆಯರು. ಪಿಯುಸಿ ಬಳಿಕ ಜಸ್‌ಪ್ರೀತ್ ವಾಣಿಜ್ಯ ಕೋರ್ಸ್‌ನತ್ತ ಮುಖ ಮಾಡಿದರೆ, ಜಸ್ಪಾಲ್ ಎಂಜಿನಿಯರಿಂಗ್ ಪದವಿಗೆ ಸೇರಿದರು. ಐಟಿ ಪದವಿ ಪಡೆದು ಜಸ್ಪಾಲ್ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡರು. ಇತ್ತ ಜಸ್‌ಪ್ರೀತ್ ಎಂಬಿಎ ಪದವಿ ಪಡೆದು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸಣ್ಣದೊಂದು ಕಂಪೆನಿ ನಡೆಸುತ್ತಿದ್ದರು.

ಹತ್ತು ವರ್ಷಗಳ ಬಳಿಕ ಜಸ್ಪಾಲ್ ಮತ್ತು ಜಸ್‌ಪ್ರೀತ್ ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದರು. ಇತ್ತ ಜಸ್ಪಾಲ್‌ಗೆ ಮನೆಯವರನ್ನು ಬಿಟ್ಟು ಸಿಲಿಕಾನ್ ಸಿಟಿಯಲ್ಲಿ ಏಕಾಂಗಿಯಾಗಿ ಬದುಕುವುದು ಇಷ್ಟವಿರಲಿಲ್ಲ! ಸಾಧ್ಯವಾದಷ್ಟು ಬೇಗ ದೆಹಲಿ ಸೇರಬೇಕು ಎಂದು ಅಂದುಕೊಂಡಿರುವುದಾಗಿ ಗೆಳೆಯ ಜಸ್‌ಪ್ರೀತ್ ಬಳಿ ಹೇಳಿಕೊಂಡಿದ್ದರು.

ನಂತರದ ದಿನಗಳಲ್ಲಿ ಜಸ್‌ಪ್ರೀತ್, ತಾನು ನಡೆಸುತ್ತಿರುವ ಟ್ಯಾಕ್ಸ್‌ಜಿಪ್ಪಿ ಕಂಪೆನಿಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ತಾಂತ್ರಿಕ ಸಲಹೆ ನೀಡುವಂತೆ ಜಸ್ಪಾಲ್ ಅವರಲ್ಲಿ ಕೇಳಿಕೊಂಡಿದ್ದರು. ಬೆಂಗಳೂರು ತೊರೆದು ದೆಹಲಿಗೆ ಆಗಮಿಸಿದ್ದ ಜಸ್ಪಾಲ್ ಟ್ಯಾಕ್ಸ್‌ ಜಿಪ್ಪಿಗೆ ಹೊಸತನ ಕೊಟ್ಟರು.

ಕೇವಲ ಟ್ಯಾಕ್ಸ್ ಸೇವೆಗೆ ಸೀಮಿತವಾಗಿದ್ದ ಕಂಪೆನಿಯನ್ನು ವಿಸ್ತರಿಸಲು ಮುಂದಾದರು. ಅದಕ್ಕೆ ವರ್ಕ್‌ ಜಿಪ್ಪಿ ಎಂಬ ಹೆಸರು ನೀಡಿದರು. ತೆರಿಗೆ, ಎಚ್‌ಆರ್ ಮ್ಯಾನೇಜ್‌ಮೆಂಟ್ ಮತ್ತು ಅಕೌಂಟ್ ಬಳಕೆ ಸೇವೆ ನೀಡಲು ಆರಂಭಿಸಿದರು. ಹೀಗೆ ಆರಂಭವಾದ ಈ ಸ್ಟಾರ್ಟ್‌ಅಪ್ ಇಂದು ಮಾಸಿಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ.

200ಕ್ಕೂ ಹೆಚ್ಚು ಕಂಪೆನಿಗಳಿಗೆ ಅಕೌಂಟ್, ತೆರಿಗೆ ಮತ್ತು ಎಚ್‌ಆರ್ ಮ್ಯಾನೇಜ್‌ಮೆಂಟ್ ಸೇವೆಯನ್ನು ಆನ್‌ಲೈನ್‌ನಲ್ಲೇ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆ್ಯಪ್ ಮೂಲಕ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಜಸ್ಪಾಲ್ ಸಿಂಗ್. www.workzippy.com

*
ಓಯ್ ಹೆಲ್ಪ್ ತಂಡ
ತಂತ್ರಜ್ಞಾನ ಬಳಕೆಯಿಂದಾಗಿ ಆರೋಗ್ಯ ಕ್ಷೇತ್ರ ಮತ್ತಷ್ಟು ವೇಗ ಪಡೆದುಕೊಳ್ಳುತ್ತಿದೆ. ಈ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿರುವುದರಿಂದ ಯುವ ಜನರು ನೂತನ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ಮುಂದಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಮೂಲದ ಯುವತಿ ಆಕಾಂಕ್ಷಾ ಅಗರ್‌ವಾಲ್ ಗೆಳತಿಯರ ಜತೆಗೂಡಿ ಓಯ್‌ಹೆಲ್ಪ್ (oyehelp) ಎಂಬ ಸ್ಟಾರ್ಟ್‌ಅಪ್ ಆರಂಭಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಆಕಾಂಕ್ಷಾ ಅಗರ್‌ವಾಲ್ ಮೂಲತಃ ದೆಹಲಿಯವರು. ವಾಣಿಜ್ಯ ವಿಷಯದಲ್ಲಿ ಪದವಿ ಪಡೆದು ವೈದ್ಯಕೀಯ ಉಪಕರಣಗಳನ್ನು ಮಾರಾಟ ಮಾಡುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ವಿದೇಶಿ ಉಪಕರಣಗಳನ್ನು ಭಾರತದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ತರಿಸಿಕೊಡುವ ಕೆಲಸ ಮಾಡುತ್ತಿದ್ದ ಆಕಾಂಕ್ಷಾಗೆ ಸ್ಮಾರ್ಟ್‌ಅಪ್ ಆರಂಭಿಸಬೇಕು ಎಂಬ ಕನಸಿತ್ತು.

ಈ ಹಂತದಲ್ಲಿ ಜೊತೆಯಾದವರು ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಾನಸ. ಆಕಾಂಕ್ಷಾ ಮತ್ತು ಮಾನಸ ಅವರ ಅಭಿರುಚಿ ಒಂದೇ ಆಗಿದ್ದರಿಂದ ಇಬ್ಬರು ಹತ್ತು ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ವೈದ್ಯರು ಮತ್ತು ರೋಗಿಗಳನ್ನು ಸದಾ ಸಂಪರ್ಕದಲ್ಲಿರುವಂತೆ ಮಾಡುವ ವಿನೂತನ ಆ್ಯಪ್ ಆಧಾರಿತ ಸ್ಟಾರ್ಟ್‌ಅಪ್ ಸ್ಥಾಪಿಸಿದರು. ಇದಕ್ಕೆ ಓಯ್‌ಹೆಲ್ಪ್ ಎಂದು ಹೆಸರಿಟ್ಟರು.

ರೋಗಿಗಳು ವೈದ್ಯರನ್ನು ಮುಖತಃ ಭೇಟಿ ಮಾಡದೇ ಆನ್‌ಲೈನ್ ಮೂಲಕವೇ ಸಂಪರ್ಕಿಸಿ ಚಿಕಿತ್ಸೆ ಪಡೆಯುವುದೇ ಓಯ್‌ಹೆಲ್ಪ್ ಸ್ಟಾರ್ಟ್‌ಅಪ್‌ನ ವೈಶಿಷ್ಟ್ಯ. ವಿಡಿಯೊ ಕರೆ, ಫೋನ್ ಕಾಲ್ ಅಥವಾ ಟೆಕ್ಸ್ಟ್ (ಮೆಸೇಜ್) ಮೂಲಕ ರೋಗಿಗಳು ಸುಲಭವಾಗಿ ವೈದ್ಯರನ್ನು ಸಂಪರ್ಕ ಮಾಡಿ ಔಷಧೋಪಚಾರ ಪಡೆಯಬಹುದಾಗಿದೆ. 15 ನಿಮಿಷಗಳ ಆನ್‌ಲೈನ್ ತಪಾಸಣೆಗೆ ಕೇವಲ 350 ರೂಪಾಯಿ ಶುಲ್ಕವನ್ನು  ವಿಧಿಸಲಾಗುತ್ತದೆ ಎನ್ನುತ್ತಾರೆ ಆಕಾಂಕ್ಷಾ. ದೇಶದ ಎರಡನೇ ಮತ್ತು ಮೂರನೇ ದರ್ಜೆ ನಗರಗಳನ್ನು ದೃಷ್ಟಿ ಯಲ್ಲಿಟ್ಟುಕೊಂಡು ಈ ಸ್ಟಾರ್ಟ್‌ಅಪ್ ಆರಂಭಿಸಿರುವುದಾಗಿ ಅವರು ಹೇಳುತ್ತಾರೆ.

ಸುಮಾರು ಎರಡು ಸಾವಿರ ವೈದ್ಯರು ಓಯ್‌ಹೆಲ್ಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿರುವ ಗ್ರಾಹಕರು ಓಯ್‌ಹೆಲ್ಪ್ ವೆಬ್‌ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ ಅತಿ ಕಡಿಮೆ ದರದಲ್ಲಿ ಆರೋಗ್ಯ ಸೇವೆಯನ್ನು ಪಡೆಯಬಹುದು ಎನ್ನುತ್ತಾರೆ ಮಾನಸ ಮತ್ತು ಆಕಾಂಕ್ಷಾ. www.oyehelp.com

*
ಮನಿಲ್ ಮತ್ತು ರೋಹಿತ್ 
ಗುಪ್ತಗಾಮಿನಿಯಾಗಿರುವ ಕ್ರಿಯಾಶೀಲತೆಯನ್ನು ಹೊರಗೆ ತರಲು ಯಾರು ಪ್ರಯತ್ನಿಸುತ್ತಾರೋ ಅವರು ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯಾಗುವ ಮೂಲಕ ಸಮಾಜದಲ್ಲಿ ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಉತ್ತರ ಪ್ರದೇಶ ಮೂಲದ ಮನಿಲ್ ಗುಪ್ತ ಮತ್ತು ರೋಹಿತ್ ಗುಪ್ತ ಸಹೋದರರು ಸಾಕ್ಷಿಯಾಗಿದ್ದಾರೆ.

ಕಳೆದ ಐದು ವರ್ಷಗಳಿಂದ ತಮ್ಮ ವಿಭಿನ್ನ ಕಲಾಕೃತಿಗಳ ಮೂಲಕ ದೇಶದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಅಸಮಾನತೆ, ಧಾರ್ಮಿಕ ಮತ್ತು ಆರ್ಥಿಕ ಅಸಮಾನತೆ, ಲಿಂಗತಾರತಮ್ಯ, ಅಸ್ಪೃಶ್ಯತೆ, ಮಾನವೀಯ ಕಾಳಜಿ ಕುರಿತಂತೆ ಈ ಸಹೋದರರು ರಚಿಸಿರುವ ಕಲಾಕೃತಿಗಳು ದೇಶ ಮತ್ತು ವಿದೇಶಗಳಲ್ಲಿ ಪ್ರದರ್ಶನಗೊಂಡು ಸಾಕಷ್ಟು ಪ್ರಶಂಸೆ ಪಡೆದಿರುವುದು ವಿಶೇಷ.

ಸಾಮಾಜಿಕ ಜಾಗೃತಿಗಾಗಿ ತಮ್ಮ ಕಾರನ್ನು ವಿವಿಧ ಬಣ್ಣಗಳ ಮೂಲಕ ಮರು ವಿನ್ಯಾಸ ಮಾಡಿ ದೇಶವನ್ನು ಸುತ್ತಿದ್ದ ಹೆಗ್ಗಳಿಕೆ ಈ ಇವರದ್ದು! ದೆಹಲಿಯ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಪದವಿ ಪಡೆದು ಕಲೆಯ ಮೂಲಕ ಯುವ ಜನರಲ್ಲಿ ಜಾಗೃತಿ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ತಾವು ರಚಿಸಿದ ಕಲಾಕೃತಿಗಳನ್ನು ಮನಿಲ್‌ರೋಹಿತ್ ಎಂಬ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.

ಕಲಾ ಪ್ರೇಮಿಗಳು ಈ ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಸಾಮಾಜಿಕ ಜಾಗೃತಿಯ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ. ಇದರ ಜತೆಗೆ  ತಮಗೆ ಇಷ್ಟವಾಗುವ ಕಲಾಕೃತಿಗಳನ್ನು ಆನ್‌ಲೈನ್ ಮೂಲಕ ಖರೀದಿಸಬಹುದಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕಲಾವಿದರ ಕಲಾಕೃತಿಗಳನ್ನು ಈ ವೆಬ್‌ತಾಣದಲ್ಲಿ ಪ್ರದರ್ಶಿಸುವ ಮತ್ತು ಮಾರಾಟ ಮಾಡುವ ವ್ಯವಸ್ಥೆ  ಕಲ್ಪಿಸಲಾಗಿದೆ.

ಇದಕ್ಕಾಗಿ ಬಡ ಮತ್ತು ಅಂಗವಿಕಲ ಕಲಾವಿದರು ಯಾವುದೇ ಶುಲ್ಕ ತೆರಬೇಕಾಗಿಲ್ಲ ಎನ್ನುತ್ತಾರೆ ಮನಿಲ್. ಹಣಕ್ಕೆ ಶೇ 20ರಷ್ಟು ವಾಣಿಜ್ಯ ಕಲಾಕೃತಿಗಳನ್ನು ರಚಿಸಿ ಮಾರಾಟ ಮಾಡುತ್ತಿದ್ದೇವೆ. ಉಳಿದಂತೆ ಶೇ 80ರಷ್ಟು ಕಲಾಕೃತಿಗಳನ್ನು ಸಾಮಾಜಿಕ ಜಾಗೃತಿಗೆ ರಚಿಸಲಾಗುತ್ತಿದೆ ಎಂದು ರೋಹಿತ್ ಹೇಳುತ್ತಾರೆ.
ಕಲೆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಈ ಸಹೋದರರ ನಡೆ ಇಂದಿನ ಯುವ ಪೀಳಿಗೆಗೆ ಮಾದರಿ. www.manilrohit.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT