ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಗೊಳ್ಳಲಿ ಶಾರೀರಿಕ ಶಿಕ್ಷಣ

Last Updated 25 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

2016ರ ರಿಯೋ ಓಲಿಂಪಿಕ್‌ನಲ್ಲಿ ಭಾರತಕ್ಕೆ ದೊರೆತದ್ದು ಕೇವಲ ಒಂದು ಬೆಳ್ಳಿ ಮತ್ತು ಒಂದು ಕಂಚು ಮಾತ್ರ. ಇಷ್ಟಕ್ಕೇ ಬೀಗುತ್ತಿರುವ ನಾವು ಬೇರೆ ಬೇರೆ ರಾಷ್ಟ್ರಗಳ ಸಾಧನೆ ಗಮನಿಸಿದರೆ ನಮ್ಮ ದೇಶದ ಸಾಧನೆ ತೀರಾ ಕಡಿಮೆ ಎನಿಸುತ್ತದೆ. ಚಿಕ್ಕ ಚಿಕ್ಕ ದೇಶಗಳು ಸಾಕಷ್ಟು ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡು ಸಂಭ್ರಮಿಸುತ್ತಿವೆ. ಮಾನವ ಸಂಪನ್ಮೂಲದಲ್ಲಿ ಪ್ರಪಂಚದಲ್ಲಿಯೇ  ಎರಡನೇ ಸ್ಥಾನ ಹೊಂದಿದ ಭಾರತವು ಯಾಕೆ ನಿರೀಕ್ಷಿತ ಸಾಧನೆ ಮಾಡಲಾಗಲಿಲ್ಲ ಎಂಬುದನ್ನು ಪರಾಮರ್ಶಿಸಬೇಕಿದೆ.

ಭಾರತವು ಕ್ರೀಡೆಗಳಲ್ಲಿ ಹಿಂದುಳಿಯಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕ್ರೀಡೆಗಳಿಗೆ ನೀಡಿರುವ ಮಹತ್ವ ಕಡಿಮೆ; ಇದರ ಜೊತೆಗೆ ನಿರ್ಲಕ್ಷಕ್ಕೊಳಗಾದ ದೈಹಿಕ ಶಿಕ್ಷಣ, ಕ್ರೀಡೆಗಳ ಬಗ್ಗೆ ಪೋಷಕರ ನಿರಾಸಕ್ತಿ, ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ತರಬೇತಿ ಹಾಗೂ ಸೌಲಭ್ಯಗಳ ಕೊರತೆ, ಶಾಲೆಗಳಲ್ಲಿ ಆಟದ ಮೈದಾನದ ಕೊರತೆ – ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಕ್ರೀಡೆಗಳಲ್ಲಿ ಮಹತ್ತರ ಸಾಧನೆ ಸಾಧಿಸಲು ಪ್ರಾಥಮಿಕ ಹಂತದಿಂದಲೇ ದೈಹಿಕ ಶಿಕ್ಷಣ ಅತ್ಯಂತ ಅವಶ್ಯಕ. ಎಲ್ಲ ವಿಷಯಗಳ ಕಲಿಕಾ ಸಾಮರ್ಥ್ಯಕ್ಕೆ ಸದೃಢವಾದ ದೇಹದ ಜೊತೆಗೆ ಸದೃಢವಾದ ಮನಸ್ಸೂ ಬೇಕು; ಇದನ್ನು ಹೊಂದಲು ಶಾರೀರಿಕ ಶಿಕ್ಷಣ ಅವಶ್ಯಕ ಎಂಬುದನ್ನು ಶಿಕ್ಷಣತಜ್ಞರು ಹೇಳುತ್ತಲೇ ಬಂದಿದ್ದಾರೆ. ಆದರೆ ಇದಕ್ಕನುಗುಣವಾಗಿ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡದಿರುವುದೇ ಇಂದಿನ ನಮ್ಮ ರಾಷ್ಟ್ರದ ಕ್ರೀಡಾಕ್ಷೇತ್ರದ ಸೋಲಿಗೆ ಕಾರಣ.

2004ಕ್ಕೂ ಮೊದಲು ದೈಹಿಕ ಶಿಕ್ಷಣವನ್ನು ಪಠ್ಯೇತರ ವಿಷಯವೆಂದು ಪರಿಗಣಿಸಿ ಬಿಡಿಬಿಡಿಯಾಗಿ  ಕಲಿಸಲಾಗುತ್ತಿತ್ತು. ವೈದ್ಯನಾಥನ್ ವರದಿ ಶಿಫಾರಸ್ಸಿನಂತೆ 2004ರಿಂದ ರಾಜ್ಯದಲ್ಲಿ ದೈಹಿಕ ಶಿಕ್ಷಣವನ್ನು ಒಂದು ವಿಷಯವಾಗಿ ಅಳವಡಿಸಲಾಯಿತು. ಅಂದಿನಿಂದ ದೈಹಿಕ ಶಿಕ್ಷಣಕ್ಕೆ ಬೇರೆ ವಿಷಯಗಳ ಸ್ಥಾನಮಾನವೇನೋ ದೊರೆಯಿತು. ಆದರೆ ದೈಹಿಕ ಶಿಕ್ಷಕರ ಕೊರತೆಯಿಂದ ಮಕ್ಕಳು ಪ್ರಾಯೋಗಿಕ ಕಲಿಕೆಯಿಂದ ದೂರ ಉಳಿಯಬೇಕಾಯಿತು.

ಈಗಿರುವ ದೈಹಿಕ ಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಆಟ–ಮೇಲಾಟಗಳ ತಾತ್ವಿಕ ಹಾಗೂ ಪ್ರಾಯೋಗಿಕ ಅಂಶಗಳಷ್ಟೇ ಇವೆ. ಇವುಗಳ ಜೊತೆಗೆ ಪ್ರಸಿದ್ಧ ಆಟಗಾರರ ಕಿರು ಪರಿಚಯ ನೀಡಬೇಕು. ಕ್ರೀಡೆಯಲ್ಲಿನ ಅವರ ಸಾಧನೆ ಹಾಗೂ ಅವರು ಕಲಿತ ಕ್ರೀಡಾಕೌಶಲಗಳ ಬಗ್ಗೆ ತಿಳಿಯಪಡಿಸುವಂತಾದರೆ ಅದು ಮಕ್ಕಳ  ಕಲಿಕೆಗೆ ಸ್ಫೂರ್ತಿಯಾಗುತ್ತದೆ.

ಬೇರೆ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಮಕ್ಕಳ ಆಸಕ್ತಿಯ ಕ್ರೀಡೆಗಳನ್ನು ಗುರುತಿಸಿ ಅದಕ್ಕೆ ಪೂರಕ ಕೌಶಲಗಳನ್ನು ಕಲಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಈ ಪ್ರಕ್ರಿಯೆ ಕುಂಟುತ್ತಾ ಸಾಗಿದೆ.

ನಮ್ಮಲ್ಲಿ ಪ್ರಾಥಮಿಕ ಹಂತದಲ್ಲೇ ದೈಹಿಕ ಶಿಕ್ಷಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ದೈಹಿಕ ಶಿಕ್ಷಕರಿಲ್ಲದ ಅದೆಷ್ಟೋ ಶಾಲೆಗಳು ನಮ್ಮಲ್ಲಿವೆ. ಕರ್ನಾಟಕದ ಶೇ. 60ಕ್ಕಿಂತ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಹಿರಿಯ ಪ್ರಾಥಮಿಕ ಹಂತದಲ್ಲೇ ದೈಹಿಕ ಶಿಕ್ಷಕರಿಲ್ಲ. ದೈಹಿಕ ಶಿಕ್ಷಕರಿಲ್ಲದ ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಕರೇ ದೈಹಿಕ ಶಿಕ್ಷಣವನ್ನು ಕಲಿಸಬೇಕು ಎಂಬ ಇಲಾಖೆಯ ಅಲಿಖಿತ ಆದೇಶದಂತೆ ಕುಂಟುತ್ತಾ ಕಲಿಕೆಯೇನೋ ಸಾಗಿದೆ. ಆದರೆ ದೈಹಿಕ ಶಿಕ್ಷಣ ತರಬೇತಿ ಪಡೆದ ಶಿಕ್ಷಕರಿಗಿಂತ ತರಬೇತಿ ಪಡೆಯದ ಶಿಕ್ಷಕರು ಎಷ್ಟರ ಮಟ್ಟಿನ ಕ್ರೀಡಾ ಕೌಶಲಗಳನ್ನು ಕಲಿಸಬಹುದೆಂಬುದೇ ಪ್ರಶ್ನೆ.

ಖಾಸಗಿ ಶಾಲೆಗಳು ದೈಹಿಕ ಶಿಕ್ಷಣದಲ್ಲಿ ಉನ್ನತ ಸಾಧನೆಯನ್ನು ಮಾಡಿವೆ ಎನ್ನುವಂತಿಲ್ಲ. ಸಾಮಾನ್ಯವಾಗಿ ಖಾಸಗಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರೇನೋ ಇರುತ್ತಾರೆ. ಆದರೆ ಇವರ ಉಪಸ್ಥಿತಿ ಕೇವಲ ಹೆಸರಿಗಷ್ಟೆ ಸೀಮಿತವಾಗಿರುತ್ತದೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಆಟದ ಮೈದಾನದ ಕೊರತೆಯಿದೆ. ಇತರ ವಿಷಯಗಳ ಕಲಿಕೆಯಲ್ಲಿ ರ್‍ಯಾಂಕ್‌ಗಳಿಸಬೇಕೆಂಬ ಧಾವಂತದಲ್ಲಿ ಖಾಸಗಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದರೆ ತಪ್ಪಾಗದು.

ಇನ್ನು ದೈಹಿಕ ಶಿಕ್ಷಕರಿರುವ ಸರ್ಕಾರಿ ಶಾಲೆಗಳ ಮಕ್ಕಳು ಅಗತ್ಯ ಕ್ರೀಡಾಕೌಶಲಗಳನ್ನು ಗಳಿಸಿದ್ದಾರೆ ಎನ್ನುವಂತಿಲ್ಲ. ಏಕೆಂದರೆ ಅನೇಕ ಸರ್ಕಾರಿ ಶಾಲೆಗಳಲ್ಲೂ ಸಾಕಷ್ಟು ಆಟದ ಮೈದಾನವಿಲ್ಲ.

ಆಟದ ಮೈದಾನದ ಕೊರತೆ ನೀಗಿಸಲು ಇದುವರೆಗೆ ಯಾವ ಪ್ರಯತ್ನಗಳೂ ನಡೆದಿಲ್ಲ. ಈ ಬಗೆಗಿನ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯ ಅಕ್ಕಪಕ್ಕದ ಮೈದಾನವನ್ನು ಸಮುದಾಯದ ಸಹಕಾರ ಪಡೆದು ತಾತ್ಕಾಲಿಕವಾಗಿ ಬಳಸಿಕೊಳ್ಳಬಹುದು. ಸಾಧ್ಯವಾದರೆ ಶಾಶ್ವತ ಮೈದಾನದ ವ್ಯವಸ್ಥೆ ಮಾಡಿಕೊಳ್ಳಬೇಕು. ಇನ್ನು ನಗರಗಳಲ್ಲಿ ಇರುವ ಆಟದ ಮೈದಾನವನ್ನು ಸರದಿ ಪ್ರಕಾರ ಬಳಸಿಕೊಳ್ಳಬಹುದು.

ಮಕ್ಕಳ ಕ್ರೀಡೆಗಳ ಬಗ್ಗೆ ಪೋಷಕರ ನಿರ್ಲಕ್ಷ್ಯವೂ ಅಧಿಕವಾಗಿದೆ. ಅಂಕಗಳ ರೇಸ್‌ನಲ್ಲಿ ಓಡುತ್ತಿರುವ ಪಾಲಕರಿಗೆ ಆಟಗಳ ಮಹತ್ವ ಇನ್ನೂ ಅರಿವಾಗುತ್ತಲೇ ಇಲ್ಲ. ಆಟಗಳಲ್ಲಿ ಉತ್ತಮವಾಗಿರುವ ಮಗು ಪಾಠದಲ್ಲಿಯೂ ಮುಂಚೂಣಿಯಲ್ಲಿ ಸಾಗುತ್ತದೆ; ಆಟದಿಂದ ಮಗುವಿನ ಸರ್ವಾಂಗೀಣ ಬೆಳವಣಿಗೆಯಾಗುತ್ತದೆ ಎಂಬುದನ್ನು ಬಹುಪಾಲು ಪಾಲಕರು ಇನ್ನೂ ತಿಳಿದಿಲ್ಲ.

ಶಾಲೆಯಿಂದ ಬಂದ ಮಕ್ಕಳನ್ನು ಕನಿಷ್ಠ ಒಂದು ಗಂಟೆ ಆಟಕ್ಕೆ ಬಿಡದಂತೆ ಇನ್ನೊಂದು ಶಾಲೆಗೆ, ಅಂದರೆ ಟ್ಯೂಷನ್ ಹೆಸರಿನ ಜೈಲಿಗೆ ಸೇರಿಸುತ್ತಿರುವುದು ದುರಂತವಲ್ಲದೇ ಮತ್ತೇನು? ತಾವೇ ತಮ್ಮ ಮಕ್ಕಳನ್ನು ಬಂಧನಕ್ಕೆ ನೂಕುತ್ತಿರುವ ಪಾಲಕರಿಗೆ ಕ್ರೀಡೆಗಳ ಮಹತ್ವ ತಿಳಿಸುವ ಪ್ರಯತ್ನ ನಡೆಯಬೇಕಿದೆ.

ಕ್ರೀಡೆಗಳಲ್ಲಿ ಉತ್ತಮ ಸಾಧನೆಗೈದ ಬಡ ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದು ಸೂಕ್ತವಾದ ತರಬೇತಿ ನೀಡುವ ಪ್ರಯತ್ನಗಳು ಬಲಗೊಳ್ಳಬೇಕಿದೆ. ರಾಷ್ಟ್ರಮಟ್ಟದಲ್ಲಿ ಸಮರ್ಪಕ ಕ್ರೀಡಾನೀತಿಯೊಂದನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆಯಿದೆ. ಈ ಯೋಜನೆಯ ಮೂಲಕ ಹೋಬಳಿಗೆ ಒಂದರಂತೆ ಅಥವಾ ಕನಿಷ್ಠ ತಾಲ್ಲೂಕಿಗೆ ಒಂದರಂತೆ ಕ್ರೀಡಾ ವಸತಿ ಶಾಲೆಗಳನ್ನು ತೆರೆಯಲು ಯುವಜನ ಮತ್ತು ಕ್ರೀಡಾ ಇಲಾಖೆ ಯೋಜನೆ ರೂಪಿಸಬೇಕಿದೆ. ಅರ್ಹ ವಯಸ್ಸಿನ ಎಲ್ಲ ಮಕ್ಕಳೂ ಕನಿಷ್ಠ ಒಂದು ಕ್ರೀಡೆಯಲ್ಲಾದರೂ ಭಾಗವಹಿಸುವಂತೆ ಮಾಡಬೇಕಿದೆ. ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಏಷ್ಯನ್ ಅಥವಾ ಓಲಿಂಪಿಕ್ ಆಟಗಳಲ್ಲಿ ಭಾಗವಹಿಸುವ ಕನಸನ್ನು ಬಿತ್ತಬೇಕಿದೆ.

ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ ಅಗತ್ಯ ತರಬೇತಿ ನೀಡಬೇಕಿದೆ. ಇದಕ್ಕೆ ಸಂಘ-ಸಂಸ್ಥೆಗಳ ಸಹಕಾರವೂ ಅಗತ್ಯವಾಗಿದೆ. ಶಾಲೆಯಲ್ಲಿ ಮಗುವಿನ ಯಶಸ್ಸು ಪುಷ್ಟಿದಾಯಕ ಆಹಾರ ಮತ್ತು ಸಂಯೋಜಿತ ದೈಹಿಕ ಚಟುವಟಿಕೆಗಳನ್ನು ಅವಲಂಬಿಸಿದೆ ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು(ಎನ್.ಸಿ.ಎಫ್.) 2005ರ ಕಾರ್ಯವರದಿಯ ಸಾರಾಂಶವು ತಿಳಿಸುತ್ತದೆ.

ಎನ್.ಸಿ.ಎಫ್. -2005ರ  ಆಶಯವೂ ಕೂಡ ದೈಹಿಕ ಶಿಕ್ಷಣವನ್ನು ಬಲವರ್ಧಿಸುವುದೇ ಆಗಿದೆ. ಅಂದರೆ ಇದಕ್ಕೆ ಪೂರಕವಾದ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಬೇಕು ಎಂಬುದೇ ಇದರ ಸಾರಾಂಶ.  ಆದರೆ ಕಳೆದ 10 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಕುಂಠಿತಗೊಂಡಿದೆ. ಹೀಗಾದರೆ ಶಾರೀರಿಕ ಶಿಕ್ಷಣ ಬಲಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇದಕ್ಕೆ ಶಿಕ್ಷಣ ಇಲಾಖೆ ಹಾಗೂ ಕ್ರೀಡಾ ಇಲಾಖೆಗಳ ಸಂಯೋಜಿತ ಇಚ್ಚಾಶಕ್ತಿ ಬೇಕಾಗಿದೆ. ನಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಬಲಿಷ್ಠರನ್ನಾಗಿ ರೂಪಿಸಬೇಕಾದ ಅಗತ್ಯವನ್ನು ಅರಿಯಬೇಕಿದೆ. ಅಗತ್ಯವಿರುವ ದೈಹಿಕ ಶಿಕ್ಷಕರ ನೇಮಕ ಹಾಗೂ ಆಟದ ಮೈದಾನದ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಆ ಮೂಲಕ ನಮ್ಮ ಮಕ್ಕಳಲ್ಲಿ ದೈಹಿಕ ಕೌಶಲಗಳನ್ನು ಬೆಳೆಸುವ ಮೂಲಕ ಮಾನಸಿಕ ಸ್ಥೈರ್ಯವನ್ನು ಗಟ್ಟಿಗೊಳಿಸಬೇಕಿದೆ. ಜನಸಂಖ್ಯೆ ಅಧಿಕವಾಗಿರುವ ಭಾರತದಂತಹ ರಾಷ್ಟ್ರಗಳಲ್ಲಿ ಯುವಜನತೆಗೆ ಕ್ರೀಡೆಯಲ್ಲಿ ಉತ್ತಮ ತರಬೇತಿ ನೀಡಿ ದೇಶದ ಅಭಿವೃದ್ಧಿಗೆ ಪೂರಕವಾದ ಮಾನವ ಸಂಪನ್ಮೂಲವನ್ನು ಸೃಷ್ಟಿಸಬಹುದಾಗಿದೆ.

ಇದಕ್ಕೆ ಸಮುದಾಯದ ಸಹಭಾಗಿತ್ವವೂ ಅಗತ್ಯವಾಗಿದೆ. ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ಶಾಲೆಗಳಲ್ಲಿ ನಡೆಯಲು ಸಮುದಾಯವು ತನ್ನ ಬದ್ಧತೆಯನ್ನು ತೋರಿಸಬೇಕಾಗಿದೆ. ಪಠ್ಯಕ್ರಮದಲ್ಲಿ ಸೂಚಿತವಾದ ಎಲ್ಲ ದೈಹಿಕ ಚಟುವಟಿಕೆಗಳು ಸುಗಮವಾಗಿ ನಡೆಯಲು ಸಮುದಾಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಶಾಲಾ ಆಟದ ಮೈದಾನ ಹಾಗೂ ಸ್ಥಳೀಯ ದೈಹಿಕ ಶಿಕ್ಷಕರ ನೇಮಕದಲ್ಲಿ ಸಮುದಾಯ ನೇರವಾಗಿ ಭಾಗಿಯಾಗಬೇಕು. ಆ ಮೂಲಕ ತಮ್ಮ ಮಕ್ಕಳನ್ನು ದೈಹಿಕವಾಗಿ ಬಲಿಷ್ಠರನ್ನಾಗಿ ಮಾಡಲು ಕ್ರಿಯಾಶೀಲರಾಗಬೇಕಾಗಿದೆ. ಶಾಲಾ ಅವಧಿಯ ನಂತರ ಕನಿಷ್ಠ ಒಂದು ಗಂಟೆಯಾದರೂ ತಮ್ಮ ಮಕ್ಕಳನ್ನು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕಾಗಿದೆ. ಪಾಲಕರು ವಿದ್ಯಾಭ್ಯಾಸದ ಬೇರೆ ವಿಷಯಗಳಿಗೆ ನೀಡುವ ಮಹತ್ವವನ್ನು ದೈಹಿಕ ಶಿಕ್ಷಣಕ್ಕೂ ನೀಡಲೇಬೇಕು. ಅಂದಾಗ ಮಾತ್ರ ಶಾರೀರಿಕ ಶಿಕ್ಷಣವನ್ನು ಬಲಗೊಳಿಸಬಹುದು.
-ಆರ್. ಬಿ. ಗುರುಬಸವರಾಜ  ಹೊಳಗುಂದಿ   
(ಲೇಖಕರು ಶಿಕ್ಷಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT