ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯರ ಸಾಮರ್ಥ್ಯ ವೃದ್ಧಿಗೆ ವೇದಿಕೆ

Last Updated 25 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಈ ವರ್ಷದ ಡಿಸೆಂಬರ್‌ನಲ್ಲಿ ತವರಿನಲ್ಲಿ ವಿಶ್ವಕಪ್‌ ಜೂನಿಯರ್‌ ಹಾಕಿ ಟೂರ್ನಿ ಜರುಗಲಿದೆ. ಮಹತ್ವದ ಟೂರ್ನಿಗೆ ಸಜ್ಜಾಗಲು ನಮ್ಮ ಆಟಗಾರರಿಗೆ ಆಸ್ಟ್ರೇಲಿಯಾ ಹಾಕಿ ಲೀಗ್‌ ಅತ್ಯುತ್ತಮ ವೇದಿಕೆ.  ಹೊಸತನ್ನು ಕಲಿತು ತಂಡದ ಬಲ ಹೆಚ್ಚಿಸಿಕೊಳ್ಳಲೂ ಲೀಗ್‌ ನೆರವಾಗಲಿದೆ.ಹೋದ ವಾರ ಭಾರತ ಜೂನಿಯರ್‌ ಹಾಕಿ ತಂಡದ ಕೋಚ್‌ ಹರೇಂದ್ರ ಸಿಂಗ್‌ ಹೇಳಿದ್ದ ಮಾತುಗಳಿವು.

ಹೌದು. ಭಾರತ ತಂಡ  ಮೊದಲ ಬಾರಿ ಪ್ರತಿಷ್ಠಿತ ಆಸ್ಟ್ರೇಲಿಯಾ ಹಾಕಿ ಲೀಗ್‌ನಲ್ಲಿ ಪಾಲ್ಗೊಳ್ಳುವ ಸದವಕಾಶ ಪಡೆದುಕೊಂಡಿದೆ. ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 8ರವರೆಗೆ ನಡೆಯುವ ಲೀಗ್‌ನಲ್ಲಿ ಹರ್ಜೀತ್‌ ಸಿಂಗ್‌ ಬಳಗ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.

ಈ ವರ್ಷದ ಡಿಸೆಂಬರ್‌ನಲ್ಲಿ ಲಖನೌದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿಯುವ ಮಹಾದಾಸೆ ಹೊತ್ತಿರುವ ಕಿರಿಯರ ಪಾಲಿಗೆ ಈ ಲೀಗ್‌ ಅತ್ಯಂತ ಮಹತ್ವದ್ದೆನಿಸಿದೆ.

ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸೀನಿಯರ್‌ ತಂಡವನ್ನು ಇನ್ನಷ್ಟು ಶಕ್ತಿಯುತವನ್ನಾಗಿಸುವ ಪಣ ತೊಟ್ಟಿರುವ ಹಾಕಿ ಇಂಡಿಯಾ ಜೂನಿಯರ್‌ ವಿಭಾಗದಲ್ಲಿ  ಶ್ರೇಷ್ಠ ಪ್ರದರ್ಶನ ನೀಡುವವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಹೀಗಾಗಿ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಕಿರಿಯ ಆಟಗಾರರಿಗೆ ಈ ಲೀಗ್‌ ವೇದಿಕೆ ಎನಿಸಿದೆ.

ಈ ಲೀಗ್‌ನಲ್ಲಿ ಭಾರತದ ಪ್ರಶಸ್ತಿಯ ಹಾದಿ ಸುಲಭದ್ದಂತೂ ಅಲ್ಲ. ಏಕೆಂದರೆ ಇಲ್ಲಿ ವಿಶ್ವದ ಘಟಾನುಘಟಿ ಆಟಗಾರರ ಕಣಜ ಎನಿಸಿರುವ ಹಲವು ಬಲಿಷ್ಠ ತಂಡಗಳ ಸವಾಲು ತಂಡಕ್ಕೆ ಎದುರಾಗಲಿದೆ. ಹಾಗಂತ ಚಾಂಪಿಯನ್‌ಪಟ್ಟ ಸಿಗದಿದ್ದರೂ ನಿರಾಸೆಗೆ ಒಳಗಾಗಬೇಕಿಲ್ಲ. ಏಕೆಂದರೆ ಆಟಗಾರರು ಲೀಗ್‌ನಲ್ಲಿ ಆಡುತ್ತಿರುವುದರಿಂದ ಕಳೆದುಕೊಳ್ಳುವುದಕ್ಕಿಂತಲೂ ಕಲಿಯುವುದೇ ಹೆಚ್ಚು.

ಲೀಗ್‌ನಲ್ಲಿ ಆಸ್ಟ್ರೇಲಿಯಾ ಸೀನಿಯರ್‌ ತಂಡದಲ್ಲಿ ಆಡಿದ್ದ ಅನೇಕರು ಕಣಕ್ಕಿಳಿಯುತ್ತಾರೆ. ಅವರ ವಿರುದ್ಧ ಸೆಣಸುವುದರಿಂದ ನಮ್ಮ ಆಟಗಾರರ ಮನೋಬಲ ಹೆಚ್ಚುವುದು ಮಾತ್ರವಲ್ಲದೆ ವಿಶಿಷ್ಠ ಅನುಭವವನ್ನೂ ಅವರು ಗಳಿಸುತ್ತಾರೆ. ಜೊತೆಗೆ  ವಿನೂತನ ಕೌಶಲಗಳು ಹಾಗೂ ತಂತ್ರಗಳನ್ನು  ಕರಗತ ಮಾಡಿಕೊಳ್ಳಲು ನಮ್ಮವರಿಗೆ  ಲೀಗ್‌ ನೆರವಾಗಲಿದೆ.

ಈ ಬಾರಿ ಭಾರತದ ಜೊತೆಗೆ ಮಲೇಷ್ಯಾ ಮತ್ತು ನ್ಯೂಜಿಲೆಂಡ್‌ನ  ತಂಡಗಳಿಗೂ ಲೀಗ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ತಂಡಗಳ ಸಂಖ್ಯೆ 12ಕ್ಕೆ ಏರಿದ್ದು ಪೈಪೋಟಿಯೂ ಕಠಿಣವಾಗಿದೆ. ಜೊತೆಗೆ ಪುರುಷರ ಮತ್ತು ಮಹಿಳಾ ಲೀಗ್‌ಗಳು ಏಕಕಾಲದಲ್ಲಿ ನಡೆಯುತ್ತಿರುವುದೂ ವಿಶೇಷವಾಗಿದೆ.

ಪ್ರತಿಷ್ಠಿತ ಲೀಗ್‌ನಲ್ಲಿ ಭಾಗವಹಿಸುತ್ತಿರುವ ತಂಡದಲ್ಲಿ ರಾಜ್ಯದ ಯಾರೊಬ್ಬರಿಗೂ ಸ್ಥಾನ ಸಿಕ್ಕಿಲ್ಲ. ಇದರ ಹೊರತಾಗಿಯೂ ತಂಡ ಬಲಿಷ್ಠವಾಗಿದ್ದು ಕಾಂಗರೂಗಳ ನಾಡಿನ ತಂಡಗಳ ಸವಾಲಿಗೆ ಎದೆಯೊಡ್ಡುವ ನಿರೀಕ್ಷೆ ಮೂಡಿಸಿದೆ.

ಈ ಬಾರಿ ಪ್ರಶಸ್ತಿ ಕಣದಲ್ಲಿರುವ ತಂಡಗಳು
ಭಾರತ, ಹಾಲಿ ಚಾಂಪಿಯನ್‌ ಕ್ವೀನ್ಸ್‌ಲ್ಯಾಂಡ್‌, ನಾರ್ಥರ್ನ್‌ ಟೆರಿಟರಿ, ದಕ್ಷಿಣ ಆಸ್ಟ್ರೇಲಿಯಾ, ವೆಸ್ಟರ್ನ್‌ ಆಸ್ಟ್ರೇಲಿಯಾ, ಆಸ್ಟ್ರೇಲಿಯನ್‌ ಕ್ಯಾಪಿಟಲ್‌ ಟೆರಿಟರಿ, ವಿಕ್ಟೋರಿಯಾ, ನ್ಯೂ ಸೌಥ್‌ ವೇಲ್ಸ್‌, ತಾಸ್ಮೇನಿಯಾ, ಮಲೇಷ್ಯನ್‌ ಟೈಗರ್ಸ್‌, ಮಲೇಷ್ಯನ್‌ ಬ್ಲ್ಯೂಸ್‌ ಮತ್ತು ನ್ಯೂಜಿಲೆಂಡ್‌ ಫ್ಯೂಚರ್ಸ್‌.

ಭಾರತದಲ್ಲೂ  ಆರಂಭವಾದ ಲೀಗ್‌
ದೇಶದಲ್ಲಿ ತಳ ಮಟ್ಟದಿಂದ ಹಾಕಿಯನ್ನು ಅಭಿವೃದ್ಧಿಪಡಿಸುವ ಮತ್ತು ಪ್ರತಿಭಾನ್ವೇಷಣೆ ನಡೆಸುವ ಉದ್ದೇಶಗಳಿಂದ 2005ರಲ್ಲಿ ಪ್ರೀಮಿಯರ್‌ ಹಾಕಿ ಲೀಗ್‌ (ಪಿಎಚ್‌ಎಲ್‌)   ಆರಂಭಿಸಲಾಯಿತು.

ಈ ಲೀಗ್‌ನಲ್ಲಿ ಬೆಂಗಳೂರು, ಹೈದರಾಬಾದ್‌, ಮಹಾರಾಷ್ಟ್ರ ಸೇರಿದಂತೆ ಪ್ರಮುಖ ಏಳು ರಾಜ್ಯದ ತಂಡಗಳು ಪೈಪೋಟಿ ನಡೆಸಿದ್ದವು. ಇದರಲ್ಲಿ ಭಾರತ ಮತ್ತು ವಿದೇಶದ ಆಟಗಾರರೂ ಭಾಗವಹಿಸಿದ್ದು ವಿಶೇಷ. ಆದರೆ 2008ರಲ್ಲಿ ಕೆಲ ಕಾರಣಗಳಿಂದ ಈ ಲೀಗ್‌ ಅನ್ನು  ರದ್ದು ಮಾಡಲಾಯಿತು.

2013ರಲ್ಲಿ ಹಾಕಿ ಇಂಡಿಯಾ (ಎಚ್‌ಐ) ಹಾಕಿ ಇಂಡಿಯಾ ಲೀಗ್‌ ಆರಂಭಿಸಿತು. ಈ ಲೀಗ್‌ ಕೂಡ ಹೆಚ್ಚಿನ ಜನಮನ್ನಣೆ ಗಳಿಸಿದೆ. ಇದರಲ್ಲಿ ಭಾಗವಹಿಸುವ ಆರು ತಂಡಗಳಲ್ಲಿ ದೇಶ ಮತ್ತು ವಿದೇಶದ ಆಟಗಾರರಿಗೂ ಸ್ಥಾನ ಕಲ್ಪಿಸಲಾಗಿದೆ.

ಹಾಕಿ ಲೀಗ್‌ ಕುರಿತು
ವಿಶ್ವದ ಪ್ರತಿಷ್ಠಿತ ಹಾಕಿ ಲೀಗ್‌ ಎಂದೇ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ ಹಾಕಿ ಲೀಗ್‌ ಶುರುವಾಗಿದ್ದು 1991ರಲ್ಲಿ. ಮೊದಲು ಆಸ್ಟ್ರೇಲಿಯನ್‌ ರಾಷ್ಟ್ರೀಯ ಪುರುಷರ ಹಾಕಿ ಲೀಗ್‌ ಎಂದು ಕರೆಯಲ್ಪಡುತ್ತಿದ್ದ  ಲೀಗ್‌ ಸುಮಾರು ಎರಡು ತಿಂಗಳ ಕಾಲ ನಡೆಯುತ್ತಿತ್ತು.  

ಚೊಚ್ಚಲ ಆವೃತ್ತಿಯಲ್ಲಿ ಒಟ್ಟು ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. ಲೀಗ್‌ನ ಜನಪ್ರಿಯತೆ ಹೆಚ್ಚಿಸುವ ಉದ್ದೇಶದಿಂದ 2000ದ ಬಳಿಕ ಇದರಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು 8ಕ್ಕೆ ಏರಿಕೆ ಮಾಡಲಾಯಿತು. ಅಷ್ಟೇ ಅಲ್ಲದೆ  ಲೀಗ್‌ನ ಅವಧಿಯನ್ನು ಎರಡು ತಿಂಗಳ ಬದಲಾಗಿ ಎರಡು ವಾರಗಳಿಗೆ ತಗ್ಗಿಸಲಾಯಿತು. 2001ರಲ್ಲಿ ರಾಷ್ಟ್ರೀಯ ಪುರುಷರ ಮತ್ತು ಮಹಿಳೆಯರ ಲೀಗ್‌ಗಳನ್ನು ವಿಲೀನ ಮಾಡಿ ಆಸ್ಟ್ರೇಲಿಯಾ ಹಾಕಿ ಲೀಗ್‌ ಎಂದು ಹೊಸದಾಗಿ ನಾಮಕರಣ ಮಾಡಲಾಯಿತು.

ಪುರುಷರ ವಿಭಾಗದಲ್ಲಿ ವೆಸ್ಟರ್ನ್‌ ಆಸ್ಟ್ರೇಲಿಯಾದ ಡಬ್ಲ್ಯುಎ ಥಂಡರ್‌ಸ್ಟಿಕ್ಸ್‌ ತಂಡ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಈ ತಂಡ 9 ಬಾರಿ ಟ್ರೋಫಿ ಎತ್ತಿಹಿಡಿದಿದೆ. ಮಹಿಳೆಯರ ವಿಭಾಗದಲ್ಲಿ ನ್ಯೂ ಸೌಥ್‌ವೇಲ್ಸ್‌ನ ನ್ಯೂ ಸೌಥ್‌ ವೇಲ್ಸ್‌ ಆ್ಯರೋಸ್‌ (9) ತಂಡ ಹೆಚ್ಚು ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT