ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೌತಿಗೆ ಸಿಗಲಿಲ್ಲ – ದಸರಾಕ್ಕಾದರೂ ಸಿಗಲಿ’

ನಾಡಪ್ರಭು ಕೆಂಪೇಗೌಡ ಬಡಾವಣೆ–ನಿವೇಶನ ಹಂಚಿಕೆ: ಅಂತಿಮ ಪಟ್ಟಿ ಪ್ರಕಟಣೆಗೆ ಮೀನಮೇಷ
Last Updated 25 ಸೆಪ್ಟೆಂಬರ್ 2016, 20:06 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಅಂತಿಮ ಪಟ್ಟಿ ಸಿದ್ಧಗೊಂಡು ತಿಂಗಳು ಕಳೆದಿದ್ದು, ಅದನ್ನು ಪ್ರಕಟಿಸಲು ಮೀನಾಮೇಷ ಎಣಿಸುತ್ತಿದೆ.

ದಸರಾಕ್ಕಾದರೂ ಪ್ರಕಟಿಸಲಿ: ‘ಅಂತಿಮ ಪಟ್ಟಿ ಪ್ರಕಟಿಸಲು ಏನು ಅಡ್ಡಿ ಎಂದು ತಿಳಿಯುತ್ತಿಲ್ಲ. ಗಣೇಶ ಚತುರ್ಥಿ ವೇಳೆಗೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಬಿಡಿಎ ಹೇಳಿತ್ತು. ಕನಿಷ್ಠಪಕ್ಷ ದಸರಾಕ್ಕಾದರೂ ನಿವೇಶನ ಹಂಚಿಕೆಯಾದವರ ಅಂತಿಮ ಪಟ್ಟಿಯನ್ನು ಬಿಡಿಎ ಪ್ರಕಟಿಸಿಲಿ’  ಎಂದು ನಿವೇಶನಕ್ಕೆ ಅರ್ಜಿ ಸಲ್ಲಿಸಿದವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.  ತಾತ್ಕಾಲಿಕ ಪಟ್ಟಿಯಲ್ಲಿ  ಅವರ ಹೆಸರು ಇದೆ.  

ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಕ್ಕಾಗಿ ಒಟ್ಟು 31,349 ಮಂದಿ ಅರ್ಜಿ ಸಲ್ಲಿಸಿದ್ದರು. ನಿವೇಶನ ಪಡೆಯಲು ಅರ್ಹರಾದ  5ಸಾವಿರ ಮಂದಿಯ ತಾತ್ಕಾಲಿಕ ಪಟ್ಟಿಯನ್ನು ಜೂನ್‌ ಅಂತ್ಯದಲ್ಲಿ  ಬಿಡಿಎ ಪ್ರಕಟಿಸಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಜುಲೈ 30ರವರೆಗೆ ಕಾಲಾವಕಾಶ ಕಲ್ಪಿಸಿತ್ತು.

1,092 ಆಕ್ಷೇಪಣೆ: 4ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನಗಳಿಗೆ ಸಂಬಂಧಿಸಿದಂತೆ 42, 1,200 ಚದರ ಅಡಿ ವಿಸ್ತೀರ್ಣದ ನಿವೇಶನಗಳಿಗೆ ಸಂಬಂಧಿಸಿದಂತೆ 308, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಹಂಚಿಕೆ ಮಾಡುವ 600 ಚದರ ಅಡಿ ವಿಸ್ತೀರ್ಣದ ನಿವೇಶನಗಳಿಗೆ ಸಂಬಂಧಿಸಿದಂತೆ 601, ಸಾಮಾನ್ಯ ವರ್ಗದವರಿಗೆ ಹಂಚಿಕೆ ಮಾಡುವ 600 ಚದರ ಅಡಿ ವಿಸ್ತೀರ್ಣದ ನಿವೇಶನಗಳಗೆ ಸಂಬಂಧಿಸಿದಂತೆ 57, 2,400 ಚದರ ಅಡಿ ವಿಸ್ತೀರ್ಣದ ನಿವೇಶನಗಳಿಗೆ ಸಂಬಂಧಿಸಿದಂತೆ 84 ಆಕ್ಷೇಪಣೆಗಳು ಸಲ್ಲಿಕೆ ಆಗಿದ್ದವು.

ಸಂಬಂಧಪಟ್ಟ ಉಪಕಾರ್ಯದರ್ಶಿಗಳು, ಆಕ್ಷೇಪಣೆ ಸಲ್ಲಿಸಿದವರಿಂದ ಅದಕ್ಕೆ ಪೂರಕ ದಾಖಲೆಗಳನ್ನು ಪಡೆದು ವಿಚಾರಣೆಯನ್ನೂ ಪೂರ್ಣಗೊಳಿಸಿ, ಅಂತಿಮ ಪಟ್ಟಿಯನ್ನು ಬಿಡಿಎ ಆಯುಕ್ತ ರಾಜಕುಮಾರ್‌ ಖತ್ರಿ ಅವರಿಗೆ ಸಲ್ಲಿಸಿದ್ದಾರೆ. 

ನಿವೇಶನಗಳೂ ಸಿದ್ಧ: ‘ಕೆಂಪೇಗೌಡ ಬಡಾವಣೆಯಲ್ಲಿ  ಈಗಾಗಲೇ ನಿವೇಶನಗಳನ್ನು ರಚಿಸಿ, ಸಂಖ್ಯೆಯನ್ನೂ ನೀಡಿದ್ದೇವೆ.  ನಿವೇಶನವನ್ನು ತಲುಪಲು ರಸ್ತೆ, ಚರಂಡಿ ಹಾಗೂ ಮೋರಿಗಳನ್ನೂ ನಿರ್ಮಿಸಲಾಗಿದೆ’ ಎಂದು ಎಂಜಿನಿಯರ್‌ ಒಬ್ಬರು ತಿಳಿಸಿದರು.

‘ಬಡಾವಣೆಗೆ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಹಾಗೂ ವಿದ್ಯುತ್ ಸಂಪರ್ಕವನ್ನು ನಿವೇಶನ ಹಂಚಿಕೆ ಆದ ಬಳಿಕ ಒದಗಿಸಲಾಗುವುದು’ ಎಂದರು.
‘ಸದ್ಯಕ್ಕೆ ನಿವೇಶನ ಹಂಚಿಕೆ ಆಗದಿರುವುದಕ್ಕೆ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಳಂಬ ಆಗಿರುವುದು ಕಾರಣವಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. 

‘ನಿವೇಶನ ಹಂಚಿಕೆಗೆ ಅರ್ಹರಾದವರ  ಅಂತಿಮ ಪಟ್ಟಿ ಪ್ರಕಟಿಸುವ ಮುನ್ನ ನಿವೇಶನ ಹಂಚಿಕೆ  ಸಮಿತಿಯ ಅನುಮೋದನೆ ಅಗತ್ಯ. ಈ ಸಮಿತಿಯು ಇದೇ 29ರಂದು ಸಭೆ ಸೇರಲಿದೆ. ಅಂದು ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಬಿಡಿಎ ಮೂಲಗಳು ತಿಳಿಸಿವೆ.

‘150ಕ್ಕೂ ಹೆಚ್ಚು  ಆಕ್ಷೇಪಣೆ ಪರಿಗಣನೆಗೆ ಅರ್ಹ’: ‘ಬಿಡಿಎಗೆ ಸಲ್ಲಿಕೆ ಆಗಿರುವ 1,092 ಆಕ್ಷೇಪಣೆಗಳ ಪೈಕಿ 150ಕ್ಕೂ ಹೆಚ್ಚು ಆಕ್ಷೇಪಣೆಗಳು  ಪರಿಗಣನೆಗೆ ಅರ್ಹವಾಗಿವೆ.  ಹಾಗಾಗಿ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವ 150ಕ್ಕೂ ಹೆಚ್ಚು ಮಂದಿ ನಿವೇಶನ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಬಿಡಿಎ ಮೂಲಗಳು ತಿಳಿಸಿವೆ.

‘ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಹಂಚಿಕೆ ಮಾಡುವ 600 ಚದರ ಅಡಿ ವಿಸ್ತೀರ್ಣದ ನಿವೇಶನಗಳ ಹಂಚಿಕೆಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಆಕ್ಷೇಪಣೆಗಳು ಪರಿಗಣನೆಗೆ ಅರ್ಹವಾಗಿದೆ. ಈ ವರ್ಗದಲ್ಲಿ ತಾತ್ಕಾಲಿಕ ಪಟ್ಟಿಯಲ್ಲಿ  ಹೆಸರು ಹೊಂದಿರುವ 113 ಮಂದಿಗೆ ನಿವೇಶನ ಸಿಗುವುದಿಲ್ಲ.

ಆಕ್ಷೇಪಣೆ ಪರಿಗಣಿಸುವಾಗ ಮೀಸಲಾತಿಯಡಿ ನಿವೇಶನ ಪಡೆದ ಕೆಲವರಿಗೂ ನಿವೇಶನ ಕೈತಪ್ಪಬಹುದು. ಇಲ್ಲದಿದ್ದರೆ, ತಾತ್ಕಾಲಿಕ ಪಟ್ಟಿಯ  ಕೊನೆಯಲ್ಲಿ ಹೆಸರು ಹೊಂದಿರುವವರು ನಿವೇಶನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
 

ಠೇವಣಿ ಹಣ ಹಿಂದಕ್ಕೆ ಸಿಗುತ್ತಿಲ್ಲ
ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಸಂಬಂಧ ಅಂತಿಮ ಪಟ್ಟಿ ಪ್ರಕಟವಾಗದ ಹೊರತು, ನಿವೇಶನ  ಸಿಗದ ಅರ್ಜಿದಾರರಿಗೆ ಭದ್ರತಾ ಠೇವಣಿ ಹಣ ಹಿಂದಕ್ಕೆ ಸಿಗದು.

ಇಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ ಪೈಕಿ 26,349 ಮಂದಿ  ಬಿಡಿಎಯಿಂದ  ಠೇವಣಿಯ ಹಣ ಮರಳಿ ಪಡೆಯಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಣ ಮರುಪಾವತಿ ವಿಳಂಬವಾದರೂ, ಠೇವಣಿ ಹಣಕ್ಕೆ ಬಿಡಿಎ ಬಡ್ಡಿ ನೀಡುವುದಿಲ್ಲ.

‘ನಾವು ಬಿಡಿಎ ಅರ್ಜಿ ಸಲ್ಲಿಸಿ 10 ತಿಂಗಳು ಕಳೆಯಿತು. ನಮಗೆ ನಿವೇಶನ ಹೇಗೂ ಸಿಗುವುದಿಲ್ಲ. ಅಂತಿಮ ಪಟ್ಟಿ ಪ್ರಕಟಿಸಿ ಆದಷ್ಟು ಬೇಗ ಠೇವಣಿ ಹಣವನ್ನು ಮರುಪಾವತಿ ಮಾಡಿದರೆ ಅನುಕೂಲವಾಗುತ್ತದೆ’ ಎಂದು ವಿನಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಡಿಎ ಅರ್ಜಿದಾರರಿಂದ ಪ್ರಾರಂಭಿಕ ಠೇವಣಿ ರೂಪದಲ್ಲಿ ₹717.21 ಕೋಟಿ ಸಂಗ್ರಹಿಸಿದ್ದು,  ಈ ಪೈಕಿ  ₹ 543.69 ಕೋಟಿ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ. ಈ ಸಲುವಾಗಿ ಅರ್ಜಿದಾರ ಬ್ಯಾಂಕ್‌ ಖಾತೆ ವಿವರ, ಹಾಗೂ ಆಧಾರ್‌ ಸಂಖ್ಯೆಯನ್ನು  ಬಿಡಿಎ  ಈಗಾಗಲೇ ಸಂಗ್ರಹಿಸಿಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT