ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಕ್ಕೆ ಇರಲಿ ಯೋಜನೆ

Last Updated 23 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಈಜೀವಜಗತ್ತಿನ ಪ್ರತಿಯೊಬ್ಬ ಜೀವಿಗೂ ಸೃಷ್ಟಿಕ್ರಿಯೆಯ ಮುಂದುವರಿಕೆ ಅನಿವಾರ್ಯ ಹಾಗೂ ಅತ್ಯಗತ್ಯ. ಆಹಾರ, ನಿದ್ರೆ, ಭಯ, ಮೈಥುನ ಸಕಲ ಪ್ರಾಣಿಗಳಂತೆಯೇ ಮನುಷ್ಯರಲ್ಲೂ ಸಹಜಗುಣವಾಗಿದೆ. ಸಂತಾನೋತ್ಪತ್ತಿ ವಯಸ್ಸಿನಲ್ಲಿ ಹೆಚ್ಚಿನ ಸಂದರ್ಭದಲ್ಲಿ ವಿವಾಹಬಂಧನಕ್ಕೊಳಗಾಗಿಯೇ ಸಂತಾನಕ್ರಿಯೆ ಮುಂದುವರಿಯುತ್ತಿರುತ್ತದೆ. ಆದ್ದರಿಂದಲೇ ವಿಶ್ವದಲ್ಲೂ, ಅದರಲ್ಲೂ ಮುಖ್ಯವಾಗಿ ನಮ್ಮ ಭಾರತದಲ್ಲಂತೂ ಶತಮಾನದ ಆರಂಭದಲ್ಲಿ 24 ಕೋಟಿಯಿದ್ದ ಜನಸಂಖ್ಯೆ ಇಂದು 130 ಕೋಟಿ ತಲುಪಿದೆ.

ಬರಗಾಲ, ಸಾಂಕ್ರಾಮಿಕತೆ, ಯುದ್ಧದಂತಹ ಮನುಕುಲದ ಮುಖ್ಯ ಪೀಡೆಗಳಷ್ಟೇ ಜನಸಂಖ್ಯೆಯ ಅತಿರೇಕವೂ ಅಭಿವೃದ್ಧಿಯನ್ನು ತಪ್ಪಿಸುವಂಥವು. ಜೊತೆಗೆ ವೈದ್ಯಕೀಯ ಆವಿಷ್ಕಾರದ ಉಪಯೋಗವೂ ಆಗುತ್ತಾ, ಜನರ ಆರೋಗ್ಯ ಹೆಚ್ಚಾಗುತ್ತಾ ಮರಣ ಪ್ರಮಾಣ ತಗ್ಗುತ್ತಾ ಜನಸಂಖ್ಯಾ ಸ್ಫೋಟಕ್ಕೆಡೆಯಾಯಿತು.

ಇದರಿಂದ ರಾಷ್ಟ್ರದ ಆರ್ಥಕ ಸ್ಥಿತಿಯ ಮೇಲೆ ಒತ್ತಡವುಂಟಾಗಿ ಜನರಿಗೆ ಅಶನ, ವಶನ, ಉದ್ಯೋಗ ದೊರಕಿಸುವ ಅನಿವಾರ್ಯತೆ ಉಂಟಾದಾಗ ಕುಟುಂಬಯೋಜನೆ ಅಥವಾ ಸಂತಾನನಿರೋಧಕ ಕ್ರಮಗಳನ್ನು ಅನುಸರಿಸಲೇಬೇಕಾದ ಅನಿವಾರ್ಯತೆ ಉಂಟಾಯಿತು.
 

ಭಾರತದಲ್ಲೂ 1952ರಲ್ಲೇ ಕುಟುಂಬ ಯೋಜನಾ ವಿಧಾನಗಳು ಜಾರಿಗೆ ಬಂದವು. ಇದರ ಮುಖ್ಯ ಉದ್ದೇಶ ‘ಹೆಣ್ಣಿರಲಿ, ಗಂಡಿರಲಿ, ಮಕ್ಕಳು ಎರಡೇ ಇರಲಿ’, ‘ಎರಡು ಮಕ್ಕಳ ನಡುವೆ ಅಂತರವಿರಲಿ’, ಮತ್ತು ‘ಸಾರ್ವತ್ರಿಕ ಲಸಿಕಾ ವಿತರಣೆ’.

ಸಂತಾನನಿರೋಧಕ ಅಥವಾ ಗರ್ಭನಿರೋಧಕ ಕ್ರಮಗಳೆಂದರೇನು?
ಬೇಡದ ಜನನವನ್ನು ತಡೆಗಟ್ಟುತ್ತ ಎರಡು ಗರ್ಭಧಾರಣೆಗಳ ನಡುವೆ ಅಂತರ ಹೊಂದಿರುವುದಕ್ಕೆ, ಒಟ್ಟಾರೆ ಗಂಡು–ಹೆಣ್ಣಿನಲ್ಲಿ ಪರಸ್ಪರ ದೈಹಿಕ ಕ್ರಿಯೆ ನಡೆದರೂ ಮಕ್ಕಳಾಗದಿರುವ ಕ್ರಮಕ್ಕೆ ಗರ್ಭನಿರೋಧಕ ಕ್ರಮಗಳೂ (Contraceptive methods) ಎನ್ನುತ್ತಾರೆ.

ಋತುಮತಿಯಾದಾಗಿನಿಂದ  ಋತುಬಂಧದವರೆಗೂ ಪ್ರತಿಹೆಣ್ಣಿನಲ್ಲೂ ಗರ್ಭಕೋಶದ ಪಕ್ಕ ಇರುವ ಅಂಡಾಶಯಗಳಿಂದ ತಿಂಗಳಿಗೊಂದೇ ಅಂಡಾಣು ಋತುಚಕ್ರದ ಪ್ರಾರಂಭದ ದಿನಗಳಿಂದ ಹಿಡಿದು  14ರಿಂದ  16 ದಿನಗಳೊಳಗೆ ಬಿಡುಗಡೆಯಾಗುತ್ತದೆ (ಈ ದಿನಗಳಲ್ಲಿ ವ್ಯತ್ಯಾಸ ಆಗಬಹುದು). ಈ ಅಂಡಾಣು ಕೇವಲ 48 ಗಂಟೆಗಳ ಕಾಲ ಬದುಕುತ್ತದೆ.

 

ಮಾಸಿಕ ಋತುಚಕ್ರ ನಡೆಯುವಷ್ಟು ಕಾಲ ಮಾತ್ರ ಅಂಡೋತ್ಪತ್ತಿ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೆಣ್ಣಿಗಿರುತ್ತದೆ. ಜೊತೆಗೆ ಅಂಡಾಶಯವು ಇಸ್ಟ್ರೋಜನ್ ಹಾರ್ಮೋನು ಉತ್ಪಾದಿಸಿ ಹೆಣ್ತನದ ಲಕ್ಷಣಗಳಿಗೂ ಕಾರಣವಾಗಿರುತ್ತದೆ. ಆದರೆ ಪುರುಷರಲ್ಲಿ ಹದಿಹರೆಯದಿಂದ ಸುಮಾರು 70 ವರ್ಷಗಳವರೆಗೂ ವೃಷಣದಿಂದ ವೀರ್ಯೋತ್ಪತ್ತಿ ಕಾರ್ಯ ನಡೆಯುತ್ತಲೇ ಇರುತ್ತದೆ.
 

ಜೊತೆಗೆ ಪುರುಷರ ಹಾರ್ಮೋನಾದ ಟೆಸ್ಟೋಸ್ಟಿರಾನ್ ಕೂಡ ಉತ್ಪತ್ತಿಯಾಗುತ್ತಿರುತ್ತದೆ. ಹಾಗಾಗಿ ಪುರುಷರು ಮಹಿಳೆಯರಲ್ಲಿ ಯಾವುದೇ ದಿನದಲ್ಲಿ ಗರ್ಭಮೂಡಿಸಲು ಸಮರ್ಥರಾಗಿರುತ್ತಾರೆ. ಆದರೆ ಮಹಿಳೆಯಲ್ಲಿ 30 ದಿನಗಳ ಋತುಚಕ್ರದ ಮಧ್ಯದ ಕೇವಲ ಎರಡು ದಿನ (ಅಂಡಾಣು ಬಿಡುಗಡೆಯಾಗುವ ಹಿಂದೆ-ಮುಂದೆ) ಮಾತ್ರ ಗರ್ಭಧರಿಸಲು ಸಮರ್ಥಳು. ಅದಕ್ಕಾಗಿ ಹೆಣ್ತನದ ಹಾರ್ಮೋನುಗಳ ಪ್ರಭಾವದಿಂದ ಅವಳ ಗರ್ಭಕೋಶದೊಳಗೆ ಮೆತ್ತನೆಯ ಒಳಹಾಸು ನಿರ್ಮಾಣವಾಗಿ ಗರ್ಭಧಾರಣೆಯಾಗದಿದ್ದಾಗಲೆಲ್ಲಾ ಮಾಸಿಕ ಋತುಸ್ರಾವ ನಿಯಮಿತವಾಗಿ ಆಗುತ್ತದೆ.

ಮನುಷ್ಯಸಹಜವಾದ ಉದ್ರೇಕದ ಕ್ಷಣಗಳಲ್ಲಿ ಸ್ತ್ರೀ-ಪುರುಷರಿಬ್ಬರ ಸಮಭಾಗಿತ್ವವಿದ್ದರೂ ಹೆಣ್ಣು ತನ್ನ ಜೈವಿಕ ರಚನೆಯಿಂದಾಗಿ ತಾಯ್ತನದ ಮಹತ್ತರ ಜವಾಬ್ದಾರಿ ಹೊಂದಿದ್ದಾಳೆ; ಅಲ್ಲದೆ, ಗರ್ಭನಿರೋಧಕ ಕ್ರಮಗಳನ್ನು ಅನುಸರಿಸಿ ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಲು ಹೆಣ್ಣೇ ಸದಾ ಹೆಚ್ಚಿನ ಕಾಳಜಿ ವಹಿಸಬೇಕಾದ ಅನಿವಾರ್ಯತೆ, ಅಗತ್ಯತೆ ಇಂದಿಗೂ ಇದೆ.

ಇಲ್ಲದಿದ್ದಲ್ಲಿ ಮುಟ್ಟಿನ ಸಮಯದಲ್ಲಾಗುವ ದೈಹಿಕರೋಧನಗಳು, ಜೊತೆಗೆ ತಳುಕು ಹಾಕಿಕೊಂಡಿರುವ ಧಾರ್ಮಿಕ ಕಟ್ಟುಪಾಡು, ಇದರೊಂದಿಗೆ ಅನಗತ್ಯ ಗರ್ಭಧಾರಣೆಯಾದಾಗ ಅದರ ನಿವಾರಣೆಗೋಸ್ಕರ ಗರ್ಭಪಾತದ ಮೊರೆಹೋಗಿ ನಂತರ ಅದರಿಂದಾಗುವ ರಕ್ತಹೀನತೆ, ಗರ್ಭಕೋಶದ ಸೋಂಕು ಇತ್ಯಾದಿ ತೊಂದರೆಗಳನ್ನು ಅನುಭವಿಸಬೇಕು. ಇಲ್ಲವೇ ಸಾಲಾಗಿ ಮಕ್ಕಳನ್ನು ಹಡೆಯುತ್ತಾ ಗರ್ಭಾವಸ್ಥೆಯ ಸವಾಲುಗಳನ್ನು ಎದುರಿಸುತ್ತಾ, ಹೆರಿಗೆಯಲ್ಲಿ ಮರುಜನ್ಮ ಪಡೆಯುತ್ತಾ, ಆ ಮಕ್ಕಳ ಲಾಲನೆ-ಪಾಲನೆ ಜೀವನವನ್ನೇ ತೇಯಬೇಕು.

ಇಷ್ಟಿದ್ದರೂ ಮಹಿಳೆಯೂ ಸೇರಿದಂತೆ ಹೆಚ್ಚಿನವರಿಗೆ –  ಅದೂ ಹದಿಹರೆಯದವರಿಗೆ, ಸಂತಾನೋತ್ಪತ್ತಿ ವಯಸ್ಸಿನಲ್ಲಿರುವವರಿಗೆ ನಿರಂತರ ಗರ್ಭನಿರೋಧಕಗಳ ಬಳಕೆ ಅಥವಾ ತಾತ್ಕಾಲಿಕ ಶಾಶ್ವತ ಕುಟುಂಬಯೋಜನಾ ಸೌಲಭ್ಯಗಳ ಬಗ್ಗೆ ಮಾಹಿತಿ ದೊರಕಿಸುವ ಜ್ಞಾನವಾದ ಪ್ರಜನನ ಅರೋಗ್ಯದ ಪರಿಕಲ್ಪನೆಯೇ ಇಲ್ಲವಾಗಿದೆ.

ಹಲವು ಅಂತರರಾಷ್ಟ್ರೀಯ ಮಟ್ಟದ ಮಹಿಳಾ ಸಮ್ಮೇಳನದಲ್ಲಿ (ಡೆಹರಾಡೂನ್, ಕೈರೋ, ಬೀಜಿಂಗ್, ಇತ್ಯಾದಿ) ಕುಟುಂಬಯೋಜನೆ ಮೂಲಹಕ್ಕು ಎನ್ನುವುದರ ಜೊತೆಗೆ ಸ್ತ್ರೀ–ಪುರುಷರಿಬ್ಬರಿಗೂ ಪರಸ್ಪರ ಒಪ್ಪಿಗೆ ಹಾಗೂ ಸಂಭವಿಸಬಹುದಾದ ಪರಿಣಾಮಗಳಿಗೆ ಸಮಾನವಾದ ಜವಾಬ್ದಾರಿಯನ್ನು ನೀಡಲಾಯಿತು. ಪ್ರತಿವರ್ಷ ವಿಶ್ವಜನಸಂಖ್ಯಾದಿನವನ್ನು ಜುಲೈ 11ರಂದು ಆಚರಿಸಿ ಅರಿವು ಹೆಚ್ಚಿಸಲಾಗುತ್ತಿದೆ.

ಇಷ್ಟಾದರೂ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಲಕ್ಷಗಟ್ಟಲೇ ಗರ್ಭಪಾತ ನಡೆಯುತ್ತಿವೆ. ಇಂದು 22  ಇಪ್ಪತ್ತೆರಡುವರೆ ಕೋಟಿಗೂ ಹೆಚ್ಚು ಹದಿವಯಸ್ಕರು ಮತ್ತು ಮಹಿಳೆಯರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗರ್ಭಧಾರಣೆಯನ್ನು ಬಯಸುವುದಿಲ್ಲ. ಆದರೆ ಅವರು ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಗರ್ಭನಿರೋಧಕ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನು ಮನಗಂಡೇ  2007ರಿಂದ ಪ್ರತಿವರ್ಷ ಸೆಪ್ಟೆಂಬರ್ 26ರಂದು ವಿಶ್ವದಾದ್ಯಂತ ವಿಶ್ವಸಂತಾನ ನಿಯಂತ್ರಣ ದಿನ ಅಥವಾ ಗರ್ಭನಿರೋಧಕ ದಿನವನ್ನು ಆಚರಿಸಲಾಗುತ್ತದೆ.

ಇದರ ಮೂಲ ಉದ್ದೇಶ ಪ್ರತಿ ಗರ್ಭಧಾರಣೆಯೂ ಒಂದು ಅಪೇಕ್ಷಿತ ಅವಘಡವಾಗದ ಹಾಗೆ ಮುನ್ನೆಚ್ಚರಿಕೆ ವಹಿಸುವುದು ಮತ್ತು ಯುವಜನಾಂಗ ಮುಂದೊಂದು ಮಾಹಿತಿಯುಳ್ಳ ಆಯ್ಕೆಯನ್ನಿಡುವುದು.

ಮಹಿಳೆಯರು ಇಂದು ಸುರಕ್ಷಿತ ಹಾಗೂ ಪರಿಣಾಮಕಾರೀ ಗರ್ಭನಿರೋಧಕ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ ತನಗೆ, ಕುಟುಂಬಕ್ಕೆ ಯಾಕೆ? ಯಾವಾಗ? ಎಷ್ಟು ಮಕ್ಕಳನ್ನು ಪಡೆಯಬೇಕೆಂದು ನಿರ್ಣಯಿಸಿ, ಕಡಿಮೆ ಮಕ್ಕಳನ್ನು ಹಡೆಯಬಹುದು; ಎರಡು ಮಕ್ಕಳ ನಡುವೆ ಅಂತರ ಕಾಯ್ದುಕೊಂಡರೆ ಮಕ್ಕಳಿಗೂ ಪ್ರೀತಿ, ಪೋಷಣೆ ದೊರೆತು ತಾಯಿಯ ಆರೋಗ್ಯವೂ ಸುಧಾರಿಸಿ, ಬಡತನ ನಿರ್ಮೂಲನೆಯೂ ಆಗಿ ಕುಟುಂಬ, ಸಮಾಜ, ಅಷ್ಟೇ ಏಕೆ ಇಡೀ ರಾಷ್ಟ್ರವೇ ಅಭಿವೃದ್ಧಿ ಪಥದತ್ತ ಸಾಗಬಲ್ಲದು ಎಂಬ ಸತ್ಯವನ್ನು ಇಂದು ಅರಿಯಬೇಕಾದ ಅನಿವಾರ್ಯತೆಯ ಅಗತ್ಯತೆ ಇದೆ.

ಇಂದು ತಾತ್ಕಾಲಿಕವಾಗಿ ಬೇಡದ ಗರ್ಭ ತಡೆಗಟ್ಟಲು ಹಲವು ವಿಧಾನಗಳಿವೆ. ಪುರುಷರು ಕಾಂಡೋಮ್ (ನಿರೋಧ್) ಬಳಸುವಿಕೆ ಅತ್ಯುತ್ತಮ ವಿಧಾನ, ಹಾಗೂ ಜನಪ್ರಿಯವಾಗಿದೆ. ಜೊತೆಗೆ ಲೈಂಗಿಕರೋಗವನ್ನು ಕೂಡ ತಡೆಗಟ್ಟುತ್ತದೆ. ಸುಲಭ ಹಾಗೂ ಸಮರ್ಥ ಬಳಕೆ ಸಾಧ್ಯ. ಆದರೆ ಮಹಿಳೆಯರು ಉಪಯೋಗಿಸುವ ವಪೆ (ಡಯಾಫ್ರಾಂ), ಕಾಂಡೋಮ್ ಹೆಚ್ಚು ಪ್ರಚಲಿತ ಹಾಗೂ ಜನಪ್ರಿಯವಾಗಿಲ್ಲ. ಕಾರಣ ಉಪಯೋಗ ಸರಳವಲ್ಲ ಹಾಗೂ ವೈದ್ಯರ ಸಹಾಯ ಅಗತ್ಯ. ಹಲವು ವೀರ್ಯನಾಶಕಗಳ ಬಳಕೆ ಇದ್ದರೂ ಪ್ರತಿಕೂಲ ಪರಿಣಾಮಗಳು ಹೆಚ್ಚಿವೆ.

ಇನ್ನು ಸಾಮಾನ್ಯವಾಗಿ ವಂಕಿ ಎಂದು ಕರೆಸಿಕೊಳ್ಳುವ ‘ಕಾಪರ್ಟಿ’ ಎಂಬ ಸಾಧನ ಅತ್ಯುತ್ತಮ ಸಂತಾನನಿರೋಧಕವಾಗಿದ್ದರೂ ಹೆಚ್ಚಿನ ಜನರಲ್ಲಿ ಅದರ ದುಷ್ಪರಿಣಾಮದ ಬಗ್ಗೆ ಆತಂಕ. ಅದು ಗರ್ಭಕೋಶದಿಂದ ಎದೆಗೇರಿ ಬಿಡುತ್ತದೆ, ನನ್ನ ಗಂಡನಿಗದು ಇಷ್ಟವಿಲ್ಲ – ಇನ್ನೂ ಬೇರೆಬೇರೆ ತೊಂದರೆಯಾಗುತ್ತಯೆಂಬ ಸಬೂಬು ಹೇಳಿ ಅಳವಡಿಸಿಕೊಳ್ಳುವುದೇ ಇಲ್ಲ. ಕಾಪರ್ಟಿಯಲ್ಲೂ 2–3 ತರಹಗಳಿವೆ.

ಇದು ಒಂದು ಬಗೆಯ ರಾಸಾಯನಿಕ ಪ್ರಕ್ರಿಯೆಯನ್ನುಂಟುಮಾಡಿ, ಗರ್ಭಕೋಶದ ಜೀವಕೋಶಗಳಲ್ಲಿ ಬದಲಾವಣೆಯನ್ನುಂಟುಮಾಡುತ್ತದೆ ಮತ್ತು ಅಂಡಾಣು, ವೀರ್ಯಾಣು ಫಲಿತ ತಪ್ಪಿಸಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ಭಾರತ ಸರ್ಕಾರದ ಕುಟುಂಬಯೋಜನೆಯಲ್ಲೂ ಸಹಜ ಹೆರಿಗೆಯಾದ ತಕ್ಷಣ ಅಥವಾ 48 ಗಂಟೆಯೊಳಗೆ ಅಥವಾ ಸಿಜೇರಿಯನ್ ಹೆರಿಗೆಯಲ್ಲಿ ತತ್‌ಕ್ಷಣವೇ ಕಾಪರ್ಟಿ ಅಳವಡಿಸುವುದನ್ನು ಉತ್ತೇಜಿಸುತ್ತಿದೆ. ಇಲ್ಲದಿದ್ದಲ್ಲಿ ಆರು ವಾರಗಳಿಂದ ಒಂದು ವರ್ಷದೊಳಗೆ ಹಾಕಿಸಿಕೊಳ್ಳಲೂಬಹುದು.

ಹೆರಿಗೆ ನಂತರ ಸಂತಾನನಿಯಂತ್ರಣ ಕ್ರಮಗಳನ್ನು ಅನುಸರಿಸಲು ಉತ್ಸುಕರಾಗಿದ್ದರೂ ಶೇ. 40–60ರಷ್ಟು ಜನರಿಗೆ ಅದು ಸಾಧ್ಯವಾಗುತ್ತಿಲ್ಲ. ಕೆಲವರು ಎದೆಹಾಲುಣಿಸುತ್ತಿರುವಾಗ ಗರ್ಭಧಾರಣೆಯಾಗಲೂ ಸಾಧ್ಯವೇ ಇಲ್ಲ. ನಮಗಿನ್ನು ಮುಟ್ಟು ಪ್ರಾರಂಭವಾಗೇ ಇಲ್ಲವೆಂದೂ ತಿಳಿಯುತ್ತಾರೆ.

ಆದರೆ ಮೂರು ತಿಂಗಳೊಳಗೆ ಅರ್ಧದಷ್ಟು ದಂಪತಿಗಳು ಲೈಂಗಿಕವಾಗಿ ಸಕ್ರಿಯವಾದರೆ ಶೇ. 90ರಷ್ಟು ದಂಪತಿಗಳು ಒಂದು ವರ್ಷದೊಳಗೆ ಲೈಂಗಿಕವಾಗಿ ಸಕ್ರಿಯವಾಗಿ ಶೇ. 65ರಷ್ಟು ಜನಕ್ಕೆ ಮಗು ಬೇಡ ಎಂದುಕೊಳ್ಳುತ್ತಿರುವಾಗಲೇ ಗರ್ಭಧಾರಣೆ ಆಗೇಬಿಟ್ಟಿರುತ್ತದೆ. ಇದಕ್ಕೆ ಸುಶಿಕ್ಷಿತ ದಂಪತಿಗಳೂ ಹೊರತಾಗಿಲ್ಲ. 

ಆದರೆ ಹಾಗಾಗಬಾರದಲ್ಲವೇ? ಏಕೆಂದರೆ ಪ್ರಸವಾನಂತರ ನವಜಾತ ಶಿಶು ಹಾಗೂ ತಾಯಿ ಇಬ್ಬರಿಗೂ ವಿಶೇಷ ಕಾಳಜಿಯ ಅಗತ್ಯವಿದೆ. ಹಾಗೂ ಮತ್ತೆ ಒಂದು ವರ್ಷದೊಳಗೆ ಗರ್ಭಧಾರಣೆಯಾದರೆ ಗರ್ಭಪಾತ, ಅಕಾಲಿಕ ಹೆರಿಗೆ, ಪ್ರಸವಾನಂತರದ ರಕ್ತಸ್ರಾವ, ರಕ್ತಹೀನತೆ, ಕಡಿಮೆ ತೂಕ ಹಾಗೂ ಅಕಾಲಿಕ ಶಿಶುಜನನ, ಶಿಶುಮರಣ ಎಲ್ಲವೂ ಹೆಚ್ಚುತ್ತದೆ.

ನಮ್ಮ ಭಾರತದಲ್ಲಂತೂ ಹೆಚ್ಚಿನ ಹಳ್ಳಿಯ ಜನ, ಬಡಜನರು ಹೆರಿಗೆಯ ನಂತರ ತಪಾಸಣೆಗೆಂದು ಬರುವುದೇ ಇಲ್ಲ. ಆದ್ದರಿಂದ ಗರ್ಭಿಣಿಯಾಗಿದ್ದಾಗಲೇ ಈ ಸಂತಾನನಿಯಂತ್ರಣ ಬಗ್ಗೆ ಮಹಿಳೆಯರಿಗೆ, ಪತಿ ಹಾಗೂ ಕುಟುಂಬದವರಿಗೆ ಆಪ್ತಸಮಾಲೋಚನೆ ನಡೆಸಿ, ಚರ್ಚಿಸಿ ಹೆರಿಗೆಗೂ ಮುನ್ನ ಕಾಪರ್ಟಿ ಅಳವಡಿಕೆಗೆ ಒಪ್ಪಿಗೆ ಪಡೆದುಕೊಳ್ಳುವುದು ಈ ನಿಟ್ಟಿನಲ್ಲಿ ಅತ್ಯುತ್ತಮ.

ಈ ಕಾರ್ಯ ವೈದ್ಯರು ಆರೋಗ್ಯ ಸಹಾಯಕರು, ಕಾರ್ಯಕರ್ತರೂ ಎಲ್ಲರಿಂದಲೂ ಆಗಬೇಕು. ಸಾಧ್ಯವಾದಗಲೆಲ್ಲಾ, ಸಂದರ್ಭ ಸಿಕ್ಕಾಗೆಲ್ಲಾ ಈ ಬಗ್ಗೆ ಮಾಹಿತಿಯನ್ನು ಬಿತ್ತರಿಸುವ ಕೆಲಸವಾಗಬೇಕು. ಮಾಧ್ಯಮಗಳಲ್ಲೂ ಈ ಬಗ್ಗೆ ಉತ್ತೇಜನ ಸಿಗಬೇಕು. ಕಾಪರ್ಟಿ ಅಳವಡಿಸಿಕೊಳ್ಳುವ ಬಗೆಗಿರುವ ಅಳುಕು ಹೋಗಲಾಡಿಸಿ ಅದರಿಂದಾಗುವ ಬಾಧಕಗಳಿಗಿಂತ ಸಾಧಕವೇ ಹೆಚ್ಚೆಂದು ಮನಸ್ಸು ಮಾಡಬೇಕು.

ಹೆರಿಗೆಯ ನಂತರ 4–6 ವಾರದೊಳಗೆ ಸಂತಾನೋತ್ಪತ್ತಿ ಸಾಮರ್ಥ್ಯ ಗರ್ಭಪಾತದ ನಂತರ  10–14 ದಿನದೊಳಗೆ ಮರಳಿ ಬರುತ್ತದೆ. ಹಾಗಾಗಿ ಕಾಪರ್ಟಿಯಂತಹ ಸುರಕ್ಷಿತ ಗರ್ಭನಿರೋಧಕಗಳ ಬಗ್ಗೆ ಮಾಹಿತಿಕೊಟ್ಟು ಮಹಿಳೆಯರ ಮನವೊಲಿಸುವ ಪ್ರಯತ್ನ ಆಗಬೇಕು.

ಹಲವಾರು ಗರ್ಭನಿರೋಧಕ ಮಾತ್ರೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಲಾಗುತ್ತದೆ. ಅವು ಕೃತಕ ಹಾರ್ಮೋನುಗಳನ್ನೊಳಗೊಂಡಿದ್ದು ಸ್ತ್ರೀಯರಲ್ಲಿ ನಿಯಮಿತ ಸೇವನೆಯಿಂದ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದನ್ನು ತಪ್ಪಿಸಿ ಕಾರ್ಯನಿರ್ವಹಿಸುತ್ತವೆ. ಕಡಿಮೆ ಹಾರ್ಮೋನುಗಳನ್ನುಳ್ಳ ಗರ್ಭನಿರೋಧಕ ಮಾತ್ರೆಗಳೂ ಸಿಗುತ್ತವೆ.

ಪ್ರೊಜೆಸ್ಟಿರಾನ್ ಹಾರ್ಮೋನುಗಳನ್ನೊಳಗಂಡ ಚುಚ್ಚುಮದ್ದುಗಳನ್ನು ಮೂರು ತಿಂಗಳಿಗೊಮ್ಮೆ ಉಪಯೋಗಿಸಬಹುದು. ವಿದೇಶಗಳಲ್ಲಿ ಚರ್ಮದಡಿಯಲ್ಲಿಡುವ ಸಾಧನಗಳೂ ಚಾಲ್ತಿಯಲ್ಲಿದೆ. ಹಲವು ದಂಪತಿಗಳು ಸುರಕ್ಷಿತ ಅವಧಿ (ಸೇಫ್ ಪೀರಿಯಡ್) ಅಂದರೆ ನಿಯಮಿತ ಮಾಸಿಕ ಋತುಚಕ್ರ ಆಗುತ್ತಿದ್ದಲ್ಲಿ 8ರಿಂದ 18 ದಿನಗಳವರೆಗೆ ದೂರವಿರುವುದು. ಆದರೆ ಇದು ಸಂಪೂರ್ಣ ಸುರಕ್ಷಿತವಲ್ಲ. ಹಲವಾರು ಸಂತಾನನಿಯಂತ್ರಣ ಕ್ರಮಗಳಿರುವುದರಿಂದ ವೈದ್ಯರ ಹತ್ತಿರ ಚರ್ಚಿಸಿ ಅನುಸರಿಸಬೇಕು.

ಇನ್ನು ಎರಡು ಮಕ್ಕಳಾದ ಮೇಲೆ ಶಾಶ್ವತ ಸಂತಾನನಿರೋಧಕ ಕ್ರಮಗಳಾದ ಟ್ಯುಬೆಕ್ಟಮಿಯನ್ನು ಹೆಣ್ಣಿನಲ್ಲಿ ಹಾಗೂ ಪುರುಷರಲ್ಲಿ ವ್ಯಾಸೆಕ್ಟಮಿಯನ್ನು ಮಾಡಿಸಿಕೊಳ್ಳಬಹುದು. ಆದರೆ ಪುರುಷರಲ್ಲಿ ಈ ವಿಧಾನ ಸರಳ ಸುಲಭವಾಗಿದ್ದರೂ, ಹೊಟ್ಟೆಯನ್ನು ಛೇದಿಸುವ ಅಗತ್ಯವಿಲ್ಲದಿದ್ದರೂ ಶೇ. ಎರಡರಷ್ಟು ಪುರುಷರೂ ಈ ಶಸ್ತ್ರಚಿಕಿತ್ಸೆಗೆ ನಮ್ಮ ಭಾರತದಲ್ಲಿ ಒಳಪಡುತ್ತಿಲ್ಲ ಎನ್ನುವುದು ಲಿಂಗತಾರತಮ್ಯರ ಪರಾಕಾಷ್ಠೆಯೇ ಎನ್ನಬಹುದು.

ಮಹಿಳೆಯೇ ಶೇ. 98ರಷ್ಟು ಸಂದರ್ಭಗಳಲ್ಲಿ ಆರೋಗ್ಯ ಸರಿಯಿಲ್ಲದಿದ್ದರೂ – ರಕ್ತಹೀನತೆ ಇನ್ನಿತರ ಸಮಸ್ಯೆಗಳಿದ್ದರೂ – ಸಂತಾನಹರಣ ಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ಮಹಿಳೆಯರಲ್ಲಿ, ಯುವಜನತೆಯಲ್ಲಿ ಸಂತಾನನಿಯಂತ್ರಣ ಕ್ರಮಗಳ ಬಗ್ಗೆ ಅರಿವು ಮೂಡಿ ಅವರ ಆರೋಗ್ಯ ಕಾಪಾಡಬೇಕು. ಒಟ್ಟಿನಲ್ಲಿ ವಿಶ್ವಸಂತಾನ ನಿಯಂತ್ರಣದ ಈ ದಿನದಲ್ಲಿ ಖ್ಯಾತ ಸ್ತ್ರೀರೋಗತಜ್ಞೆ ಡಾ. ಸುನಂದಾ ಕುಲಕರ್ಣಿಯವರು ಹೇಳಿದ್ದ ಒಂದು ಕವಿತೆ ನೆನಪಾಗುತ್ತಿದೆ:

ರಕ್ತಂ ವರ್ಧಂತಿ Oral Pill ಸೇವನೇನ.
ಕಾಮಾದಿ ರೋಗಂ ನ ಪ್ರಸರತಿ ನಿರೋಧ ಸುಯೋಜನೇನ.
ಭ್ರೂಣಂ ವಿನಶ್ಯತಿ IUD ನಿವೇಶನನೇನ
ಕುಟುಂಬ ಯೋಜನ ವಿಧೌ, ಖಲು ವರ್ಧಂತಿ ಆರೋಗ್ಯಃ


ಅಂದರೆ, ನುಂಗುವ ಮಾತ್ರೆ ತೆಗೆದುಕೊಂಡರೆ ರಕ್ತ ಹೆಚ್ಚಾಗುತ್ತದೆ. ನಿರೋಧ ಉಪಯೋಗಿಸಿದರೆ ಲೈಂಗಿಕರೋಗ ಬರುವುದಿಲ್ಲ. ವಂಕಿ ಹಾಕಿಸಿ ಕೊಂಡರೆ, ಗರ್ಭ ನಿಲ್ಲುವುದಿಲ್ಲ. ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡರೆ ಆರೋಗ್ಯ ಸುಧಾರಿಸುತ್ತದೆ.

ವಂಕಿಯನ್ನು ಧರಿಸದೇ ಪದೇ ಪದೇ ಗರ್ಭಪಾತವಾಗುವ ಪರಿಸ್ಥಿತಿ ಬಂದೊದಗಿ, ಅದರಿಂದಾಗುವ ತೊಂದರೆಗಳ ಬಗ್ಗೆ ತಿಳಿ ಹೇಳಿದರೂ ಎರಡು ಮಗುವಿನ ನಡುವೆ ಅಂತರವನ್ನು ಕಾಯ್ದುಕೊಳ್ಳಬೇಕಾದ ಅಗತ್ಯತೆ ಇದ್ದರೂ, ಈ ನಿಟ್ಟಿನಲ್ಲಿ ಮಹಿಳೆಯರನ್ನು ಒಪ್ಪಿಸುವುದು ಕಷ್ಟವೇ ಸರಿ. ಕಾಪರ್ಟಿಯಲ್ಲಿ ತಾಮ್ರವನ್ನು, ಕೆಲವು ಸಾಧನಗಳಲ್ಲಿ ಬೆಳ್ಳಿಯ ಒಳಭಾಗವೂ ಇರಬಹುದು. ಮುಂದುವರಿದ ದರ್ಜೆ ವಂಕಿಗಳಲ್ಲಿ ಹಾರ್ಮೋನುಗಳ ಅಳವಡಿಕೆಯೂ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT